ಅವಧಿ ಮೀರಿ ಪಟಾಕಿ ಸಿಡಿಸುವವರ ಪತ್ತೆಗೆ ಎಐ ಕಣ್ಗಾವಲು; ಬೆಂಗಳೂರು ಪೊಲೀಸರ ವಿನೂತನ ಕ್ರಮ
ಎಐ ತಂತ್ರಾಂಶವನ್ನು ಪಟಾಕಿ ಸಿಡಿತ, ಹೊಗೆ ಮತ್ತು ಜನಸಂದಣಿಯ ಹೈಪರ್ ಆಕ್ಟಿವಿಟಿಯನ್ನು ನೈಜ ಸಮಯದಲ್ಲಿ ಪತ್ತೆಹಚ್ಚುವಂತೆ ವಿನ್ಯಾಸ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸಮಯ, ಸಂದರ್ಭವಿಲ್ಲದೇ ಪಟಾಕಿಗಳ ಸಿಡಿಸುವುದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಎಐ ಕಣ್ಗಾವಲು ಮೊರೆ ಹೋಗಿದೆ. ದೀಪಾವಳಿ ಮುಗಿದರೂ ವಿನಾಕಾರಣ ತಡರಾತ್ರಿ ಪಟಾಕಿ ಬಳಸುತ್ತಿರುವುದರಿಂದ ನಗರದ ಮಾಲಿನ್ಯ ಹದಗೆಡುತ್ತಿದೆ.
ಅವಧಿ ಮೀರಿ ಪಟಾಕಿ ಸಿಡಿಸುವುದನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಬೆಂಗಳೂರು ಪೊಲೀಸರು ಈ ಸಾಧನೆಗೆ ಕೃತಕ ಬುದ್ಧಿಮತ್ತೆ (AI) ಆಧರಿತ ಮೇಲ್ವಿಚಾರಣಾ ವ್ಯವಸ್ಥೆ ಅಳವಡಿಸಿದ್ದಾರೆ. ಇನ್ನು ಮುಂದೆ ಸಾರ್ವಜನಿಕರು ನಿಯಮ ಉಲ್ಲಂಘಿಸಿ ಪಟಾಕಿ ಸಿಡಿಸಿದರೆ ದಂಡ ತೆರಬೇಕಾಗುತ್ತದೆ.
ನಿಗದಿತ ಕಟ್ಆಫ್ ಸಮಯದ ನಂತರ ಅನಧಿಕೃತವಾಗಿ ಪಟಾಕಿ ಸಿಡಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ವಿನೂತನ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನ ವಿವಿಧೆಡೆ ಪ್ರಾಯೋಗಿಕವಾಗಿ ಅಳವಡಿಸಿರುವ ಎಐ ಆಧರಿತ ಕ್ಯಾಮೆರಾಗಳಿಂದ ಶೇ 41 ರಷ್ಟು ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ.
ಎಲ್ಲೆಲ್ಲಿ ಎಐ ಕ್ಯಾಮೆರಾ ಅಳವಡಿಕೆ?
ಬೆಂಗಳೂರಿನ ಶ್ರೀರಾಮಪುರಂ, ಕೆ.ಆರ್.ಮಾರುಕಟ್ಟೆ, ಎಚ್‌ಎಸ್‌ಆರ್ ಲೇಔಟ್, ಹರಳೂರು ಮತ್ತು ಮಾರತಹಳ್ಳಿ ಸೇರಿದಂತೆ ಜನನಿಬಿಡ 200 ಕ್ಕೂ ಹೆಚ್ಚು ಸ್ಥಳಗಳಲ್ಲಿ 'ಫೈರ್‌ಕ್ರ್ಯಾಕರ್ ಡಿಟೆಕ್ಷನ್ ವಿಡಿಯೋ AI' ಅಪ್ಲಿಕೇಶನ್ ಅನ್ನು ಕ್ಯಾಮೆರಾಗಳಿಗೆ ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಕಳುಹಿಸಿದ ವಿಡಿಯೊ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.
200 ಕಡೆ ಅಳವಡಿಸಿದ ಎಐ ಕ್ಯಾಮೆರಾಗಳು ದಿನದ 24 ಗಂಟೆಯೂ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಕಮಾಂಡ್ ಸೆಂಟರ್‌ಗೆ 2,000 ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿವೆ. ಇವುಗಳಲ್ಲಿ ಸುಮಾರು 850 ಎಚ್ಚರಿಕೆ ಸಂದೇಶಗಳು (ಶೇ42.5) ರಾತ್ರಿ 10 ಗಂಟೆಯ ನಂತರ ವರದಿಯಾಗಿವೆ.
9 ಸಾವಿರ ಕಣ್ಗಾವಲು ಕ್ಯಾಮೆರಾ ಅಳವಡಿಕೆ
ಕೇಂದ್ರದ ನಿರ್ಭಯಾ ಯೋಜನೆಯಡಿ ಬೆಂಗಳೂರು ನಗರದಲ್ಲಿ 9 ಸಾವಿರ ಕಣ್ಗಾವಲು ಕ್ಯಾಮೆರಾ ಅಳವಡಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು 50ಕ್ಕಿಂತ ಹೆಚ್ಚು ಕಡೆಗಳಲ್ಲಿ ಎಐ ಕ್ಯಾಮೆರಾ ಅಳವಡಿಸಲಾಗಿದೆ. ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಕ್ಯಾಮೆರಾಗಳಿಗೆ ಎಐ ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಇವುಗಳು ಪಟಾಕಿ ಹೊಡೆಯುವ ದೃಶ್ಯ ಸೆರೆಹಿಡಿದು ಪೊಲೀಸ್ ನಿಯಂತ್ರಣ ಕೊಠಡಿಗೆ ರವಾನಿಸಲಿವೆ. ಈ ವಿಡಿಯೊ ಸಾಕ್ಷ್ಯ ಆಧರಿಸಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಕ್ಯಾಮೆರಾಗಳು ಪಟಾಕಿ ಸಿಡಿತ ಹೇಗೆ ಗುರುತಿಸುತ್ತವೆ?
ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಿರುವ ಎಐ ಕಣ್ಗಾವಲು ಕ್ಯಾಮೆರಾಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಪಟಾಕಿ ಸ್ಫೋಟ ಮತ್ತು ಹೊಗೆ ಗುರುತಿಸುವಂತೆ ವಿನ್ಯಾಸ ಮಾಡಲಾಗಿದೆ. ಎಐ ಆಧರಿತ ತಂತ್ರಾಂಶವು ಪಟಾಕಿ ಸಿಡಿತವನ್ನು ಪತ್ತೆ ಮಾಡಿದ ಕೂಡಲೇ ಕೇಂದ್ರ ಕಮಾಂಡ್ ಸೆಂಟರ್‌ಗೆ ಸಂದೇಶ ರವಾನಿಸುತ್ತದೆ. ಈ ಸಂದೇಶಗಳನ್ನು ಆಯಾ ಪ್ರದೇಶದಲ್ಲಿ ಗಸ್ತು ತಿರುಗುವ 'ಹೊಯ್ಸಳ' ತಂಡಗಳಿಗೆ ರವಾನಿಸಲಾಗುತ್ತದೆ. ಈ ವಿಡಿಯೊ ಸಾಕ್ಷ್ಯ ಇಟ್ಟುಕೊಂಡು ನಿಯಮ ಉಲ್ಲಂಘನೆ ಮಾಡಿರುವವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.
ಹಬ್ಬದ ಸಂದರ್ಭಗಳಲ್ಲಿ ಶಬ್ದ ಮಾಲಿನ್ಯ ತಡೆಗಟ್ಟಲು ಈ ಕ್ಷಿಪ್ರ ಪ್ರತಿಕ್ರಿಯೆ ವ್ಯವಸ್ಥೆಯು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ (ICCC) ಗೆ ಸಂಪರ್ಕಗೊಂಡಿರುವ 7,500 ಕ್ಕೂ ಹೆಚ್ಚು ಕ್ಯಾಮೆರಾಗಳಿಂದ ಸಂದೇಶಗಳು ರವಾನೆಯಾಗಲಿವೆ. ಪಟಾಕಿ ಸದ್ದಿನ ಜೊತೆಗೆ ಹೊಗೆ ಮತ್ತು ಜನಸಂದಣಿಯ ಅಸಾಮಾನ್ಯ ಏರಿಕೆಗಳಂತಹ ನಿರ್ದಿಷ್ಟ ಚಿಹ್ನೆಗಳನ್ನು ಕ್ಯಾಮೆರಾಗಳು ಗುರುತಿಸಲಿವೆ. ಅಲ್ಲದೇ ಈ ವ್ಯವಸ್ಥೆಯು ಸ್ವಯಂಚಾಲಿತವಾಗಿ ನಿಖರವಾದ ಸ್ಥಳ, ಸಮಯ ಮತ್ತು ವಿಡಿಯೊ ಸ್ನ್ಯಾಪ್‌ಶಾಟ್‌ಗಳನ್ನು ಸೃಷ್ಟಿಸಿ ಐಸಿಸಿಸಿಗೆ ಕಳುಹಿಸಲಿದೆ. ಇದರಿಂದ ಕಾನೂನು ಜಾರಿ ಸಂಸ್ಥೆಗಳಿಗೆ ಆರೋಪಿಗಳನ್ನು ತ್ವರಿತವಾಗಿ ಗುರುತಿಸಿ, ದಂಡ ವಿಧಿಸಲು ಸಾಧ್ಯವಾಗಲಿದೆ.