The Federal Explainer | ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಮುನ್ನೆಲೆಗೆ; ಹೋರಾಟ ಸಾಗಿಬಂದ ಹಾದಿ ಏನು?

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಪಂಚಮಸಾಲಿ ಸಮುದಾಯ ಇದೀಗ ʼಮಾಡು ಇಲ್ಲವೇ ಮಡಿʼ ಎಂಬ ನಿರ್ಣಯಕ್ಕೆ ಬಂದಿದೆ. ಹಾಗಾದರೆ, ಪಂಚಮಸಾಲಿಗರು ಯಾರು? ಮೂಲ ಕಸುಬು ಏನು, ಪಂಚಮಸಾಲಿಗರಿಗೆ ಮೀಸಲಾತಿ ಅಗತ್ಯವೇ, ಮೀಸಲಾತಿಯಿಂದ ಆಗುವ ಲಾಭ, ನಷ್ಟ ಏನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ;

Update: 2024-10-15 10:44 GMT

ಪ್ರವರ್ಗ-2ಎ ಅಡಿ ಮೀಸಲಾತಿ ಒದಗಿಸುವಂತೆ ಪಂಚಮಸಾಲಿ ಲಿಂಗಾಯತ ಸಮುದಾಯದ ಹೋರಾಟ ಮತ್ತೆ ಕಾವೇರುತ್ತಿದೆ. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ, ಬೃಹತ್ ಸಮಾವೇಶ, ರಾಜ್ಯವ್ಯಾಪಿ ಪ್ರತಿಭಟನೆ, ಹೆದ್ದಾರಿ ಬಂದ್, ಸರ್ಕಾರಗಳಿಗೆ ಗಡುವು… ಇತ್ಯಾದಿ ಹೋರಾಟ ನಡೆಸಿದರೂ ಬೇಡಿಕೆ ಈಡೇರಿಲ್ಲ. ಆ ಹಿನ್ನೆಲೆಯಲ್ಲಿ ಮೀಸಲಾತಿ  ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಪಂಚಮಸಾಲಿ ಸಮುದಾಯ ಇದೀಗ ʼಮಾಡು ಇಲ್ಲವೇ ಮಡಿʼ ಹೋರಾಟ ಕೈಗೆತ್ತಿಕೊಂಡಿದೆ.

ಮೀಸಲಾತಿ ಕೋರಿಕೆಗೆ ಸಂಬಂಧಿಸಿದಂತೆ ಅಕ್ಟೋಬರ್‌ 15ರಂದು ಸಭೆ ಕರೆಯುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈವರೆಗೆ ಆ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ಹಾಗಾಗಿ ಅ.18 ರಂದು ಬೆಂಗಳೂರಿಗೆ ಹೋಗಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಹೋರಾಟದ ನೇತೃತ್ವ ವಹಿಸಿರುವ ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಆ ಮೂಲಕ ಏಳು ಹಂತದ ಹೋರಾಟವನ್ನು ನಡೆಸಿರುವ ಸಮುದಾಯ, ಇದೀಗ ಎಂಟನೇ ಹಂತದ ಹೋರಾಟಕ್ಕೆ ಸಜ್ಜಾಗಿದೆ ಎಂದು ಅವರು ಸಂದೇಶ ರವಾನಿಸಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಸರ್ಕಾರ ತಮ್ಮ ಬೇಡಿಕೆಗೆ ಕಿವುಡಾಗಿದೆ ಎಂಬ ಅಸಮಾಧಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. 

ಪಂಚಮಸಾಲಿ ಮೀಸಲಾತಿ ಹೋರಾಟ ಏನು? ಅವರ ಬೇಡಿಕೆಗಳೇನು? ಮೀಸಲಾತಿ ನೀಡಿಕೆಯಿಂದ ಆಗುವ ಲಾಭ, ನಷ್ಟ ಏನು? ಮೀಸಲಾತಿ ಹೋರಾಟ ಸಾಗಿಬಂದ ಹಾದಿ ಏನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಂಚಮಸಾಲಿ ಮೀಸಲಾತಿ ಹೋರಾಟ ಏನು?

ಕೃಷಿಯೇ ಮೂಲ ಕುಲಕಸುಬಾಗಿರುವ ಪಂಚಮಸಾಲಿಗರಲ್ಲಿ ಸಾಕಷ್ಟು ಮಂದಿ ಹಿಂದುಳಿದಿದ್ದಾರೆ. ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮುದಾಯವನ್ನು ಪ್ರವರ್ಗ 2ಎ ಗೆ ಸೇರಿಸಬೇಕೆಂಬುದು ಸಮುದಾಯದ ಬೇಡಿಕೆ. ಪ್ರಸ್ತುತ, ಪಂಚಮಸಾಲಿ ಸಮುದಾಯ ಪ್ರವರ್ಗ 3ಬಿಯಲ್ಲಿದೆ. ಈ ಪ್ರವರ್ಗದಡಿ ಲಿಂಗಾಯತ ಹಾಗೂ ಅದರ ಉಪಜಾತಿಗಳೇ ಮೀಸಲಾತಿ ಸೌಲಭ್ಯ ಪಡೆಯುತ್ತಿವೆ. ಹಾಗಾಗಿ 2ಎ ಪ್ರವರ್ಗದಡಿ ಪಂಚಮಸಾಲಿಗರನ್ನು ಸೇರಿಸಬೇಕು ಎಂದು ಹೋರಾಟ ನಡೆಸಲಾಗುತ್ತಿದೆ.

ಮೀಸಲಾತಿ ಹೋರಾಟದ ಹಿನ್ನೆಲೆ ಏನು?

2021 ಜ.14 ರಂದು ಕೂಡಲಸಂಗಮದ ಪಂಚಮಸಾಲಿ ಪೀಠದಿಂದ ಬೆಂಗಳೂರಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಸಹಸ್ರಾರು ಜನರು ಪಾದಯಾತ್ರೆ ಆರಂಭಿಸಿದರು. ಸುಮಾರು 38 ದಿನಗಳ ಕಾಲ ಪಾದಯಾತ್ರೆ ನಡೆಸಿ, ಬೆಂಗಳೂರಿಗೆ ತಲುಪಿ, ಅರಮನೆ ಮೈದಾನದಲ್ಲಿ ಬೃಹತ್ ಶಕ್ತಿ ಪ್ರದರ್ಶನ ಮಾಡಿದ್ದರು.

ಗಡುವಿನಲ್ಲಿ ಸರ್ಕಾರ ತೀರ್ಮಾನ ಪ್ರಕಟಿಸದ ಕಾರಣ ಸ್ವಾಮೀಜಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ 2022 ಫೆ.9 ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ್ದರು. 50 ದಿನಗಳ ಕಾಲ ಧರಣಿ ನಡೆಸಿದ ಬಳಿಕ ಸರ್ಕಾರದ ಅಂದಿನ ಸಚಿವ ಸಿಸಿ ಪಾಟೀಲ್‌, ಸ್ವಾಮೀಜಿಯವರ ಮನವೊಲಿಸಿ ಧರಣಿ ಹಿಂಪಡೆಯುವಂತೆ ಮಾಡಿದ್ದರು. ಹಿಂದುಳಿದ ಆಯೋಗದ ವರದಿ ಸ್ವೀಕರಿಸುತ್ತಿದ್ದಂತೆ ಪ್ರವರ್ಗ 2ಎ ಅಡಿ ಮೀಸಲಾತಿ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು.  

ಹೋರಾಟದಲ್ಲಿ ಯಾರೆಲ್ಲಾ ಇದ್ದರು?

ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ರಾಜಕೀಯ ನಾಯಕರಾದ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಿ.ಸಿ. ಪಾಟೀಲ, ಕಾಂಗ್ರೆಸ್ಸಿನ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನರವರ್, ಲಕ್ಷ್ಮಿ ಹೆಬ್ಬಳಾಕರ, ಶಿವಾನಂದ ಪಾಟೀಲ, ಅಶೋಕ್ ಮನಗೂಳಿ, ರಾಜುಗೌಡ ಪಾಟೀಲ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ಈ ಹೋರಾಟದಲ್ಲಿ ಪಂಚಮಸಾಲಿ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಕೂಡ ಮುಂಚೂಣಿಯಲ್ಲಿದ್ದರು.

ಮೀಸಲಾತಿಗೆ ಇರುವ ಬೆಂಬಲ, ಆತಂಕ ಏನು?

ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಪ್ರಬಲ ಲಿಂಗಾಯತ ಉಪ ಪಂಗಡಗಳ ಮುಖಂಡರು ಕೂಡ ಬೆಂಬಲ ಸೂಚಿಸಿರುವುದು ಹೋರಾಟಕ್ಕೆ ಮತ್ತಷ್ಟು ಹುರುಪು ತಂದಿದೆ. ಆದರೆ, ಪಂಚಮಸಾಲಿಗಳಿಗೆ ತಮ್ಮ ಕೋಟಾದಡಿ ಮೀಸಲಾತಿ ನೀಡಿದರೆ ಹಿಂದುಳಿದ ಮತ್ತು ಅತಿ ಹಿಂದುಳಿದ ಪಂಗಡಗಳ ಅವಕಾಶವನ್ನು ಕಿತ್ತುಕೊಂಡಂತಾಗಲಿದೆ ಎಂಬ ಆತಂಕ ಪ್ರವರ್ಗ 2ಎನಲ್ಲಿರುವ ಜಾತಿಗಳದ್ದಾಗಿದೆ. 

ಈಗಾಗಲೇ 2ಎ ಪ್ರವರ್ಗದಲ್ಲಿ ಇರುವ ನೂರಕ್ಕೂ ಹೆಚ್ಚು ಜಾತಿಗಳ ಪೈಕಿ ಒಂದೆರಡು ಸಮುದಾಯಗಳು ಮಾತ್ರ ಪ್ರವರ್ಗಕ್ಕೆ ಇರುವ ಶೇ.15ರಷ್ಟು ಮೀಸಲಾತಿಯಲ್ಲಿ ಸಿಂಹಪಾಲು ಪಡೆಯುತ್ತಿವೆ. ಇನ್ನುಳಿದ ಸಮುದಾಯಗಳು ಬೇರೆ ಬೇರೆ ಕಾರಣಕ್ಕೆ ಮೀಸಲಾತಿಯ ಸೌಲಭ್ಯ ಪಡೆಯುವಲ್ಲಿ ಹಿಂದೆ ಬಿದ್ದಿವೆ. ಒಂದು ವೇಳೆ ಪಂಚಮಸಾಲಿಯಂತಹ ಪ್ರಭಾವಿ ಸಮುದಾಯವನ್ನು ಆ ಪ್ರವರ್ಗಕ್ಕೆ ಸೇರಿಸಿದರೆ ಅತಿ ಹಿಂದುಳಿದಿರುವ ಅಂತಹ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂಬ ವಾದ ಕೂಡ ಇದೆ.

ನ್ಯಾಯಾಲಯದ ಮೆಟ್ಟಿಲೇರಿದ್ದ ಹೋರಾಟ

ಪಂಚಮಸಾಲಿಗಳಿಗೆ ಮೀಸಲಾತಿ ನೀಡುವ ಸಂಬಂಧ ವರದಿ ಸಲ್ಲಿಸಲು ಜಯಪ್ರಕಾಶ್ ಹೆಗಡೆ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ಆರಂಭಿಸಿತ್ತು. ಜೊತೆಗೆ ಕುಲಶಾಸ್ತ್ರೀಯ ಅಧ್ಯಯನವನ್ನೂ ನಡೆಸಲಾಗಿತ್ತು. ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಸರ್ಕಾರ ವರದಿ ಕುರಿತಂತೆ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಆಗ ಬೆಂಗಳೂರಿನ ಡಿ.ಜಿ ರಾಘವೇಂದ್ರ ಎಂಬುವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ, ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಕಾಲವಕಾಶ ನೀಡಿತ್ತು. ಅಂತೆಯೇ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಆಯೋಗದ ಮಧ್ಯಂತರ ವರದಿಯನ್ನು ನೀಡಿತ್ತು.

ಹೋರಾಟದ ಬಗ್ಗೆ ಏನೆಂದಿದ್ದರು ಶ್ರೀಗಳು?

"2008, 2013 ಮತ್ತು 2018ರ ಚುನಾವಣೆಗಳಲ್ಲಿ ಸಮುದಾಯದ ಬೆಂಬಲ ಪಡೆದು ಅಧಿಕಾರಕ್ಕೆ ಬಂದ ಸರ್ಕಾರಗಳು ಸಮುದಾಯದ ಹಿತ ಕಾಪಾಡಲಿಲ್ಲ. 2020ರಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧ ಬಳಿ ಉಪವಾಸ ಸತ್ಯಾಗ್ರಹ ನಡೆಸಿದರೂ ಸ್ಪಂದಿಸಿಲ್ಲ. ಹಿಂದುಳಿದ ವರ್ಗಗಳ ಆಯೋಗದ ವರದಿ ಸಲ್ಲಿಸಿದರೂ ಕಾರ್ಯಪ್ರವೃತ್ತರಾಗದಿರುವುದು ಸಂಶಯ ಉಂಟು ಮಾಡಿದೆ" ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದರು.

"ಹುಕ್ಕೇರಿ, ಬೆಳಗಾವಿ, ಶಿಗ್ಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಿದ್ದೇವೆ. ಈ ಹಿಂದೆ ಬಿ. ಎಸ್. ಯಡಿಯೂರಪ್ಪ ಅವರು ನಮ್ಮದೇ ಸೋದರ ಸಮುದಾಯಗಳನ್ನು ಪ್ರವರ್ಗ -2ಎಗೆ ಸೇರ್ಪಡೆ ಮಾಡಿದ್ದರು. ಆಗ ಅಗತ್ಯವಿಲ್ಲದ ಅಧ್ಯಯನ ವರದಿಗಳು ಈಗ ಬೇಕೆ?" ಎಂದು ಸ್ವಾಮೀಜಿ ಸರ್ಕಾರದ ವಿಳಂಬ ಧೋರಣೆಯನ್ನು ಪ್ರಶ್ನಿಸಿದ್ದರು.

ಪ್ರತ್ಯೇಕ ಪ್ರವರ್ಗ ಸೃಷ್ಟಿಸಿದ್ದ ಸರ್ಕಾರ

2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಪಂಚಮಸಾಲಿ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿ ಬೇಡಿಕೆಗೆ 2 ಸಿ ಹಾಗೂ 2 ಡಿ ಎಂಬ ಹೊಸ ಪ್ರವರ್ಗ ಸೃಷ್ಟಿಸಿ ತೀರ್ಮಾನ ಕೈಗೊಂಡಿತ್ತು.

3ಎ ನಲ್ಲಿರುವ ಒಕ್ಕಲಿಗರನ್ನು 2ಸಿ ಗೆ ಸೇರಿಸುವುದು, 3ಬಿಯಲ್ಲಿರುವ ಲಿಂಗಾಯತರನ್ನು 2ಡಿಗೆ ಸೇರಿಸುವ ಪ್ರಸ್ತಾಪ ಮುಂದಿಟ್ಟಿತ್ತು. ಆದರೆ, ಈ ಹೊಸ ಪ್ರವರ್ಗಗಳಿಗೆ ಎಷ್ಟು ಪ್ರಮಾಣದಲ್ಲಿ ಮೀಸಲಾತಿ ನೀಡಬೇಕು ಎಂಬುದನ್ನು ನಿರ್ಧರಿಸಿರಲಿಲ್ಲ. ಆದರೆ, ಸರ್ಕಾರದ ಈ ನಿರ್ಧಾರವನ್ನು ಪಂಚಮಸಾಲಿ ಮಠದ ಜಯ ಮೃತ್ಯುಂಜಯ ಸ್ವಾಮೀಜಿ ಸಾರಾಸಗಟಾಗಿ ತಿರಸ್ಕರಿಸಿದ್ದರು. ಪ್ರವರ್ಗ 2ಎನಲ್ಲೇ ಪಂಚಮಸಾಲಿಗಳನ್ನು ಸೇರಿಸಬೇಕು ಎಂದು ಪಟ್ಟು ಹಿಡಿದಿದ್ದರು.

ಈಗಿನ ಸರ್ಕಾರದ ನಡೆ ಏನು?

ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಕಾಲಘಟ್ಟದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸದ ಕಾರಣ ಈಗ ಮತ್ತೊಂದು ಸುತ್ತಿನ ಹೋರಾಟ ಆರಂಭಿಸಲು ಪಂಚಮಸಾಲಿ ಸಮುದಾಯ ತೀರ್ಮಾನಿಸಿದೆ. ಆದರೆ, ಮೀಸಲಾತಿ ಕಲ್ಪಿಸುವ ಸಂಬಂಧ ಸರ್ಕಾರದ ನಿರ್ಧಾರ ಏನು ಎಂಬುದು ಪ್ರಶ್ನಾರ್ಹವಾಗಿದೆ.

ಈ ಹಿಂದೆ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯನಾಗಿದ್ದಾಗ ಕೇಳಿದವರಿಗೆಲ್ಲಾ ಮೀಸಲಾತಿ ಹಂಚಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದಿದ್ದರು. ಇಂದ್ರಾ ಸಾಹ್ನಿ ಪ್ರಕರಣ ಉಲ್ಲೇಖಿಸಿ ಮೀಸಲಾತಿ ಮಿತಿ ಶೇ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಪಂಚಮಸಾಲಿಯನ್ನು 2 ಎಗೆ ಸೇರಿಸುವ ಕುರಿತು ಸಮುದಾಯದ ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದು ಸಿಎಂ ಆದ ನಂತರ ಇತ್ತೀಚೆಗೆ ಹೇಳಿದ್ದರು.

Tags:    

Similar News