ಲೋಕಸಭೆ ಚುನಾವಣೆ: ಬಿಜೆಪಿ ಮೊದಲ ಪಟ್ಟಿಗೆ ಸಿದ್ಧತೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತಡರಾತ್ರಿ ಸಭೆ;

Update: 2024-03-01 09:38 GMT
ಬಿಜೆಪಿ

ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯು ಗುರುವಾರ ತಡರಾತ್ರಿಯಿಂದ ಶುಕ್ರವಾರದ ಮುಂಜಾನೆವರೆಗೆ ಸಭೆ ನಡೆಸಿದೆ.

ನವದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಗುರುವಾರ ರಾತ್ರಿ 10.30ಕ್ಕೆ ಪ್ರಾರಂಭವಾದ ಸಭೆಯು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದು, ಸಭೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರು ಭಾಗವಹಿ ಸಿದ್ದರು. ಬಿಜೆಪಿಯು 543 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲು ಸಿದ್ಧತೆ ನಡೆಸುತ್ತಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗುಜರಾತ್‌ನ ಭೂಪೇಂದ್ರ ಪಟೇಲ್, ಮಧ್ಯಪ್ರದೇಶದ ಮೋಹನ್ ಯಾದವ್, ಛತ್ತೀಸ್‌ಗಢದ ವಿಷ್ಣು ದೇವ್ ಸಾಯಿ, ಉತ್ತರಾಖಂಡದ ಪುಷ್ಕರ್ ಸಿಂಗ್ ಧಾಮಿ ಮತ್ತು ಗೋವಾದ ಪ್ರಮೋದ್ ಸಾವಂತ್ ಸೇರಿದಂತೆ ವಿವಿಧ ರಾಜ್ಯಗಳ ಬಿಜೆಪಿ ನಾಯಕರು ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರಾಜಸ್ಥಾನ ಉಪಮುಖ್ಯಮಂತ್ರಿ ದಿಯಾ ಕುಮಾರಿ ಕೂಡ ಸಭೆಯಲ್ಲಿ ಹಾಜರಿದ್ದರು.

ಲೋಕಸಭೆ ಚುನಾವಣೆಯು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಆಯಾ ರಾಜ್ಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ರಾಜ್ಯದ ನಾಯಕರು ಸಿಇಸಿ ಸಭೆಯಲ್ಲಿ ಭಾಗವಹಿಸುತ್ತಾರೆ.

2024ರ ಲೋಕಸಭೆ ಚುನಾವಣೆಯನ್ನು ಬಿಜೆಪಿಯು 370ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಹಾಗೂ ಎನ್‌ಡಿಎಯಿಂದ 400ಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ.

ಬಿಜೆಪಿಯು ಲೋಕಸಭಾ ಚುನಾವಣೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುತ್ತಿದೆ. ಹಿರಿಯರ ಹೆಸರನ್ನು ಕೈಬಿಡುತ್ತದೆಯೇ ಅಥವಾ ಹೊಸ ಪ್ರಯೋಗ ಮಾಡಲಿದೆಯೇ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.    

Tags:    

Similar News