Assembly Session | ಸಂಪುಟದಿಂದ ಸಚಿವ ರಾಜಣ್ಣ ವಜಾ; ಸಿಎಂ ಸ್ಪಷ್ಟನೆಗೆ ಪ್ರತಿಪಕ್ಷಗಳ ಆಗ್ರಹ

ಮತಗಳವು ಬಗ್ಗೆ ಮಾತನಾಡಿದರೆಂಬುದು ಕಾರಣವಾ, ಭ್ರಷ್ಟಾಚಾರವಾ ಅಥವಾ ಹನಿಟ್ರ್ಯಾಪ್ ಪ್ರಕರಣನಾ ಎಂದು ಪ್ರಶ್ನಿಸಲು ಬಿಜೆಪಿ ಸಜ್ಜಾಗಿದೆ.;

Update: 2025-08-12 03:40 GMT

ಸಂಪುಟದಿಂದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆ ಮೇರೆಗೆ ವಜಾಗೊಳಿಸಿರುವ ವಿಚಾರ ಕಾಂಗ್ರೆಸ್ ಪಕ್ಷದ ಮುಖಂಡರು, ನಾಯಕರಲ್ಲಿ ಆತಂಕ ಮೂಡಿಸಿದೆ.

ವಿಧಾನಸಭೆ ಮುಂಗಾರು ಅಧಿವೇಶನದ ಆರಂಭದ ದಿನವೇ ನಡೆದ ಬೆಳವಣಿಗೆ ವಿಪಕ್ಷಗಳನ್ನೂ ಅಚ್ಚರಿಗೆ ದೂಡಿದೆ. ಇದೇ ವಿಚಾರದ ಬಗ್ಗೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಸ್ಪಷ್ಟನೆ ಕೋರಲು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರು ಸಿದ್ಧರಾಗಿದ್ದಾರೆ.

ಮಹದೇವಪುರ ಮತಗಳವು ಕುರಿತಂತೆ ಮಾತನಾಡಿದರೆಂಬ ಕಾರಣದಿಂದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವ ವಿಚಾರ ಮೇಲ್ನೋಟಕ್ಕೆ ಕಾಣುತ್ತಿದ್ದು,ಈ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿದೆ. ರಾಜಣ್ಣ ಅವರನ್ನು ಯಾಕೆ ಸಚಿವ ಸ್ಥಾನದಿಂದ ವಜಾಗೊಳಿಸಲು ಕಾರಣ ನೀಡುವಂತೆ ಪಟ್ಟು ಹಿಡಿಯಲಿವೆ ಎಂದು ತಿಳಿದುಬಂದಿದೆ.

ಮತಗಳವು ಬಗ್ಗೆ ಮಾತನಾಡಿದರೆಂಬುದು ಕಾರಣವಾ,  ಭ್ರಷ್ಟಾಚಾರವಾ ಅಥವಾ ಹನಿಟ್ರ್ಯಾಪ್ ಪ್ರಕರಣನಾ ಎಂದು ಪ್ರಶ್ನಿಸಲು ಬಿಜೆಪಿ ಸಜ್ಜಾಗಿದೆ.

ಪರಿಶಿಷ್ಟ ಜಾತಿಯ ಕಾರ್ಡ್ ಪ್ಲೇ ಮಾಡಲಿರುವ ಬಿಜೆಪಿ

ಸಚಿವ ಸ್ಥಾನದಿಂದ ವಜಾ ಗೊಳಿಸುವುದು ಸಿಎಂಗೆ ಪರಮಾಧಿಕಾರ ಇದ್ದರೂ ರಾಜಣ್ಣ ವಿಚಾರದಲ್ಲಿ ಕಾರಣ ನೀಡಲು ಕಾಂಗ್ರೆಸ್ ಗೆ ಸಾಧ್ಯವಾಗಲ್ಲ.ಇದು ಪ್ರತಿಪಕ್ಷಗಳಿಗೆ ಕಾಂಗ್ರೆಸ್ ನ್ನು ಮುಜುಗರಕ್ಕೆ ಸಿಲುಕಿಸಲು ಹೊಸ ಅಸ್ತ್ರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ. 

ಸೋಮವಾರ ಸ್ಪೀಕರ್ ಅವರು ರಾಜಣ್ಣ ರಾಜೀನಾಮೆ ಕುರಿತಂತೆ ಕೇಳಿಬಂದ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದರು. ಹಾಗಾಗಿ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೆ.ಎನ್‌. ರಾಜಣ್ಣ ಅವರು ಸಚಿವ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ ಅವರಿಗೆ ನೀಡಿದ್ದರು. ಆದರೆ, ಸಂಜೆಯಾಗುತ್ತಿದ್ದಂತೆ ಕೆ.ಎನ್‌. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಲಾಗಿದೆ ಎಂಬ ಪತ್ರವು ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ರವಾನೆಯಾಗಿತ್ತು. ರಾಜಣ್ಣ ರಾಜೀನಾಮೆ ನೀಡುವ ಮುನ್ನವೇ ಸರ್ಕಾರದ ಮುಖ್ಯಸ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಕ್ಕೆ ನಿರ್ಧರಿಸಿ ರಾಜಭವನಕ್ಕೆ ಮಾಹಿತಿ ನೀಡಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ರಾಜಣ್ಣ ಸ್ವಯಂ ಪ್ರೇರಿತವಾಗಿ ರಾಜೀನಾಮೆಗೆ ಮುಂದಾಗಿದ್ದರು ಎಂದು ಹೇಳಲಾಗಿದೆ.

'ಮಹದೇವಪುರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ಆರೋಪ ಮಾಡುವಾಗ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿತ್ತು' ಎಂಬ ರಾಜಣ್ಣ ಹೇಳಿಕೆಯು, ಮತಗಳ್ಳತನದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಇದು ಪತ್ರಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದ್ದರಿಂದ, ಹಾನಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಹೈಕಮಾಂಡ್, ರಾಜಣ್ಣ ಅವರನ್ನು ಸರ್ಕಾರದಿಂದ ತೆಗೆದುಹಾಕುವ ಕಠಿಣ ತೀರ್ಮಾನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಗೊಳಿಸುವ ತೀರ್ಮಾನ ಕೈಗೊಂಡರು ಎನ್ನಲಾಗಿದೆ. 

Live Updates
2025-08-12 05:58 GMT

ಜಾಹೀರಾತು ಮೂಲಕ ರಮ್ಮಿ ಸರ್ಕಲ್ ಆಡಿ ಎಂದು ಕೆಲವರು ಪ್ರಚೋದನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ ಹಾಕಬೇಕು ಎಂದು ಶಾಸಕ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ. ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ ಹಾಕದಿದ್ದರೆ ಯುವ ಸಮೂಹ ಹಾಳಾಗುತ್ತದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಗೃಹ ಸಚಿವರ ಗಮನ ಸೆಳೆದರು.

ಈ ಪ್ರಶ್ನೆಗೆ ಉತ್ತರಿಸಿದ ಡಾ. ಜಿ. ಪರಮೇಶ್ವರ್‌, ಸರ್ಕಾರ ಆನ್‌ಲೈನ್ ಗೇಮಿಂಗ್ ನಿರ್ಬಂಧಿಸಿ ತಿದ್ದುಪಡಿ ಕಾಯ್ದೆ ತಂದಿತ್ತು. ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ ಕಾಯ್ದೆಯನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್‌ ಮೊಹಂತಿ ನೇತೃತ್ವದಲ್ಲೂ ಸಮಿತಿ‌ ಮಾಡಿದ್ದೇವೆ. ವರದಿ ಬಂದ ನಂತರ ಸುಪ್ರೀಂಕೋರ್ಟ್ ನಡೆ ನೋಡಿಕೊಂಡು ನಿರ್ಧಾರ ಕೈಗೊಳ್ಳತ್ತೇವೆ ಎಂದರು.

ಆನ್ಲೈನ್ ಗೇಮಿಂಗ್ ಬಗ್ಗೆ ಪಕ್ಷಾತೀತವಾಗಿ ಶಾಸಕರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಅರ್ಧಗಂಟೆಗೆಯ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್‌ ತಿಳಿಸಿದರು.

 

2025-08-12 05:21 GMT

ಕಲಾಪ ಆರಂಭವಾಗುತ್ತಲೇ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ವಿಷಯ ಪ್ರಸ್ತಾಪಿಸಿ, ಸಿಎಂ ಅವರಿಂದ ಉತ್ತರ ಕೋರಿದರು. ಕಾನೂನು ಸಚಿವ ಎಚ್‌.ಕೆ. ಪಾಟೀಲರು ಏನೂ ಆಗಿಯೇ ಇಲ್ಲಎಂದು ಹೇಳುತ್ತಿದ್ದಾರೆ. ಹಾಗಾದರೆ ಅಧಿವೇಶನ ನಡೆಯುವ ಸಂದರ್ಭದಲ್ಲೇ ಏಕಾಏಕಿ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದು ಏಕೆ?, ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

2025-08-12 04:45 GMT

ಸಿಎಂ ಪರಮಾಪ್ತ ಕೆ.ಎನ್‌. ರಾಜಣ್ಣ ಅವರನ್ನು ವಜಾ ಮಾಡಿರುವುದು ಸರಿಯಲ್ಲ, ಅವರ ಅಂತಹ ಘೋರ ಅಪರಾಧ ಏನು ಮಾಡಿದ್ದಾರೆ ಎಂದು ಜನ ಕೇಳುತ್ತಿದ್ದಾರೆ, ಇದಕ್ಕೆ ಉತ್ತರ ಕೊಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.  

ರಾಜಣ್ಣ ವಜಾ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಲ್ಲ, ಸದನದಲ್ಲಿ ಈ ಬಗ್ಗೆ ಚರ್ಚೆ ಆಗಬೇಕು. ರಾಹುಲ್ ಗಾಂಧಿಗೆ ಎಸ್ಟಿ ಜನಾಂಗದ ಮೇಲೆ ಇಷ್ಟೇನಾ ಪ್ರೀತಿ, ಸತ್ಯ ಮಾತನಾಡಿದ ರಾಜಣ್ಣ ವಜಾ ಮಾಡಲಾಗಿದೆ. ಇಂದು ಸದನದಲ್ಲಿ ನಾವು ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

2025-08-12 04:18 GMT

ರಾಜಣ್ಣ ಅವರನ್ನು ಸಂಪುಟದಿಂದ ಯಾಕೆ ವಜಾ‌ ಮಾಡಲಾಗಿದೆ ಎಂಬುದು ತಿಳಿದಿಲ್ಲ. ಸಿಎಂ ಹಾಗೂ ಡಿಸಿಎಂ ಅವರಿಗೆ ಗೊತ್ತಿರಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾಜಣ್ಣ ಅವರು ನನ್ನನ್ನು ಭೇಟಿ ಮಾಡಿ, ನಿಮಗೆ ಹೈಕಮಾಂಡ್ ಪರಿಚಯವಿದೆ, ಸಂಪುಟದಿಂದ ತೆಗೆದಿದ್ದು ಯಾಕೆ ಎಂದು ಕೇಳಿ ಎಂದರು. ಕೇಳುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದೆ. ಇದಕ್ಕೆ ಸಿಎಂ ಹಾಗೂ ಡಿಸಿಎಂ ಉತ್ತರಿಸಬೇಕು ಎಂದರು.

2025-08-12 03:53 GMT

ಸತ್ಯ ಹೇಳಿದ್ದಕ್ಕೆ  ಕಾಂಗ್ರೆಸ್ ಹಿರಿಯ ನಾಯಕನನ್ನು ಸಂಪುಟದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಕಿಡಿ ಕಾರಿದೆ.

ದಲಿತ ನಾಯಕರ ಏಳಿಗೆಯನ್ನು ಕಾಂಗ್ರೆಸ್‌ ಎಂದೂ ಸಹಿಸದು.! ದ್ರೋಹ, ವಂಚನೆ, ಅವಮಾನ, ರಾಜೀನಾಮೆಯೊಂದೇ ಶೋಷಿತರಿಗೆ ಕಾಂಗ್ರೆಸ್‌ ಕೊಟ್ಟಿರುವ ಬಹುಮಾನ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅರೋಪಿಸಿದೆ. ಅಲ್ಲದೇ ಕಾಂಗ್ರೆಸ್‌ನಲ್ಲಿ ಎಲ್ಲಿದೆ ನ್ಯಾಯ ಎಂದು ಪ್ರಶ್ನಿಸಿದೆ.

Tags:    

Similar News