ಬೆಂಬಲ ಬೆಲೆ ಯೋಜನೆ| ಹೆಸರು, ಉದ್ದು, ಸೂರ್ಯಕಾಂತಿ ಖರೀದಿಗೆ ಸೂಚನೆ

ಹೆಸರುಕಾಳು, ಸೂರ್ಯಕಾಂತಿ ಫಸಲು ಖರೀದಿ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸುವಂತೆ ಕೃಷಿ ಮಾರುಕಟ್ಟೆ ಇಲಾಖೆ ಸೂಚಿಸಿದೆ. ರೈತರ ನೋಂದಣಿ ಕಾಲಾವಧಿಯನ್ನು 80 ದಿನ ಹಾಗೂ ಖರೀದಿ ಅವಧಿಯನ್ನು 90 ದಿನಕ್ಕೆ ನಿಗದಿ ಮಾಡಲಾಗಿದೆ.

Update: 2025-09-26 09:51 GMT

ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನ ಉದ್ದಿನಕಾಳು, ಹೆಸರುಕಾಳು ಹಾಗೂ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಅತಿವೃಷ್ಟಿ ಹೊರತಾಗಿಯೂ ಉಳಿದ ಮುಂಗಾರು ಹಂಗಾಮಿನ ಫಸಲು ಖರೀದಿಸಲು ಸರ್ಕಾರ ನಿರ್ಧರಿಸಿರುವುದು ರೈತರಲ್ಲಿ ತುಸು ನೆಮ್ಮದಿ ಮೂಡಿಸಿದೆ. ತೊಗರಿ, ಹೆಸರುಕಾಳು, ಸೂರ್ಯಕಾಂತಿ ಫಸಲು ಖರೀದಿ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸುವಂತೆ ಕೃಷಿ ಮಾರುಕಟ್ಟೆ ಇಲಾಖೆ ಸೂಚಿಸಿದೆ. ರೈತರ ನೋಂದಣಿ ಕಾಲಾವಧಿಯನ್ನು 80 ದಿನ ಹಾಗೂ ಖರೀದಿ ಅವಧಿಯನ್ನು 90 ದಿನಕ್ಕೆ ನಿಗದಿ ಮಾಡಲಾಗಿದೆ. 

ಖರೀದಿ ಸಂಸ್ಥೆಗಳು ಏಕಕಾಲಕ್ಕೆ ನೋಂದಣಿ ಮತ್ತು ಖರೀದಿ ಪ್ರಕ್ರಿಯೆ ಆರಂಭಿಸಬೇಕು. ರೈತರಿಗೆ ಅನುಕೂಲವಾಗುವಂತೆ ನಫೆಡ್ ಹಾಗೂ ಎನ್‌ಸಿಸಿಎಫ್ ಮಾರ್ಗಸೂಚಿ ಅನ್ವಯ ಒಡಂಬಡಿಕೆ ಮಾಡಿಕೊಂಡು ಖರೀದಿ ಕೇಂದ್ರ ತೆರೆಯಬೇಕು. ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಗಳಿಗೆ ತ್ವರಿತವಾಗಿ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಲಾಗಿದೆ.

ಯಾವ ಜಿಲ್ಲೆಗಳಲ್ಲಿ ಯಾವ ಬೆಳೆ ಖರೀದಿ?

ಹೆಸರುಕಾಳು -ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ತುಮಕೂರು, ಹಾಸನ, ಮೈಸೂರು ಮತ್ತು ಚಿತ್ರದುರ್ಗ.

ಉದ್ದಿನಕಾಳು -ಕಲಬುರಗಿ, ಬೀದರ್, ಯಾದಗಿರಿ, ಗದಗ, ಧಾರವಾಡ, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ.

ಸೂರ್ಯಕಾಂತಿ - ಬಾಗಲಕೋಟೆ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಮೈಸೂರು, ಚಿಕ್ಕಮಗಳೂರು, ಬೆಳಗಾವಿ ಮತ್ತು ಕೊಪ್ಪಳ.

ಅತಿವೃಷ್ಟಿಗೆ ಅಪಾರ ಬೆಳೆ ಹಾನಿ

ತೊಗರಿಯ ಕಣಜ ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಈ ಬಾರಿ ಮುಂಗಾರು ಅತಿವೃಷ್ಟಿಯಿಂದಾಗಿ ತೊಗರಿ, ಹೆಸರುಬೇಳೆ, ಉದ್ದು ಬೆಳೆ ಅರ್ಧದಷ್ಟು ಹಾಳಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಸುಮಾರು 1.06 ಲಕ್ಷ ಹೆಕ್ಟೇ‌ರ್ ಪ್ರದೇಶದಲ್ಲಿ ಬೆಳೆಗಳು ನಷ್ಟವಾಗಿವೆ. ಅಂದಾಜು 90 ಕೋಟಿ ರೂ.ಗಿಂತ ಹೆಚ್ಚು ಹಾನಿ ಉಂಟಾಗಿರುವುದು ಕೃಷಿ ಮತ್ತು ತೋಟಗಾರಿಕೆ ಇಲಾಖೆ ನಡೆಸಿದ ಜಂಟಿ ಸಮೀಕ್ಷೆಯಿಂದ ತಿಳಿದು ಬಂದಿತ್ತು.

ಕಲಬುರಗಿ ಜಿಲ್ಲೆಯಲ್ಲಿ 51,850 ಹೆಕ್ಟೇರ್‌ನಲ್ಲಿ ಹೆಸರು ಬಿತ್ತನೆಯಾಗಿತ್ತು. ಈ ಪೈಕಿ 25,471 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಹಾನಿಯಾಗಿದೆ. ಬಿತ್ತನೆಯಾಗಿರುವ 30,935 ಹೆಕ್ಟೇರ್ಗಳ ಉದ್ದಿನ ಬೆಳೆಯ ಪೈಕಿ 7,976 ಹೆಕ್ಟೇರ್ ಪ್ರದೇಶದಲ್ಲಿ ಹಾಳಾಗಿದೆ.

ನೋಂದಣಿ ಅವಧಿ ಎಷ್ಟು ದಿನ?

ನೋಂದಣಿ ಅವಧಿಯು ಒಟ್ಟು 80 ದಿನ ನಿಗದಿಪಡಿಸಲಾಗಿದೆ. ಖರೀದಿ ಅವಧಿಯನ್ನು 90 ದಿನ ನಿಗದಿ ಮಾಡಲಾಗಿದೆ. ಖರೀದಿ ಕೇಂದ್ರಗಳನ್ನು ತಾಂತ್ರಿಕ, ವೈಜ್ಞಾನಿಕ ಸೌಲಭ್ಯಗಳಿಂದ ಕೂಡಿರುವ ಗೋದಾಮುಗಳಲ್ಲಿ ತೆರೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಬೆಂಬಲ ಬೆಲೆ ಎಷ್ಟು?

ಹೆಸರುಕಾಳು ಪ್ರತಿ ಕ್ವಿಂಟಲ್‌ಗೆ 8,768 ರೂ, ಉದ್ದಿನಕಾಳು ಕ್ವಿಂಟಲ್‌ಗೆ 7,800 ರೂ., ಸೂರ್ಯಕಾಂತಿ ಫಸಲು ಕ್ವಿಂಟಲ್ಗೆ 7,721 ರೂ. ನಿಗದಿ ಮಾಡಲಾಗಿದೆ.

ತೊಗರಿ ಬೆಳೆಗಾರರಿಗೆ ಸರ್ಕಾರ ಹೆಚ್ಚುವರಿ ಬೆಂಬಲ ಬೆಲೆಯನ್ನು ಕಳೆದ ಜನವರಿಯಲ್ಲಿ ಘೋಷಿಸಿತ್ತು. ಫೆ. 8 ರಂದು ಹಣಕಾಸು ಇಲಾಖೆ ಪ್ರತಿ ಕ್ವಿಂಟಲ್ ತೊಗರಿಗೆ ಬೆಂಬಲ ಬೆಲೆಯಡಿ 450 ರೂ. ಸಹಾಯಧನ ನೀಡಲು ಅನುಮೋದನೆ ನೀಡಿತ್ತು.

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿ ಖರೀದಿಗೆ 7,750 ರೂ. ನೀಡುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 450 ರೂ. ಸೇರಿಸಿ, ಒಟ್ಟು 8,000 ರೂ. ಬೆಂಬಲ ಬೆಲೆ ನಿಗದಿ ಮಾಡಲಾಗಿದೆ.

ರೈತರ ಆಗ್ರಹವೇನು?

ಕೇಂದ್ರ ಸರ್ಕಾರ ನೀಡುವ 7,750 ರೂ. ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರ 4,500 ರೂ.ಗಳನ್ನು ಸೇರಿಸಿ ಪ್ರತಿ ಕ್ವಿಂಟಲ್ಗೆ ಒಟ್ಟು 12,050 ರೂ. ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬುದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಆಗ್ರಹವಾಗಿತ್ತು.

ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ಗೆ 12,000 ರೂ.ರಂತೆ ಮಾರಾಟವಾಗುತ್ತಿದೆ. ಅದರಂತೆ ಸರ್ಕಾರ ಕೂಡ ಸೂಕ್ತ ಬೆಲೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕಲಬುರಗಿ, ಬೀದರ್‌ ತೊಗರಿಗೆ ಹೆಚ್ಚು ಬೇಡಿಕೆ

ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಬೆಳೆಯುವ ತೊಗರಿ ಬೆಳೆಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹಾಗೂ ಬೆಲೆ ಇದೆ. ಏಕೆಂದರೆ ಈ ಭಾಗದ ಮಣ್ಣಿನಲ್ಲಿ ಸುಣ್ಣದ ಕಲ್ಲಿನ ಅಂಶವು ಹೆಚ್ಚಿದ್ದು, ತೊಗರಿ ಬೆಳೆಗೆ ಅಗತ್ಯ ಖನಿಜಾಂಶ ಒದಗಿಸುತ್ತದೆ. ಪಟಗಾ ತೊಗರಿಗೆ ಉತ್ಕೃಷ್ಟ ಬೆಲೆ ಸಿಗುತ್ತದೆ. ಆದರೆ, ಬೇರೆ ಜಿಲ್ಲೆಗಳಲ್ಲಿ ಬೆಳೆಯುವ ತೊಗರಿಗೆ ಅಷ್ಟಾಗಿ ಬೇಡಿಕೆ ಹಾಗೂ ಬೆಲೆ ಸಿಗುತ್ತಿಲ್ಲ. ಹೀಗಾಗಿ ಉತ್ತಮವಾದ ಬೆಂಬಲ ಬೆಲೆ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಮಧ್ಯವರ್ತಿಗಳಿಗೆ ಕಡಿವಾಣ

ಬೆಂಬಲ ಬೆಲೆ ಯೋಜನೆ ದುರ್ಬಳಕೆ ತಡೆಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ರೈತರ ಹೆಸರಿನಲ್ಲಿ ಉತ್ಪನ್ನಗಳ ಮಾರಾಟಕ್ಕೆ ಯತ್ನಿಸುವ ವರ್ತಕರಿಗೆ ಅವಕಾಶ ನೀಡಬಾರದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿಗಳು ಖರೀದಿ ಏಜೆನ್ಸಿಗಳನ್ನು ನೇಮಕ ಮಾಡಲಿವೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ.

ರೈತರು ಬೆವರು ಸುರಿಸಿ ಬೆಳೆ ಬೆಳೆದಿರುತ್ತಾರೆ. ಅವರ ಪರಿಶ್ರಮದ ಬೆಲೆ ಯಾರಿಗೂ ಸೇರಬಾರದು. ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಅಡಿ ಹೆಸರುಕಾಳು, ಉದ್ದಿನಕಾಳು ಹಾಗೂ ಸೂರ್ಯಕಾಂತಿ ಖರೀದಿ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಬೇಕು ಎಂದು ಸೂಚಿಸಿದ್ದಾರೆ.

Tags:    

Similar News