ತಂದೆಯ ಆತ್ಮ ಆಕೆಯನ್ನು ಕ್ಷಮಿಸುವುದಿಲ್ಲ: ಮುರಳೀಧರನ್
ಪದ್ಮಜಾ ವೇಣುಗೋಪಾಲ್ ಬಿಜೆಪಿ ಸೇರ್ಪಡೆ ವದಂತಿ;
ದಿವಂಗತ ಕೇರಳದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಅವರು ಬಿಜೆಪಿ ಸೇರುತ್ತಿದ್ದಾರೆ ಎಂಬ ವದಂತಿಗೆ ಪ್ರತಿಕ್ರಿಯಿಸಿದ ಸಹೋದರ ಕೆ.ಮುರಳೀಧರನ್ ʻತಂದೆಯ ಆತ್ಮ ಆಕೆಯನ್ನು ಎಂದಿಗೂ ಕ್ಷಮಿಸುವುದಿಲ್ಲʼ ಎಂದು ಹೇಳಿದ್ದಾರೆ.
ಪದ್ಮಜಾ ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿ ಹಬ್ಬಿದ್ದು, ಅವರು ಪಕ್ಷ ಬದಲಿಸುವ ವರದಿಗಳನ್ನು ತಳ್ಳಿಹಾಕುವ ಫೇಸ್‌ಬುಕ್ ಪೋಸ್ಟ್ ಅನ್ನು ಅಳಿಸಿದ್ದಾರೆ. ಆರಂಭದಲ್ಲಿ ಬಿಜೆಪಿಗೆ ಸೇರ್ಪಡೆ ಕುರಿತ ವರದಿಗಳಿಗೆ ಪ್ರತಿಕ್ರಿಯಿಸಿ, ಇದು ಕೇವಲ ತಮಾಷೆ ಎಂದಿದ್ದರು. ಆದರೆ, ಆನಂತರ ಆ ಪೋಸ್ಟ್ ತೆಗೆದುಹಾಕಿದರು.
ʻನಾನು ಸಹೋದರಿಯೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುತ್ತೇನೆ. ಕೋಮುವಾದಿ ರಾಜಕಾರಣ ಮಾಡುವವರೊಂದಿಗೆ ಯಾವುದೇ ಸಂಬಂಧ ಹೊಂದಲು ಸಾಧ್ಯವಿಲ್ಲ. ಆಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ನೋಟಾಕ್ಕಿಂತ ಕಡಿಮೆ ಮತ ಗಳಿಸುತ್ತಾಳೆ. ಆಕೆಯ ನಿರ್ಧಾರಕ್ಕೂ ತಂದೆಯ ಸ್ಮರಣೆ ಇಲ್ಲವೇ ಪಕ್ಷ ಆಕೆಯನ್ನುಒಪ್ಪಿಕೊಂಡಿ ರುವುದಕ್ಕೂ ಸಂಬಂಧವಿಲ್ಲ. ಆಕೆ ಪಕ್ಷದಿಂದ ಸಾಕಷ್ಟು ಪಡೆದಿದ್ದಾಳೆ. ಅವಳು ನನ್ನೊಂದಿಗೆ ಮಾತನಾಡುತ್ತಿಲ್ಲ ಮತ್ತು ನನ್ನ ಕರೆಗಳನ್ನು ಹಿಂತಿರುಗಿಸಲಿಲ್ಲ. ನನ್ನ ಸಂಖ್ಯೆಯನ್ನು ಬ್ಲಾಕ್ ಮಾಡಿರಬಹುದುʼ ಎಂದು ಹೇಳಿದರು.
ಆದರೆ, ಪದ್ಮಜಾ ಅವರು ಪಕ್ಷ ಬದಲಾಯಿಸಿದ ಬಗ್ಗೆ ದೃಢೀಕರಿಸಿಲ್ಲ.