ರಾಜಣ್ಣ ವಜಾ: ಸಿದ್ದರಾಮಯ್ಯ ಬಣ ಕೆಂಡಾಮಂಡಲ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಮರ?

ಸಿಎಂ ಬಣದ ನಾಯಕರು ವಿಧಾನಮಂಡಲ ಅಧಿವೇಶನ ಮುಗಿದ ನಂತರ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷ ಸ್ಥಾನದ ಬದಲಾವಣೆಗೆ ನೇರವಾಗಿ ಪಟ್ಟು ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ.;

Update: 2025-08-12 15:12 GMT

ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವ ಕಾಂಗ್ರೆಸ್ ಹೈಕಮಾಂಡ್​​ನ ನಿರ್ಧಾರವು ರಾಜ್ಯ ರಾಜಕೀಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದೆ. ಈ ದಿಢೀರ್ ಬೆಳವಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭಾರಿ ಇಕ್ಕಟ್ಟನ್ನು ತಂದೊಡ್ಡಿದೆ ಎನ್ನಲಾಗಿದ್ದು, ಸಿಎಂ ಆಪ್ತ ವಲಯದಲ್ಲಿ ಹೈಕಮಾಂಡ್​ನ ಈ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅದಕ್ಕಿಂತಲೂ ಹೆಚ್ಷಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ರಾಜಣ್ಣ ಅವರ ವಜಾ ನಿರ್ಧಾರವು ಸಿದ್ದರಾಮಯ್ಯ ಅವರ ನಾಯಕತ್ವದ ಮೇಲೆ ಪರಿಣಾಮ ಬೀರಿದೆ. ಸಾಮಾನ್ಯವಾಗಿ, ಸಂಪುಟದ ಸದಸ್ಯರ ಆಯ್ಕೆ ಮತ್ತು ವಜಾದಲ್ಲಿ ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಇರುತ್ತದೆ. ಆದರೆ, ಹೈಕಮಾಂಡ್​ನ ಈ ಹಸ್ತಕ್ಷೇಪವು ಮುಖ್ಯಮಂತ್ರಿಯವರ ಅಧಿಕಾರವನ್ನು ದುರ್ಬಲಗೊಳಿಸಿದಂತೆ ಕಾಣುತ್ತಿದೆ. ಈ ಕಾರಣಕ್ಕಾಗಿ, ಸಿದ್ದರಾಮಯ್ಯ ಬಣದೊಳಗೆ ತೀವ್ರ ಅಸಮಾಧಾನ ಮನೆಮಾಡಿದೆ.

ರಾಜಣ್ಣ ಅವರ ವಜಾವನ್ನು ಪಕ್ಷದೊಳಗಿನ ಅಧಿಕಾರ ಸಮತೋಲನದ ಮೇಲೆ ಪರಿಣಾಮ ಬೀರುವ ಬೆಳವಣಿಗೆ ಎಂದು ಸಿಎಂ ಬಣ ಪರಿಗಣಿಸಿದೆ. ಇದರ ಪರಿಣಾಮವಾಗಿ, ಅವರ ಬೆಂಬಲಿಗರು ವಿಧಾನಮಂಡಲ ಅಧಿವೇಶನ ಮುಗಿದ ನಂತರ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷ ಸ್ಥಾನದ ಬದಲಾವಣೆಗೆ ನೇರವಾಗಿ ಪಟ್ಟು ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದು ಪಕ್ಷದೊಳಗಿನ ಅಧಿಕಾರದ ಹಂಚಿಕೆ ಮತ್ತು ನಿಯಂತ್ರಣದ ಹೋರಾಟದ ಭಾಗವಾಗಿರಲಿದೆ.

ಡಿಕೆಶಿ ಜೊತೆಗಿನ ಶೀತಲ ಸಮರ 

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆ.ಎನ್. ರಾಜಣ್ಣ ನಡುವಿನ ಶೀತಲ ಸಮರವು ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಬಹಳ ಹಿಂದಿನಿಂದಲೂ ಇರುವ ಸಂಗತಿ. ಈ ಇಬ್ಬರೂ ನಾಯಕರು ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದು, ಪರಸ್ಪರರ ವಿರುದ್ಧ ಸೂಕ್ಷ್ಮ ರಾಜಕೀಯ ನಡೆಸುವುದು ಗುಟ್ಟಾಗಿ ಇರಲಿಲ್ಲ. ಇದೀಗ ರಾಜಣ್ಣ ಅವರ ವಜಾವು ಡಿ.ಕೆ. ಶಿವಕುಮಾರ್ ಬಣಕ್ಕೆ ಅನುಕೂಲಕರವಾಗಿ ಪರಿಣಮಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ರಾಜಕೀಯದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಸಹಜವಾದರೂ, ರಾಜಣ್ಣ ಅವರ ಪ್ರಕರಣದಲ್ಲಿ ಇದು ಹೈಕಮಾಂಡ್​ನ ನೇರ ಹಸ್ತಕ್ಷೇಪಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ರಾಜಣ್ಣ ವಜಾದ ಹಿಂದೆ ಕೆಲವರು ಹೈಕಮಾಂಡ್​ಗೆ ವಿಶೇಷವಾಗಿ ರಾಹುಲ್ ಗಾಂಧಿಗೆ, ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಭಾವನೆ ಬಲವಾಗಿದೆ.

ಸಿದ್ದರಾಮಯ್ಯ ಬಣದ ಅಸಮಾಧಾನ, ಮುಂದಿನ ನಡೆ ಏನು?

ಈ ಬೆಳವಣಿಗೆ ಪಕ್ಷದೊಳಗಿನ ಅಧಿಕಾರದ ಕೇಂದ್ರಗಳನ್ನು ಬದಲಾಯಿಸುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಗೆ ಸಿದ್ದರಾಮಯ್ಯ ಬಣದ ಒತ್ತಾಯವು, ಡಿ.ಕೆ. ಶಿವಕುಮಾರ್ ಅವರ ಹಿಡಿತವನ್ನು ಸಡಿಲಿಸುವ ಪ್ರಯತ್ನದ ಭಾಗವಾಗಿರಬಹುದು. ರಾಜಣ್ಣ ಅವರು ಸ್ವತಃ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಪರಿಸ್ಥಿತಿಯ ವಾಸ್ತವಾಂಶವನ್ನು ವಿವರಿಸಲು ನಿರ್ಧರಿಸಿರುವುದು, ಈ ಆಂತರಿಕ ರಾಜಕೀಯ ಬಿಕ್ಕಟ್ಟನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಮತ್ತಷ್ಟು ಅನಿರೀಕ್ಷಿತ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ.  

Tags:    

Similar News