CAFE BLAST | ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ: ಸಿಎಂ ಸ್ಪಷ್ಟನೆ
ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಈ ಪ್ರಕರಣದಲ್ಲಿ ಐಇಡಿ ( ಸುಧಾರಿತ ಸ್ಪೋಟಕ್ಕೆ ಸಾಮಾಗ್ರಿ) ಬಳಕೆ ಮಾಡಿರುವುದನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಘಟನೆ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಇಂತಹ ಘಟನೆಗಳು ಎಂದಿಗೂ ನಡೆಯಬಾರದು. ಎಲ್ಲಾ ಕಾಲದಲ್ಲಿಯೂ ನಡೆಯುತ್ತದೆ. ನಡೆಯಬಾರದು ನಮ್ಮ ಸರ್ಕಾರದ ಅವಧಿಯಲ್ಲಿ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಸ್ಪೋಟದ ಸ್ಥಳದಲ್ಲಿ ನೆಟ್ ಬೋಲ್ಟ್ ಪತ್ತೆಯಾಗಿದೆ. ಯಾವುದೇ ಗಂಭೀರ ಹಾನಿಯಾಗಿಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಹಾನಿಯಾಗಿಲ್ಲ. ಅಧಿಕಾರಿಗಳಲ್ಲಿ ಮಾಹಿತಿ ಪಡೆದಿದ್ದೇನೆ. ಪರಿಶೀಲನೆ ನಡೆಸಿ ತನಿಖೆ ಆರಂಭಿಸಿದ್ಧಾರೆ ಎಂದು ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ʼʼಸ್ಪೋಟದಲ್ಲಿ ಹಲವರಿಗೆ ಗಾಯಗಳಾಗಿವೆ. ಸದ್ಯ ಸಿಸಿಟಿವಿ ಪರಿಶೀಲನೆ ನಡೆಯುತ್ತಿದೆ. ಒಬ್ಬ ಬ್ಯಾಗ್ ಇಟ್ಟಿರುವುದು ತಿಳಿದಿದೆ. ಇದು ಟೆರರಿಸ್ಟ್ ಮಾಡಿರುವ ಕುರಿತು ನಮಗೆ ಗೊತ್ತಿಲ್ಲ. ಈಗಿರುವ ಮಾಹಿತಿ ಪ್ರಕಾರ ಸ್ಥಳಕ್ಕೆ ಪೊಲೀಸರು ಹೋಗಿದ್ದಾರೆ. ಸ್ವಲ್ಪ ಸಮಯದಲ್ಲೇ ಸಂಪೂರ್ಣ ಮಾಹಿತಿ ಗೊತ್ತಾಗುತ್ತದೆ. ಸ್ಫೋಟಕ ಭಾರೀ ಪ್ರಮಾಣದಲ್ಲಿ ನಡೆದಿಲ್ಲ. ಸಣ್ಣ ಪ್ರಮಾಣದ್ದಾದ್ದರೂ ಅದು ಪರಿಣಾಮಕಾರಿಯಾಗಿದೆ. ಎಲ್ಲರ ಕಾಲದಲ್ಲೂ ಕೂಡ ಘಟನೆಗಳು ನಡೆದಿವೆ. ಇಂತಹ ಘಟನೆ ನಡೆಯಬಾರದುʼʼ ಎಂದರು.
ʼʼಇತ್ತೀಚೆಗೆ ಇಂತಹ ಘಟನೆ ನಡೆದಿರಲಿಲ್ಲ. ಮಂಗಳೂರಲ್ಲಿ ಸಣ್ಣ ಪ್ರಮಾಣದಲ್ಲಿ ಘಟನೆ ನಡೆದಿತ್ತು. ಹಿಂದಿನ ಸರ್ಕಾರದಲ್ಲಿ ಹಲವು ಸ್ಫೋಟಗಳು ನಡೆದಿತ್ತು. ನಮ್ಮ ಸರ್ಕಾರದಲ್ಲಿ ಈವಾಗ ಈ ಘಟನೆ ನಡೆದಿದೆ. ಆರೋಪಿಗಳನ್ನ ಪತ್ತೆ ಹಚ್ಚಿ ಶಿಕ್ಷಿಸಲಾಗುವುದು. ಬ್ಲಾಸ್ಟ್ ಆಗಿರುವುದು ಸತ್ಯವಾಗಿದೆ. ಬ್ಲಾಸ್ಟ್ ಮಾಡಿರುವವರ ವಿರುದ್ಧ ಶಿಸ್ತಿನ, ಕಠಿಣ ಕ್ರಮ ಆಗಲಿದೆʼʼ ಎಂದು ಹೇಳಿದರು.
ʼʼಈ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಬ್ಲಾಸ್ಟ್ ಆಗಿದೆ ಎಂಬ ಮಾಹಿತಿ ಬಂದಿದೆ. ಪೊಲೀಸರು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಯಾರೂ, ಏನೂ ಅಂತ ಯಾರಿಗೂ ಗೊತ್ತಿಲ್ಲ. ಕ್ಯಾಷಿಯರ್ ಬಳಿ ಹೋಗಿ ಟೋಕನ್ ತೆಗೆದುಕೊಂಡಿದ್ದಾನೆ. ಅವರ ಬಳಿ ಬ್ಯಾಗ್ ಇರಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಗಾಯಾಳುಗಳಿಗೆ ಪರಿಹಾರ ವಿಚಾರ. ಈ ಕುರಿತು ಗೃಹ ಸಚಿವರು ಮಾಹಿತಿ ನೀಡುತ್ತಾರೆ. ಸಂಪೂರ್ಣ ಮಾಹಿತಿ ಸಿಕ್ಕಿದ ಮೇಲೆ ನಾನು ಮಾತನಾಡುವೆʼʼ ಎಂದರು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ, ಎನ್ಐಎ ಅಧಿಕಾರಿಗಳು, ಪೊಲೀಸ್ ಕಮಿಷನರ್ ದಯಾನಂದ್, ಆಂತರಿಕಾ ಭದ್ರತಾ ವಿಭಾಗದ ಎಡಿಜಿಪಿ ಚಂದ್ರಶೇಖರ, ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ 9 ಮಂದಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.
ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನ ಕುಣಿಗಲ್ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಮ್ಮ ಆಫೀಸರ್ಸ್ ತನಿಖೆ ಮಾಡುತ್ತಿದ್ದಾರೆ. ಯಾರು ಮಾಡಿದ್ದಾರೆ ಏನ್ ಮಾಡಿದ್ದಾರೆ. ಬೇಕು ಅಂತ ಮಾಡಿದ್ದಾರೆ. ಯಾರೆ ಆದ್ರು ಸರಿ, ಎಲ್ಲಾ ವಿಡಿಯೋಗಳು ಇದೆ. ಕಂಪ್ಲಿಟ್ ಎರಡು ಮೂರು ಕಿಲೋಮೀಟರ್ ಯಾರ್ಯಾರು ಟ್ರಾವಲ್ ಮಾಡಿದ್ದಾರೆ ಎಂಬ ಲೆಕ್ಕಾಚಾರ ಇದೆ. ಸದ್ಯಕ್ಕೆ ಯಾರು ಆತಂಕ ಪಡುವ ಅಗತ್ಯ ಇಲ್ಲ. ನಮ್ಮ ಆಫೀಸರ್ಸ್ ತನಿಖೆ ಮಾಡ್ತಿದ್ದಾರೆ. ಯಾರಿಗೆ ಏನು ತೊಂದರೆ ಇಲ್ಲ. ಬೆಂಗಳೂರಿನಲ್ಲಿ ಯಾರು ಆತಂಕ ಪಡುವ ಅಗತ್ಯ ಇಲ್ಲ. ಕಾನೂನು ಸುವ್ಯವಸ್ಥೆ ಎಲ್ಲವನ್ನ ನಾವು ನೋಡ್ತಿದ್ದೇವೆ. ಇನ್ನು ಹೆಚ್ಚಿನ ಮಾಹಿತಿ ತಗೊಂಡು ಮಾತನಾಡುತ್ತೇನೆ ಎಂದು ಹೇಳಿದರು.