'ಕಾಂತಾರಾ ಅಧ್ಯಾಯ-1' ಚಿತ್ರಕ್ಕೆ ಮೈಸೂರು ಸ್ಯಾಂಡಲ್ ಪರಿಮಳ
ಎರಡು ವರ್ಷಗಳಿಂದ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಒಲವು ಹೊಂದಿದೆ. ಜೊತೆಗೆ ರಫ್ತು ವಹಿವಾಟಿಗೆ ಒತ್ತು ನೀಡಿದ್ದು, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್, ಪ್ರಚಾರ ಮತ್ತು ಅತ್ಯುತ್ಕೃಷ್ಟತೆಗೆ ಗಮನ ಹರಿಸಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ರಿಷಬ್ ಶೆಟ್ಟಿ ನಟನೆಯ ʼಕಾಂತಾರ- ಚಾಪ್ಟರ್ 1ʼ ಸಿನಿಮಾಕ್ಕೆ ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸೋಪ್ ಖ್ಯಾತಿಯ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವು (ಕೆಎಸ್‌ಡಿಎಲ್) ಸುಗಂಧ ಭಾಗಿದಾರನಾಗಿ ಸಹ-ಪ್ರಾಯೋಜಕತ್ವ ಪಡೆದಿದೆ.
ಕನ್ನಡ ಚಿತ್ರರಂಗವು ಸ್ಯಾಂಡಲ್ ವುಡ್ ಎಂದೇ ಹೆಸರಾಗಿದೆ. ಹಾಗೆಯೇ ಕೆಎಸ್‌ಡಿಎಲ್ ಸಂಸ್ಥೆಯು ಸ್ಯಾಂಡಲ್ ಸೋಪ್ ಮತ್ತು ಗಂಧದ ಎಣ್ಣೆಗೆ ಹೆಸರಾಗಿದೆ. ಈಗ ಕೆಎಸ್‌ಡಿಎಲ್ ಹಾಗೂ ಕಾಂತಾರ ಚಿತ್ರತಂಡದ ನಡುವೆ ಒಪ್ಪಂದವಾಗಿದ್ದು, ಚಿತ್ರತಂಡವು ಪ್ರತಿ ಪ್ರದರ್ಶನದಲ್ಲೂ ಕೆಎಸ್‌ಡಿಎಲ್ ಉತ್ಪನ್ನಗಳಿಗೆ ಪ್ರಚಾರ ನೀಡಲಿದೆ ಎಂದರು.
ಕನ್ನಡ, ತೆಲುಗು, ಹಿಂದಿ, ತಮಿಳು, ಮಲೆಯಾಳಂ, ಇಂಗ್ಲಿಷ್, ಸ್ಪ್ಯಾನಿಷ್ ಹೀಗೆ 7 ಭಾಷೆಗಳಲ್ಲಿ ಕಾಂತಾರ ತೆರೆ ಕಾಣಲಿದೆ. ಭಾರತದ 7,000 ಹಾಗೂ 30 ರಾಷ್ಟ್ರಗಳ 6,500ಕ್ಕೂ ಹೆಚ್ಚು ಚಿತ್ರ ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ಇಂತಹ ಚಿತ್ರತಂಡದ ಜತೆ ಕೆಎಸ್‌ಡಿಎಲ್ ಕೈಜೋಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಕೆಎಸ್‌ಡಿಎಲ್ 110 ವರ್ಷಗಳಿಂದಲೂ ಕರ್ನಾಟಕದ ಪರಂಪರೆ ಮತ್ತು ಅಸ್ಮಿತೆ ಪ್ರತಿನಿಧಿಸುತ್ತಿರುವ ಬ್ರ್ಯಾಂಡ್ ಆಗಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಎರಡು ವರ್ಷಗಳಿಂದ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಒಲವು ಹೊಂದಿದೆ. ಜೊತೆಗೆ ರಫ್ತು ವಹಿವಾಟಿಗೆ ಒತ್ತು ನೀಡಿದ್ದು, ಪ್ಯಾಕೇಜಿಂಗ್, ಬ್ರ್ಯಾಂಡಿಂಗ್, ಪ್ರಚಾರ ಮತ್ತು ಅತ್ಯುತ್ಕೃಷ್ಟತೆಗೆ ಗಮನ ಹರಿಸಿದೆ. ಇದರ ಭಾಗವಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳಲಾಗಿದೆ. ಇದರಿಂದ ಅಖಿಲ ಭಾರತ ಮಟ್ಟದಲ್ಲಿ ಹೊಸ ತಲೆಮಾರಿನ ಗ್ರಾಹಕರನ್ನು ತಲುಪಲು ಸಾಧ್ಯವಾಗಿದೆ. ಈಗ ಕಾಂತಾರ ತಂಡದ ಜತೆ ಸಂಸ್ಥೆಯು ಕೈಜೋಡಿಸುತ್ತಿದ್ದು, ತನ್ನ ಉತ್ಪನ್ನಗಳ ಮಾರಾಟವನ್ನು ಮತ್ತಷ್ಟು ವ್ಯಾಪಕಗೊಳಿಸುವ ಉದ್ದೇಶ ಈಡೇರಲಿದೆ ಎಂದರು.
ವಿವಾದಗಳು ಏನು?
ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರ ಮಾಡಿ ಮಾರುಕಟ್ಟೆಯನ್ನು ಹೆಚ್ಚಿಸಲು ಹಾಗೂ ಯುವ ಜನಾಂಗವನ್ನು ಗಮನದಲ್ಲಿಟ್ಟುಕೊಂಡು 2006ರಲ್ಲಿ ಭಾರತ ತಂಡದ ನಾಯಕರಾಗಿದ್ದ ಎಂ.ಎಸ್. ಧೋನಿ ಅವರನ್ನು ನೇಮಿಸಿಕೊಳ್ಳಲಾಗಿತ್ತು. ಈ ವೇಳೆ ಅವರ ಆಯ್ಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ, ಅವರು ಒಪ್ಪಂದದ ನಿಯಮ ಉಲ್ಲಂಘಿಸಿದ್ದಾರೆ ಎಂದು ಕೆಎಸ್‌ಡಿಎಲ್ ನ್ಯಾಯಾಲಯದ ಮೊರೆ ಹೋಗಿತ್ತು.
ಕರ್ನಾಟಕದ ಮತ್ತು ಕರ್ನಾಟಕ ಮೂಲದ ಖ್ಯಾತ ನಟ-ನಟಿಯರಿದ್ದರೂ ಪರಭಾಷಾ ನಟಿ, ʼಮಿಲ್ಕೀ ಬ್ಯೂಟಿʼ ಖ್ಯಾತಿಯ ತಮನ್ನಾ ಭಾಟಿಯಾ ಅವರನ್ನು ಸರ್ಕಾರ ರಾಯಭಾರಿಯಾಗಿ ನೇಮಿಸಿದೆ. ಎರಡು ವರ್ಷಗಳ ಅವಧಿಗೆ 6.20 ಕೋಟಿ ರೂ. ವೆಚ್ಚದಲ್ಲಿ ಆಕೆಯನ್ನು ನೇಮಕ ಮಾಡಿಕೊಂಡಿದ್ದು, ಎಲ್ಲರ ಹುಬ್ಬೇರಿಸಿತ್ತು. ಒಂದು ಅಂದಾಜಿನ ಪ್ರಕಾರ ಪ್ರತಿದಿನ ತಮನ್ನಾ ಭಾಟಿಯಾಗೆ 82 ಸಾವಿರ ರೂ. ನಂತೆ ಎರಡು ವರ್ಷ ನೀಡಬೇಕಾಗಿದ್ದು, ಅದಕ್ಕಾಗಿ ಟೆಂಡರ್ ನಿಯಮಗಳಿಗೆ ವಿನಾಯಿತಿ ನೀಡಲಾಗಿತ್ತು.
ಕೊನೆಗೂ ಮಣಿದಿದ್ದ ಸರ್ಕಾರ
ರಾಜ್ಯದ ಸ್ವಾಭಿಮಾನದ ಸಂಕೇತ, ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ಪರಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಿಸಿ, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ, ಕೊನೆಗೂ ಜನರ ಭಾವನೆಗಳಿಗೆ ಮಣಿದು. ಕನ್ನಡದ 'ಶಾಕುಂತಲೆ' ಎಂದೇ ಖ್ಯಾತರಾದ ನಟಿ ಐಶಾನಿ ಶೆಟ್ಟಿ ಅವರನ್ನು ರಾಜ್ಯದ ಹೆಮ್ಮೆಯ ಉತ್ಪನ್ನದ ಹೊಸ ರಾಯಭಾರಿಯನ್ನಾಗಿ ಇತ್ತೀಚೆಗೆ ಆಯ್ಕೆಮಾಡಿತ್ತು.
ನಕಲಿ ಸೋಪ್ ಪ್ರಕರಣ
2024 ರಲ್ಲಿ, ಹೈದರಾಬಾದ್‌ನಲ್ಲಿ ದಶಕಗಳಿಂದ ಅಕ್ರಮವಾಗಿ ನಡೆದಿರುವ ನಕಲಿ ಮೈಸೂರು ಸ್ಯಾಂಡಲ್ ಸೋಪ್ ಉತ್ಪಾದನಾ ಘಟಕವನ್ನು ಕೆಎಸ್‌ಡಿಎಲ್ ಅಧಿಕಾರಿಗಳು ಪತ್ತೆ ಮಾಡಿದ್ದರು. ಈ ನಕಲಿ ಘಟಕದಿಂದ ಸುಮಾರು 600 ಕೋಟಿ ರೂ. ನಷ್ಟ ಉಂಟುಮಾಡಿದೆ ಎಂದು ಅಂದಾಜಿಸಲಾಗಿತ್ತು.