ಚಿನ್ನೇನಹಳ್ಳಿ ದುರಂತ | ಕಲುಷಿತ ನೀರು ಕುಡಿದು ಆರು ಸಾವು: ಘಟನೆ ಏನು? ಹೇಗಾಯ್ತು?
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಆರು ಜನರು ಸಾವನ್ನಪ್ಪಿದ್ದಾರೆ. ಘಟನೆ ಹೇಗಾಯ್ತು? ಏನು ಕಾರಣ? ಇಲ್ಲಿದೆ ವಿವರ..;
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಆರು ಜನರು ಸಾವನ್ನಪ್ಪಿದ್ದಾರೆ.
ಬುಧವಾರ (ಜೂ.12) ಒಂದೇ ದಿನ ಮೂವರು ಸಾವನ್ನಪ್ಪಿದ್ದು, ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಜಿಲ್ಲಾಸ್ಪತ್ರೆಗೆ ದೌಡಾಯಿಸಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ. ಈ ವೇಳೆ ಕಲುಷಿತ ನೀರು ಸೇವಿಸಿ ಈ ಹಿಂದೆಯೂ ಮೂವರು ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ. ಹಾಗಾಗಿ ಈಗ ಈ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿ ಪ್ರಭಾರಿ ಅಭಿವೃದ್ಧಿ ಅಧಿಕಾರಿ ಬಿ.ವಿ.ಮುನಿರಾಜು, ವಾಟರ್‌ಮ್ಯಾನ್ ಎಸ್.ನಾಗರಾಜು ಅವರನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.
ಏನಿದು ಘಟನೆ?
ತುಮಕೂರು ಜಿಲ್ಲೆಯ ಚಿನ್ನೇನಹಳ್ಳಿ ಗ್ರಾಮದಲ್ಲಿ ಜೂನ್ 7ರಿಂದ ಗ್ರಾಮದೇವತೆ ಲಕ್ಷ್ಮಿದೇವಿ ಮತ್ತು ಕೆಂಪಮ್ಮ ಜಾತ್ರೆ ಇತ್ತು. ಈ ಜಾತ್ರೆಯಲ್ಲಿ ಜಿಲ್ಲೆಯ ನಾನಾ ಭಾಗಗಳ ಜನರು ಭಾಗವಹಿಸಿದ್ದರು. ಆದರೆ ಅಲ್ಲಿ ನೀರಿನ ವ್ಯವಸ್ಥೆ ಸರಿಯಾಗಿ ಇರದೇ ಕಲುಷಿತ ನೀರನ್ನೇ ಜನರು ಸೇವಿಸಿದ್ದರು. ಜೂನ್ 10 ರಂದು ರಾತ್ರಿ 54 ಮಂದಿಗೆ ದಿಢೀರನೇ ವಾಂತಿ, ಬೇಧಿ ಶುರುವಾಗಿ ಅವರನ್ನು ಆಸ್ಪತ್ರಗೆ ದಾಖಲಿಸಲಾಗಿತ್ತು. ಕೆಲವರು ತುಮಕೂರು ಜಿಲ್ಲಾಸ್ಪತ್ರೆ, ಇನ್ನು ಕೆಲವರು ಮಧುಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಕೆಲವರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಸಾವು ಕಂಡವರು ಯಾರು?
ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಮಧುಗಿರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮೀನಾಕ್ಷಿ (3) ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕದಾಸಪ್ಪ (76) ಮತ್ತು ಪೆದ್ದಣ್ಣ (74) ಬುಧವಾರ ( ಜೂನ್ 12) ಮೃತಪಟ್ಟಿದ್ದರು.
ಇದಕ್ಕೂ ಮುನ್ನ ಜೂನ್ 10ರಂದು ಹನುಮಕ್ಕ (85), ಜೂ.11ರಂದು ನಾಗಪ್ಪ (85), ನಾಗಮ್ಮ (90) ಚಿನ್ನೇನಹಳ್ಳಿಯಲ್ಲೇ ಮೃತಪಟ್ಟಿದ್ದಾರೆ. ಆದರೆ ಹನುಮಕ್ಕ, ನಾಗಪ್ಪ, ನಾಗಮ್ಮ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಮೂವರ ಸಾವಿಗೂ ಮುನ್ನ ವಾಂತಿ, ಭೇದಿಯಿಂದ ಬಳಲುತ್ತಿದ್ದರು ಎಂದು ಗ್ರಾಮಸ್ಥರು, ಕುಟುಂದವರು ಹೇಳುತ್ತಿದ್ದಾರೆ.
ಗ್ರಾಮದ 98 ಜನ ಅಸ್ವಸ್ಥ
ಚಿನ್ನೇನಹಳ್ಳಿ ಗ್ರಾಮದ ಓವರ್ ಹೆಡ್ ಟ್ಯಾಂಕ್ ಮತ್ತು ಶುದ್ಧ ನೀರಿನ ಘಟಕದಿಂದ ಪೂರೈಸುವ ನೀರು ಕುಲುಷಿವಾಗಿತ್ತು. ಈ ನೀರು ಸೇವಿಸಿ ವಾಂತಿ, ಬೇಧಿಯಿಂದ ಗ್ರಾಮದ 98 ಜನರು ಅಸ್ವಸ್ಥರಾಗಿದ್ದರು. ಅಸ್ವಸ್ಥರಾದವರ ಪೈಕಿ ಜಿಲ್ಲಾ ಆಸ್ಪತ್ರೆಯಲ್ಲಿ 16, ಮಧುಗಿರಿಯಲ್ಲಿ 18, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಪೈಕಿ 59 ಜನ ಗುಣಮುಖರಾಗಿದ್ದು, ಕೆಲವರಿಗೆ ಚಿಕಿತ್ಸೆ ಮುಂದುವರಿದಿದೆ.
ಗೃಹಸಚಿವರು ಹೇಳಿದ್ದೇನು?
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಗುರುವಾರ (ಜೂ.13) ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯರು, ಮಕ್ಕಳ ಆರೋಗ್ಯವನ್ನು ವಿಚಾರಿಸಿದರು.
ಬಳಿಕ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಲುಷಿತ ನೀರು ಸೇವಿಸಿ ಮೃತಪಟ್ಟಿರುವುದು ಬೇಸರದ ಸಂಗತಿ. ಈಗಾಗಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ವಾಟರ್‌ಮ್ಯಾನ್ ಅವರನ್ನು ಅಮಾನತು ಮಾಡಲಾಗಿದೆ. ಕಲುಷಿತ ನೀರನ್ನು ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಇನ್ನೂ ಕೆಲವು ನೀರಿನ ಮಾದರಿ ಪರಿಶೀಲನೆ ಮಾಡಲಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಕಡೆಗೆ ಗಮನ ಹರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪರಿಸ್ಥಿತಿ ಸುಧಾರಿಸಿದ್ದು, ಬೇರೆ ಕಡೆಯೂ ಇಂತಹ ಸಮಸ್ಯೆ ಆಗದಂತೆ ಗಮನ ನೀಡುವಂತೆ ಸೂಚಿಸಲಾಗಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.