ಹೈಕಮಾಂಡ್ ನಿರ್ಧಾರವೇ ಅಂತಿಮ, ನಾವೆಲ್ಲರೂ ತಲೆಬಾಗಲೇಬೇಕು: ಸಿಎಂ ಸಿದ್ದರಾಮಯ್ಯ
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ಜೋರಾಗುತ್ತಿರುವ ಸಂದರ್ಭದಲ್ಲಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕುರಿತು ಊಹಾಪೋಹಗಳು ತೀವ್ರಗೊಂಡಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. "ಪಕ್ಷದಲ್ಲಿ ಯಾವುದೇ ನಿರ್ಧಾರವಿದ್ದರೂ ಅದನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಆ ನಿರ್ಧಾರಕ್ಕೆ ನಾನು, ಡಿ.ಕೆ. ಶಿವಕುಮಾರ್ ಸೇರಿದಂತೆ ಪಕ್ಷದ ಪ್ರತಿಯೊಬ್ಬರೂ ತಲೆಬಾಗಲೇಬೇಕು," ಎಂದು ಸ್ಪಷ್ಟಪಡಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಮತ್ತು ನಾಯಕತ್ವ ಬದಲಾವಣೆ ಕುರಿತು ಚರ್ಚೆಗಳು ಜೋರಾಗುತ್ತಿರುವ ಸಂದರ್ಭದಲ್ಲಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು. ಈ ಭೇಟಿಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಹೇಳಿದ್ದೇನು?
"ನಾನು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್ ಮಾತಿಗೆ ಬದ್ಧರಾಗಿರುತ್ತೇವೆ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ಭೇಟಿ ಕೇವಲ ಸೌಹಾರ್ದಯುತವಾಗಿದ್ದು, ಇದರಲ್ಲಿ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ," ಎಂದು ಸಿಎಂ ತಿಳಿಸಿದರು. ಅಲ್ಲದೆ, "ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆಗಳ ತಯಾರಿ ಕುರಿತು ಚರ್ಚೆ ನಡೆಸಿದ್ದೇವೆ. ನಾಯಕತ್ವ ಬದಲಾವಣೆ ಕುರಿತ ಸುದ್ದಿಗಳು ಕೇವಲ ಊಹಾಪೋಹವಷ್ಟೇ," ಎಂದು ಹೇಳಿದರು.
ಮೂಲಗಳ ಪ್ರಕಾರ, ಸಿದ್ದರಾಮಯ್ಯ ಅವರು ಖರ್ಗೆ ಅವರೊಂದಿಗಿನ ಮಾತುಕತೆಯ ವೇಳೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆಪ್ತ ಶಾಸಕರು ದೆಹಲಿಗೆ ತೆರಳಿ ನಾಯಕತ್ವ ಬದಲಾವಣೆಗೆ ಒತ್ತಡ ಹೇರುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. "ಶಾಸಕರು ದೆಹಲಿಗೆ ಹೋಗುವುದು ಅವರ ವೈಯಕ್ತಿಕ ವಿಚಾರವಾಗಿದ್ದರೂ, ಬಹಿರಂಗ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರವಾಗುತ್ತಿದೆ," ಎಂದು ಸಿಎಂ ಬೇಸರ ತೋಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ಗಾಂಧಿ ವಿದೇಶ ಪ್ರವಾಸದಿಂದ ಮರಳಿದ ಬಳಿಕ, ಸಿಎಂ ಮತ್ತು ಡಿಸಿಎಂ ಇಬ್ಬರೊಂದಿಗೂ ಪ್ರತ್ಯೇಕವಾಗಿ ಚರ್ಚೆ ನಡೆಸುವ ಸಾಧ್ಯತೆಯಿದೆ. ಅಂದು ರಾಜ್ಯ ರಾಜಕೀಯದ ಮುಂದಿನ ಹಾದಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಸದ್ಯಕ್ಕೆ ಹೈಕಮಾಂಡ್ ಅಂಗಳದಲ್ಲಿರುವ ಚೆಂಡು, ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.