ನಮ್ಮನ್ನು ವಿಲನ್‍ ಮಾಡಿ ಕೆಲವರು ಹೀರೋಗಳಾಗ್ತಿದ್ದಾರೆ: ಅನಿರುದ್ಧ್ ಬೇಸರ

ವಿಷ್ಣುವರ್ಧನ್‍ ಸಮಾಧಿಯನ್ನು ತೆರವುಗೊಳಿಸುವ ವಿಷಯ ತಮಗೆ ಗೊತ್ತಿರಲಿಲ್ಲ. ಆ ವಿಷಯ ತಮಗೂ ಬೇಸರ ತಂದಿದೆ ಎಂದು ಅವರ ಅಳಿಯ ಅನಿರುದ್ಧ್ ಹೇಳಿದ್ದಾರೆ.;

Update: 2025-08-11 10:25 GMT

ಅನಿರುದ್ಧ್

ನಾವು ಯಾವತ್ತೂ ಅಭಿಮಾನಿಗಳಿಂದ ದೂರವಾಗಿಲ್ಲ. ನಾವು ಯಾವಾಗಲೂ ಅಭಿಮಾನಿಗಳ ಜೊತೆಗೇ ಇದ್ದೇವೆ. ಕೆಲವರು ನಮ್ಮನ್ನು ವಿಲನ್ ಮಾಡಿ, ಅವರು ಹೀರೋ ಆಗ್ತಿದ್ದಾರೆ. ಅಂತವರ ವಿರುದ್ಧ ನಾವು ಇದ್ದೇವೆ. ಅವರ ಜೊತೆಗೆ ನಾವು ಸೇರೋದಿಲ್ಲ’ ಎಂದು ನಟ ಮತ್ತು ವಿಷ್ಣುವರ್ಧನ್‍ ಅವರ ಅಳಿಯ ಅನಿರುದ್ಧ್ ಹೇಳಿದ್ದಾರೆ.

ಕೆಂಗೇರಿ ಬಳಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಗುರುವಾರ ರಾತ್ರೋರಾತ್ರಿ ಪೊಲೀಸ್ ಭದ್ರತೆಯಲ್ಲಿ ನೆಲಸಮ ಮಾಡಲಾಗಿದೆ. ಈ ಕುರಿತು ಅಭಿಮಾನಿಗಳು ಪ್ರತಿಭಟನೆಯನ್ನೂ ನಡೆಸಿದ್ದಾರೆ. ಈ ವಿಷಯ ಡಾ. ವಿಷ್ಣುವರ್ಧನ್‍ ಅವರ ಕುಟುಂಬದವರಿಗೆ ಮೊದಲೇ ಗೊತ್ತಿತ್ತು ಎಂಬ ಆರೋಪ ಕೇಳಿ ಬಂದಿತ್ತು.

ಈ ಕುರಿತು ಮಾತನಾಡಿರುವ ಅನಿರುದ್ಧ್, ವಿಷ್ಣುವರ್ಧನ್‍ ಅವರ ಸಮಾಧಿಯನ್ನು ತೆರವುಗೊಳಿಸುವ ವಿಷಯ ತಮಗೆ ಗೊತ್ತಿರಲಿಲ್ಲ. ಆ ವಿಷಯ ತಮಗೂ ಬೇಸರ ತಂದಿದೆ’ ಎಂದು ಹೇಳಿಕೊಂಡಿದ್ದಾರೆ.

ಶನಿವಾರ ಸಂಜೆ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅನಿರುದ್ಧ್, ‘ಸಮಾಧಿ ನಿರ್ಮಾಣ ಮಾಡಲಾದ ಜಾಗದಲ್ಲಿ ವಿವಾದವಿತ್ತು ಎಂಬ ವಿಷಯ ನಮಗೆ ಗೊತ್ತಿರಲಿಲ್ಲ. ನಾವು ಚಾಮರಾಜಪೇಟೆಯಲ್ಲಿ ಅಂತ್ಯಸಂಸ್ಕಾರ ಮಾಡುವ ಯೋಚನೆಯಲ್ಲಿದ್ದೆವು. ಆದರೆ, ಎಚ್‍.ಡಿ. ಕುಮಾರಸ್ವಾಮಿ ಅವರು, ವಿಷ್ಣುವರ್ಧನ್‍ ಅವರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ಮಾಡಿ ಎಂದರು. ಹಾಗಾಗಿ, ನಾವು ಒಪ್ಪಿಕೊಂಡೆವು. ಅದು ಇಷ್ಟೆಲ್ಲಾ ಆಗುತ್ತದೆ ಎಂದು ನಮಗೆ ಗೊತ್ತಿರಲಿಲ್ಲ’ ಎಂದಿದ್ದಾರೆ.

ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತಾನಾಡಬೇಡಿ ಎಂದು ಮನವಿ ಮಾಡಿರುವ ಅನಿರುದ್ಧ್, ‘ಸಮಾಧಿ ತೆರವುಗೊಳಿಸಬೇಕೆಂದು ನಾವು ಯಾಕೆ ಬಯಸಬೇಕು? ಮೈಸೂರಿನಲ್ಲಿ ವಿಷ್ಣುವರ್ಧನ್‍ ಹೆಸರಿಲ್ಲಿ ದೊಡ್ಡ ಸ್ಮಾರಕವಾಗಿದೆ. ಅದರ ಹಿಂದಿನ ಶ್ರಮ ಯಾರಿಗೂ ಯಾಕೆ ಕಾಣುತ್ತಿಲ್ಲ? ಬೆಂಗಳೂರಿನಲ್ಲೇ ಸ್ಮಾರಕ ಆಗಬೇಕು ಎಂದು ನಾವು ಎಷ್ಟು ಅಲೆದಿದ್ದೇವೆ? ಯಾರನ್ನೆಲ್ಲಾ ಭೇಟಿ ಮಾಡಿದ್ದೇವೆ ಎಂಬುದು ಗೊತ್ತಾ? ಬೆಂಗಳೂರಿನಲ್ಲೇ ಸ್ಮಾರಕ ಇರಬಕು ಎಂದು ಸಾಕಷ್ಟು ಜಾಗಗಳನ್ನು ನೋಡಿದೆವು. ಕೊನೆಗೆ ಎಲ್ಲೂ ಆಗದೇ ಹೋದಾಗ ಮೈಸೂರಿನತ್ತ ಹೋಗಬೇಕಾಯಿತು. ಸ್ಮಾರಕಕ್ಕಾಗಿ ಸಮಾರು ಆರೂವರೆ ವರ್ಷಗಳ ಕಾಲ ಓಡಾಡಿದ ಮೇಲೆ, ಇನ್ನು ಸ್ಮಾರಕ ಆಗೋದೇ ಇಲ್ಲ ಎಂದು ಗೊತ್ತಾಯಿತು. ಅಷ್ಟರಲ್ಲಿ ಸಾಕಾಗಿ ಹೋಗಿತ್ತು. ಇಲ್ಲಿ ಕಷ್ಟ, ಬೇರೆ ಕಡೆ ಹೋಗಿ ಎಂದು ಮುಖ್ಯಮಂತ್ರಿಗಳೇ ಹೇಳಿದ್ದರಿಂದ ನಾವು ಮೈಸೂರಿಗೆ ಹೋದೆವು. ಈ ಯಾವ ವಿಷಯದ ಬಗ್ಗೆ ಗೊತ್ತಿಲ್ಲದೆ ಸುಮ್ಮನೆ ನಮ್ಮ ಮೇಲೆ ಆರೋಪ ಮಾಡಬೇಡಿ’ ಎಂದು ಹೇಳಿದ್ದಾರೆ.

ಅಭಿಮಾನಿಗಳೇ ನಮ್ಮ ಶಕ್ತಿ ಎಂದಿರುವ ಅನಿರುದ್ಧ್, ‘ನಮ್ಮ ಮತ್ತು ಅಭಿಮಾನಿಗಳ ಮಧ್ಯೆ ಕೆಲವರು ಬಿರುಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮೊದಲು ಅವರು ಯಾರೆಂದು ಪತ್ತೆ ಹಚ್ಚಬೇಕು. ಈ ವಿಷಯವಾಗಿ ಭಾರತಿ ಅವರು ಸಹ ಬಹಳ ನೋವು ಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.

Tags:    

Similar News