ಜೆಡಿಎಸ್‌ಗೆ ಬೆಳ್ಳಿ ಹಬ್ಬ: ʼಅಪ್ಪ-ಮಕ್ಕಳ ಪಕ್ಷʼ ಎಂಬ ಹೀಗಳಿಕೆ! ʼಎನ್‌ಡಿಎʼ ಅಧಿಕಾರದ ಆಸೆಯಿಂದ ಪಕ್ಷ ಬೇರಿಗೆ ಹಾನಿ?

ರಾಜ್ಯ ರಾಜಕೀಯ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜೆಡಿಎಸ್‌ ಸಾಕಾಷ್ಟು ಸವಾಲುಗಳ ನಡುವೆ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಎನ್‌ಡಿಎ ಆಶ್ರಯದಲ್ಲಿ ಮೂರನೇ ಬಾರಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕುಮಾರಸ್ವಾಮಿ ಅವರೂ ಪ್ರುಯತ್ನಿಸುತ್ತಿದ್ದಾರೆ!

Update: 2025-11-24 00:30 GMT
Click the Play button to listen to article

ರಾಜ್ಯ ರಾಜಕೀಯ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಜೆಡಿಎಸ್‌ ಸಾಕಷ್ಟು ಸವಾಲುಗಳ ನಡುವೆ ಕುಂಟುತ್ತಾ, ತೆವಳುತ್ತಾ  ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಯತ್ನಿಸುತ್ತಿದೆ.

ಒಂದು ಹಂತದಲ್ಲಿ ಬಿಜೆಪಿ ಮೈತ್ರಿಯಿಂದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದು ಹಾಗೂ ಮುಂದೆ ಕರ್ನಾಟಕದಲ್ಲಿ ಎನ್‌ಡಿಎ ಬಲದಿಂದ ಮೂರನೇ ಬಾರಿ ಮುಖ್ಯಮಂತ್ರಿ ಪದ ಒಡೆಯಲು ಅವರ ಪ್ರಯತ್ನ ಜೆಡಿಎಸ್‌ನ ಸಾಮರ್ಥ್ಯ ಎಂದು ಅದರ ನಾಯಕರು ಹೇಳುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಅಥವಾ ಕೇಂದ್ರ ಸಚಿವ ಸ್ಥಾನ ಗಳಿಸುವ ಮೂಲಕ ಅಧಿಕಾರ ಹೊಂದುವುದು ಮಾತ್ರ ಉದ್ದೇಶವೇ ಅಥವಾ ಪಕ್ಷವನ್ನು ಮತ್ತೆ ಕರ್ನಾಟಕದಲ್ಲಿ ಬಲಪಡಿಸಿ ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಬಲಪಡಿಸುವುದು ಆ ಪಕ್ಷದ ಉದ್ದೇಶವೇ? ಈ ಬಗ್ಗೆ  ಜೆಡಿಎಸ್‌ ಇಪ್ಪತ್ತೈದು ವರ್ಷ ಪೂರೈಸಿ ಬೆಳ್ಳಿ ಹಬ್ಬ ಆಚರಿಸುವ ಸಂದರ್ಭದಲ್ಲಿ  ಆ ಪಕ್ಷದ ಕಾರ್ಯಕರ್ತರು ಚರ್ಚಿಸುತ್ತಿದ್ದಾರೆ.

ಒಂದು ಕಾಲದಲ್ಲಿ ಕರ್ನಾಟಕದಲ್ಲೆಲ್ಲಾ ಬೇರುಗಳನ್ನು ಹರಡಿಕೊಂಡಿದ್ದ ಜೆಡಿಎಸ್‌, ಈಗ "ಅಪ್ಪ-ಮಕ್ಕಳ ಪಕ್ಷ" ಎಂದೂ, "ಒಕ್ಕಲಿಗರ ಪಕ್ಷ" ಎಂದೂ ಮೂದಲಿಸುವ ಸ್ಥಿತಿಯಲ್ಲಿಯೇ ತನ್ನ ಪ್ರಾದೇಶಿಕ ಪಕ್ಷದ ರಾಜಕಾರಣದಲ್ಲಿ ಕ್ಷೀಣಿಸುತ್ತಾ ಸಾಗಿದೆ. ಜನತಾದಳ (ಜಾತ್ಯತೀತ) ಎಂಬ ಹಣೆಪಟ್ಟಿಕಟ್ಟಿಕೊಂಡಿದ್ದರೂ, ಬಿಜೆಪಿಯೊಂದಿಗಿನ ನಂಟು ಹಾಗೂ ಸ್ಬತಃ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ  "ಜೈ ಶ್ರೀರಾಮ್‌" ಘೋಷಣೆ ಹಾಗೂ ಒಂದು ಕಾಲದಲ್ಲಿ ಜೆಡಿಎಸ್‌ ಕೈಹಿಡಿದಿದ್ದ ಮುಸ್ಲಿಮರ ಬಗ್ಗೆ ನೀಡಿದ ಹೇಳಿಕೆ... ಒಟ್ಟಿನಲ್ಲಿ ಜಾತ್ಯತೀತ ಎನ್ನುವ ಟ್ಯಾಗ್‌ಲೈನಿನಿಂದ ದೂರ ಸರಿಯುತ್ತಾ ಬರಲು ಕಾರಣವಾಯಿತು. ಒಂದು ಕಾಲದಲ್ಲಿ "ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಬೇಕು" ಎನ್ನುತ್ತಿದ್ದ ಎಚ್‌ಡಿ ದೇವೇಗೌಡರು ಈಗ ಬಿಜೆಪಿ ಹಾಗೂ  ಆ ಪಕ್ಷದ ಸಿದ್ಧಾಂತದ ಬಗ್ಗೆ ಹೆಚ್ಚು  ಒಲವು ಹೊಂದಿರುವುದು.. ರಾಜಕೀಯ ಸ್ಥಿತ್ಯಂತರ ಕಾಲದಲ್ಲಿ ಜೆಡಿಎಸ್‌ ಯಾವ ಕಡೆ ವಾಲುತ್ತಿದೆ ಎಂಬುದರ ಬಗ್ಗೆ ಪರೋಕ್ಷ ಸಂದೇಶ ಸಾರುವಂತಿದೆ.

ಒಂದು ಹಂತದಲ್ಲಿ ಯಾವುದೇ ಪಕ್ಷ ಬಹುಮತ ಸಿಗದೆ ಒದ್ದಾಡುವಾಗ, ಕಿಂಗ್‌ ಮೇಕರ್‌ ಆಗಿ ಸಮ್ಮಿಶ್ರ ಸರ್ಕಾರದ ಅಂಗವಾಗಿ ಬೇಕಾಗಿದ್ದ ಜೆಡಿಎಸ್‌, ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಮುಂದೆ ಮಂಡಿಯೂರಿ ಅತಿ ಕಡಿಮೆ ಸ್ಥಾನಗಳಲ್ಲಿ ತೃಪ್ತಿ ಪಡೆಯುವ ಸಂದರ್ಭ ಒದಗಿಬಂತು. ಇದೇ ಕಾರಣಕ್ಕೆ ಮುಸಲ್ಮಾನರು ಕೈಕೊಟ್ಟರು ಎನ್ನುವ ಅರ್ಥಬರುವಂತೆ ಕುಮಾರಸ್ವಾಮಿ ಅವರು ಹೇಳಿಕೆ ನೀಡಿಬಿಟ್ಟರು. ಅ ಮೂಲಕ ಬಿಜೆಪಿಯತ್ತ ಸರಿಯುವ ಲಕ್ಷಣ ತೋರಿಸಿದ ಜೆಡಿಎಸ್‌, ಬಳಿಕದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆ ಅಧಿಕೃತ ಮೈತ್ರಿ ಸಾಧಿಸಿ ಎರಡು ಕ್ಷೇತ್ರಗಳನ್ನು ಜಯಿಸಿತು. ಬಳಿಕ ಬಿಜೆಪಿಗೆ ಅನಿವಾರ್ಯ ʼಭವಿಷ್ಯʼವಾಗಿದ್ದ ಜೆಡಿಎಸ್‌ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ನೀಡಿ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್‌  ಮೈತ್ರಿ ಬಲಪಡಿಸುವ ತಂತ್ರ ಹೆಣೆಯಿತು.

ಒಂದರ್ಥದಲ್ಲಿ ಇತರ ರಾಜ್ಯಗಳಲ್ಲ ಅಲ್ಲಿನ ಪ್ರಾದೇಶಿಕ ಪಕ್ಷಗಳನ್ನು ನಿಧಾನವಾಗಿ ತನ್ನ  ಮರ್ಜಿಗೆ ತಂದು ಪಕ್ಷ ಬಲವರ್ಧನೆಯ ತಂತ್ರ ಹೆಣೆಯುತ್ತಿರುವ ಬಿಜೆಪಿಗೆ ಜೆಡಿಎಸ್‌ ಕೂಡಾ ಸುಲಭದ ತುತ್ತಾಯಿತೇ ಎಂಬುದರ ಬಗ್ಗೆ ಮುಂದಿನ ರಾಜಕೀಯ ವಿದ್ಯಮಾನಗಳು ಸಾಕ್ಷಿ ಹೇಳಲಿವೆ. ಆದರೆ, ರಾಜಕೀಯ ಪಂಡಿತರ ಪ್ರಕಾರ, ಬಿಹಾರದಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷ ಜೆಡಿಯು ಎನ್‌ಡಿಎ ಮೈತ್ರಿಕೂಟದಲ್ಲಿ ಗೆದ್ದು ಬಿಜೆಪಿ ಸಖ್ಯದಲ್ಲೇ ಸರ್ಕಾರ ನಡೆಸಿದರೂ ನಿತೀಶ್‌ ಕುಮಾರ್‌ ಅವರ ರಾಜಕೀಯ ನೇಪಥ್ಯದ ದಿನಗಳಲ್ಲಿ ಆ ಪಕ್ಷವನ್ನು ಕಬಳಿಸಿ ತನ್ನ ಸಾಮ್ರಾಜ್ಯ ವಿಸ್ತರಿಸುವುದೇ ಬಿಜೆಪಿ ಉದ್ದೇಶದಂತೆ ಕಂಡುಬರುತ್ತದೆ.

ಈಗ ಕರ್ನಾಟಕದ ಮಟ್ಟಿಗೆ ಪ್ರಬಲ ಪ್ರಾದೇಶಿಕ ಪಕ್ಷವಾಗಿದ್ದ ಜೆಡಿಎಸ್‌ ಸಾಗಿಬಂದ ಹಿನ್ನೆಲೆ, ಸಾಗಬೇಕಾದ ದಾರಿ..  ಈ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಅರಂಭವಾಗಿದೆ. ಒಂದು ಕಾಲದಲ್ಲಿ ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್‌, ಪಿ.ಜಿ.ಅರ್‌ . ಸಿಂಧ್ಯಾರಂತಹ ಘಟಾನುಘಟಿ ರಾಜಕಾರಣಿಗಳನ್ನು ಹೊಂದಿದ್ದ ಜೆಡಿಎಸ್‌, ಈಗ  ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಅವರ ಪುತ್ರ ಎಚ್‌.ಡಿ. ಕುಮಾರಸ್ವಾಮಿ ಹಾಗೂ  ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಅವರ ಸಾರಥ್ಯದಲ್ಲಿ ಪಕ್ಷದ ಬೇರುಗಳನ್ನು ಹೇಗೆ ಭದ್ರವಾಗಿ ಹಿಡಿದುಕೊಳ್ಳಲಿದೆ?  ಜತೆಗೆ ಬಿಜೆಪಿಯ ʼಎನ್‌ಡಿಎʼ  ವಿಸ್ತರಣೆ ತಂತ್ರದಲ್ಲಿ ಜೆಡಿಎಸ್‌ ಹೇಗೆ ಕರಗಿಹೋಗುತ್ತದೆ ಅಥವಾ ಮತ್ತೆ ಪುಟಿದೇಳುತ್ತದೆ ಎಂಬುದು  ಚರ್ಚೆಯ ವಿಷಯವಾಗಿದೆ.

ಜನತಾದಳ ಹೇಗೆ ಉದಯಿಸಿತು?

1999 ರಲ್ಲಿ ರಾಷ್ಟ್ರೀಯ ರಾಜಕಾರಣದ ತಿರುವುಗಳಲ್ಲಿ ಜನತಾ ಪರಿವಾರ ವಿಭಜನೆಯಾದಾಗ ಉದಯಿಸಿದ ಜೆಡಿಎಸ್‌ ಕಳೆದ 25 ವರ್ಷದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದೆ. ರಾಜ್ಯದಲ್ಲಿ ಯಾವುದೇ ಪಕ್ಷ ಸಂಪೂರ್ಣ ಬಹುಮತ ಪಡೆದುಕೊಳ್ಳದಿರುವಾಗ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಮಾರ್ಗದರ್ಶನದಲ್ಲಿ, ಜೆಡಿಎಸ್‌ ಪಕ್ಷವು ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದು ನಿರ್ಣಾಯಕ ಶಕ್ತಿಯಾಗಿ ಹೊರಹೊಮ್ಮಿದೆ. 

ಜೆಡಿಎಸ್ ಸ್ಥಾಪನೆಯು ಕೇವಲ ಒಂದು ರಾಜಕೀಯ ಪಕ್ಷದ ಉದಯವಲ್ಲ, ಬದಲಿಗೆ ಭಾರತದ ಪ್ರಾದೇಶಿಕ ರಾಜಕಾರಣದಲ್ಲಿ ಜಾತ್ಯಾತೀತ ಮೌಲ್ಯಗಳ ಪರವಾದ ದೃಢ ನಿಲುವಿನ ಸಂಕೇತವೂ ಆಗಿದೆ. 1999ರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಇಂದಿನವರೆಗೆ ಪಕ್ಷವನ್ನು ಎಚ್‌.ಡಿ.ದೇವೇಗೌಡ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ದೇವೇಗೌಡರ ಬಳಿಕ ಕೇಂದ್ರ ಬೃಹತ್‌ ಮತ್ತು ಮಧ್ಯಮ  ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಪಕ್ಷದ ಹೊಣೆಯನ್ನು ಹೊತ್ತಿದ್ದು, ಪಕ್ಷದ ಸಂಘಟನೆ ಮಾಡಿ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದಾರೆ. ಎಚ್‌.ಡಿ.ಕುಮಾರಸ್ವಾಮಿ ಬಳಿಕ ಪಕ್ಷದ ನೊಗವನ್ನು ಹೊರಲು ಪಕ್ಷದ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಸಿದ್ಧತೆ ನಡೆಸಿದ್ದಾರೆ. 

1990 ರ ದಶಕದ ಉತ್ತರಾರ್ಧದಲ್ಲಿ ಭಾರತೀಯ ರಾಜಕಾರಣವು ಮಹತ್ವದ ಬದಲಾವಣೆಗಳಿಗೆ ಸಾಕ್ಷಿಯಾಗಿತ್ತು. ಅಂದಿನ ಜನತಾ ದಳವು ಕೇಂದ್ರದಲ್ಲಿ ಸಂಯುಕ್ತ ರಂಗದ ಸರ್ಕಾರವನ್ನು ಮುನ್ನಡೆಸುತ್ತಿತ್ತು. ಆದರೆ, 1999 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ, ಪಕ್ಷದೊಳಗಿನ ಕೆಲವು ನಾಯಕರು ಬಿಜೆಪಿಯ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಜೊತೆ ಮೈತ್ರಿಗೆ ಮುಂದಾದರು. ಜಾತ್ಯತೀತ ತತ್ವಗಳಿಗೆ ಬದ್ಧರಾಗಿದ್ದ ಹೆಚ್.ಡಿ. ದೇವೇಗೌಡರು ಮತ್ತು ಅವರ ಬೆಂಬಲಿಗರು ಈ ನಿರ್ಧಾರವನ್ನು ವಿರೋಧಿಸಿದರು. ಪರಿಣಾಮ ದೇವೇಗೌಡರ ನೇತೃತ್ವದ ಬಣವು ಜನತಾ ದಳದಿಂದ ಬೇರ್ಪಟ್ಟು ಹೊಸ ಪಕ್ಷವನ್ನು ಸ್ಥಾಪಿಸಿತು. ಅದೇ ಜೆಡಿಎಸ್‌ ಪಕ್ಷವಾಗಿ ಸ್ಥಾಪನೆಯಾಯಿತು. 'ಜಾತ್ಯತೀತ' ಎಂಬ ಪದವು ಪಕ್ಷದ ಸೈದ್ಧಾಂತಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ರೈತರು, ದೀನದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆ ಪಕ್ಷದ ಮೂಲ ಮಂತ್ರವಾಯಿತು. ಪಕ್ಷವು ಅಧಿಕೃತವಾಗಿ 2000 ರ ನ.24 ರಂದು ಭಾರತೀಯ ಚುನಾವಣಾ ಆಯೋಗದಲ್ಲಿ ನೋಂದಣಿಯಾಯಿತು. ಕರ್ನಾಟಕವನ್ನು ತನ್ನ ಪ್ರಮುಖ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಪ್ರಾದೇಶಿಕ ಅಸ್ಮಿತೆಯನ್ನು ಎತ್ತಿಹಿಡಿಯಿತು.

ಜೆಡಿಎಸ್ ಮತ್ತು ಜೆಡಿಯು ಉದಯ

ಮೂಲ ಜನತಾ ದಳವು ವಿಭಜನೆಯಾದಾಗ, ಮೈತ್ರಿ ಒಪ್ಪಿಕೊಂಡ ಮತ್ತು ಮೈತ್ರಿಯನ್ನು ವಿರೋಧಿಸಿದ ಗುಂಪುಗಳು ಪ್ರತ್ಯೇಕವಾಗಿ ಜೆಡಿಎಸ್‌ ಮತ್ತು ಜೆಡಿಯು ಎಂಬ ಹೊಸ ಪಕ್ಷಗಳನ್ನು ರಚಿಸಿದವು. ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹಿರಿಯ ಮುಖಂಡ ಜಾರ್ಜ್ ಫರ್ನಾಂಡೀಸ್,  ಶರದ್ ಯಾದವ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಜೆಡಿಯುವನ್ನು ಬಲವಾಗಿ ಮುನ್ನಡೆಸಿದರು. ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿ ರಾಷ್ಟ್ರೀಯ ರಾಜಕಾರಣದಲ್ಲಿ ಪಾತ್ರ ವಹಿಸಿತು. ಪಕ್ಷವು ಬಿಹಾರ ರಾಜ್ಯದಲ್ಲಿ ಕೇಂದ್ರೀಕೃತವಾಯಿತು. ಅಧಿಕಾರ ಹಿಡಿಯುವ ಮತ್ತು ಪ್ರಾದೇಶಿಕ ಪ್ರಬಲ್ಯವನ್ನು ಸಾಧಿಸುವ ಸಲುವಾಗಿ, ಬಿಜೆಪಿಯೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಜೆಡಿಯು ತನ್ನ ಮೂಲ ಜಾತ್ಯಾತೀತ ನಿಲುವಿನಲ್ಲಿ ಹೊಂದಾಣಿಕೆ ಮಾಡಿಕೊಂಡಿತು.

ಮೂಲ ಜನತಾ ಪರಿವಾರದ ಜಾತ್ಯಾತೀತ ಸಿದ್ಧಾಂತ ಮತ್ತು ಸಮಾಜವಾದಿ ಮೌಲ್ಯಗಳಿಗೆ ಬದ್ಧವಾಗಿ ಜೆಡಿಎಸ್‌ ಉದಯವಾಯಿತು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಪಕ್ಷ ಸ್ಥಾಪನೆಯಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖಂಡರಾದ ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವು ನಾಯಕರು ಎಚ್‌.ಡಿ.ದೇವೇಗೌಡ ಅವರೊಂದಿಗೆ ಸೇರಿ ಜೆಡಿಎಸ್‌ ಪಕ್ಷವನ್ನು ಮುನ್ನಡೆಸಿದರು. ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರಾದೇಶಿಕ ಪರ್ಯಾಯವಾಗಿ ನಿಲ್ಲುವ ಸಂಕಲ್ಪ ಮಾಡಲಾಯಿತು. ಕರ್ನಾಟಕದಲ್ಲಿ ಪ್ರಮುಖವಾಗಿ ಪಕ್ಷವು ಕೇಂದ್ರೀಕೃತವಾಯಿತು. ರೈತರು, ಕನ್ನಡ ನೆಲ-ಜಲದ ಹಿತಾಸಕ್ತಿ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವ ಮೂಲಕ ರಾಜ್ಯದಲ್ಲಿ ತನ್ನ ಬೇರುಗಳನ್ನು ಆಳವಾಗಿ ಇಳಿಸಿತು.

ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ತಮ್ಮದೇ ಆದ ಜನಪ್ರಿಯತೆ ಮತ್ತು ಸಾಮಾಜಿಕ ಸಮೀಕರಣಗಳ ಮೂಲಕ ಜೆಡಿಯು ಪಕ್ಷವನ್ನು ಬಲಪಡಿಸಿದರೆ, ಕರ್ನಾಟಕದಲ್ಲಿ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ಪಕ್ಷವನ್ನು ಮುನ್ನಡೆಸಿದ್ದಾರೆ. ರೈತಪರ ವರ್ಚಸ್ಸು ಮತ್ತು ಹಳೆ ಮೈಸೂರು ಭಾಗದಲ್ಲಿ ಹೊಂದಿರುವ ಹಿಡಿತದ ಮೂಲಕ ಜೆಡಿಎಸ್ ಪಕ್ಷದ ಅಸ್ತಿತ್ವ ಮತ್ತು ಪ್ರಬಲ್ಯವನ್ನು ಕಾಯ್ದುಕೊಂಡರು. ಕರ್ನಾಟಕದಲ್ಲಿ ಜೆಡಿಎಸ್ ಸ್ಥಾಪನೆಯಿಂದಾಗಿ ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳಿಗೆ ಎದುರಾಗಿ ಒಂದು ಪ್ರಾದೇಶಿಕ ಪ್ರಬಲ ಪಕ್ಷವು ಉಳಿಯಿತು. ಇದು ರಾಜ್ಯದ ರಾಜಕೀಯ ಸಮೀಕರಣಗಳಲ್ಲಿ ಪ್ರಾದೇಶಿಕ ವಿಷಯಗಳು ಮತ್ತು ಹಿತಾಸಕ್ತಿಗಳಿಗೆ ನಿರಂತರವಾಗಿ ಆದ್ಯತೆ ನೀಡಲು ಒತ್ತಡ ಹೇರಿತು.

ಮುಖ್ಯಮಂತ್ರಿಯಾಗಿ ಎಚ್‌.ಡಿ.ದೇವೇಗೌಡ

ಜೆಡಿಎಸ್‌ ಸಂಸ್ಥಾಪಕ ಎಚ್.ಡಿ. ದೇವೇಗೌಡರ ರಾಜಕೀಯ ಪಯಣದಲ್ಲಿ, ಅಕ್ಟೋಬರ್ 1994 ರಿಂದ ಮೇ 1996 ರವರೆಗಿನ ಕರ್ನಾಟಕದ ಮುಖ್ಯಮಂತ್ರಿ ಅವಧಿಯು ಒಂದು ಸುವರ್ಣ ಅಧ್ಯಾಯವಾಗಿದೆ. ಕೇವಲ 18 ತಿಂಗಳ ಕಾಲ ಆಡಳಿತ ನಡೆಸಿದರೂ, ಅವರ ಆಡಳಿತವು ರಾಜ್ಯದ ರೈತ ಸಮುದಾಯ ಮತ್ತು ಗ್ರಾಮೀಣಾಭಿವೃದ್ಧಿಗೆ ನೀಡಿದ ಒತ್ತು, ಪಾರದರ್ಶಕತೆ ಮತ್ತು ದಕ್ಷ ಆಡಳಿತದ ಮೂಲಕ ರಾಜಕೀಯ ಇತಿಹಾಸದಲ್ಲಿ 'ರೈತಪರ ಯುಗ' ಎಂಬ ಅಚ್ಚಳಿಯದ ಛಾಪು ಮೂಡಿಸಿದೆ.

1994ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ರಾಜ್ಯದಲ್ಲಿ ಐತಿಹಾಸಿಕ ವಿಜಯ ಸಾಧಿಸಿತು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಪಕ್ಷದೊಳಗೆ ತೀವ್ರ ಪೈಪೋಟಿ ಇದ್ದರೂ, ರಾಜ್ಯಾದ್ಯಂತ ರೈತರು ಮತ್ತು ಹಿಂದುಳಿದ ವರ್ಗಗಳಲ್ಲಿ ದೇವೇಗೌಡರಿಗಿದ್ದ ಜನಪ್ರಿಯತೆ, ಜತೆಗೆ ಪಕ್ಷದ ಹಿರಿಯ ನಾಯಕರ ಬೆಂಬಲದೊಂದಿಗೆ ಅವರು ಶಾಸಕಾಂಗ ನಾಯಕರಾಗಿ ಆಯ್ಕೆಯಾದರು. 1994 ರ ಅಕ್ಟೋಬರ್‌ನಲ್ಲಿ  ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರ ಈ ಅವಧಿಯ ಆಡಳಿತವು ಮುಂದೆ ಅವರಿಗೆ ಪ್ರಧಾನಮಂತ್ರಿ ಹುದ್ದೆಗೇರಲು ಅಡಿಪಾಯ ಹಾಕಿತು.

ಪ್ರಧಾನಿಯಾಗಿ ಎಚ್‌.ಡಿ.ದೇವೇಗೌಡ ನೇಮಕ

ಕೇವಲ ಒಂದೂವರೆ ವರ್ಷಗಳಲ್ಲೇ ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿದ್ದು, ಒಂದು ಐತಿಹಾಸಿಕ ರಾಜಕೀಯ ತಿರುವು. 1996ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದಾಗ, ಪ್ರಾದೇಶಿಕ ಪಕ್ಷಗಳನ್ನು ಒಳಗೊಂಡ ಯುನೈಟೆಡ್ ಫ್ರಂಟ್ ಮೈತ್ರಿಕೂಟದ ನಾಯಕತ್ವ ವಹಿಸಲು ದೇವೇಗೌಡರು ಆಯ್ಕೆಯಾದರು. ಮೇ 1996 ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಅನಿರೀಕ್ಷಿತವಾಗಿ ಭಾರತದ 11ನೇ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಬೆಳವಣಿಗೆಯು, ಪ್ರಾದೇಶಿಕ ನಾಯಕರೊಬ್ಬರು ರಾಷ್ಟ್ರದ ಅತ್ಯುನ್ನತ ಹುದ್ದೆಗೇರಲು ಕರ್ನಾಟಕದ ಮುಖ್ಯಮಂತ್ರಿಯಾಗಿ ಅವರ 18 ತಿಂಗಳ ಯಶಸ್ವಿ ಆಡಳಿತವು ಹೇಗೆ ಪ್ರಬಲ ವೇದಿಕೆಯಾಯಿತು ಎಂಬುದನ್ನು ಸಾಬೀತುಪಡಿಸಿತು. ಇಂದಿಗೂ, ದೇವೇಗೌಡರ ಮುಖ್ಯಮಂತ್ರಿ ಅವಧಿಯನ್ನು ಕರ್ನಾಟಕದ ರೈತರು ಮತ್ತು ಕೃಷಿ ಆಧಾರಿತ ಆರ್ಥಿಕತೆಯಲ್ಲಿ ಧನಾತ್ಮಕ ಬದಲಾವಣೆ ತಂದ ಆಡಳಿತವೆಂದು ಸ್ಮರಿಸಲಾಗುತ್ತದೆ.

ಜೆಡಿಎಸ್‌ ನಿರ್ಣಾಯಕ ಪಾತ್ರ : ರಾಜಕೀಯ ಮೈಲಿಗಲ್ಲುಗಳು 

ಜೆಡಿಎಸ್‌ ಪಕ್ಷದ ರಾಜಕೀಯ ಪಯಣವು ಸ್ಥಿರವಾದ ಏಕಪಕ್ಷೀಯ ಬಹುಮತಕ್ಕಿಂತ ಹೆಚ್ಚಾಗಿ, ಸಮ್ಮಿಶ್ರ ರಾಜಕಾರಣದ ಕಲೆಗೆ ಸಾಕ್ಷಿಯಾಗಿದೆ. 2004 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ, ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ. ಆಗ ಜೆಡಿಎಸ್‌ ನಿರ್ಣಾಯಕ ಪಾತ್ರ ವಹಿಸಿ, ಕಾಂಗ್ರೆಸ್‌ನೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿತು. ಇದು ಪಕ್ಷದ ಪ್ರಭಾವವನ್ನು ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಸಾಬೀತುಪಡಿಸಿತು. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಈ ಸರ್ಕಾರದಲ್ಲಿ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿದ್ದರು.

2006 ರಲ್ಲಿ, ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು ಮೂಡಿತು. ಆಗ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು, ಬಿಜೆಪಿಯೊಂದಿಗೆ ಕೈಜೋಡಿಸಿ ಮುಖ್ಯಮಂತ್ರಿಯಾದರು. ಇದು ಭಾರತೀಯ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಯಾಗಿತ್ತು ಮತ್ತು ಯುವ ನಾಯಕನಾಗಿ ಕುಮಾರಸ್ವಾಮಿ ಅವರ ಉದಯಕ್ಕೆ ಕಾರಣವಾಯಿತು. '20-20' ಆಡಳಿತದ ಸೂತ್ರದಡಿ ಬಿಜೆಪಿ ಮತ್ತು ಜೆಡಿಎಸ್‌ ತಲಾ 20 ತಿಂಗಳು ಆಡಳಿತ ನಡೆಸಲು ಒಪ್ಪಿಕೊಂಡವು. ಒಪ್ಪಂದದಂತೆ, 2007ರ ಅಕ್ಟೋಬರ್‌ನಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನವನ್ನು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ  ಬಿ.ಎಸ್. ಯಡಿಯೂರಪ್ಪ ಅವರಿಗೆ ಹಸ್ತಾಂತರಿಸಬೇಕಿತ್ತು. ಆದರೆ, ಈ ಹಸ್ತಾಂತರ ಪ್ರಕ್ರಿಯೆ ನಡೆಯುವ ಸಮಯದಲ್ಲಿ ಮೈತ್ರಿ ಪಕ್ಷಗಳ ನಡುವೆ ಗಂಭೀರ ಭಿನ್ನಾಭಿಪ್ರಾಯಗಳು ತಲೆದೋರಿದವು. ಅಂತಿಮವಾಗಿ, ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದ ಕುಮಾರಸ್ವಾಮಿ ಅಕ್ಟೋಬರ್ 2007 ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ನಿರ್ಧಾರದಿಂದಾಗಿ ಮೈತ್ರಿ ಒಪ್ಪಂದ ಮುರಿದುಬಿದ್ದು, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಯಿತು ಮತ್ತು ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತು.

ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ

2018ರ ವಿಧಾನಸಭಾ ಚುನಾವಣೆಯ ಫಲಿತಾಂಶವು ರಾಜ್ಯದಲ್ಲಿ ಅತಂತ್ರ ವಿಧಾನಸಭೆಯನ್ನು ಸೃಷ್ಟಿಸಿತು. ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತಕ್ಕೆ ಕೊರತೆಯಿತ್ತು. ಈ ಸಂದರ್ಭದಲ್ಲಿ ರಾಜಕೀಯ ಚಿತ್ರಣ ಕ್ಷಣಕ್ಷಣಕ್ಕೆ ಬದಲಾಯಿತು. ಚುನಾವಣಾ ಪೂರ್ವದಲ್ಲಿ ತೀವ್ರ ವಿರೋಧಿಗಳಾಗಿದ್ದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾ ದಳ (ಜೆಡಿಎಸ್) ಪಕ್ಷಗಳು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಚುನಾವಣಾ ನಂತರದ ಮೈತ್ರಿ ಘೋಷಿಸಿದವು. ಚುನಾವಣಾ ಪೂರ್ವದಲ್ಲಿ ತೀವ್ರ ವಿರೋಧಿಗಳಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ ಪಕ್ಷಗಳು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಚುನಾವಣಾ ನಂತರದ ಮೈತ್ರಿ ಘೋಷಿಸಿದವು.

ಮೊದಲಿಗೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೂ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಮೂರೇ ದಿನಗಳಲ್ಲಿ ರಾಜೀನಾಮೆ ನೀಡಿದರು. ಈ ರಾಜಕೀಯ ನಾಟಕದ ನಂತರ, ಕಾಂಗ್ರೆಸ್‌ನ ಬೆಂಬಲದೊಂದಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಮೇ 23, 2018 ರಂದು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ ಉಪಮುಖ್ಯಮಂತ್ರಿಯಾದರು.

ಕುಮಾರಸ್ವಾಮಿ ಸರ್ಕಾರದ ಆರಂಭದ ದಿನಗಳಿಂದಲೂ ಪ್ರತಿಪಕ್ಷ ಬಿಜೆಪಿ 'ಆಪರೇಷನ್ ಕಮಲ'ದ ಮೂಲಕ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪಗಳು ಕೇಳಿಬಂದವು. 2019ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ ನಿರೀಕ್ಷಿತ ಯಶಸ್ಸು ಸಿಗದಿರುವುದು ಈ ಅಸ್ಥಿರತೆಯನ್ನು ಇನ್ನಷ್ಟು ಹೆಚ್ಚಿಸಿತು. 2019ರ ಜುಲೈನಲ್ಲಿ ಮೈತ್ರಿ ಸರ್ಕಾರದ 17 ಶಾಸಕರು (ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ) ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಈ ರಾಜೀನಾಮೆಗಳು ಸರ್ಕಾರವನ್ನು ಅಲ್ಪಮತಕ್ಕೆ ತಳ್ಳಿದವು. ರಾಜಕೀಯ ಬಿಕ್ಕಟ್ಟು ತಾರಕಕ್ಕೇರಿದಾಗ, ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಗೆ ಮುಂದಾದರು.

ಹಲವು ದಿನಗಳ ನಾಟಕೀಯ ಬೆಳವಣಿಗೆಗಳ ನಂತರ, ಅಂತಿಮವಾಗಿ ಜು.23, 2019 ರಂದು ನಡೆದ ವಿಶ್ವಾಸ ಮತಯಾಚನೆಯಲ್ಲಿ ಕುಮಾರಸ್ವಾಮಿ ಸರ್ಕಾರವು ಪರಾಭವಗೊಂಡಿತು. ಬಹುಮತ ಸಾಬೀತುಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಂತರಿಕ ಭಿನ್ನಮತ ಮತ್ತು ಶಾಸಕರ ರಾಜೀನಾಮೆಯಿಂದಾಗಿ 14 ತಿಂಗಳ ನಂತರ ಈ ಸರ್ಕಾರವೂ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 

ಕೇಂದ್ರದಲ್ಲಿ ಜೆಡಿಎಸ್‌ನ ನಿರ್ಣಾಯಕ ಪಾತ್ರ

ರಾಜ್ಯದ ಪ್ರಾದೇಶಿಕ ರಾಜಕೀಯದಲ್ಲಿ ಪ್ರಬಲ ಶಕ್ತಿಯಾಗಿ ಗುರುತಿಸಿಕೊಂಡಿರುವ ಜೆಡಿಎಸ್‌ ತನ್ನ 25 ವರ್ಷಗಳ ಇತಿಹಾಸದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಎರಡು ನಿರ್ಣಾಯಕ ಅಧ್ಯಾಯಗಳನ್ನು ಬರೆದಿದೆ. ಮೊದಲನೆಯದು, ಎಚ್.ಡಿ. ದೇವೇಗೌಡರು ಪ್ರಧಾನಮಂತ್ರಿಯಾಗಿ ನೇತೃತ್ವ ವಹಿಸಿದ್ದರು.  ಎರಡನೆಯದು, 2024ರ ಲೋಕಸಭಾ ಚುನಾವಣೆಯ ನಂತರ ಪಕ್ಷವು ಎನ್‌ಡಿಎ ಮೈತ್ರಿಕೂಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು. ಈ ಎರಡೂ ಸಂದರ್ಭಗಳು ಜೆಡಿಎಸ್‌ ಕೇಂದ್ರದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. 

2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಜೆಡಿಎಸ್‌, ಕೇಂದ್ರದಲ್ಲಿ ಮೈತ್ರಿ ಸರ್ಕಾರದಲ್ಲಿ ಪಾಲ್ಗೊಳ್ಳುವ ನಿರ್ಧಾರ ಕೈಗೊಂಡಿತು. ಬಿಜೆಪಿಯೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಪಕ್ಷ ಸ್ಥಾಪನೆಯಾಗಿದ್ದರೂ, ರಾಜಕೀಯ ಅನಿವಾರ್ಯತೆಗಳ ಕಾರಣದಿಂದ ಪಕ್ಷವು ಬಿಜೆಪಿಯ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿತು. ಇದು ರಾಜಕೀಯ ಅನಿವಾರ್ಯತೆ ಮತ್ತು ಪ್ರಾದೇಶಿಕ ಪಕ್ಷವಾಗಿ ಉಳಿಯುವ ತಂತ್ರದ ಭಾಗವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಜತೆ ಮೈತ್ರಿಮಾಡಿಕೊಂಡ ಬಳಿಕ ಜೆಡಿಎಸ್‌ ಎರಡು ಸ್ಥಾನ ಗಳಿಸಿತು. ಮಂಡ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ ಎಚ್‌.ಡಿ.ಕುಮಾರಸ್ವಾಮಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರದಲ್ಲಿ ಮಧ್ಯಮ ಮತ್ತು ಬೃಹತ್‌ ಕೈಗಾರಿಕಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

Tags:    

Similar News