ಬಿಜೆಪಿಗೆ ದುಬಾರಿಯಾಯ್ತೆ ಕುಪೇಂದ್ರ ರೆಡ್ಡಿ ದಾಳ?

ಜೆಡಿಎಸ್‌ ಮತ್ತು ಬಿಜೆಪಿಯ ರಾಜ್ಯ ನಾಯಕರು ಆಡಳಿತರೂಢ ಕಾಂಗ್ರೆಸ್‌ಗೆ ಟಕ್ಕರ್‌ ಕೊಡಲು ಹೂಡಿದ ತಂತ್ರಗಾರಿಕೆ ಕೊನೆಗೇ ಅವರಿಗೇ ತಿರುಗುಬಾಣವಾಗಿದೆ. ಆ ಮೂಲಕ ರಾಜ್ಯಸಭಾ ಚುನಾವಣೆ ನಿರೀಕ್ಷೆಯಂತೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಪಲ್ಲಟಗಳಿಗೆ ಸಾಕ್ಷಿಯಾಗಿದೆ.

Update: 2024-02-27 11:37 GMT
Click the Play button to listen to article

ರಾಜ್ಯಸಭಾ ಚುನಾವಣೆ ನಿರೀಕ್ಷೆಯಂತೆ ರಾಜ್ಯ ರಾಜಕಾರಣದ ಮಹತ್ವದ ಬದಲಾವಣೆಗಳಿಗೆ ಕಾರಣವಾಗಿದೆ.

ಈ ಮೊದಲು ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ವಿರುದ್ಧ ಸೋಲು ಕಾಣುವ ಮೂಲಕ ಮೊದಲ ಮುಖಭಂಗ ಎದುರಿಸಿದ್ದ ಬಿಜೆಪಿ- ಜೆಡಿಎಸ್‌ ಮೈತ್ರಿಕೂಟ, ಇದೀಗ ರಾಜ್ಯಸಭಾ ಚುನಾವಣೆಯಲ್ಲಿ ತನ್ನ ಹೆಚ್ಚುವರಿ ಅಭ್ಯರ್ಥಿಯ ಸೋಲು ಮತ್ತು ಇಬ್ಬರು ಶಾಸಕರ ಅಡ್ಡಮತದಾನದ ಮೂಲಕ ಮತ್ತೊಮ್ಮೆ ಮುಜುಗರಕ್ಕೀಡಾಗಿದೆ.

ರಾಜ್ಯದಿಂದ ಶಾಸಕರ ಒಟ್ಟು ಬಲದ ಲೆಕ್ಕಾಚಾರದಲ್ಲಿ ಆಯ್ಕೆಗೆ ಅವಕಾಶವಿದ್ದು ನಾಲ್ವರು ರಾಜ್ಯಸಭಾ ಸದಸ್ಯರ ಬದಲಿಗೆ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಹೆಚ್ಚುವರಿಯಾಗಿ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ಕಾಂಗ್ರೆಸ್‌ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ತನ್ನ ಶಾಸಕರು ಮತ್ತು ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ನಿರಾಯಾಸವಾಗಿ ಗೆಲ್ಲುವ ವಿಶ್ವಾಸದಲ್ಲಿತ್ತು. ಬಿಜೆಪಿ ಕೂಡ ತನ್ನ ಶಾಸಕರ ಬಲದ ಮೇಲೆ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅವಕಾಶವಿತ್ತು. ಆ ಅವಕಾಶ ಬಳಸಿಕೊಂಡು ಒಬ್ಬರನ್ನು ಕಣಕ್ಕಿಳಿಸಿತ್ತು. ಆದರೆ, ಅದರ ಮಿತ್ರ ಪಕ್ಷ ಜೆಡಿಎಸ್‌ ತನ್ನ ಕೇವಲ 19 ಶಾಸಕರ ಮತಗಳ ಜೊತೆಗೆ ಬಿಜೆಪಿ ಹೆಚ್ಚುವರಿ ಮತ ಮತ್ತು ಕಾಂಗ್ರೆಸ್ಸಿನ ಅಡ್ಡಮತ ಪಡೆಯುವ ಲೆಕ್ಕಾಚಾರದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸಿತ್ತು.

ತಿರುಗುಬಾಣವಾದ ಆತ್ಮಸಾಕ್ಷಿಯ ಮತ

ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಅವರು, ತಮ್ಮ ಅಭ್ಯರ್ಥಿಗೆ ಕೊರತೆ ಬೀಳುವ ಐದು ಮತಗಳನ್ನು ಪಕ್ಷೇತರರು ಮತ್ತು ಕಾಂಗ್ರೆಸ್‌ ಅಡ್ಡಮತಗಳ ಮೂಲದಿಂದ ಪಡೆಯುವ ವಿಶ್ವಾಸದಲ್ಲಿದ್ದರು. ಅದೇ ವಿಶ್ವಾಸದಲ್ಲೇ ಅವರು ತಮ್ಮ ಅಭ್ಯರ್ಥಿಗೆ ಆತ್ಮಸಾಕ್ಷಿಯ ಮತ ಹಾಕುವಂತೆ ಕಾಂಗ್ರೆಸ್‌ ಶಾಸಕರನ್ನು ಉದ್ದೇಶಿಸಿ ಸಾಕಷ್ಟು ಬಾರಿ ಹೇಳಿಕೆ ನೀಡಿದ್ದರು.

ಬಿಜೆಪಿ ನಾಯಕರು ಕೂಡ ತಮ್ಮ ಮೈತ್ರಿಯ ಹೆಚ್ಚುವರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರು ಆತ್ಮವಿಶ್ವಾಸದ ಮತಗಳ ಮೇಲೆ ಗೆಲುವು ಪಡೆಯುತ್ತಾರೆ. ಅವರಿಗೆ ತಮ್ಮ ಪಕ್ಷದ ಅಡ್ಡಮತಗಳು ಹೋಗುತ್ತವೆ ಎಂಬುದು ಕಾಂಗ್ರೆಸ್ಸಿಗರಿಗೆ ಗೊತ್ತಿದೆ. ಹಾಗಾಗಿಯೇ ಅವರು ಶಾಸಕರನ್ನು ಹೋಟೆಲಿನಲ್ಲಿ ಕೂಡಿಟ್ಟುಕೊಂಡಿದ್ದಾರೆ. ಕಾಂಗ್ರೆಸ್‌ಗೆ ಅಡ್ಡಮತದಾನದ ಭಯ ಕಾಡುತ್ತಿದೆ ಎಂದಿದ್ದರು.

ನಿರೀಕ್ಷೆಯಂತೆ ಮತದಾನದಲ್ಲಿ ಅಡ್ಡಮತಗಳು ಚಲಾವಣೆಯಾಗಿವೆ. ಆದರೆ ಎನ್‌ ಡಿಎ ಮೈತ್ರಿಕೂಟದ ನಿರೀಕ್ಷೆಯಂತೆ ಆತ್ಮಸಾಕ್ಷಿಯ ಮತ ಅವರ ಅಭ್ಯರ್ಥಿಗೆ ಬೀಳುವ ಬದಲು ವಿರೋಧಿ ಪಾಳೆಯದ ಪಾಲಾಗಿವೆ! ಬಿಜೆಪಿಯ ಶಾಸಕರೇ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಅಡ್ಡಮತದಾನ ಮಾಡುವ ಮೂಲಕ ಮೈತ್ರಿಕೂಟದ ಆತ್ಮಸಾಕ್ಷಿಯ ಮತ ಕುರಿತ ಹೇಳಿಕೆ ಅವರಿಗೇ ತಿರುಗುಬಾಣವಾಗಿದೆ.

ಐದನೇ ಅಭ್ಯರ್ಥಿ ಕಣಕ್ಕಿಳಿಸಿದ್ದೇ ದುಬಾರಿಯಾಯ್ತೆ?

ಬಹುಶಃ ಐದನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕಿಳಿಸದೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯೊಬ್ಬರನ್ನೇ ಕಣಕ್ಕಿಳಿಸಿ ಸುಲಭವಾಗಿದ್ದ ಅವರ ಗೆಲುವಿಗೆ ಸೀಮಿತವಾಗಿ ಚುನಾವಣೆ ನಡೆಸಿದ್ದರೆ ಬಹುಶಃ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟಕ್ಕೆ ಮುಜುಗರ ತಪ್ಪುತ್ತಿತ್ತು. ಹಾಗೇ ಬಿಜೆಪಿ ಇಬ್ಬರು ಶಾಸಕರು ಪಕ್ಷದ ವಿಪ್‌ ಉಲ್ಲಂಘಿಸಿ ಬಂಡೇಳುವ ಸಂದರ್ಭ ಕೂಡ ಬಹುಶಃ ಎದುರಾಗುತ್ತಿರಲಿಲ್ಲವೇನೊ?

ಅಡ್ಡಮತದಾನ ಮಾಡಿರುವ ಬಿಜೆಪಿಯ ಶಾಸಕ ಎಸ್‌ ಟಿ ಸೋಮಶೇಖರ್‌ ಮತ್ತು ಮತದಾನಕ್ಕೆ ಗೈರಾಗಿರುವ ಶಿವರಾಂ ಹೆಬ್ಬಾರ್‌ ಇಬ್ಬರೂ ಪಕ್ಷದೊಂದಿಗೆ ಮುನಿಸಿಕೊಂಡಿದ್ದರು. ಈಗಾಗಲೇ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ಆ ಇಬ್ಬರೂ, ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದರು. ಆದರೆ, ರಾಜ್ಯಸಭಾ ಚುನಾವಣೆಯಲ್ಲಿ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಪ್ರತಿ ಮತವೂ ನಿರ್ಣಾಯಕ ಎಂಬ ಬಿಕ್ಕಟ್ಟಿನ ಸ್ಥಿತಿ ಉದ್ಭವಿಸದೇ ಹೋಗಿದ್ದರೆ, ಆ ಇಬ್ಬರ ಮತಗಳಿಗೆ ಹೆಚ್ಚಿನ ಮಹತ್ವ ಇರುತ್ತಿರಲಿಲ್ಲ ಮತ್ತು ವಿಪ್‌ ಜಾರಿ ಮಾಡಬೇಕಾದ ಅನಿವಾರ್ಯತೆ ಕೂಡ ಮಿತ್ರಪಕ್ಷಗಳಿಗೆ ಇರುತ್ತಿರಲಿಲ್ಲ.

ಇದೀಗ ವಿಪ್‌ ಜಾರಿ ಮಾಡಿದ್ದರೂ ಆ ಇಬ್ಬರು ಬಂಡಾಯ ಶಾಸಕರು ವಿಪ್‌ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಿ ಪಕ್ಷದಿಂದ ಹೊರ ಹಾಕುವುದು ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ. ಅಂತಹ ಕ್ರಮಕ್ಕೆ ಮುನ್ನೇ ಆ ಇಬ್ಬರು ಪಕ್ಷಕ್ಕೆ ರಾಜೀನಾಮೆ ನೀಡುವ ಸಾಧ್ಯತೆಗಳೂ ಇವೆ.

ಒಟ್ಟಾರೆ, ಜೆಡಿಎಸ್‌ ಮತ್ತು ಬಿಜೆಪಿಯ ರಾಜ್ಯ ನಾಯಕರು ಆಡಳಿತರೂಢ ಕಾಂಗ್ರೆಸ್‌ಗೆ ಟಕ್ಕರ್‌ ಕೊಡಲು ಹೂಡಿದ ತಂತ್ರಗಾರಿಕೆ ಕೊನೆಗೇ ಅವರಿಗೇ ತಿರುಗುಬಾಣವಾಗಿದೆ. ಆ ಮೂಲಕ ರಾಜ್ಯಸಭಾ ಚುನಾವಣೆ ನಿರೀಕ್ಷೆಯಂತೆ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಪಲ್ಲಟಗಳಿಗೆ ಸಾಕ್ಷಿಯಾಗಿದೆ.

Tags:    

Similar News