New toll rules| ಜಿಎನ್‌ಎಸ್‌ಎಸ್‌, ಒಬಿಯು ಹೇಗೆ ಕಾರ್ಯನಿರ್ವಹಿಸುತ್ತದೆ?

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಸೂಚನೆ ಪ್ರಕಾರ, ಜಿಎನ್‌ಎಸ್‌ಎಸ್ ಅಡಿಯಲ್ಲಿ ರಾಷ್ಟ್ರೀಯ ಪರವಾನಗಿ ಇರುವ ವಾಹನಗಳನ್ನು ಹೊರತುಪಡಿಸಿ, ಬೇರೆ ವಾಹನಗಳು 24 ಗಂಟೆಗಳಲ್ಲಿ ಪ್ರತಿ ದಿಕ್ಕಿನಲ್ಲಿ ಮೊದಲ 20 ಕಿಲೋಮೀಟರ್‌ವರೆಗೆ ಟೋಲ್‌ರಹಿತವಾಗಿ ಪ್ರಯಾಣಿಸಬಹುದು.

Update: 2024-09-12 09:12 GMT

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (ಎಂಒಆರ್‌ಟಿಎಚ್‌) ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಮತ್ತು ತಡೆ-ಮುಕ್ತ ಟೋಲಿಂಗ್ ಸೇವೆಯನ್ನು ಒದಗಿಸಲು ಗ್ಲೋಬಲ್ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (ಜಿಎನ್‌ಎಸ್‌ಎಸ್‌) ಅಳವಡಿಸುವುದಾಗಿ ಘೋಷಿಸಿದೆ. ಸಚಿವಾಲ ಯವು ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು 2008ಕ್ಕೆ ಮಂಗಳವಾರ (ಸೆಪ್ಟೆಂಬರ್ 10) ರಂದು ತಿದ್ದು ಪಡಿ ಮಾಡಿದೆ.

ಅಧಿಸೂಚನೆ ಪ್ರಕಾರ, ಜಿಎನ್‌ಎಸ್‌ಎಸ್ ಅಡಿಯಲ್ಲಿ ರಾಷ್ಟ್ರೀಯ ಪರವಾನಗಿ ಹೊಂದಿರುವ ವಾಹನಗಳನ್ನು ಹೊರತುಪಡಿಸಿ, ಒಂದು ದಿನದಲ್ಲಿ ಒಂದು ದಿಕ್ಕಿನಲ್ಲಿ ಮೊದಲ 20 ಕಿಮೀ ಟೋಲ್‌ರಹಿತ ಪ್ರಯಾಣಕ್ಕೆ ಅವಕಾಶವಿದೆ. ೨೦ ಕಿಮೀಗಿಂತ ಹೆಚ್ಚು ದೂರಕ್ಕೆ ಶುಲ್ಕ ವಿಧಿಸಲಾಗುತ್ತದೆ. 

ಜಿಎನ್‌ಎಸ್‌ಎಸ್‌ ಎಂದರೇನು?: ಗ್ಲೋಬಲ್ ನೇವಿಗೇಷನ್ ಸ್ಯಾಟಲೈಟ್ ಸಿಸ್ಟಮ್ ಆಧಾರಿತ ಟೋಲಿಂಗ್ ಎನ್ನುವುದು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (ಇಟಿಸಿ)ಯ ತಡೆ ಮುಕ್ತ ವಿಧಾನ. ಇದರಲ್ಲಿ ರಸ್ತೆ ಬಳಕೆದಾರರು ಅವರು ಸುಂಕ ಸಂಗ್ರಹಿಸುವ ಹೆದ್ದಾರಿಯಲ್ಲಿ ಪ್ರಯಾಣಿಸಿದ ದೂರಕ್ಕೆ ಮಾತ್ರ ಶುಲ್ಕ ವಿಧಿಸಲಾಗುತ್ತದೆ. 

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ)ವು ಜಿಎನ್‌ಎಸ್‌ಎಸ್‌ ಆಧರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ(GNSS ETC)ಯನ್ನು ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್‌ ವ್ಯವಸ್ಥೆಯಲ್ಲಿ ಅಳವಡಿಸಲು ಯೋಜಿಸಿದೆ. ಆರಂಭದಲ್ಲಿ ಆರ್‌ಎಫ್‌ಐಡಿ ಆಧಾರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (RFID ETC) ಮತ್ತು ಜಿಎನ್‌ಎಸ್‌ಎಸ್‌ ಆಧರಿತ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಎರಡೂ ಇರುವ ಹೈಬ್ರಿಡ್ ಮಾದರಿಯನ್ನು ಬಳಸಲಾಗುತ್ತದೆ.

ಜಿಎನ್‌ಎಸ್‌ಎಸ್‌ ಮೀಸಲು ಸಾಲು: ಟೋಲ್ ಪ್ಲಾಜಾಗಳಲ್ಲಿ ಮೀಸಲು ಜಿಎನ್‌ಎಸ್‌ಎಸ್‌ ಲೇನ್‌ಗಳು ಇರಲಿದ್ದು, ಇವು ಜಿಎನ್‌ಎಸ್‌ ಎಸ್‌ ಆಧರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆ ಬಳಸುವ ವಾಹನಗಳು ಮುಕ್ತವಾಗಿ ಹಾದುಹೋಗಲು ಅನುವು ಮಾಡಿಕೊಡುತ್ತವೆ. ಜಿಎನ್‌ಎಸ್‌ಎಸ್‌ ವ್ಯವಸ್ಥೆ ವ್ಯಾಪಕವಾದಂತೆ, ಎಲ್ಲ ಸಾಲುಗಳನ್ನು ಜಿಎನ್‌ಎಸ್‌ಎಸ್‌ ಲೇನ್‌ಗಳಾಗಿ ಪರಿವರ್ತಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. 

ʻಜಿಎನ್‌ಎಸ್‌ಎಸ್‌ ಆಧರಿತ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯು ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತದೆ. ತಡೆರಹಿತ ಸಂಚಾರ ಮತ್ತು ದೂರ ಆಧರಿತ ಶುಲ್ಕ ವಿಧಿಸುತ್ತದೆ. ಜಿಎನ್‌ಎಸ್‌ಎಸ್‌ ಇಟಿಸಿ ಸುಂಕದ ಸೋರಿಕೆಯನ್ನು ತಡೆಯುತ್ತದೆ. ಇದರಿಂದ ಪರಿಣಾಮಕಾರಿ ಸುಂಕ ಸಂಗ್ರಹ ವ್ಯವಸ್ಥೆ ಜಾರಿಗೊಳ್ಳುತ್ತದೆ, ʼಎಂದು ಸಚಿವಾಲಯ ಹೇಳಿದೆ.

ಆನ್ ಬೋರ್ಡ್ ಘಟಕ (ಒಬಿಯು) ಮತ್ತು ಕಾರ್ಯನಿರ್ವಹಣೆ: ಜಿಎನ್‌ಎಸ್‌ಎಸ್‌ ಬಳಸಲು ವಾಹನಗಳು ಆನ್ ಬೋರ್ಡ್ ಘಟಕ (ಒಬಿಯು) ಅಳವಡಿಸಿಕೊಳ್ಳಬೇಕಾಗುತ್ತದೆ. ಒಬಿಯು ಒಂದು ಎಲೆಕ್ಟ್ರಾನಿಕ್ ಸಾಧನವಾಗಿದ್ದು ಚಾಲನೆ ದತ್ತಾಂಶವನ್ನು ಸಂಗ್ರಹಿಸುತ್ತದೆ ಮತ್ತು ಉಪಗ್ರಹ ನೇವಿಗೇಷನ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುತ್ತದೆ. ವಾಹನದ ಪ್ರಯಾಣಿಸುವ ದೂರವನ್ನು ಆಧರಿಸಿ, ಟೋಲ್‌ ಪ್ಲಾಜಾಗಳ ಸ್ವಯಂಚಾಲಿತ ಬಿಲ್ಲಿಂಗ್‌ಗೆ ನೆರವಾಗುತ್ತದೆ. 

ಟೊಲೆಮಸ್‌ ಕನ್ಸಲ್ಟಿಂಗ್ ಗ್ರೂಪ್ ಪ್ರಕಾರ, ʻಒಬಿಯುಗಳು ರೇಡಿಯೊ ಮತ್ತು ಮೊಬೈಲ್ ರೇಡಿಯೊ ಹಾಗೂ ಉಪಗ್ರಹ ನೇವಿಗೇಷನ್‌ ವ್ಯವಸ್ಥೆಯನ್ನು ಬಳಸುತ್ತವೆ. ಟೋಲಿಂಗ್ ವ್ಯವಸ್ಥೆಯೊಂದಿಗೆ ಸಂವಹನ ಮತ್ತು ಪ್ರಯಾಣಿಸಿದ ದೂರವನ್ನು ನಿರ್ಣಯಿಸಿ, ಶುಲ್ಕವನ್ನು ಸಂಗ್ರಹಿಸುತ್ತವೆʼ. 

ಜಿಎನ್‌ಎಸ್‌ಎಸ್‌ ಪೈಲಟ್ ಅಧ್ಯಯನ: ಕರ್ನಾಟಕದಲ್ಲಿ ಎನ್‌ಎಚ್‌ -275 ರ ಬೆಂಗಳೂರು-ಮೈಸೂರು ವಿಭಾಗ ಮತ್ತು ಹರಿಯಾಣದ ಎನ್‌ ಎಚ್‌ -709 (ಹಳೆಯ ಎನ್‌ ಎಚ್‌-71ಎ) ನ ಪಾಣಿಪತ್-ಹಿಸಾರ್ ವಿಭಾಗದಲ್ಲಿ ಜಿಎನ್‌ಎಸ್‌ಎಸ್‌ನ ಪ್ರಾಯೋಗಿಕ ಅಧ್ಯಯನ ನಡೆಸಲಾಗಿದೆ. 

ಹೊಸದಿಲ್ಲಿಯಲ್ಲಿ ಜೂನ್‌ನಲ್ಲಿ ಎನ್‌ಎಚ್‌ಎಐ ಆಯೋಜಿಸಿದ್ದ ಒಂದು ದಿನದ ಅಂತಾರಾಷ್ಟ್ರೀಯ ಕಾರ್ಯಾಗಾರದಲ್ಲಿ ದೇಶದಲ್ಲಿ ಜಿಎನ್‌ಎಸ್‌ಎಸ್ ತಂತ್ರಜ್ಞಾನ ಕುರಿತು ದೀರ್ಘ ಚರ್ಚೆ ನಡೆದಿತ್ತು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಮಾತನಾಡಿ, ʻಜಿಎನ್‌ಎಸ್‌ಎಸ್ ತಂತ್ರಜ್ಞಾನ ನೇವಿಗೇಷನ್ ಹಾಗೂ ಸ್ಥಾನೀಕರಣವನ್ನು ವೃದ್ಧಿಸುತ್ತದೆ; ಟೋಲ್ ಸಂಗ್ರಹ ವ್ಯವಸ್ಥೆಗಳ ಆಧುನೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ತಡೆರಹಿತ ಪ್ರಯಾಣ, ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಗೊಳಿಸುವುದಲ್ಲದೆ, ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸಿ, ಶೀಘ್ರವಾಗಿ ಸೇವೆ ಒದಗಿಸುತ್ತದೆ,ʼ ಎಂದಿದ್ದರು.

Tags:    

Similar News