ಪೊಲೀಸ್ ಸೋಗಿನಲ್ಲಿ ಕಾಲ್ ಸೆಂಟರ್ ಸಿಬ್ಬಂದಿ ಕಿಡ್ನ್ಯಾಪ್: ಕೋಲಾರ ಕಾನ್ಸ್‌ಟೇಬಲ್ ಸೇರಿ 8 ಮಂದಿ ಅರೆಸ್ಟ್

ಹೊಸಕೋಟೆಯ ಲಾಡ್ಜ್ ಒಂದರಲ್ಲಿ ಉದ್ಯೋಗಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಆರೋಪಿಗಳು, ಬಿಡುಗಡೆ ಮಾಡಲು ಬರೋಬ್ಬರಿ 25 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು.

Update: 2025-11-23 07:29 GMT

ಸಾಂದರ್ಭಿಕ ಚಿತ್ರ 

Click the Play button to listen to article

ನಗರದ ಹೃದಯಭಾಗ ಕೋರಮಂಗಲದಲ್ಲಿ ಶುಕ್ರವಾರ ಮಧ್ಯರಾತ್ರಿ ಸಿನಿಮೀಯ ರೀತಿಯಲ್ಲಿ ನಡೆದ ಕಾಲ್ ಸೆಂಟರ್ ಉದ್ಯೋಗಿಗಳ ಅಪಹರಣ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಘಟನೆ ನಡೆದ ಕೇವಲ 12 ಗಂಟೆಗಳ ಒಳಗೆ, ಕೋಲಾರ ಜಿಲ್ಲೆಯ ಪೊಲೀಸ್ ಪೇದೆ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕೋರಮಂಗಲದ ಪ್ರತಿಷ್ಠಿತ ಕಾಲ್ ಸೆಂಟರ್ ಒಂದರ ಬಳಿ ಶುಕ್ರವಾರ ರಾತ್ರಿ ತೆರಳಿದ್ದ ಆರೋಪಿಗಳು, ಅಲ್ಲಿ ಕೆಲಸ ಮಾಡುತ್ತಿದ್ದ ಪವನ್, ರಾಜ್ ವೀರ್, ಆಕಾಶ್ ಮತ್ತು ಅನಸ್ ಎಂಬ ನಾಲ್ವರು ಉದ್ಯೋಗಿಗಳನ್ನು ತಡೆದಿದ್ದಾರೆ. ತಾವು ಪೊಲೀಸರು ಎಂದು ಸುಳ್ಳು ಹೇಳಿ ಬೆದರಿಸಿದ ಅವರು, ಬಲವಂತವಾಗಿ ನಾಲ್ವರನ್ನೂ ಕಾರಿನಲ್ಲಿ ಅಪಹರಿಸಿ ಕರೆದೊಯ್ದಿದ್ದಾರೆ.

ನಂತರ ಹೊಸಕೋಟೆಯ ಲಾಡ್ಜ್ ಒಂದರಲ್ಲಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ಆರೋಪಿಗಳು, ಬಿಡುಗಡೆ ಮಾಡಲು ಬರೋಬ್ಬರಿ 25 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಅಷ್ಟೇ ಅಲ್ಲದೆ, ಆಪರೇಷನ್ ಮ್ಯಾನೇಜರ್ ಖಾತೆಯಿಂದ 18 ಲಕ್ಷ ರೂಪಾಯಿ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದರು.

ಕಾರ್ಯಾಚರಣೆ ಹೇಗಿತ್ತು?

ಶನಿವಾರ ನಸುಕಿನ 4 ಗಂಟೆ ಸುಮಾರಿಗೆ ಕಾಲ್ ಸೆಂಟರ್‌ನ ಇತರ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಿದರು. ತಾಂತ್ರಿಕ ಸಾಕ್ಷ್ಯಗಳು ಮತ್ತು ಮೊಬೈಲ್ ಲೊಕೇಶನ್ ಆಧರಿಸಿ, ಬೆಳಗ್ಗೆ 11 ಗಂಟೆಯ ವೇಳೆಗೆ ಹೊಸಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದರು. ಒತ್ತೆಯಾಳುಗಳನ್ನು ಸುರಕ್ಷಿತವಾಗಿ ರಕ್ಷಿಸಿದ ಪೊಲೀಸರು, ಸ್ಥಳದಲ್ಲಿದ್ದ 8 ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಛಲಪತಿ, ಕೋಲಾರ ಜಿಲ್ಲೆಯ ಪೊಲೀಸ್ ಕಾನ್ಸ್‌ಟೇಬಲ್ ಎಂದು ಗುರುತಿಸಲಾಗಿದೆ. ಉಳಿದಂತೆ ಭರತ್, ಪವನ್, ಪ್ರಸನ್ನ, ಅತೀಕ್, ಮತ್ತು ಜಬೀವುಲ್ಲಾ ಸೇರಿದಂತೆ ಒಟ್ಟು 8 ಮಂದಿ ಸರಳುಗಳ ಹಿಂದೆ ಸರಿದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ನಡೆದಿದ್ದ ಕಾಲ್ ಸೆಂಟರ್ ರೇಡ್ ಪ್ರಕರಣವನ್ನೇ ಬಂಡವಾಳ ಮಾಡಿಕೊಂಡು, ಭಯ ಹುಟ್ಟಿಸಿ ಹಣ ಸುಲಿಗೆ ಮಾಡಲು ಈ ಸಂಚು ರೂಪಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯೇ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವುದು ಇಲಾಖೆಗೆ ಮುಜುಗರ ತಂದಿದೆ.

Tags:    

Similar News