ʼಸಾಮಾಜಿಕ ನ್ಯಾಯʼದ ಹರಿಕಾರ; ಹಿಂದುಳಿದವರ ಆಶಾಕಿರಣ ಎಲ್.ಜಿ.ಹಾವನೂರ್; ದಕ್ಷಿಣ ಆಫ್ರಿಕಾದ ಸಂವಿಧಾನ ರಚಿಸಿಕೊಟ್ಟ ಹಾವನೂರ್ !
ʼಹಿಂದುಳಿದ ವರ್ಗಗಳ ಬೈಬಲ್ʼ ಎಂತಲೇ ಕರೆಯಲ್ಪಡುವ ಹಾವನೂರ್ ಆಯೋಗದ ವರದಿಯ ಪರಿಣಾಮದಿಂದಲೇ ಇಂದು ಹಿಂದುಳಿದ ವರ್ಗಗಳು ಮೀಸಲಾತಿಯ ಲಾಭ ಪಡೆದು, ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯತ್ತ ದಾಫುಗಾಲು ಇಡುತ್ತಿವೆ.
ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಒದಗಿಸುವ ಎಲ್.ಜಿ. ಹಾವನೂರ್ ಅವರ ವರದಿ ಸಲ್ಲಿಕೆಗೆ ಈಗ 50 ವರ್ಷ ತುಂಬಿದೆ. ಮೇಲ್ವರ್ಗದವರ ದಬ್ಬಾಳಿಕೆ, ಶೋಷಣೆ ತುಂಬಿ ತುಳುತ್ತಿದ್ದ ಕಾಲಘಟ್ಟದಲ್ಲಿ ಹಿಂದುಳಿದವರಿಗೆ ʼಮೀಸಲಾತಿʼ ಕೊಟ್ಟು ಕ್ರಾಂತಿಕಾರಕ ಬದಲಾವಣೆಗೆ ಮುನ್ನುಡಿ ಬರೆದವರು ಎಲ್.ಜಿ.ಹಾವನೂರ್.
ʼಹಿಂದುಳಿದ ವರ್ಗಗಳ ಬೈಬಲ್ʼ ಎಂತಲೇ ಕರೆಯಲ್ಪಡುವ ಹಾವನೂರ್ ಆಯೋಗದ ವರದಿಯ ಪರಿಣಾಮದಿಂದಲೇ ಇಂದು ಹಿಂದುಳಿದ ವರ್ಗಗಳು ಮೀಸಲಾತಿಯ ಲಾಭ ಪಡೆದು, ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯತ್ತ ದಾಫುಗಾಲು ಇಡುತ್ತಿವೆ. ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬಂದಿವೆ.
ಹಾವನೂರ್ ಅವರು ಮೀಸಲಾತಿ ಒದಗಿಸಿದ್ದರಿಂದಲೇ ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ನಾಯಕರು ರಾಜ್ಯದ ಚುಕ್ಕಾಣಿ ಹಿಡಿಯುವಂತಾಯಿತು. ಹಿಂದುಳಿದ ವರ್ಗಗಳಿಗೆ ಸೇರಿದ ಎಸ್. ಬಂಗಾರಪ್ಪ, ಎಂ.ವೀರಪ್ಪ ಮೊಯಿಲಿ, ಸಿದ್ದರಾಮಯ್ಯ, ಎಚ್.ವಿಶ್ವನಾಥ್, ಆರ್.ಎಲ್.ಜಾಲಪ್ಪ, ಜನಾರ್ಧನ ಪೂಜಾರಿ ಸೇರಿದಂತೆ ಹಲವು ರಾಜಕೀಯವಾಗಿ ಬೆಳೆದರು.
ಇದಲ್ಲದೇ 1991ರಲ್ಲಿ ದಕ್ಷಿಣ ಆಫ್ರಿಕಾ ಸಂವಿಧಾನ ರಚನೆಯಲ್ಲೂ ಹಾವನೂರ್ ತೊಡಗಿಸಿಕೊಂಡಿದ್ದರು. ಮಂಡಲ್ ಆಯೋಗದ ವರದಿಗೂ ಹಾವನೂರ್ ವರದಿ ಪ್ರೇರಣೆಯಾಗಿತ್ತು. ಇಂತಹ ವೈಶಿಷ್ಟ್ಯ ಪೂರ್ಣ ವ್ಯಕ್ತಿ ಎಲ್.ಜಿ. ಹಾವನೂರ್ ಸಲ್ಲಿಸಿದ ವರದಿಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ವ್ಯಕ್ತಿತ್ವದ ಅವಲೋಕನ ಅಗತ್ಯವಾಗಿದೆ.
ಎಲ್.ಜಿ.ಹಾವನೂರ್ ಯಾರು?
ಎಲ್.ಜಿ.ಹಾವನೂರ್ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ 1927 ರಂದು ವಾಲ್ಮೀಕಿ ಸಮುದಾಯದ ಗೂಳಪ್ಪ ಹಾಗೂ ದುರ್ಗಾದೇವಿ ದಂಪತಿಗೆ ಜನಿಸಿದರು. ಚಿಕ್ಕಂದಿನಿಂದಲೇ ಶೋಷಣೆ, ಅಪಮಾನ, ತಿರಸ್ಕಾರಗಳಿಗೆ ಒಳಗಾದರೂ ಧಾರವಾಡದಲ್ಲಿ ಪದವಿ ವ್ಯಾಸಂಗ ಪೂರೈಸಿದರು.
ಧಾರವಾಡದ ಹಾಸ್ಟೆಲ್‌ನಲ್ಲಿ ಜಾತಿ ತಾರತಮ್ಯ ಕಂಡು ಕುಪಿತರಾಗಿದ್ದರು. ಪದವಿ ನಂತರ ಬೆಳಗಾವಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು, ರಾಣೆಬೆನ್ನೂರಿಗೆ ಬಂದು ವಕೀಲಿಕೆ ಆರಂಭಿಸಿದರು.
1953ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಪ್ರಭಾವಿತರಾದರು. 1956 ಮತ್ತು 1973ರಲ್ಲಿ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಪ್ರಮುಖರನ್ನು ಆಹ್ವಾನಿಸಿ ರಾಜ್ಯಮಟ್ಟದ ಸಮ್ಮೇಳನ ಮಾಡಿದರು.
1970ರಲ್ಲಿ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅವರು ಐಎಎಸ್ ಹಾಗೂ ಐಪಿಎಸ್ ಪರೀಕ್ಷೆಗೆ ಮೀಸಲಾತಿ ಕಿತ್ತು ಹಾಕಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದನ್ನು ತೀವ್ರವಾಗಿ ವಿರೋಧಿಸಿ ಆಂದೋಲನ ರೂಪಿಸಿದರು. ಪರಿಣಾಮ ಮೀಸಲಾತಿ ಮುಂದುವರಿಯಿತು.
ರಾಮ್ ಮನೋಹರ್ ಲೋಹಿಯಾ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಟಿಪ್ಪು ಸುಲ್ತಾನ್ ಅವರ ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದ ಮಾಜಿ ಸಿಎಂ ದೇವರಾಜ ಅರಸು ಅವರು ಎಲ್.ಜಿ.ಹಾವನೂರ್ ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆ ಪ್ರಾರಂಭಿಸಿದರು.
ʼʼಅರಸು ಅವರ ದೂರದೃಷ್ಟಿ, ಎಲ್.ಜಿ.ಹಾವನೂರ್ ಸಾಮಾಜಿಕ ಕಾಳಜಿಯಿಂದಾಗಿಯೇ ಇಂದು ಹಿಂದುಳಿದ ವರ್ಗಗಳು ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಮುನ್ನೆಲೆಗೆ ಬಂದಿವೆ” ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್. ದ್ವಾರಕನಾಥ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಹಂತ ಹಂತವಾಗಿ ಮೂಡಿದ ಜಾತಿ ಪ್ರಜ್ಞೆ
1951 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ರಚನೆಯಾದರೂ ಹಿಂದುಳಿದವರಿಗೆ ಗೆಜೆಟೆಡ್ ಹುದ್ದೆಗಳಿಗೆ ಸೇರುವ ಹಾಗೂ ಜಾತಿ ಸಂಘಟನೆಯ ಪ್ರಜ್ಞೆ ಕಡಿಮೆಯಾಗಿತ್ತು. ಎಲ್.ಜಿ. ಹಾವನೂರ್ ಅವರು ಮೀಸಲಾತಿ ಒದಗಿಸಿದ ನಂತರ ಸಮುದಾಯದಲ್ಲಿ ನಿಧಾನವಾಗಿ ಜಾತಿ ಸಂಘಟನೆ ಹಾಗೂ ಏಕತೆಯ ಪ್ರಜ್ಞೆ ಮೂಡಿತು. ಕೆಪಿಎಸ್‌ಸಿ ಗೆಜೆಟೆಡ್ ಹುದ್ದೆಗಳತ್ತ ಧಾವಿಸಿದರು.
ಹಾವನೂರ್ ಅವರ ನಂತರ ಹಿಂದುಳಿದ ವರ್ಗಗಳ ಆಯೋಗಕ್ಕೆ ಬಂದ ಅಧ್ಯಕ್ಷರು ಅಷ್ಟೇನೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸದ ಕಾರಣ ವರದಿಗಳು ಬರಲಿಲ್ಲ. ಆದರೆ, ಹಾವನೂರ್ ವರದಿಯಿಂದಾಗಿಯೇ ಸರ್ಕಾರಿ ಸಂಸ್ಥೆಗಳು, ಶೈಕ್ಷಣಿಕ ಮತ್ತು ಇತರ ಸಂಸ್ಥೆಗಳಲ್ಲಿ ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿ ನೀತಿ ರೂಪಿಸಲು ಸರ್ಕಾರಗಳಿಗೆ ನೆರವಾಯಿತು.
ಹಾವನೂರ್ ವರದಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ವರದಿಯನ್ನು “ಹಿಂದುಳಿದ ವರ್ಗಗಳ ಬೈಬಲ್” ಎಂದೇ ಕರೆದರು. ಸುಪ್ರೀಂಕೋರ್ಟ್ ಕೂಡ ಈ ವರದಿಯನ್ನು ಹಿಂದುಳಿದ ವರ್ಗಗಳ ಸಮಗ್ರ ವೈಜ್ಞಾನಿಕ ಅಧ್ಯಯನ ಎಂದು ಶ್ಲಾಘಿಸಿತ್ತು.
ಈ ಮಧ್ಯೆ, ಹಿಂದುಳಿದ ಸಮುದಾಯಗಳನ್ನು ಸಾಮಾಜಿಕವಾಗಿ ಮೇಲೆತ್ತಲು ಹಾವನೂರ್ ಅವರು 1979 ರಲ್ಲಿ ಸಾಮಾಜಿಕ-ಕಾನೂನು ಸೇವೆಗಳು ಮತ್ತು ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸಿದರು. ಇದೇ ಪ್ರತಿಷ್ಠಾನದಡಿ ಹಾವನೂರ್ ಕಾನೂನು ಕಾಲೇಜು ಕೂಡ ಆರಂಭವಾಯಿತು. ಹಾವನೂರ್ ಅವರ ಕಾನೂನು ವಿದ್ವತ್ತನ್ನು ಗಮನಿಸಿ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ಆಯ್ಕೆ ಮಾಡುವ ಮಾತು ಕೊಟ್ಟಿತು. ಆದರೆ, ಅದನ್ನು ಹಾವನೂರ್ ಅವರು ನಯವಾಗಿಯೇ ತಿರಸ್ಕರಿಸಿದ್ದರು.
ದಕ್ಷಿಣ ಆಫ್ರಿಕಾ ಸಂವಿಧಾನ ರಚನೆಗೆ ನೆರವು
1991 ರಲ್ಲಿ ದಕ್ಷಿಣ ಆಫ್ರಿಕಾ ದೇಶದ ನಾಯಕರು ತಮ್ಮದೇ ಆದ ಸಂವಿಧಾನ ಹೊಂದಲು ಬಯಸಿದರು. ದಕ್ಷಿಣ ಆಫ್ರಿಕಾದ ಅಂದಿನ ಅಧ್ಯಕ್ಷರಾಗಿದ್ದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‌ಸಿ) ಸಂಸ್ಥಾಪಕ ನೆಲ್ಸನ್ ಮಂಡೇಲಾ ಅವರ ಆಹ್ವಾನದ ಮೇರೆಗೆ ಸಂವಿಧಾನ ಸಲಹಾ ಸಮಿತಿ ಸಲಹಾಗಾರರಾಗಿ ಕಾರ್ಯ ನಿರ್ವಹಿಸಿದರು.
ನೆಲ್ಸನ್ ಮಂಡೇಲಾ ಅವರು ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರು. ಎಲ್.ಜಿ.ಹಾವನೂರ್ ಅವರ ಸಾಮಾಜಿಕ ಕಳಕಳಿಗೆ ಮನಸೋತು ಅವರಿಂದಲೇ ಸಂವಿಧಾನ ಬರೆಸಿದರು. ಇದು ಹಾವನೂರ್ ಅವರ ವ್ಯಕ್ತಿತ್ವ ಎಂದು ದ್ವಾರಕಾನಾಥ್ ಸ್ಮರಿಸಿದರು.
ಮಂಡಲ್ ಆಯೋಗಕ್ಕೆ ಸ್ಫೂರ್ತಿಯಾದ ಹಾವನೂರ್ ವರದಿ
ರಾಷ್ಟ್ರ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆ ಮಾಡಲು 1979 ರಲ್ಲಿ ರಚಿಸಲಾದ ಬಿ.ಪಿ ಮಂಡಲ್ ನೇತೃತ್ವದ ಆಯೋಗಕ್ಕೆ ಹಾವನೂರ್ ವರದಿಯ ಕಾರ್ಯವಿಧಾನವೇ ಮಾದರಿಯಾಗಿ ಬಳಕೆಯಾಯಿತು. ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಸೇರಿದಂತೆ ಅವರ ಉನ್ನತಿಗಾಗಿ ಕ್ರಮಗಳನ್ನು ಶಿಫಾರಸು ಮಾಡಲು ಹಾವನೂರ್ ವರದಿ ಅಂಶಗಳನ್ನು ಮಂಡಲ್ ಆಯೋಗದಲ್ಲಿ ಸೇರಿಸಲಾಯಿತು. ಆಯೋಗವು 1980 ರಲ್ಲಿ ತನ್ನ ವರದಿ ಸಲ್ಲಿಸಿತು. ವರದಿಯ ಶಿಫಾರಸುಗಳನ್ನು 1990 ರಲ್ಲಿ ಜಾರಿಗೊಳಿಸಲಾಯಿತು.
ವಿಶ್ವಾಸಾರ್ಹತೆ ಕಳೆದುಕೊಂಡ ಆಯೋಗ
ಎಲ್.ಜಿ. ಹಾವನೂರ್ ಬಳಿಕ ವೆಂಕಟಸ್ವಾಮಿ, ಓ ಚಿನ್ನಪ್ಪರೆಡ್ಡಿ, ಮುನಿರಾಜು, ಸಿದ್ದಗಂಗಪ್ಪ ನೇತೃತ್ವದಲ್ಲಿ ಆಯೋಗವು ವರದಿಗಳನ್ನು ನೀಡಿಲ್ಲ. ಅಲ್ಲಿಯವರೆಗೆ ಸಾಮಾಜಿಕ ನ್ಯಾಯದ ಪಥದಲ್ಲಿ ಸಾಗುತ್ತಿದ್ದ ಆಯೋಗದ ಸಂಪೂರ್ಣ ಹಿಡಿತ ಕಳೆದುಕೊಂಡಿತು. ಹಿಂದುಳಿದ ವರ್ಗಗಳ ತಜ್ಞರು, ಪರಿಣಿತರು ಇರಬೇಕಾಗಿದ್ದ ಆಯೋಗಕ್ಕೆ ಅನ್ಯ ಸಮುದಾಯಗಳ ಸದಸ್ಯರು ಸೇರಿದರು. ಅಂದಿನಿಂದ ಆಯೋಗವು ನಿಧಾನವಾಗಿ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿತು. 1997 ರಲ್ಲಿ ಆಯೋಗದ ಅಧ್ಯಕ್ಷರಾಗಿ ಪ್ರೊ.ರವಿವರ್ಮಾ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ಬಳಿಕ ಮತ್ತೆ ವಿಶ್ವಾಸ ವೃದ್ಧಿಸುವ ಕೆಲಸಗಳು ಆದವು. ಪ್ರಬಲ ರಾಜಕೀಯ ಒತ್ತಡಗಳ ನಡುವೆ ಆಯೋಗವು ಹಿಂದುಳಿದವರ ಕಲ್ಯಾಣಕ್ಕಾಗಿ ಶ್ರಮಿಸುವ ಜತೆಗೆ ವೃತ್ತಿಪರ ಶಿಕ್ಷಣಕ್ಕಾಗಿ ಅಸ್ತಿತ್ವದಲ್ಲಿದ್ದ ಮೀಸಲಾತಿ ಹಾಗೂ ಕೆನೆಪದರ ನೀತಿಯನ್ನು ಪೂರ್ವಾನ್ವಯವಾಗಿ ನೇಮಕಾತಿಗಳಿಗೆ ಅನ್ವಯವಾಗುವಂತೆ ವರದಿಯಲ್ಲಿ ಶಿಫಾರಸು ಮಾಡಿದ್ದರು.
ಒಬಿಸಿ ಪಟ್ಟಿಗೆ ಅರಸು ಜಾತಿ ಸೇರ್ಪಡೆ
ರಾಜ್ಯದಲ್ಲಿ ಸುದೀರ್ಘ ಅವಧಿಯವರೆಗೆ ಮುಖ್ಯಮಂತ್ರಿಯಾಗಿ, ಸಮಾಜ ಸುಧಾರಕರು ಎನಿಸಿದ್ದ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ ಸಾಮಾಜಿಕವಾಗಿ ಮೇಲೆತ್ತಲು ಶ್ರಮಿಸಿದ್ದರು. ಇದಕ್ಕೆ ಎಲ್.ಜಿ.ಹಾವನೂರರು ಹೆಗಲಾಗಿ ಕಾರ್ಯ ನಿರ್ವಹಿಸಿದರು. ಅರಸು ಅವರು ಅಂದು ಹಾವನೂರ್ ಆಯೋಗದ ವರದಿಯಲ್ಲೂ ತಮ್ಮ ಸಮುದಾಯವನ್ನು ಮೀಸಲಾತಿಯಿಂದಲೇ ದೂರ ಇಟ್ಟಿದ್ದರು. ಸ್ವಜಾತಿ ಪ್ರೇಮ ತೋರಿರಲಿಲ್ಲ. 2007 ರಿಂದ 2010 ರವರೆಗೆ ಆಯೋಗದ ಅಧ್ಯಕ್ಷರಾಗಿದ್ದ ನನ್ನ ಅವಧಿಯಲ್ಲಿ ಅರಸು ಜಾತಿಯನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿ ಮೀಸಲಾತಿ ಸೌಲಭ್ಯ ಒದಗಿಸಿದ್ದೆ. ಶ್ರೇಷ್ಠ ಸಮಾಜವಾದಿ ರಾಜಕಾರಣಿ ಎಂದು ದ್ವಾರಕನಾಥ್ ಹೇಳಿದರು.
ಒಬಿಸಿ ಆಯೋಗದಲ್ಲಿ ʼರಾಜಕೀಯʼ
ಆಯೋಗಕ್ಕೆ ಎಚ್.ಕಾಂತರಾಜು ಅಧ್ಯಕ್ಷರಾಗಿ ಬಂದು, ಸಮೀಕ್ಷೆ ಕೈಗೊಂಡರು. ಆದರೆ, ಸಮಾಜವಾದಿ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರು ವರದಿ ಸ್ವೀಕರಿಸಲಿಲ್ಲ. ಬರೀ ಹೇಳಿಕೆಗಳಲ್ಲಷ್ಟೇ ವರದಿ ಸ್ವೀಕಾರದ ಮಾತುಗಳನ್ನಾಡಿದರು. ಮೇಲ್ವರ್ಗದವರ ಒತ್ತಡಕ್ಕೆ ಮಣಿದು ವರದಿ ಸ್ವೀಕರಿಸಲಿಲ್ಲ. ಜಯಪ್ರಕಾಶ್ ಹೆಗಡೆ ನೇತೃತ್ವದಲ್ಲಿ ವರದಿ ಪರಿಷ್ಕರಿಸಿದರೂ ಅದನ್ನೂ ತೆಗೆದುಕೊಳ್ಳಲು ಮುಂದಾಗಿಲ್ಲ. ಅರಸು ಅವಧಿಯಲ್ಲೂ ಮೇಲ್ವರ್ಗದವರ ದಬ್ಬಾಳಿಕೆ ಜೋರಾಗಿತ್ತು. ಆದರೆ, ಅರಸು ಅವರು ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಸಿದ್ದರಾಮಯ್ಯ ಅವರಿಗೆ ಜನರು ಅಹಿಂದ ನಾಯಕನ ಪಟ್ಟ ಕಟ್ಟಿದ್ದರು. ಆದರೆ, ಅವರು ಆಯೋಗದ ಮೂಲಕ ಧ್ಯೇಯಗಳನ್ನೇ ಗಾಳಿ ತೂರಿ, ರಾಜಕೀಯಕ್ಕೆ ಬಳಸಿಕೊಂಡರು ಎಂದು ದ್ವಾರಕಾನಾಥ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ] ಅವರು ಒಕ್ಕಲಿಗರು ಹಾಗೂ ಲಿಂಗಾಯತರ ವಿರೋಧಕ್ಕೆ ಮಣಿದು ಕಾಂತರಾಜು ಹಾಘೂ ಜಯಪ್ರಕಾಶ್ ಹೆಗಡೆ ವರದಿಯನ್ನೇ ಮೂಲೆಗುಂಪು ಮಾಡಿದರು. ಇದರಿಂದ ಹಿಂದುಳಿದ ವರ್ಗಗಳ ಆಯೋಗ ವಿಶ್ವಾಸ ಕಳೆದುಕೊಂಡಿತು ಎಂದು ಬೇಸರ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ದಾಖಲೆಗಷ್ಟೇ ಅರಸು ಅವರ ಸುದೀರ್ಘ ಸಿಎಂ ದಾಖಲೆ ಮುರಿಯಲು ಹೊರಟಿದ್ದಾರೆ. ಆದರೆ, ಅರಸು ಅವರ ಮೌಲ್ಯಗಳನ್ನು ಪಾಲಿಸಿಲ್ಲ. 197 ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕಾಗಿದ್ದ ಸಿದ್ದರಾಮಯ್ಯ ಅವರು ಸ್ವಜಾತಿಯನ್ನು 2ಎ ನಿಂದ ಪ್ರವರ್ಗ-1ಕ್ಕೆ ತಂದರು. ಈಗ ಪರಿಶಿಷ್ಟ ಪಂಗಡದ ಮೀಸಲಾತಿಗೆ ಸೇರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದು ಸಾಧನೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.