ಆರ್‌ಟಿಐ ದುರುಪಯೋಗ ತಡೆಗೆ ಕಠಿಣ ಕ್ರಮ; ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾಹಿತಿ
ಅಧಿಕಾರಿಗಳು, ಗುತ್ತಿಗೆದಾರರನ್ನು ಬ್ಲಾಕ್‌ಮೇಲ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಆರ್‌ಟಿಐ ಅಡಿ ಮಾಹಿತಿ ಕೇಳುವವರ ಮೇಲೆ ತನಿಖೆ ನಡೆಸಿ, ದುರುಪಯೋಗ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಯತ್ನಾಳ್ ಒತ್ತಾಯಿಸಿದರು.;
ಆರ್‌ಟಿಐ ಕಾಯ್ದೆ ದುರುಪಯೋಗ ಮಾಡಿಕೊಳ್ಳುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ. ಈಗಾಗಲೇ ರಾಜ್ಯದಲ್ಲಿ 26 ಆರ್‌ಟಿಐ ಕಾರ್ಯಕರ್ತರನ್ನು ಬ್ಲಾಕ್‌ಲಿಸ್ಟ್ ಗೆ ಸೇರಿಸಲಾಗಿದೆ. ಆರ್‌ಐಟಿ ಅರ್ಜಿ ಹೆಸರಿನಲ್ಲಿ ಅಧಿಕಾರಿಗಳಿಗೆ ಯಾರಾದರೂ ತೊಂದರೆ ನೀಡಿದರೆ ಅಂತವರು ದೂರು ಕೊಡಬಹುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಮಾಹಿತಿ ಹಕ್ಕು ಕಾಯ್ದೆ ದುರುಪಯೋಗದ ಕುರಿತು ಶಾಸಕ ಮಹಾಂತೇಶ್ ಕೌಜಲಗಿ ಅವರ ಪ್ರಸ್ತಾಪಕ್ಕೆ ಎಚ್.ಕೆ. ಪಾಟೀಲ್ ಉತ್ತರ ನೀಡಿದರು.
ಆರ್‌ಟಿಐ ಕಾಯ್ದೆ ದುರುಪಯೋಗವಾಗ ತಡೆಗೆ ಸರ್ಕಾರ ಆಲೋಚನೆ ಮಾಡಲಿದೆ ಎಂದು ಭರವಸೆ ನೀಡಿದರು. ಪ್ರಸಕ್ತ ದಿನಗಳಲ್ಲಿ ಆರ್‌ಟಿಐ ಕಾಯ್ದೆ ದುರುಪಯೋಗಪಡಿಸಿಕೊಂಡು ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಇದು ಸರ್ಕಾರದ ಗಮನಕ್ಕೆ ಇದೆಯೇ? ಎಂದು ಮಹಾಂತೇಶ್ ಕೌಜಲಗಿ ಪ್ರಶ್ನಿಸಿದ್ದರು.
ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ಸುನಿಲ್ ಕುಮಾರ್ ಅವರು, ಸಾರ್ವಜನಿಕ ಹಿತ ಬದಲು ಸ್ವಾರ್ಥಕ್ಕಾಗಿ ಆರ್‌ಟಿಐ ಕಾಯ್ದೆ ದುರ್ಬಳಕೆ ಆಗುತ್ತಿದೆ. ಒಬ್ಬ ವ್ಯಕ್ತಿ ತನ್ನ ಉದ್ಯಮಕ್ಕಾಗಿ ಪದೇ ಪದೇ ಆರ್‌ಟಿಐ ಅರ್ಜಿಗಳನ್ನು ಹಾಕಿ ಸರ್ಕಾರಿ ಕೆಲಸಕ್ಕೆ ಅಡಚಣೆ ಮಾಡುತ್ತಿದ್ದಾನೆ. ಇದನ್ನು ತಡೆಗಟ್ಟಲು ಪ್ರಶ್ನೆಗಳ ಮಿತಿಯನ್ನು ನಿಗದಿಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕು ಎಂದರು.
ಯತ್ನಾಳ್ ಮಾತನಾಡಿ, ಆರ್‌ಟಿಐ ಕೆಲವರಿಗೆ ದೊಡ್ಡ ಉದ್ಯೋಗವಾಗಿದೆ. ಅಧಿಕಾರಿಗಳು, ಗುತ್ತಿಗೆದಾರರನ್ನು ಬ್ಲಾಕ್‌ಮೇಲ್ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಆರ್‌ಟಿಐ ಅಡಿ ಮಾಹಿತಿ ಕೇಳುವವರ ಮೇಲೆ ತನಿಖೆ ನಡೆಸಿ, ದುರುಪಯೋಗ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.
ಸುರೇಶ್ ಕುಮಾರ್ ಮಾತನಾಡಿ, ಆರ್‌ಟಿಐ ಅರ್ಜಿಯನ್ನು ಸಲ್ಲಿಸಲು ಬಲವಾದ ಕಾರಣ ಇರಬೇಕು. ಇದಕ್ಕಾಗಿ ಸರ್ಕಾರ ನಿಯಮ ರೂಪಿಸುವ ಬಗ್ಗೆ ಚಿಂತಿಸಬೇಕು ಎಂದರು.