ಫೆಡರಲ್ ಸಮೀಕ್ಷೆ: ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಮೇಲೆ ಬಿಜೆಪಿ ಹಿಡಿತ
ಫೆಡರಲ್-ಪುತಿಯಾತಲೈಮುರೈ-ಆಪ್ಟ್ 2024ರ ಚುನಾವಣಾ ಪೂರ್ವ ಸಮೀಕ್ಷೆ;
2019 ರ ಲೋಕಸಭೆ ಚುನಾವಣೆಯಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಿಜೆಪಿ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅತ್ಯುತ್ತಮ ಫಲಿತಾಂಶ ಮೇಲೆ ಕಣ್ಣಿಟ್ಟಂತೆ ತೋರುತ್ತಿದೆ. ಮತ ಹಂಚಿಕೆ ಹಾಗೂ ಗೆಲ್ಲುವ ಸ್ಥಾನಗಳ ಸಂಖ್ಯೆ ಎರಡರಲ್ಲೂ ಅತ್ಯುತ್ತಮ ಸಾಧನೆ ಮಾಡುವ ಸಾಧ್ಯತೆಗಳಿರುವುದಾಗಿ ದ ಫೆಡರಲ್-ಪುತಿಯಾತಲೈಮುರೈ-ಆಪ್ಟ್ ಜಂಟಿಯಾಗಿ ನಡೆಸಿದ 2024 ರ ಚುನಾವಣಾ ಪೂರ್ವ ಸಮೀಕ್ಷೆ ಸೂಚಿಸುತ್ತದೆ. ಅಷ್ಟೇ ಅಲ್ಲದೆ ಪ್ರತಿಪಕ್ಷ ಕಾಂಗ್ರೆಸ್ ತನ್ನ ನೆಲೆ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳುತ್ತಿದೆ.
ಮಹಾರಾಷ್ಟ್ರ: ಐದು ವರ್ಷಗಳ ಮಂಥನ
ಮಹಾರಾಷ್ಟ್ರದ ಇತ್ತೀಚಿನ ದಿನಗಳ ಪಲ್ಲಟ ರಾಜಕಾರಣದ ಕಾವಿನ ಹಿನ್ನೆಲೆಯಲ್ಲಿ ಈ ಲೋಕಸಭಾ ಚುನಾವಣೆ ಮಹತ್ವವನ್ನು ಗಳಿಸಿಕೊಂಡಿದೆ. ಕಳೆದ ಐದು ವರ್ಷಗಳಲ್ಲಿ ಕಾಂಗ್ರೆಸ್ ಹಾಗೂ ಶಿವಸೇನೆ- ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ, ಶರದ್ ಪವಾರ್ ಮತ್ತು ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಬಣಗಳು ಇಬ್ಭಾಗವಾಗಿವೆ.
ಒಂದು ಸಂಗತಿಯನ್ನು ಮರೆಯಲು ಸಾಧ್ಯವಿಲ್ಲ. ಕಳೆದ 2019 ರ ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ರಾಜಕೀಯ ಪರಿಸ್ಥಿತಿ ತೀರಾ ಭಿನ್ನವಾಗಿತ್ತು. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ, ಶಿವಸೇನೆ ಒಂದಾಗಿತ್ತು. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸಿವ್ ಅಲೈಯನ್ಸ್ (ಯುಪಿಎ) ಜತೆ ಎನ್ ಸಿ ಪಿ ಮೈತ್ರಿ ಮಾಡಿಕೊಂಡಿತ್ತು. ವಿಚಿತ್ರವೆಂದರೆ, ಈ ಬಾರಿ, ಎನ್ ಸಿ ಪಿ ಹಾಗೂ ಶಿವಸೇನೆಯ ಒಂದೊಂದು ಭಾಗಗಳು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿವೆ.
ಸಮೀಕ್ಷೆಯ ಫಲಿತಾಂಶಗಳು ಹೇಳುವಂತೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಇತ್ತೀಚಿನ ವರ್ಷಗಳ ರಾಜಕೀಯ ಪಲ್ಲಟಗಳಿಗೆ ಬೆಲೆ ತೆರುವಂತೆ ಕಾಣುತ್ತಿದೆ. ಈ ರಾಜಕೀಯ ಪಲ್ಲಟಗಳ ಕಾರಣದಿಂದ, ಮಹಾರಾಷ್ಟ್ರದಲ್ಲಿ ಬಿಜೆಪಿಯ ಮತ ಹಂಚಿಕೆ ಶೇಕಡಾ 36ಕ್ಕೆ ಹೆಚ್ಚುವ ಸಾಧ್ಯತೆಗಳಿವೆ. ಇದು ಕಾಂಗ್ರೆಸ್ನ ಶೇಕಡಾ 17 ರಷ್ಟು ಮತಗಳ ಎರಡು ಪಟ್ಟು ಹೆಚ್ಚು ಎನ್ನುವುದು ಗಮನಾರ್ಹ ಅಂಶ. ಮಿತ್ರಪಕ್ಷಗಳಾದ ಶಿವಸೇನಾ (ಉದ್ಧವ್ ಬಾಳಾಸಾಹೆಬ್ ಠಾಕ್ರೆ ಬಣ) ಶೇ. 10 ಮತ್ತು ಶರದ್ ಪವಾರ್ ಬಣ ಎನ್ ಸಿ ಪಿ ಶೇ. 6.4ರಷ್ಟು ಮತಗಳು ಸೇರುವುದರಿಂದ ಕಾಂಗ್ರೆಸ್ ಗೆ ಅಲ್ಪಸ್ವಲ್ಪ ಸಹಾಯವಾಗಬಹುದು.
ಫೆಡರಲ್ ಸಮೀಕ್ಷೆಯು ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಲ್ಲಿ 40 ಸ್ಥಾನಗಳನ್ನು ಬಿಜೆಪಿ ನೇತೃತ್ವದ ಎನ್ ಡಿ ಎ ಗೆಲ್ಲಲಿದೆ. ಉಳಿದ ಸ್ಥಾನಗಳನ್ನು ಮಹಾ ವಿಕಾಸ್ ಅಘಾಡಿ ಗೆಲ್ಲಲಿದೆ ಎಂದು ಸೂಚಿಸಿದೆ. ಈ ಮಹಾ ವಿಕಾಸ್ ಅಘಾಡಿಯು ಕಾಂಗ್ರೆಸ್, ಎನ್ ಸಿ ಪಿ ಯ ಶರದ್ ಪವಾರ್ ಬಣ ಹಾಗೂ ಉದ್ಧವ ಠಾಕ್ರೆ ಅವರ ಶಿವಸೇನೆ ಬಣಗಳ ಗುಂಪಾಗಿದೆ.
ಗುಜರಾತ್: ಯಥಾಸ್ಥಿತಿ ಸಾಧ್ಯತೆ
ಸಮೀಕ್ಷೆಯ ಫಲಿತಾಂಶಗಳನ್ನು ಗಮನಿಸಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ-ಭೂಮಿ ಗುಜರಾತ್ ಹೆಚ್ಚಿನ ಉತ್ತಮ ಪ್ರದರ್ಶನ ತೋರುವಂತೆ ಕಾಣುತ್ತಿದೆ. ಸಮೀಕ್ಷೆಯ ಮತಹಂಚಿಕೆ ಗಮನಿಸಿದರೆ ಬಿಜೆಪಿ ಈ ಹಿಂದೆ ಗಳಿಸಿದ ಶೇ. 63 ರ ಗಡಿ ದಾಟಿ ಶೇ. 66 ರಷ್ಟಕ್ಕೆ ಏರುವ ಸಾಧ್ಯತೆಗಳಿವೆ. ಆದರೆ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಉತ್ತಮವಾಗಿರುವಂತೆ ತೋರುವುದಿಲ್ಲ. ಕಳೆದ ಬಾರಿ ಗಳಿಸಿದ ಶೇಕಡಾ 33 ರಿಂದ ಮತ ಹಂಚಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಮತಗಳಿಕೆಯ ಪ್ರಮಾಣ ಶೇ 23 ಕಣಕ್ಕಿಳಿಯುವ ಸಾಧ್ಯತೆ ಇದೆ.
2019 ರಲ್ಲಿ ರಾಜ್ಯದಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವನ್ನು ಮಾಡಿದ ಆಮ್ ಆದ್ಮಿ ಪಕ್ಷ ಗುಜರಾತ್‌ನಲ್ಲಿ ತನ್ನ ಪರಿಸ್ಥಿತಿ ಸುಧಾರಿಸಿಕೊಳ್ಳುವಂತೆ ತೋರುವುದಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದು ಬರುವ ಅಂಶ.
2019 ರಲ್ಲಿ ತನ್ನ ಎಲ್ಲಾ 26 ಲೋಕಸಭಾ ಸ್ಥಾನಗಳನ್ನು ಬಿಜೆಪಿಗೆ ನೀಡಿದ ಗುಜರಾತ್, ಈ ವರ್ಷವೂ ಗೌರವವನ್ನು ಪುನರಾವರ್ತಿಸಲು ಸಜ್ಜಾಗಿದೆ ಎಂದು ಸಮೀಕ್ಷೆ ಹೇಳುತ್ತದೆ.