ಸ್ವಾತಂತ್ರ್ಯೋತ್ಸವ ಪರೇಡ್‌ ವೀಕ್ಷಣೆಗೆ ಪ್ರಥಮ ಬಾರಿಗೆ ಇ-ಪಾಸ್ : ಶಾಲಿನಿ ರಜನೀಶ್

ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ ನೋಂದಾಯಿಸಿಕೊಳ್ಳತಕ್ಕದ್ದು.‌ ಇ-ಪಾಸ್ ಕೇವಲ ಆ.15 ರಂದು ಮಾತ್ರ ಮಾನ್ಯವಾಗಿರುತ್ತದೆ.;

Update: 2025-08-12 13:27 GMT

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಂಗಳೂರು ನಗರದಲ್ಲಿನ ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಷಾ ಪರೇಡ್‌ ಮೈದಾನದಲ್ಲಿ ನಡೆಯುವ ರಾಜ್ಯಮಟ್ಟದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರಥಮ ಬಾರಿಗೆ ಇ-ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ವೀಕ್ಷಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ www.sevasindhu.karnataka.gov.in ನಿಂದ ಇ-ಪಾಸ್  ಪಡೆದುಕೊಳ್ಳಬಹುದು. ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ ನೋಂದಾಯಿಸಿಕೊಳ್ಳತಕ್ಕದ್ದು ಮತ್ತು ವೆಬ್‍ಸೈಟ್ ನಲ್ಲಿ ಲಾಗಿನ್ ಮಾಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ಬರುವ ಒಟಿಪಿ ಅನ್ನು ಅಳವಡಿಸಿ ಇ-ಪಾಸ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದಿದ್ದಾರೆ.

ಇ-ಪಾಸ್ ಕೇವಲ ಆ.15 ರಂದು ಮಾತ್ರ ಮಾನ್ಯವಾಗಿರುತ್ತದೆ. ಇ-ಪಾಸ್ ಹೊಂದಿರುವವರು ಬೆಳಿಗ್ಗೆ 08:15 ಗಂಟೆಗಿಂತ ಮೊದಲು ಗೇಟ್ ನಂ.4ರ ಬಳಿ ಆವರಣದ ಒಳಗೆ ಪ್ರವೇಶಿಸಬೇಕು. ಈ ಸಮಯದ ನಂತರ ಪ್ರವೇಶ ಅನುಮತಿಸಲಾಗುವುದಿಲ್ಲ ಹಾಗೂ ಇ-ಪಾಸ್ ಅಮಾನ್ಯವೆಂದು ಪರಿಗಣಿಸಲಾಗುತ್ತದೆ. ಪ್ರತಿ ಇ-ಪಾಸ್ ಕೇವಲ ಒಬ್ಬರಿಗೆ ಮಾತ್ರ ಪ್ರವೇಶಿಸಲು ಅನುಮತಿಸಿದೆ. ಕಾರ್ಯಕ್ರಮದ ಸಮಯದಲ್ಲಿ ಇ-ಪಾಸ್‍ನ ಮುದ್ರಿತ ಪ್ರತಿ ಅಥವಾ ಡಿಜಿಟಲ್ (ಮೊಬೈಲ್) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದ್ದಾರೆ. 

6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇ-ಪಾಸ್ ಅವಶ್ಯವಿರುವುದಿಲ್ಲ. ಇ-ಪಾಸ್ ಅನ್ನು ವರ್ಗಾಯಿಸುವಂತಿಲ್ಲ. ಇ-ಪಾಸ್‍ಗಳು ಒಟ್ಟು 3000 ಸಂಖ್ಯೆಗೆ ಸೀಮಿತವಾಗಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಮೂಲ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಇ-ಪಾಸ್ ಹೊಂದಿರುವವರಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದಿಲ್ಲ. ಪಾಕಿರ್ಂಗ್ ವ್ಯವಸ್ಥೆಗೆ ಪಾಸ್‍ಧಾರರೇ ಜವಾಬ್ದಾರರಾಗಿರುತ್ತಾರೆ ಎಂದು ತಿಳಿಸಿದ್ದಾರೆ. 


Tags:    

Similar News