ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣ ಸದ್ದು| ನಾಳೆ ಚರ್ಚೆಗೆ ಅವಕಾಶ ಕೊಟ್ಟ ಸ್ಪೀಕರ್‌

ಪರಮೇಶ್ವರ್‌ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಅನಾಮಿಕನ ಮಾತು ಕೇಳಿ ಇನ್ನೆಷ್ಟು ಗುಂಡಿಗಳನ್ನು ತೆಗೆಯುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.;

Update: 2025-08-12 08:57 GMT

ಧರ್ಮಸ್ಥಳ ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಕೂಡಲೇ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು ಎಂದು ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.  

ಮಂಗಳವಾರ ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಸುನೀಲ್‌ ಕುಮಾರ್‌ ಅವರು, ಶವ ಹೂತಿಟ್ಟಿರುವ ಬಗ್ಗೆ ಅನಾಮಿಕನ ಹೇಳಿಕೆ ಆಧರಿಸಿ ವಿಶೇಷ ತನಿಖಾ ತಂಡವು (ಎಸ್‌ಐಟಿ) ಕಳೇಬರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೇ ಹದಿನೈದಕ್ಕೂ ಹೆಚ್ಚು ಗುಂಡಿ ಅಗೆಯಲಾಗಿದೆ. ಇನ್ನೆಷ್ಟು ಗುಂಡಿ ಅಗೆಯುತ್ತೀರಾ ಎಂದು ಪ್ರಶ್ನಿಸಿದರು.

ಕಳೆದ 13 ದಿನಗಳಿಂದ ಕಳೇಬರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಧರ್ಮಸ್ಥಳದಲ್ಲಿ ಎಷ್ಟು ಬುರುಡೆ, ಎಷ್ಟು ಅಸ್ಥಿಪಂಜರಗಳು ಸಿಕ್ಕಿವೆ ಎಂಬ ಮಾಹಿತಿ ಇಲ್ಲ. ಊಹಾಪೋಹಗಳು ಹರಿದಾಡುತ್ತಿವೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಹಾಗಾಗಿ ಎಸ್‌ಐಟಿಯಿಂದ ಮಧ್ಯಂತರ ವರದಿ ಪಡೆದು ಬಹಿರಂಗಪಡಿಸಬೇಕು ಎಂದು ಸುನೀಲ್‌ ಕುಮಾರ್‌ ಆಗ್ರಹಿಸಿದರು. 

ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇದರಿಂದ ಲಕ್ಷಾಂತರ ಹಿಂದೂಗಳ ನಂಬಿಕೆಗೆ ಪೆಟ್ಟು ಬಿದ್ದಿದೆ. ಕೂಡಲೇ ಸರ್ಕಾರ ಧರ್ಮಸ್ಥಳ ಪ್ರಕರಣ ಕುರಿತಂತೆ ಉತ್ತರ ಕೊಡಬೇಕು ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರು, ಧರ್ಮಸ್ಥಳದಲ್ಲಿ ಶವ ಹೂತಿಟ್ಟಿರುವ ಬಗ್ಗೆ ಅನಾಮಿಕ ನೀಡಿದ ಹೇಳಿಕೆ, ಸ್ಥಳೀಯ ಸಮುದಾಯಗಳ ಒತ್ತಡದಿಂದ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. ತನಿಖೆ ಪೂರ್ಣಗೊಂಡು, ವರದಿ ಬಂದ ಬಳಿಕ ಮಾಹಿತಿ ನೀಡುತ್ತೇನೆ. ಯಾರೂ ಕೂಡ ಅಲ್ಲಿ ನೂರಾರು ಗುಂಡಿ ಅಗೆದಿಲ್ಲ. ಆದರೆ, ತನಿಖೆ ಒಂದು ಹಂತಕ್ಕೆ ಬರುತ್ತಿದ್ದಂತೆ ನಾನೇ ಮಾಹಿತಿ ಕೊಡುತ್ತೇನೆ ಎಂದು ಹೇಳಿದರು.  

ಪರಮೇಶ್ವರ್‌ ಮಾತಿಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಅನಾಮಿಕನ ಮಾತು ಕೇಳಿ ಇನ್ನೆಷ್ಟು ಗುಂಡಿಗಳನ್ನು ತೆಗೆಯುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಶಾಸಕ ಸುರೇಶ್ ಕುಮಾರ್ ಮಾತನಾಡಿ, ಎಡಪಂಥೀಯರ ಆಗ್ರಹದ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ದಾರೆ ಎಂದರು.  ಆಗ ಮಧ್ಯಪ್ರವೇಶಿಸಿದ ದಿನೇಶ್‌ ಗುಂಡೂರಾವ್‌, ನಾವು ಯಾರ ಪರವೂ ಇಲ್ಲ. ಯಾರ ವಿರುದ್ಧವೂ ಇಲ್ಲ. ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತಿದ್ದೇವೆ. ಸತ್ಯ ಹೊರಗಡೆ ಬರಬೇಕು, ನಾವು ನ್ಯಾಯದ ಪರ ಎಂದು ಹೇಳಿದರು.

ಗದ್ದಲ ಜೋರಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಸ್ಪೀಕರ್‌ ಯು.ಟಿ.ಖಾದರ್‌ ಅವರು ಧರ್ಮಸ್ಥಳದ ಬಗ್ಗೆ ನಾಳೆ ಚರ್ಚೆಗೆ ಅವಕಾಶ ನೀಡುತ್ತೇವೆ. ಈಗ ಅದರ ಪ್ರಸ್ತಾವ, ಚರ್ಚೆ ಕೈ ಬಿಡಿ ಎಂದು ಸೂಚಿಸಿದರು. ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಸ್ವಪಕ್ಷಿಯ ಸದಸ್ಯರನ್ನು ಸುಮ್ಮನಿರಲು ಹೇಳಿದರು.


Tags:    

Similar News