ರಾಜಣ್ಣ ವಜಾದ ಬಳಿಕ ರಾಜ್ಯ ಕಾಂಗ್ರೆಸ್ನಲ್ಲಿ ಕಂಪನ: ಡಿಕೆಶಿ ವಿರುದ್ಧದ ಹೋರಾಟದಲ್ಲಿ ಹಿಟ್ ವಿಕೆಟ್
ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ಮಾಡಿದ ಒಂದು ಹೇಳಿಕೆಯು, ಇದೀಗ ಅವರಿಗೇ ತಿರುಗುಬಾಣವಾಗಿ ಸಚಿವ ಸ್ಥಾನವನ್ನೇ ಕಳೆದುಕೊಳ್ಳುವಂತಾಗಿದೆ.;
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ "ವೋಟ್ ಚೋರಿ" ಮಾಡಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಆರೋಪವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಸಮರಕ್ಕೆ ಕಾರಣವಾಗಿದ್ದರೆ, ಕರ್ನಾಟಕದಲ್ಲಿ ಅದು ಸ್ವತಃ ಕಾಂಗ್ರೆಸ್ ಪಕ್ಷದೊಳಗೇ ತಲ್ಲಣ ಸೃಷ್ಟಿಸಿದೆ. ಈ ಹೋರಾಟವನ್ನು ರಾಜ್ಯದಲ್ಲಿ ಮುನ್ನಡೆಸಬೇಕಾದ ನಾಯಕರೇ, ಇದನ್ನೇ ತಮ್ಮ ನಡುವಿನ ಆಂತರಿಕ ಸಂಘರ್ಷದ ಅಸ್ತ್ರವನ್ನಾಗಿ ಬಳಸಿಕೊಂಡು ಇದೀಗ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರ ಸಚಿವ ಸ್ಥಾನದ ವಜಾ ಪ್ರಸಂಗದ ಬಳಿಕ ಈ ಮಾತುಗಳಿಗೆ ಹೆಚ್ಚಿನ ಮೌಲ್ಯ ಬಂದಿದೆ. ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿ ಮಾಡಿದ ಒಂದು ಹೇಳಿಕೆಯು, ಇದೀಗ ಅವರಿಗೇ ತಿರುಗುಬಾಣವಾಗಿ ಸಚಿವ ಸ್ಥಾನವನ್ನೇ ಕಳೆದುಕೊಳ್ಳುವಂತಾಗಿದೆ.
ತಮಗಿದ್ದ ಅಸಮಾಧಾನ ಮತ್ತು ಸಿದ್ದರಾಮಯ್ಯ ಬಣದ ನಿಷ್ಠೆ ಪ್ರದರ್ಶಿಸುವ ಧಾವಂತದಲ್ಲಿ, ರಾಜಣ್ಣ ಅವರು ಡಿ.ಕೆ. ಶಿವಕುಮಾರ್ ಅವರ ನಾಯಕತ್ವವನ್ನು ಪ್ರಶ್ನಿಸಲು ರಾಹುಲ್ ಗಾಂಧಿಯವರ ಆರೋಪವನ್ನು ಅಸ್ತ್ರವಾಗಿ ಬಳಸಿಕೊಂಡರು. "ಮಹದೇವಪುರದಲ್ಲಿ ಬಿಜೆಪಿ ಅಕ್ರಮ ಎಸಗಲು ಕೆಪಿಸಿಸಿ ಅಧ್ಯಕ್ಷರ ನಿರ್ಲಕ್ಷ್ಯವೇ ಕಾರಣ" ಎಂದು ಪರೋಕ್ಷವಾಗಿ ಹೇಳುವ ಮೂಲಕ, ಅವರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಯ ಹೊಣೆಯನ್ನು ಡಿ.ಕೆ. ಶಿವಕುಮಾರ್ ಹೆಗಲಿಗೆ ಹೊರಿಸುವ ಜಾಣ ನಡೆ ಪ್ರದರ್ಶಿಸಿದರು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಇದು ವೈಯಕ್ತಿಕವಾಗಿ ತಮ್ಮ ರಾಜಕೀಯ ಎದುರಾಳಿಯನ್ನು ಹಣಿಯುವ ಮತ್ತು ಆಂತರಿಕವಾಗಿ ತಮ್ಮ ಬಣಕ್ಕೆ ಬಲ ತುಂಬುವ ತಂತ್ರವಾಗಿತ್ತು ಎಂದು ಹೇಳಲಾಗುತ್ತಿದೆ.
ಈ ತಂತ್ರವು ಅವರನ್ನು ಮೇಲಕ್ಕೆತ್ತುವ ಬದಲು, ಮತ್ತಷ್ಟು ಕೆಳಕ್ಕೆ ತಳ್ಳಿದೆ. ಮೊದಲನೆಯದಾಗಿ, ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ಪ್ರದರ್ಶಿಸಬೇಕಾದ ನಿರ್ಣಾಯಕ ಸಮಯದಲ್ಲಿ, ಅವರು ಪಕ್ಷದ ಆಂತರಿಕ ಬಿರುಕನ್ನು ಜಗಜ್ಜಾಹೀರುಗೊಳಿಸಿದರು. ಇದು ಡಿ.ಕೆ. ಶಿವಕುಮಾರ್ ಅವರನ್ನು ಮಾತ್ರವಲ್ಲ, ಇಡೀ ರಾಜ್ಯ ಕಾಂಗ್ರೆಸ್ ಘಟಕವನ್ನೇ ದುರ್ಬಲವಾಗಿ ಬಿಂಬಿಸಿತು. ಎರಡನೆಯದಾಗಿ, ರಾಹುಲ್ ಗಾಂಧಿಯವರ ರಾಷ್ಟ್ರೀಯ ಮಟ್ಟದ ಆರೋಪದ ಗಂಭೀರತೆಯನ್ನು ಇದು ಕಡಿಮೆ ಮಾಡಿತು. ರಾಷ್ಟ್ರೀಯ ಹೋರಾಟವು ರಾಜ್ಯದಲ್ಲಿ "ಕಾಂಗ್ರೆಸ್ vs ಕಾಂಗ್ರೆಸ್" ಎಂಬಂತಾಗಿ, ಮೂಲ ಉದ್ದೇಶವೇ ಹಾದಿ ತಪ್ಪಿದಂತಾಯಿತು.
ಪಕ್ಷದ ಹಿರಿಯ ನಾಯಕರಾಗಿ, ಚುನಾವಣಾ ಸೋಲಿನ ಜವಾಬ್ದಾರಿಯನ್ನು ಕೇವಲ ರಾಜ್ಯಾಧ್ಯಕ್ಷರ ಮೇಲೆ ಹಾಕಿ ತಾವು ಕೈತೊಳೆದುಕೊಳ್ಳುವ ಅವರ ಪ್ರಯತ್ನವು, ಅವರನ್ನು ಒಬ್ಬ ಬೇಜವಾಬ್ದಾರಿ ನಾಯಕನನ್ನಾಗಿ ಚಿತ್ರಿಸಿದೆ. ಈ ಮೂಲಕ, ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನದಲ್ಲಿ, ರಾಜಣ್ಣ ಅವರು ಪಕ್ಷದ ಶಿಸ್ತನ್ನು ಮೀರಿ, ತಮ್ಮದೇ ವಿಶ್ವಾಸಾರ್ಹತೆ ಮತ್ತು ರಾಜಕೀಯ ವರ್ಚಸ್ಸಿಗೆ ಧಕ್ಕೆ ತಂದುಕೊಂಡಿದ್ದಾರೆ.