ಪ್ರಧಾನಿಗೆ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ನನ್ನ ಸ್ವಂತದ್ದು: ವಿವಾದಕ್ಕೆ ಸ್ಪಷ್ಟನೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಪ್ರತಿಮೆಯು ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರು ತಂದಿದ್ದು ಎಂಬ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ವರದಿಗಳು ಸಂಪೂರ್ಣ ಸುಳ್ಳು ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.;

Update: 2025-08-12 11:33 GMT

ಬೆಂಗಳೂರಿನ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ತಾವು ನೀಡಿದ್ದ ಬೆಳ್ಳಿ ಗಣೇಶ ಪ್ರತಿಮೆಯ ಕುರಿತು ಎದ್ದಿದ್ದ ವಿವಾದಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೆರೆ ಎಳೆದಿದ್ದಾರೆ. ಆ ಉಡುಗೊರೆಯನ್ನು ತಮ್ಮ ಸ್ವಂತ ಹಣದಿಂದಲೇ ಖರೀದಿಸಿದ್ದು ಎಂದು ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಆ ಸಮಾರಂಭದಲ್ಲಿ ಪ್ರಧಾನಿಯವರಿಗೆ ತಾವು ನೀಡಿದ ಪ್ರತಿಮೆಯು ಬಿಜೆಪಿ ಶಾಸಕ ಎಂ. ಕೃಷ್ಣಪ್ಪ ಅವರು ತಂದಿದ್ದು ಎಂಬ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ವರದಿಗಳು ಸಂಪೂರ್ಣ ಸುಳ್ಳು ಮತ್ತು ಸತ್ಯಕ್ಕೆ ದೂರವಾದದ್ದು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

"ಆ ಪ್ರತಿಮೆಯನ್ನು ನನ್ನ ಸ್ವಂತ ಹಣದಿಂದ ಖರೀದಿಸಲಾಗಿದೆ. ಇದಕ್ಕಾಗಿ ಇಲಾಖೆಯ ಹಣವನ್ನು ಬಳಸಿಲ್ಲ. ನನ್ನ ಮನೆಯಿಂದಲೇ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್ಪಿಜಿ (ವಿಶೇಷ ರಕ್ಷಣಾ ದಳ) ತಪಾಸಣೆಗೆ ಒಳಪಡಿಸಿ, ನಂತರ ಪ್ರಧಾನಿಯವರಿಗೆ ನೀಡಲಾಯಿತು. ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ನನಗೆ ಬಂದಿಲ್ಲ," ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಳೆದ ಆಗಸ್ಟ್ 10 ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಐಐಐಟಿ ಸಭಾಂಗಣದಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದ ಉದ್ಘಾಟನಾ ಸಮಾರಂಭ ನಡೆದಿದ್ದು, ಆ ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ಮೋದಿಯವರನ್ನು ಸನ್ಮಾನಿಸಿ, ಬೆಳ್ಳಿ ಗಣೇಶನ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Tags:    

Similar News