
Assembly Session | ಕಾಲ್ತುಳಿತ ಪ್ರಕರಣ: ಸದನ ಸಮಿತಿ ರಚನೆಗೆ ಪ್ರತಿಪಕ್ಷ ಆಗ್ರಹ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಾರಣ. ಇನ್ನು ಮುಂದಾದರೂ ಇಂತಹ ಅವಗಢಗಳಿಗೆ ಆಸ್ಪದ ನೀಡದಂತೆ ಕಠಿಣ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅಶೋಕ್ ಆಗ್ರಹಿಸಿದರು.
ಸಂಪುಟದಿಂದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆ ಮೇರೆಗೆ ವಜಾಗೊಳಿಸಿರುವ ವಿಚಾರ ಕಾಂಗ್ರೆಸ್ ಪಕ್ಷದ ಮುಖಂಡರು, ನಾಯಕರಲ್ಲಿ ಆತಂಕ ಮೂಡಿಸಿದೆ.
ವಿಧಾನಸಭೆ ಮುಂಗಾರು ಅಧಿವೇಶನದ ಆರಂಭದ ದಿನವೇ ನಡೆದ ಬೆಳವಣಿಗೆ ವಿಪಕ್ಷಗಳನ್ನೂ ಅಚ್ಚರಿಗೆ ದೂಡಿದೆ. ಇದೇ ವಿಚಾರದ ಬಗ್ಗೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಸ್ಪಷ್ಟನೆ ಕೋರಲು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರು ಸಿದ್ಧರಾಗಿದ್ದಾರೆ.
ಮಹದೇವಪುರ ಮತಗಳವು ಕುರಿತಂತೆ ಮಾತನಾಡಿದರೆಂಬ ಕಾರಣದಿಂದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವ ವಿಚಾರ ಮೇಲ್ನೋಟಕ್ಕೆ ಕಾಣುತ್ತಿದ್ದು,ಈ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿದೆ. ರಾಜಣ್ಣ ಅವರನ್ನು ಯಾಕೆ ಸಚಿವ ಸ್ಥಾನದಿಂದ ವಜಾಗೊಳಿಸಲು ಕಾರಣ ನೀಡುವಂತೆ ಪಟ್ಟು ಹಿಡಿಯಲಿವೆ ಎಂದು ತಿಳಿದುಬಂದಿದೆ.
ಮತಗಳವು ಬಗ್ಗೆ ಮಾತನಾಡಿದರೆಂಬುದು ಕಾರಣವಾ, ಭ್ರಷ್ಟಾಚಾರವಾ ಅಥವಾ ಹನಿಟ್ರ್ಯಾಪ್ ಪ್ರಕರಣನಾ ಎಂದು ಪ್ರಶ್ನಿಸಲು ಬಿಜೆಪಿ ಸಜ್ಜಾಗಿದೆ.
ಪರಿಶಿಷ್ಟ ಜಾತಿಯ ಕಾರ್ಡ್ ಪ್ಲೇ ಮಾಡಲಿರುವ ಬಿಜೆಪಿ
ಸಚಿವ ಸ್ಥಾನದಿಂದ ವಜಾ ಗೊಳಿಸುವುದು ಸಿಎಂಗೆ ಪರಮಾಧಿಕಾರ ಇದ್ದರೂ ರಾಜಣ್ಣ ವಿಚಾರದಲ್ಲಿ ಕಾರಣ ನೀಡಲು ಕಾಂಗ್ರೆಸ್ ಗೆ ಸಾಧ್ಯವಾಗಲ್ಲ.ಇದು ಪ್ರತಿಪಕ್ಷಗಳಿಗೆ ಕಾಂಗ್ರೆಸ್ ನ್ನು ಮುಜುಗರಕ್ಕೆ ಸಿಲುಕಿಸಲು ಹೊಸ ಅಸ್ತ್ರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಸೋಮವಾರ ಸ್ಪೀಕರ್ ಅವರು ರಾಜಣ್ಣ ರಾಜೀನಾಮೆ ಕುರಿತಂತೆ ಕೇಳಿಬಂದ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದರು. ಹಾಗಾಗಿ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆ.ಎನ್. ರಾಜಣ್ಣ ಅವರು ಸಚಿವ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ ಅವರಿಗೆ ನೀಡಿದ್ದರು. ಆದರೆ, ಸಂಜೆಯಾಗುತ್ತಿದ್ದಂತೆ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಲಾಗಿದೆ ಎಂಬ ಪತ್ರವು ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ರವಾನೆಯಾಗಿತ್ತು. ರಾಜಣ್ಣ ರಾಜೀನಾಮೆ ನೀಡುವ ಮುನ್ನವೇ ಸರ್ಕಾರದ ಮುಖ್ಯಸ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಕ್ಕೆ ನಿರ್ಧರಿಸಿ ರಾಜಭವನಕ್ಕೆ ಮಾಹಿತಿ ನೀಡಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ರಾಜಣ್ಣ ಸ್ವಯಂ ಪ್ರೇರಿತವಾಗಿ ರಾಜೀನಾಮೆಗೆ ಮುಂದಾಗಿದ್ದರು ಎಂದು ಹೇಳಲಾಗಿದೆ.
'ಮಹದೇವಪುರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ಆರೋಪ ಮಾಡುವಾಗ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿತ್ತು' ಎಂಬ ರಾಜಣ್ಣ ಹೇಳಿಕೆಯು, ಮತಗಳ್ಳತನದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಇದು ಪತ್ರಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದ್ದರಿಂದ, ಹಾನಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಹೈಕಮಾಂಡ್, ರಾಜಣ್ಣ ಅವರನ್ನು ಸರ್ಕಾರದಿಂದ ತೆಗೆದುಹಾಕುವ ಕಠಿಣ ತೀರ್ಮಾನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಗೊಳಿಸುವ ತೀರ್ಮಾನ ಕೈಗೊಂಡರು ಎನ್ನಲಾಗಿದೆ.
Live Updates
- 12 Aug 2025 4:31 PM IST
ಕಾಲ್ತುಳಿತ ದುರಂತ: ನಿಯಮ ರೂಪಿಸಲು ಸದನ ಸಮಿತಿ ರಚಿಸುವಂತೆ ಆಗ್ರಹ
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಳಿ ನಡೆದ ಕಾಲ್ತುಳಿತ ದುರಂತ ಘಟನೆ ಮತ್ತೊಮ್ಮೆ ಮರುಕಳಿಸಬಾರದು. ಆದ್ದರಿಂದ ಸರ್ಕಾರ ಸದನ ಸಮಿತಿ ರಚಿಸಿ ನಿಯಮಾವಳಿ ರೂಪಿಸಬೇಕೆಂದು ಆರ್. ಅಶೋಕ್ ಆಗ್ರಹಿಸಿದರು.
ಘಟನೆಯ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ರಾಜೀನಾಮೆ ನೀಡಬೇಕು ಹಾಗೂ ಸಿಬಿಐ ತನಿಖೆ ನಡೆಸಬೇಕು ಎಂದರು.
- 12 Aug 2025 4:16 PM IST
ಸದನದಲ್ಲಿ ವ್ಯಾಕರಣ ಪಾಠ ಮಾಡಿ ಹಾಸ್ಯ ಚಟಾಕಿ ಹಾರಿಸಿದ ಸಿಎಂ ಸಿದ್ದರಾಮಯ್ಯ
ಸಿದ್ದ ಎಂದರೆ ಈಶ್ವರ, ರಾಮ ಎಂದರೆ ವಿಷ್ಣು, ಪರಮೇಶ್ವರ ಎಂದರೆ ಸವರ್ಣ ದೀರ್ಘಸಂಧಿ ಎಂದು ಸದನದಲ್ಲಿ ಸಿಎಂ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು. ವಿಧಾನಸಭೆಯಲ್ಲಿ ಸಿಎಂ ಮತ್ತೊಮ್ಮೆ ಕನ್ನಡ ವ್ಯಾಕರಣ ಪಾಠ ಮಾಡಿದರು.
ಸದನ ಆರಂಭ ಆಗುತ್ತಿದ್ದಂತೆ ಆಡಳಿತ ಪಕ್ಷದವರು ಯಾರೂ ಇಲ್ಲ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪರಮ, ಈಶ್ವರ ಇಲ್ಲಿ ಇದ್ದಾರೆ. ಇನ್ಯಾರು ಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದರು.
- 12 Aug 2025 4:04 PM IST
ಸಿಎಂ ಸಿದ್ದರಾಮಯ್ಯ ಮೊದಲಿನಂತೆ ಬಲಿಷ್ಠವಾಗಿಲ್ಲ: ಆರ್.ಅಶೋಕ್
2013 ರಿಂದ 18ರ ವರೆಗೆ ಇದ್ದಂತೆ ಸಿಎಂ ಸಿದ್ದರಾಮಯ್ಯ ಈಗ ಬಲಿಷ್ಠವಾಗಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ತಿಳಿಸಿದರು. ಕೆ.ಎನ್. ರಾಜಣ್ಣ ಅವರ ರಾಜೀನಾಮೆಯಿಂದ ತಾವು ಬೇಸರ ಆಗಿದ್ದೀರಿ ಎಂದು ಸಿಎಂ ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಟಾಂಗ್ ನೀಡಿದರು.
ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಯಾವಾಗಲೂ ಬೇಸರ ಆಗುವುದಿಲ್ಲ ಸಮಚಿತ್ತದಿಂದ ಇರುತ್ತೇನೆ ಎಂದು ತಿಳಿಸಿದರು.
- 12 Aug 2025 1:40 PM IST
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿಕ್ಕೆ ಹೊಣೆ ಯಾರು?
ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತಕ್ಕೆ ಸರ್ಕಾರವೇ ನೇರ ಕಾರಣ ಎಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ.
ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ವಿಜಯೋತ್ಸವ ಆಚರಿಸಲು ಅನುಮತಿ ನೀಡಿದ್ದು ಯಾರು ? ಪೊಲೀಸರ ಮೇಲೆ ಕಾರ್ಯಕ್ರಮಕ್ಕೆ ಅನುಮತಿ ನೀಡುವಂತೆ ಒತ್ತಡ ಹೇರಿದ್ದು ಯಾರು? ಕಾರ್ಯಕ್ರಮಕ್ಕೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿತ್ತೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
- 12 Aug 2025 1:08 PM IST
ಕೆ.ಎನ್. ರಾಜಣ್ಣ ರಾಜೀನಾಮೆ ಚರ್ಚೆ ಅನಾವಶ್ಯಕ
ಕೆ.ಎನ್. ರಾಜಣ್ಣನವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಪ್ರತಿಪಕ್ಷಗಳ ಆಗ್ರಹಿಸಿವೆ. ಈ ಕುರಿತು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಉತ್ತರಿಸಿದ್ದು, ರಾಜೀನಾಮೆ ನೋಟಿಫಿಕೇಶನ್ ಸದನದ ಗಮನಕ್ಕೆ ತರುತ್ತೇನೆ. ರಾಜೀನಾಮೆ ವಿಷಯಗಳ ಬಗ್ಗೆ ಸದನದಲ್ಲಿ ಉತ್ತರ ನೀಡಲು ಆಗುವುದಿಲ್ಲ ಎಂದರು.
ರಾಜ್ಯ ಸಭೆಯಲ್ಲೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ರಾಜೀನಾಮೆ ಕುರಿತು ಚರ್ಚೆ ಮಾಡಿರಲಿಲ್ಲ. ರಾಜೀನಾಮೆ ಚರ್ಚೆ ಅನಾವಶ್ಯಕ ಎಂದು ತಿಳಿಸಿದರು.
- 12 Aug 2025 12:58 PM IST
ಕೆಲವರು ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿದ್ದಾರೆ: ಸುನೀಲ್ ಕುಮಾರ್
ಕೆಲವು ಜನರು ಧರ್ಮಸ್ಥಳವನ್ನು ಟಾರ್ಗೆಟ್ ಮಾಡಿದ್ದಾರೆ. ಇದರಿಂದ ನಮ್ಮ ನಂಬಿಕೆಗೆ ಅಘಾತವಾಗಿದೆ ಎಂದು ವಿಧಾನಸಭೆಯ ಶೂನ್ಯವೇಳೆಯಲ್ಲಿ ಶಾಸಕ ಸುನೀಲ್ ಕುಮಾರ್ ತಿಳಿಸಿದರು.
ಈ ಕುರಿತು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ಪ್ರಕರಣದ ಕುರಿತು ಈಗಾಗಲೇ ಎಸ್‌ಐಟಿ ತನಿಖೆ ನಡೆಸುತ್ತಿದೆ. ವರದಿ ಬಂದ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದರು.
- 12 Aug 2025 11:56 AM IST
ಕರಾವಳಿಯಲ್ಲಿ ವಿಶೇಷ ಕಾರ್ಯಪಡೆ ಶಾಶ್ವತವಲ್ಲ
ಕರಾವಳಿಯಲ್ಲಿ ಶಾಂತಿ ಸ್ಥಾಪನೆಗಾಗಿ ಸರ್ಕಾರ ರಚಿಸಿರುವ ವಿಶೇಷ ಕಾರ್ಯಾಚರಣೆ ಪಡೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಎಲ್ಲರೂ ಶಾಂತಿ, ಸೌಹರ್ದತೆಯಿಂದ ಜೀವನ ನಡೆಸಬೇಕು ಎಂಬುದು ಸರ್ಕಾರದ ಆಶಯ. ಕರಾವಳಿಯಲ್ಲಿ ಸ್ಥಾಪಿಸಿರುವ ವಿಶೇಷ ಕಾರ್ಯಪಡೆ ಶಾಶ್ವತವಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
- 12 Aug 2025 11:28 AM IST
ಅನ್‌ಲೈನ್ ಗೇಮಿಂಗ್ ನಿಯಂತ್ರಿಸಲು ಪ್ರತಿಪಕ್ಷಗಳ ಆಗ್ರಹ, ಚರ್ಚೆಗೆ ಒಪ್ಪಿಗೆ
ಜಾಹೀರಾತು ಮೂಲಕ ರಮ್ಮಿ ಸರ್ಕಲ್ ಆಡಿ ಎಂದು ಕೆಲವರು ಪ್ರಚೋದನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ ಹಾಕಬೇಕು ಎಂದು ಶಾಸಕ ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ. ಆನ್‌ಲೈನ್ ಗೇಮಿಂಗ್‌ಗೆ ಕಡಿವಾಣ ಹಾಕದಿದ್ದರೆ ಯುವ ಸಮೂಹ ಹಾಳಾಗುತ್ತದೆ ಎಂದು ಪ್ರಶ್ನೋತ್ತರ ಕಲಾಪದಲ್ಲಿ ಗೃಹ ಸಚಿವರ ಗಮನ ಸೆಳೆದರು.
ಈ ಪ್ರಶ್ನೆಗೆ ಉತ್ತರಿಸಿದ ಡಾ. ಜಿ. ಪರಮೇಶ್ವರ್, ಸರ್ಕಾರ ಆನ್‌ಲೈನ್ ಗೇಮಿಂಗ್ ನಿರ್ಬಂಧಿಸಿ ತಿದ್ದುಪಡಿ ಕಾಯ್ದೆ ತಂದಿತ್ತು. ಆಲ್ ಇಂಡಿಯಾ ಗೇಮಿಂಗ್ ಫೆಡರೇಶನ್ ಕಾಯ್ದೆಯನ್ನು ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದಲ್ಲೂ ಸಮಿತಿ ಮಾಡಿದ್ದೇವೆ. ವರದಿ ಬಂದ ನಂತರ ಸುಪ್ರೀಂಕೋರ್ಟ್ ನಡೆ ನೋಡಿಕೊಂಡು ನಿರ್ಧಾರ ಕೈಗೊಳ್ಳತ್ತೇವೆ ಎಂದರು.
ಆನ್ಲೈನ್ ಗೇಮಿಂಗ್ ಬಗ್ಗೆ ಪಕ್ಷಾತೀತವಾಗಿ ಶಾಸಕರ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆ ಅರ್ಧಗಂಟೆಗೆಯ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು.
- 12 Aug 2025 10:51 AM IST
ರಾಜಣ್ಣ ವಜಾಗೆ ಸಿಎಂ ಸ್ಪಷ್ಟನೆ ನೀಡಲಿ ಎಂದ ಅಶೋಕ್
ಕಲಾಪ ಆರಂಭವಾಗುತ್ತಲೇ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ವಿಷಯ ಪ್ರಸ್ತಾಪಿಸಿ, ಸಿಎಂ ಅವರಿಂದ ಉತ್ತರ ಕೋರಿದರು. ಕಾನೂನು ಸಚಿವ ಎಚ್.ಕೆ. ಪಾಟೀಲರು ಏನೂ ಆಗಿಯೇ ಇಲ್ಲಎಂದು ಹೇಳುತ್ತಿದ್ದಾರೆ. ಹಾಗಾದರೆ ಅಧಿವೇಶನ ನಡೆಯುವ ಸಂದರ್ಭದಲ್ಲೇ ಏಕಾಏಕಿ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದು ಏಕೆ?, ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
- 12 Aug 2025 10:15 AM IST
ರಾಜಣ್ಣ ವಜಾ ಘೋರ ಅಪರಾಧ- ವಿಜಯೇಂದ್ರ
ಸಿಎಂ ಪರಮಾಪ್ತ ಕೆ.ಎನ್. ರಾಜಣ್ಣ ಅವರನ್ನು ವಜಾ ಮಾಡಿರುವುದು ಸರಿಯಲ್ಲ, ಅವರ ಅಂತಹ ಘೋರ ಅಪರಾಧ ಏನು ಮಾಡಿದ್ದಾರೆ ಎಂದು ಜನ ಕೇಳುತ್ತಿದ್ದಾರೆ, ಇದಕ್ಕೆ ಉತ್ತರ ಕೊಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ರಾಜಣ್ಣ ವಜಾ ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರವಲ್ಲ, ಸದನದಲ್ಲಿ ಈ ಬಗ್ಗೆ ಚರ್ಚೆ ಆಗಬೇಕು. ರಾಹುಲ್ ಗಾಂಧಿಗೆ ಎಸ್ಟಿ ಜನಾಂಗದ ಮೇಲೆ ಇಷ್ಟೇನಾ ಪ್ರೀತಿ, ಸತ್ಯ ಮಾತನಾಡಿದ ರಾಜಣ್ಣ ವಜಾ ಮಾಡಲಾಗಿದೆ. ಇಂದು ಸದನದಲ್ಲಿ ನಾವು ಪ್ರಶ್ನೆ ಮಾಡುತ್ತೇವೆ ಎಂದು ಹೇಳಿದ್ದಾರೆ.