
ವಿಷ್ಣುವರ್ಧನ್ ಸ್ಮಾರಕವನ್ನ ಉಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಅನ್ನುವುದನ್ನ ನಾವು ತುಂಬಾ ಹೋರಾಟ ಮಾಡಿದೆವು ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.
ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ: ಸುದೀಪ್ ಮನವಿ
ಕೆಂಗೇರಿ ಬಳಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಗುರುವಾರ ರಾತ್ರೋರಾತ್ರಿ ಪೊಲೀಸ್ ಭದ್ರತೆಯಲ್ಲಿ ನೆಲಸಮ ಮಾಡಲಾಗಿದೆ.
ಡಾ. ವಿಷ್ಣುವರ್ಧನ್ ಅವರಂತಹ ಒಬ್ಬ ಮೇರು ನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ, ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಎಂದರೆ, ಇದು ಅತ್ಯಂತ ಖಂಡನೀಯ ವಿಷಯ ಎಂದು ಸುದೀಪ್ ಹೇಳಿಕೊಂಡಿದ್ದಾರೆ.
ಕೆಂಗೇರಿ ಬಳಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ. ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಗುರುವಾರ ರಾತ್ರೋರಾತ್ರಿ ಪೊಲೀಸ್ ಭದ್ರತೆಯಲ್ಲಿ ನೆಲಸಮ ಮಾಡಲಾಗಿದೆ. ಈ ಸಂಬಂಧ ಅಭಿಮಾನಿಗಳು ಶುಕ್ತವಾರ ರಸ್ತೆಗಳಿದು ಪ್ರತಿಭಟನೆ ನಡೆಸಿದ್ದರು. ಈ ಘಟನೆ ನಡೆದು ಒಂದು ದಿನವಾದರೂ ಕನ್ನಡ ಚಿತ್ರರಂಗದ ಯಾರೊಬ್ಬರೂ ಮಾತನಾಡಿರಲಿಲ್ಲ.
ಇದೀಗ ಸುದೀಪ್ ಮೊದಲ ಬಾರಿಗೆ ಈ ಕುರಿತು ಮಾತನಾಡಿದ್ದಾರೆ. ತಮ್ಮ ‘ಎಕ್ಸ್’ ಖಾತಿಯಲ್ಲಿ ಅವರು ಒಂದು ಪತ್ರ ಹಂಚಿಕೊಂಡಿದ್ದು, ‘ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ಮರುಸ್ಥಾಪನೆ ಮಾಡುವುದಕ್ಕೆ, ಎಷ್ಟು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ’ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸುದೀಪ್, ‘ಸಾಹಸ ಸಿಂಹ ವಿಷ್ಣುವರ್ಧನ್ ಅಂದ್ರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನುಗಟ್ಟಲೆ ಇಂದ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನುಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ಇದು ಹೈ ಕೋರ್ಟ್ ಆದೇಶ, ನ್ಯಾಯಾಲಯದ ಆದೇಶ ಅಂತಾರೆ. ಆದ್ರೆ, ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ಮುಖಾಂತರ, ವಿಷ್ಣುವರ್ಧನ್ ಸ್ಮಾರಕವನ್ನ ಉಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಅನ್ನುವುದನ್ನ ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣ ಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೇವೆ ಅಂತ ನಾನೇ ಸ್ವತಃ ಹೇಳಿದ್ದೆ. ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ ಅಥವಾ ನ್ಯಾಯಾಲಯಕ್ಕೆ ಸಮಾಧಿ ಮಾಡದೆ, ಭೂಮಿಯಲ್ಲಿ ಹೂಳದೆ, ಚಿತೆ ಇಟ್ಟ ಕಡೆ ಸ್ಮಾರಕ ಅಲ್ಲ, ಆಗಲೇ ಮೈಸೂರಿನಲ್ಲಿ ಒಂದು ಸ್ಮಾರಕ ಇದೆ. ಅದನ್ನೇ ಅಧಿಕೃತ ಸ್ಮಾರಕವಾಗಿ ಅವರನ್ನ ಗೌರವಿಸುದುದಕ್ಕೆ ಇಟ್ಟುಕೊಳ್ಳಿ ಅಂತ ಮಾಹಿತಿ ನೀಡಿ ಹೈ ಕೋರ್ಟ್ ಕೂಡ ಆದೇಶ ಮಾಡಿದೆ. ನಾವು ನ್ಯಾಯಾಲಯದ ವಿರುದ್ಧ ಮಾತನಾಡಲು ಆಗುವುದಿಲ್ಲ’ ಎಂದು ಹೇಳಿದ್ದಾರೆ.
ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನ ಖರೀದಿ ಮಾಡಿರುವರೋ, ಅವರ ಮನ ಒಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನೆ. ಸರಕಾರ ಮಧ್ಯ ಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ತಯಾರಿದ್ದೀನಿ. ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದೀನಿ. ಕಿಚ್ಚ ಆಗಿ ಅಲ್ಲ. ಈ ವಿಷಯದಲ್ಲಿ ಅತಿಯಾದ ನೋವಿದೆ. ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದಲ್ಲಿ ಒಲವಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು- ನಾನು ರೂಪಕ ಆಗಬೇಕು. ಯಾವುದೋ ಕಟ್ಟಡಕ್ಕೆ ಹೋಗಿ ಸೇರಬಾರದು, ನಾನು ಪಂಚಭೂತಗಳಲ್ಲಿ ಇರಬೇಕು. ನಾವು ನೇಚರ್ ಗೆ ಸಂಬಂಧ ಪಟ್ಟವರು ಅಂತ. ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ ಈಡೇರಿದಂತೆ ಅನಿಸುತಿದೆ. ಆದ್ರೆ, ಇದು ನಾವು ಎಲ್ಲ ಸಾಮಾನ್ಯ ಅಭಿಮಾನಿಗಳಿಗೆ, ಜನರಿಗೆ ಅರ್ಥ ಆಗುವುದಿಲ್ಲ. ಪೋಸ್ಟ್ ಹಾಕಲು ಹೇಗೆ ಒಂದು ಪೋಸ್ಟ್ ಬಾಕ್ಸ್ ಬೇಕೋ, ಹಾಗೆ ನಾವು ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು’ ಎಂದು ಹೇಳಿದ್ದಾರೆ.
ವಿಷ್ಣುವರ್ಧನ್ ಅವರ ಪುಣ್ಯಭೂಮಿಯ ಜೊತೆಗೆ ಟಿ.ಎನ್. ಬಾಲಕೃಷ್ಣ ಅವರ ಸಮಾಧಿಯನ್ನೂ ಒಡೆದು ಹಾಕಿರುವ ವಿಷಯ ಕೇಳಿ ಆಘಾತವಾಯಿತು ಎಂದಿರುವ ಸುದೀಪ್, ‘ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ. ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ. ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗುತ್ತೇನೆ. ಅದಕ್ಕೆ ಒಂದು ಅವಕಾಶ ಮಾಡಿ ಕೊಡಿ. ಅವರು ನಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ’ ಎಂದು ವಿನಂತಿಸಿಕೊಂಡಿದ್ದಾರೆ.
ಸುದೀಪ್ ಮನವಿಗೆ ಯಾವ ರೀತಿ ಪುರಸ್ಕಾರ ಸಿಗುತ್ತದೋ ನೋಡಬೇಕು.