ಜೈಲು ಜಾಗೃತಿ: Part-4| ಕಾರಾಗೃಹಗಳಲ್ಲಿ ಸೆಲೆಬ್ರಿಟಿ ಸಂಸ್ಕೃತಿ, ಭಯೋತ್ಪಾದಕರ ನಂಟು: ಧೂಳು ಮೆತ್ತಿರುವ ವರದಿಗಳು!

ಸಮಿತಿಗಳ ವರದಿ 'ರಕ್ಷಣಾತ್ಮಕ ಅಸ್ತ್ರʼ ಗಳಂತೆ ಕಾರ್ಯನಿರ್ವಹಿಸುತ್ತವೆ. ಜನರ ಆಕ್ರೋಶ ತಣ್ಣಗಾಗುತ್ತಿದ್ದಂತೆ, ವರದಿಯೂ ಮಹತ್ವವನ್ನು ಕಳೆದುಕೊಳ್ಳುತ್ತದೆ. ನಾಲ್ಕು ಸಮಿತಿಗಳ ವರದಿ ಧೂಳು ತಿನ್ನುತ್ತಿವೆ.

Update: 2025-11-23 03:30 GMT
Click the Play button to listen to article

ರಾಜ್ಯದ  ಕಾರಾಗೃಹಗಳು ಪದೇ ಪದೇ ವಿವಾದಗಳ ಕೇಂದ್ರಬಿಂದುವಾಗುತ್ತಲೇ ಇರುತ್ತವೆ. ಕೈದಿಗಳ ಪಲಾಯನ, ಪ್ರಭಾವಿಗಳಿಗೆ ರಾಜೋಪಚಾರ, ಮೊಬೈಲ್ ಬಳಕೆ, ಮಾದಕವಸ್ತು ಜಾಲದಂತಹ ಗಂಭೀರ ಪ್ರಕರಣಗಳು ಬೆಳಕಿಗೆ ಬಂದಾಗಲೆಲ್ಲಾ ಸರ್ಕಾರವು ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸುತ್ತದೆ. ಆ ಸಮಿತಿಗಳು ತಿಂಗಳುಗಟ್ಟಲೆ ಶ್ರಮವಹಿಸಿ, ವ್ಯವಸ್ಥೆಯ ಲೋಪದೋಷಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸುಧಾರಣೆಗಾಗಿ ಅಮೂಲ್ಯವಾದ ಶಿಫಾರಸ್ಸುಗಳೊಂದಿಗೆ ವರದಿಯನ್ನು ಸಲ್ಲಿಸುತ್ತವೆ. ಆದರೆ, ಆ ನಂತರ ಏನಾಗುತ್ತದೆ ಎಂದು ಗಮನಿಸಿದರೆ ಉತ್ತರ ಮಾತ್ರ ಶೂನ್ಯ..!

ಕಳೆದ ಒಂದು ದಶಕದಲ್ಲಿ ರಾಜ್ಯದ ಬಂದೀಖಾನೆಗಳ ಸುಧಾರಣೆಗೆ ಸಂಬಂಧಿಸಿದಂತೆ ನಾಲ್ಕು ಪ್ರಮುಖ ಉನ್ನತ ಮಟ್ಟದ ಸಮಿತಿಗಳ ವರದಿಗಳು ಸರ್ಕಾರದ ಕಪಾಟು ಸೇರಿ ಧೂಳು ತಿನ್ನುತ್ತಿವೆ. ಇದೀಗ, ಎಡಿಜಿಪಿ ಆರ್. ಹಿತೇಂದ್ರ ಅವರ ನೇತೃತ್ವದಲ್ಲಿ ಐದನೇ ಸಮಿತಿಯನ್ನು ರಚಿಸಲಾಗಿದೆ. ಇದು ವ್ಯವಸ್ಥೆಯ ಸುಧಾರಣೆಯತ್ತ ಇಟ್ಟಿರುವ ಗಂಭೀರ ಹೆಜ್ಜೆಯೇ ಅಥವಾ ಸಾರ್ವಜನಿಕರ ಕಣ್ಣೊರೆಸುವ ಮತ್ತೊಂದು ತಂತ್ರವೇ ಎಂಬ ಪ್ರಶ್ನೆ ಇದೀಗ ಗಂಭೀರವಾಗಿ ಚರ್ಚೆಯಾಗುತ್ತಿದೆ. 

ರಾಜ್ಯದ ಕಾರಾಗೃಹಗಳ  ಸುಧಾರಣೆಯು ಎಂದಿಗೂ ಸರ್ಕಾರದ ಆದ್ಯತೆಯ ವಿಷಯವಾಗಿಲ್ಲ. ಬದಲಾಗಿ, ಅದು ಯಾವಾಗಲೂ ಪ್ರತಿಕ್ರಿಯಾತ್ಮಕವಾಗಿಯೇ ಇದೆ. ಪ್ರತಿಬಾರಿಯೂ ಕಾರಾಗೃಹದಲ್ಲಿ ನಡೆದ ಘಟನೆಗಳು ದೊಡ್ಡ ವಿವಾದಗಳನ್ನು ಹುಟ್ಟು ಹಾಕಿದಾಗ ಮಾತ್ರ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. ವಿವಾದಗಳು ಸಾರ್ವಜನಿಕವಾಗಿ ಸ್ಫೋಟಗೊಂಡಾಗ, ಮಾಧ್ಯಮಗಳು ಮತ್ತು ಸಾರ್ವಜನಿಕರ ಒತ್ತಡವನ್ನು ಶಮನಗೊಳಿಸಲು ತಕ್ಷಣವೇ ಒಂದು ಸಮಿತಿಯನ್ನು ರಚಿಸಿ, ಕೈತೊಳೆದುಕೊಳ್ಳುವ ಪರಿಪಾಠ ಬೆಳೆದುಬಂದಿದೆ. ಈ ಸಮಿತಿಗಳ ವರದಿ ಒಂದು ರೀತಿಯಲ್ಲಿ 'ರಕ್ಷಣಾತ್ಮಕ ಅಸ್ತ್ರʼ ಗಳಂತೆ ಕಾರ್ಯನಿರ್ವಹಿಸುತ್ತವೆ. ಜನರ ಆಕ್ರೋಶ ತಣ್ಣಗಾಗುತ್ತಿದ್ದಂತೆ, ಸಮಿತಿಯ ವರದಿಯೂ ಮಹತ್ವವನ್ನು ಕಳೆದುಕೊಳ್ಳುತ್ತದೆ.

ಐಪಿಎಸ್‌ ಅಧಿಕಾರಿ ಬಿಪಿನ್‌ ಗೋಪಾಲಕೃಷ್ಣ ಸಮಿತಿ, ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ಸಮಿತಿ, ಎಡಿಜಿಪಿ ಎಸ್‌.ಮುರುಗನ್‌ ಸಮಿತಿ, ಐಜಿಪಿ ಚಂದ್ರಗುಪ್ತ ಸಮಿತಿಗಳನ್ನು ಕಳೆದ 10 ವರ್ಷದಲ್ಲಿ ರಚನೆಯಾಗಿ ವರದಿ ಸಹ ನೀಡಲಾಗಿದೆ. ಆದರೆ ಜೈಲುಗಳ ಸುಧಾರಣೆ ಮಾತ್ರ ಆಗಿಲ್ಲ. 

1. ಬಿಪಿನ್ ಗೋಪಾಲಕೃಷ್ಣ ಸಮಿತಿ (2014): ಭದ್ರತಾ ವೈಫಲ್ಯದ ಮೊದಲ ಎಚ್ಚರಿಕೆ ಗಂಟೆ

2014ರಲ್ಲಿ ಪರಪ್ಪನ ಅಗ್ರಹಾರದಿಂದ ಅತ್ಯಾಚಾರಿ ಮತ್ತು ಸರಣಿ ಹಂತಕ ಜೈಶಂಕರ್ ಪಲಾಯನ ಮಾಡಿದ್ದು ರಾಜ್ಯವನ್ನು ಬೆಚ್ಚಿಬೀಳಿಸಿತ್ತು. 30 ಅಡಿ ಎತ್ತರದ ಗೋಡೆ ಹಾರಿ, ವಿದ್ಯುತ್ ತಂತಿಗಳನ್ನು ದಾಟಿ ಆತ ಪರಾರಿಯಾಗಿದ್ದು ಕಾರಾಗೃಹದ ಭದ್ರತಾ ವ್ಯವಸ್ಥೆಯ ಸಂಪೂರ್ಣ ವೈಫಲ್ಯವನ್ನು ಜಗಜ್ಜಾಹೀರುಗೊಳಿಸಿತು. ಆಗ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು. ಇದನ್ನು ತಣಿಸಲು ಸರ್ಕಾರವು ಅಂದಿನ ಸಿಐಡಿ ಡಿಜಿಪಿಯಾಗಿದ್ದ ಬಿಪಿನ್ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಈ ಸಮಿತಿಯು ಕಾರಾಗೃಹದ ಭದ್ರತಾ ಲೋಪಗಳು, ಸಿಬ್ಬಂದಿ ಕೊರತೆ, ಮೂಲಸೌಕರ್ಯಗಳ ನ್ಯೂನತೆಗಳು ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಆದರೆ ಆ ವರದಿಯ ಶಿಫಾರಸುಗಳು ಯಾವುವು? ಅವುಗಳನ್ನು ಜಾರಿಗೆ ತರಲು ಸರ್ಕಾರ ತೆಗೆದುಕೊಂಡ ಕ್ರಮಗಳೇನು? ಎಂಬ ಪ್ರಶ್ನೆಗಳಿಗೆ ಇಂದಿಗೂ ಉತ್ತರವಿಲ್ಲ. ಆ ವರದಿ ಕಪಾಟು ಸೇರಿತು. ಸಮಿತಿ ಸಲ್ಲಿಸಿದ ವರದಿಯ ಶಿಫಾರಸ್ಸುಗಳು ಕಾರ್ಯರೂಪಕ್ಕೆ ಬಂದ ಯಾವುದೇ ಮಾಹಿತಿಯೇ ಇಲ್ಲವಾಗಿದೆ. 

2. ವಿನಯ್ ಕುಮಾರ್ ಸಮಿತಿ (2017):  'ವಿಐಪಿ' ಸಂಸ್ಕೃತಿಯ ಕಚ್ಚಾಟ ಅನಾವರಣ

2017ರಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ್ದ ತಮಿಳುನಾಡಿನ ರಾಜಕಾರಣಿ ಶಶಿಕಲಾ ನಟರಾಜನ್ ಅವರಿಗೆ ಪರಪ್ಪನ ಅಗ್ರಹಾರದಲ್ಲಿ 'ವಿಐಪಿ' ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂಬ ಆರೋಪವನ್ನು ಅಂದಿನ ಡಿಐಜಿ (ಕಾರಾಗೃಹ) ಡಿ. ರೂಪಾ ಅವರು ಬಹಿರಂಗಪಡಿಸಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಜೈಲಿನೊಳಗೆ ವಿಶೇಷ ಅಡುಗೆ ಮನೆ, ಪ್ರತ್ಯೇಕ ಕೊಠಡಿಗಳು ಸೇರಿದಂತೆ ರಾಜೋಪಚಾರ ನೀಡಲಾಗುತ್ತಿದೆ ಎಂಬ ಆರೋಪಗಳು ಕಾರಾಗೃಹ ಆಡಳಿತದಲ್ಲಿನ ಭ್ರಷ್ಟಾಚಾರದ ಬೇರುಗಳು ಎಷ್ಟು ಆಳವಾಗಿವೆ ಎಂಬುದನ್ನು ತೋರಿಸಿತು. ಆಗ ಜೈಲಿನ ಆಡಳಿತ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು.

ಈ ವಿವಾದದ ನಂತರ, ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ಮತ್ತೊಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತು. ಈ ಸಮಿತಿಯು ವಿಸ್ತೃತ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿ ಎಂಟು ವರ್ಷಗಳೇ ಸಮೀಪಿಸುತ್ತಿವೆ. ಆದರೆ, ಆ ವರದಿಯ ಗೌಪ್ಯತೆ ಮಾತ್ರ ಹೊರಗೆ ಬರಲೇ ಇಲ್ಲ. ಪೊಲೀಸ್‌ ಇಲಾಖೆಯ ಮೂಲಗಳ ಪ್ರಕಾರ ವರದಿಯನ್ನು ತೆರೆದು ನೋಡುವ ಪ್ರಯತ್ನವನ್ನೂ ಸರ್ಕಾರ ಮಾಡಲೇ ಇಲ್ಲ.  ಆ ವರದಿಯಲ್ಲಿನ ಶಿಫಾರಸುಗಳು ಜೈಲಿನ ಹಿರಿಯ ಅಧಿಕಾರಿಗಳ ಮತ್ತು ರಾಜಕಾರಣಿಗಳ ಅಕ್ರಮಗಳಿಗೆ ಕನ್ನಡಿ ಹಿಡಿದಿದ್ದ ಕಾರಣಕ್ಕೇ ಅದನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಯಿತು ಎಂಬ ಆರೋಪ ಪ್ರಬಲವಾಗಿದೆ.

3. ಎಸ್. ಮುರುಗನ್ ಸಮಿತಿ (2022): ತಂತ್ರಜ್ಞಾನ ದುರ್ಬಳಕೆ ಮತ್ತು ಭಯೋತ್ಪಾದಕರ ನಂಟು

2022ರಲ್ಲಿ, ಪರಪ್ಪನ ಅಗ್ರಹಾರ ಜೈಲಿನೊಳಗೆ ಶಂಕಿತ ಉಗ್ರರು ಮತ್ತು ಇತರ ಕೈದಿಗಳು ರಾಜಾರೋಷವಾಗಿ ಮೊಬೈಲ್ ಫೋನ್‌ಗಳನ್ನು ಬಳಸುತ್ತಿರುವ ವಿಡಿಯೋಗಳು ಬಹಿರಂಗಗೊಂಡು ಆತಂಕ ಸೃಷ್ಟಿಸಿದ್ದವು. ಇದು ಕೇವಲ ಭದ್ರತಾ ಲೋಪ ಮಾತ್ರವಲ್ಲ, ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿ ಎಂಬ ಚರ್ಚೆ ಶುರುವಾಯಿತು. ಆಗ ಸರ್ಕಾರವು ಎಡಿಜಿಪಿ ಎಸ್. ಮುರುಗನ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಸಮಿತಿಯು ಜೈಲಿನೊಳಗೆ ಮೊಬೈಲ್ ಜಾಮರ್‌ಗಳ ಅಳವಡಿಕೆ, ಸಿಬ್ಬಂದಿಯ ತಪಾಸಣೆ, ತಂತ್ರಜ್ಞಾನದ ಬಳಕೆ ಸೇರಿದಂತೆ ಭದ್ರತೆಯನ್ನು ಬಲಪಡಿಸಲು ಹಲವು ಶಿಫಾರಸುಗಳನ್ನು ಮಾಡಿತು. ಆದರೆ, ಈ ವರದಿಯ ಆಧಾರದ ಮೇಲೆ ಸರ್ಕಾರ  ಕೆಲವೇ ಕೆಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಬಿಟ್ಟರೆ, ವ್ಯವಸ್ಥೆಯನ್ನು ಸರಿಪಡಿಸುವ ಯಾವುದೇ ಮೂಲಭೂತ ಬದಲಾವಣೆಗಳು ಜಾರಿಗೆ ಬರಲೇ ಇಲ್ಲ. ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನವನ್ನೇ ಸರ್ಕಾರ ಮಾಡಿಲ್ಲ. ವರ್ಗಾವಣೆ ಎಂಬುದು ಸಮಸ್ಯೆಗೆ ತಾತ್ಕಾಲಿಕ ಪರಿಹಾರವೇ ಹೊರತು, ಶಾಶ್ವತ ಸುಧಾರಣೆಯಲ್ಲ ಎಂಬುದನ್ನು ಸರ್ಕಾರ ಮತ್ತೊಮ್ಮೆ ಸಾಬೀತುಪಡಿಸಿತು.

4. ಡಾ. ಚಂದ್ರಗುಪ್ತ ಸಮಿತಿ (2024): ಸೆಲೆಬ್ರಿಟಿ ಸಂಸ್ಕೃತಿ ಮತ್ತು ಆಡಳಿತ ಸುಧಾರಣೆಯ ಕೂಗು

ಇತ್ತೀಚೆಗಷ್ಟೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಜೈಲು ಸೇರಿದ್ದ ನಟ ದರ್ಶನ್ ಮತ್ತು ಅವರ ಸಹಚರರಿಗೆ ಕಾರಾಗೃಹದಲ್ಲಿ ರಾಜೋಪಚಾರ ನೀಡಲಾಗುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿಬಂದವು. ಇದಕ್ಕೆ ಸಾಕ್ಷಿ ಎಂಬಂತೆ ಫೋಟೋ, ವಿಡಿಯೋ ಸಮೇತ ವೈರಲ್ ಆಗಿದ್ದವು. ಇದು ಮತ್ತೊಮ್ಮೆ 'ವಿಐಪಿ ಸಂಸ್ಕೃತಿ'ಯನ್ನು ಮುನ್ನೆಲೆಗೆ ತಂದಿತು. ಆಗ ಕಾರಾಗೃಹಗಳ ಸುಧಾರಣೆಗೆ ಸಿಸಿಬಿ ಮುಖ್ಯಸ್ಥರಾಗಿದ್ದ ಐಜಿಪಿ ಡಾ. ಚಂದ್ರಗುಪ್ತ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವೇ ಸಮಿತಿಯನ್ನು ರಚಿಸಿತು.

ಈ ಸಮಿತಿಯು ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲು ಸೇರಿದಂತೆ ರಾಜ್ಯದ ಇತರೆ ಜೈಲುಗಳಿಗೆ ಭೇಟಿ ನೀಡಿ, ಕೈದಿಗಳು, ಸಿಬ್ಬಂದಿ ಮತ್ತು ಅಧಿಕಾರಿಗಳೊಂದಿಗೆ ಮಾತನಾಡಿ ಸುದೀರ್ಘ ವರದಿಯನ್ನು ಸಿದ್ಧಪಡಿಸಿತು. ನಾಲ್ಕು ತಿಂಗಳ ಹಿಂದೆ ಸರ್ಕಾರಕ್ಕೆ ಸಲ್ಲಿಸಲಾದ ಈ ವರದಿಯಲ್ಲಿ, ಕಾರಾಗೃಹ ಸಿಬ್ಬಂದಿಯ ವರ್ಗಾವಣೆಗೆ ಒಂದು ಪಾರದರ್ಶಕ ನೀತಿಯನ್ನು ರೂಪಿಸಬೇಕು, ಮಾನಸಿಕ ಒತ್ತಡದಲ್ಲಿರುವ ಸಿಬ್ಬಂದಿಗೆ ಮನಶಾಸ್ತ್ರಜ್ಞರಿಂದ ಕೌನ್ಸೆಲಿಂಗ್ ವ್ಯವಸ್ಥೆ ಮಾಡಬೇಕು ಮತ್ತು ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬಂತಹ ಮಹತ್ವದ ಶಿಫಾರಸುಗಳನ್ನು ಮಾಡಲಾಗಿತ್ತು. ಆದರೆ, ಈ ವರದಿಯನ್ನೂ ಸರ್ಕಾರ ಸ್ವೀಕರಿಸಿ ಕಪಾಟಿಗೆ ಸೇರಿಸಿದೆ. ಮುಂದಿನ ಹಂತಕ್ಕೆ ಹೋಗುವ ಪ್ರಯತ್ನವನ್ನೇ ಮಾಡಲಿಲ್ಲ. 

ವೈಫಲ್ಯಕ್ಕೆ ಕಾರಣಗಳೇನು?

* ರಾಜಕೀಯ ಇಚ್ಛಾಶಕ್ತಿಯ ಕೊರತೆ: ಬಂಧೀಖಾನೆ ಸುಧಾರಣೆಯು ರಾಜಕೀಯವಾಗಿ ಲಾಭದಾಯಕ ವಿಷಯವಲ್ಲ. ಇಲ್ಲಿ ಮಾಡುವ ಹೂಡಿಕೆಯಿಂದ ಮತಗಳು ಬರುವುದಿಲ್ಲ. ಹೀಗಾಗಿ, ಯಾವುದೇ ಸರ್ಕಾರ ಇದಕ್ಕೆ ಆದ್ಯತೆ ನೀಡುವುದಿಲ್ಲ.

* ಭ್ರಷ್ಟಾಚಾರದ ಬೇರುಗಳು: ಜೈಲಿನೊಳಗಿನ ಅಕ್ರಮಗಳು ದೊಡ್ಡ ಜಾಲವಾಗಿ ಬೆಳೆದಿದ್ದು, ಇದರಲ್ಲಿ ಅಧಿಕಾರಿಗಳು ಮತ್ತು ಹೊರಗಿನ ಪ್ರಭಾವಿಗಳೂ ಶಾಮೀಲಾಗಿದ್ದಾರೆ. ಯಾವುದೇ ಸುಧಾರಣೆಯು ಈ ಜಾಲಕ್ಕೆ ಕೊಡಲಿ ಪೆಟ್ಟು ನೀಡುವುದರಿಂದ, ಅದನ್ನು ಜಾರಿಗೆ ತರಲು ವ್ಯವಸ್ಥೆಯೊಳಗಿನಿಂದಲೇ ವಿರೋಧ ವ್ಯಕ್ತವಾಗುತ್ತದೆ.

* ಅಧಿಕಾರಿಶಾಹಿಯ ನಿರಾಸಕ್ತಿ: "ಹೇಗೋ ನಡೆಯುತ್ತಿದೆ, ನಮಗೇಕೆ ಬೇಕು?" ಎಂಬ ಅಧಿಕಾರಿಶಾಹಿಯ ಮನೋಭಾವವು ಸುಧಾರಣೆಗಳಿಗೆ ದೊಡ್ಡ ಅಡ್ಡಿಯಾಗಿದೆ.

* ಸಂಪನ್ಮೂಲಗಳ ಕೊರತೆ: ಸಿಬ್ಬಂದಿ ನೇಮಕಾತಿ, ತಂತ್ರಜ್ಞಾನ ಅಳವಡಿಕೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಹಣಕಾಸಿನ ಅಗತ್ಯವಿದೆ. ಆದರೆ, ಸರ್ಕಾರಗಳು ಇದಕ್ಕೆ ಅಗತ್ಯ ಅನುದಾನವನ್ನು ಮೀಸಲಿಡಲು ಹಿಂದೇಟು ಹಾಕುತ್ತವೆ.

5.ಆರ್‌.ಹಿತೇಂದ್ರ ವರದಿಯೂ ಮೂಲೆಗುಂಪು? 

ಎಡಿಜಿಪಿ ಆರ್. ಹಿತೇಂದ್ರ ನೇತೃತ್ವದ ಹೊಸ ಸಮಿತಿಯನ್ನು ರಚಿಸಲಾಗಿದೆ. ಈ ವರದಿಯೂ ಹಿಂದಿನ ವರದಿಗಳ ಗತಿಯನ್ನೇ ಕಾಣುವುದೇ ಎಂಬ ಆತಂಕ ಸಹಜ. ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಮೋಜು-ಮಸ್ತಿಗಳ ಕುರಿತ ಸಮಿತಿಯು ಪರಿಶೀಲನೆ ನಡೆಸಲಿದೆ. ಬಳಿಕ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಿದೆ. ಆದರೆ, ಆ ವರದಿಯು ಮೂಲಗುಂಪಾಗಲಿದೆ ಎಂಬ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸಮಿತಿಗಳ ವರದಿಯನ್ನು ಅನುಷ್ಠಾನಗೊಳಿಸಬೇಕಾಗಿದೆ. ಈವರೆಗೆ ಸಲ್ಲಿಕೆಯಾದ ಎಲ್ಲಾ ನಾಲ್ಕು ಸಮಿತಿಗಳ ವರದಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇದರಿಂದ ಯಾವ ಶಿಫಾರಸುಗಳನ್ನು ಮಾಡಲಾಗಿತ್ತು ಮತ್ತು ಅವುಗಳನ್ನು ಯಾಕೆ  ಜಾರಿಗೆ ತರಲಿಲ್ಲ ಎಂಬುದು ಜನರಿಗೆ ತಿಳಿಯುತ್ತದೆ. ಶಿಫಾರಸುಗಳನ್ನು ಜಾರಿಗೆ ತರುವಲ್ಲಿ ವಿಫಲರಾದ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸಬೇಕು. ಅಲ್ಲದೇ, ಹೊಸ ಸಮಿತಿಯ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ನಿರ್ದಿಷ್ಟ ಕಾಲಮಿತಿಯನ್ನು ವಿಧಿಸಬೇಕು ಮತ್ತು ಅದರ ಮೇಲ್ವಿಚಾರಣೆಗೆ ಒಂದು ಸ್ವತಂತ್ರ ವ್ಯವಸ್ಥೆಯನ್ನು ರೂಪಿಸಬೇಕು ಎಂಬ ಒತ್ತಾಯಗಳು ಕೇಳಿಬಂದಿವೆ.  

ಜೈಲಿನಲ್ಲಿನ ಕೈದಿಗಳ ಮನಸ್ಥಿತಿ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಮನಶಾಸ್ತ್ರಜ್ಞರಾದ ಕಲ್ಪನಾ ನವೀನ್‌, ಕಾರಾಗೃಹಗಳನ್ನು ಪುನರ್‌ ವಸತಿ ಕೇಂದ್ರಗಳು ಎಂದು ಪರಿಗಣಿಸಲಾಗುತ್ತದೆ. ಅದು ಶಿಕ್ಷೆ ನೀಡುವ ಸ್ಥಳ ಎನ್ನುವುದಕ್ಕಿಂತ ಮನಸ್ಥಿತಿ ಬದಲಿಸುವ ಕೇಂದ್ರಗಳು. ಜೈಲಿಗೆ ಬಂದಾಗ ಆರೋಪಿಗಳಾಗಲಿ, ಅಪರಾಧಿಗಳಾಗಲಿ ಅವರ ಮಾನಸಿಕ ಸ್ಥಿತಿ ಬದಲಾಗುತ್ತದೆ. ಮೇಲ್ನೋಟಕ್ಕೆ ಚೆನ್ನಾಗಿರುವಂತೆ ಕಂಡರೂ ಮಾನಸಿಕವಾಗಿ ತುಂಬಾ ನೋವು ಅನುಭವಿಸುತ್ತಿರುತ್ತಾರೆ. ಮಾನಸಿಕ ಸ್ವಾತಂತ್ರ್ಯ ಇರುವುದಿಲ್ಲ. ಅಲ್ಲದೇ, ಹಣಕಾಸು ಸಮಸ್ಯೆ, ಕೌಟುಂಬಿಕ ಬೆಂಬಲ ಇರುವುದಿಲ್ಲ. ಇದಕ್ಕಾಗಿ ಮನಶಾಸ್ತ್ರಜ್ಞರಿಂದ ಮಾನಸಿಕ ಸ್ಥೈರ್ಯ ತುಂಬುವ ಅಗತ್ಯ ಇರುತ್ತದೆ. ಜೈಲಿನಲ್ಲಿನ ವಾತಾವರಣದಿಂದಾಗಿ ಬೇಗ ಕೋಪಗೊಳ್ಳುವುದು, ಹಿಂಸೆರೂಪದಲ್ಲಿ ವರ್ತನೆ ಮಾಡುವುದು ಸಹಜವಾಗಿ ಮೂಡುತ್ತದೆ. ಇದಕ್ಕಾಗಿ ಕೌನ್ಸಿಲಿಂಗ್‌ ಅತ್ಯಗತ್ಯವಾಗಿರುತ್ತದೆ. ಇದರಿಂದ ಕೈದಿಗಳು ತಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯ ಎಂದು ಹೇಳಿದ್ದಾರೆ.

ಒಟ್ಟಾರೆ ಕಾರಾಗೃಹಗಳಲ್ಲಿನ ಅವ್ಯವಸ್ಥೆ ಇಡೀ ಸಮಾಜದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೇವಲ ಸಮಿತಿಗಳನ್ನು ರಚಿಸಿ ಕೈತೊಳೆದುಕೊಳ್ಳುವ ಬದಲು, ಆ ಸಮಿತಿಗಳ ಶಿಫಾರಸುಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕಿದೆ. ಇಲ್ಲವಾದಲ್ಲಿ, ಈ ಸಮಿತಿ, ವರದಿ, ಶಿಫಾರಸುಗಳೆಂಬ ವ್ಯರ್ಥ ಕಸರತ್ತು ಮುಂದುವರೆಯುತ್ತಲೇ ಇರುತ್ತದೆ. ರಾಜ್ಯದ ಕಾರಾಗೃಹಗಳು 'ಸುಧಾರಣಾ ಕೇಂದ್ರ'ಗಳಾಗುವ ಬದಲು 'ಅಕ್ರಮಗಳ ತಾಣ'ವಾಗಿಯೇ ಉಳಿಯಲಿವೆ.

Tags:    

Similar News