
Assembly Session | ಕಾಲ್ತುಳಿತ ಪ್ರಕರಣ: ಸದನ ಸಮಿತಿ ರಚನೆಗೆ ಪ್ರತಿಪಕ್ಷ ಆಗ್ರಹ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಕಾರಣ. ಇನ್ನು ಮುಂದಾದರೂ ಇಂತಹ ಅವಗಢಗಳಿಗೆ ಆಸ್ಪದ ನೀಡದಂತೆ ಕಠಿಣ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಅಶೋಕ್ ಆಗ್ರಹಿಸಿದರು.
ಸಂಪುಟದಿಂದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆ ಮೇರೆಗೆ ವಜಾಗೊಳಿಸಿರುವ ವಿಚಾರ ಕಾಂಗ್ರೆಸ್ ಪಕ್ಷದ ಮುಖಂಡರು, ನಾಯಕರಲ್ಲಿ ಆತಂಕ ಮೂಡಿಸಿದೆ.
ವಿಧಾನಸಭೆ ಮುಂಗಾರು ಅಧಿವೇಶನದ ಆರಂಭದ ದಿನವೇ ನಡೆದ ಬೆಳವಣಿಗೆ ವಿಪಕ್ಷಗಳನ್ನೂ ಅಚ್ಚರಿಗೆ ದೂಡಿದೆ. ಇದೇ ವಿಚಾರದ ಬಗ್ಗೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಂದ ಸ್ಪಷ್ಟನೆ ಕೋರಲು ಆಡಳಿತ ಪಕ್ಷ ಹಾಗೂ ವಿಪಕ್ಷಗಳ ಸದಸ್ಯರು ಸಿದ್ಧರಾಗಿದ್ದಾರೆ.
ಮಹದೇವಪುರ ಮತಗಳವು ಕುರಿತಂತೆ ಮಾತನಾಡಿದರೆಂಬ ಕಾರಣದಿಂದ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿರುವ ವಿಚಾರ ಮೇಲ್ನೋಟಕ್ಕೆ ಕಾಣುತ್ತಿದ್ದು,ಈ ವಿಚಾರ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಹೆಚ್ಚಿದೆ. ರಾಜಣ್ಣ ಅವರನ್ನು ಯಾಕೆ ಸಚಿವ ಸ್ಥಾನದಿಂದ ವಜಾಗೊಳಿಸಲು ಕಾರಣ ನೀಡುವಂತೆ ಪಟ್ಟು ಹಿಡಿಯಲಿವೆ ಎಂದು ತಿಳಿದುಬಂದಿದೆ.
ಮತಗಳವು ಬಗ್ಗೆ ಮಾತನಾಡಿದರೆಂಬುದು ಕಾರಣವಾ, ಭ್ರಷ್ಟಾಚಾರವಾ ಅಥವಾ ಹನಿಟ್ರ್ಯಾಪ್ ಪ್ರಕರಣನಾ ಎಂದು ಪ್ರಶ್ನಿಸಲು ಬಿಜೆಪಿ ಸಜ್ಜಾಗಿದೆ.
ಪರಿಶಿಷ್ಟ ಜಾತಿಯ ಕಾರ್ಡ್ ಪ್ಲೇ ಮಾಡಲಿರುವ ಬಿಜೆಪಿ
ಸಚಿವ ಸ್ಥಾನದಿಂದ ವಜಾ ಗೊಳಿಸುವುದು ಸಿಎಂಗೆ ಪರಮಾಧಿಕಾರ ಇದ್ದರೂ ರಾಜಣ್ಣ ವಿಚಾರದಲ್ಲಿ ಕಾರಣ ನೀಡಲು ಕಾಂಗ್ರೆಸ್ ಗೆ ಸಾಧ್ಯವಾಗಲ್ಲ.ಇದು ಪ್ರತಿಪಕ್ಷಗಳಿಗೆ ಕಾಂಗ್ರೆಸ್ ನ್ನು ಮುಜುಗರಕ್ಕೆ ಸಿಲುಕಿಸಲು ಹೊಸ ಅಸ್ತ್ರವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಸೋಮವಾರ ಸ್ಪೀಕರ್ ಅವರು ರಾಜಣ್ಣ ರಾಜೀನಾಮೆ ಕುರಿತಂತೆ ಕೇಳಿಬಂದ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದರು. ಹಾಗಾಗಿ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೆ.ಎನ್. ರಾಜಣ್ಣ ಅವರು ಸಚಿವ ಸ್ಥಾನಕ್ಕೆ ಸೋಮವಾರ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ವೆಂಕಟೇಶಯ್ಯ ಅವರಿಗೆ ನೀಡಿದ್ದರು. ಆದರೆ, ಸಂಜೆಯಾಗುತ್ತಿದ್ದಂತೆ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಲಾಗಿದೆ ಎಂಬ ಪತ್ರವು ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ರವಾನೆಯಾಗಿತ್ತು. ರಾಜಣ್ಣ ರಾಜೀನಾಮೆ ನೀಡುವ ಮುನ್ನವೇ ಸರ್ಕಾರದ ಮುಖ್ಯಸ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಕ್ಕೆ ನಿರ್ಧರಿಸಿ ರಾಜಭವನಕ್ಕೆ ಮಾಹಿತಿ ನೀಡಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ರಾಜಣ್ಣ ಸ್ವಯಂ ಪ್ರೇರಿತವಾಗಿ ರಾಜೀನಾಮೆಗೆ ಮುಂದಾಗಿದ್ದರು ಎಂದು ಹೇಳಲಾಗಿದೆ.
'ಮಹದೇವಪುರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂಬ ಆರೋಪ ಮಾಡುವಾಗ ಕಾಂಗ್ರೆಸ್ ಸರ್ಕಾರವೇ ಆಡಳಿತದಲ್ಲಿತ್ತು' ಎಂಬ ರಾಜಣ್ಣ ಹೇಳಿಕೆಯು, ಮತಗಳ್ಳತನದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು. ಇದು ಪತ್ರಿಪಕ್ಷಗಳಿಗೆ ಪ್ರಬಲ ಅಸ್ತ್ರವಾಗಿ ಪರಿಣಮಿಸಿದ್ದರಿಂದ, ಹಾನಿಯನ್ನು ನಿಯಂತ್ರಿಸಲು ಕಾಂಗ್ರೆಸ್ ಹೈಕಮಾಂಡ್, ರಾಜಣ್ಣ ಅವರನ್ನು ಸರ್ಕಾರದಿಂದ ತೆಗೆದುಹಾಕುವ ಕಠಿಣ ತೀರ್ಮಾನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಜಾಗೊಳಿಸುವ ತೀರ್ಮಾನ ಕೈಗೊಂಡರು ಎನ್ನಲಾಗಿದೆ.
Live Updates
- 12 Aug 2025 9:48 AM IST
ರಾಜಣ್ಣ ವಜಾ: ಸಿಎಂ, ಡಿಸಿಎಂಗೆ ಗೊತ್ತಿರಬಹುದು- ಪರಮೇಶ್ವರ್
ರಾಜಣ್ಣ ಅವರನ್ನು ಸಂಪುಟದಿಂದ ಯಾಕೆ ವಜಾ ಮಾಡಲಾಗಿದೆ ಎಂಬುದು ತಿಳಿದಿಲ್ಲ. ಸಿಎಂ ಹಾಗೂ ಡಿಸಿಎಂ ಅವರಿಗೆ ಗೊತ್ತಿರಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾಜಣ್ಣ ಅವರು ನನ್ನನ್ನು ಭೇಟಿ ಮಾಡಿ, ನಿಮಗೆ ಹೈಕಮಾಂಡ್ ಪರಿಚಯವಿದೆ, ಸಂಪುಟದಿಂದ ತೆಗೆದಿದ್ದು ಯಾಕೆ ಎಂದು ಕೇಳಿ ಎಂದರು. ಕೇಳುವುದರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಹೇಳಿದೆ. ಇದಕ್ಕೆ ಸಿಎಂ ಹಾಗೂ ಡಿಸಿಎಂ ಉತ್ತರಿಸಬೇಕು ಎಂದರು.
- 12 Aug 2025 9:23 AM IST
ಕಾಂಗ್ರೆಸ್ ನಲ್ಲಿ ದಲಿತರಿಗೆ ಎಲ್ಲಿದೆ ನ್ಯಾಯ?
ಸತ್ಯ ಹೇಳಿದ್ದಕ್ಕೆ ಕಾಂಗ್ರೆಸ್ ಹಿರಿಯ ನಾಯಕನನ್ನು ಸಂಪುಟದಿಂದ ಉಚ್ಚಾಟಿಸಲಾಗಿದೆ ಎಂದು ಬಿಜೆಪಿ ಕಿಡಿ ಕಾರಿದೆ.
ದಲಿತ ನಾಯಕರ ಏಳಿಗೆಯನ್ನು ಕಾಂಗ್ರೆಸ್ ಎಂದೂ ಸಹಿಸದು.! ದ್ರೋಹ, ವಂಚನೆ, ಅವಮಾನ, ರಾಜೀನಾಮೆಯೊಂದೇ ಶೋಷಿತರಿಗೆ ಕಾಂಗ್ರೆಸ್ ಕೊಟ್ಟಿರುವ ಬಹುಮಾನ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅರೋಪಿಸಿದೆ. ಅಲ್ಲದೇ ಕಾಂಗ್ರೆಸ್‌ನಲ್ಲಿ ಎಲ್ಲಿದೆ ನ್ಯಾಯ ಎಂದು ಪ್ರಶ್ನಿಸಿದೆ.