ಪರಭಾಷೆ ಸಿನಿಮಾಗಳ ನಡುವೆಯೂ 3ನೇ ವಾರಕ್ಕೆ ಕಾಲಿಟ್ಟ ʼಯುವʼ
ದೊಡ್ಮನೆಯ ಯುವರಾಜ್‌ಕುಮಾರ್ ನಟನೆಯ ʼಯುವʼ ಸಿನಿಮಾ, ಪರೀಕ್ಷೆಗಳು, ಚುನಾವಣೆ, ಬಿರುಬಿಸಿಲ ನಡುವೆಯೂ ಮೂರನೇ ವಾರಕ್ಕೆ ಕಾಲಿಟ್ಟಿದೆ.
ʼಆಡು ಜೀವಿತಂʼ, ʼಆವೇಶಂʼ ನಂತಹ ಮಲಯಾಳಂ ಚಿತ್ರಗಳು, ಬಡೇ ಮಿಯಾ ಚೋಟೆ ಮಿಯಾ.. ಮೈದಾನ್ ನಂತಹ ಬಾಲಿವುಡ್ ಚಿತ್ರಗಳ ನಡುವೆಯೂ ಕನ್ನಡದ ಯುವ ರಾಜ್‌ಕುಮಾರ್ ನಟನೆಯ ʼಯುವʼ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದೆ.
ಪರೀಕ್ಷೆ, ಚುನಾವಣಾ ಬ್ಯುಸಿ ಮತ್ತು ಬಿರುಬಿಸಿಲು ಸೇರಿದಂತೆ ಎಲ್ಲಾ ಅಡೆತಡೆಗಳ ನಡುವೆಯೂ ಯುವ ಸಿನಿಮಾ ಎರಡು ವಾರಗಳ ಯಶಸ್ವೀ ಪ್ರದರ್ಶನ ಕಂಡಿದೆ. ಮೂರನೇ ವಾರಕ್ಕೆ ಚಿತ್ರ ಕಾಲಿಟ್ಟಿದೆ. ಬೆಂಗಳೂರಿನ ಪಿವಿಆರ್ ಗ್ಲೋಬಲ್ ಮಾಲ್, ಜಿ.ಟಿ.ವರ್ಲ್ಡ್ ಮಾಲ್, ಓರಾಯನ್ ಮಾಲ್, ವೆಗಾ ಸಿಟಿ ಮಾಲ್ ನಲ್ಲಿ ಟಿಕೆಟ್ ಬಹುತೇಕ ಸೋಲ್ಡ್ ಔಟ್ ಆಗಿವೆ. ಸಂತೋಷ್, ನವರಂಗ್, ಸಿದ್ದೇಶ್ವರ, ವೀರಭದ್ರೇಶ್ವರ, ಕಾಮಾಕ್ಯ.. ಹೀಗೆ ಅನೇಕ ಕಡೆ ಚಿತ್ರ ಇನ್ನೂ ಪ್ರದರ್ಶನ ಕಾಣುತ್ತಿದೆ.
ಮೂರನೇ ವಾರದಲ್ಲಿ ಮೈಸೂರು, ಮಂಡ್ಯ, ಹಾಸನ, ಹುಬ್ಬಳ್ಳಿ, ಧಾರವಾಡ, ಗದಗ, ರಾಣೆಬೆನ್ನೂರು, ಬಾಗಲಕೋಟೆ, ಬೆಳಗಾವಿ, ಹೀಗೆ ಕರುನಾಡಿನ ಅನೇಕ ಕಡೆ ಯುವ ಚಿತ್ರ ಇನ್ನೂ ಚಿತ್ರಮಂದಿರದಲ್ಲಿ ಇದೆ. ಇನ್ನೂ ಕೇವಲ ಮೈಸೂರಿನಲ್ಲಿಯೇ ಚಿತ್ರ ಒಂದು ಕೋಟಿಗೂ ಹೆಚ್ಚು ಹಣ ಗಳಿಸಿದೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಪರಭಾಷೆ ಸಿನಿಮಾ ಹಾವಳಿ ನಡುವೆಯೂ ಬಾಕ್ಸಾಫೀಸ್ ನಲ್ಲಿ ಮುನ್ನುಗ್ಗುತ್ತಿದ್ದು, ಎಷ್ಟು ಹಣವನ್ನು ದೋಚಲಿದೆ ಅನ್ನುವುದು ಸದ್ಯದ ಕುತೂಹಲವಾಗಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಸಂತೋಷ್ ಆನಂದ್ ರಾಮ್ ನಿರ್ದೇಶಿಸಿರುವ ಯುವ ಸಿನಿಮಾ, ದೊಡ್ಮನೆ ಕುಟುಂಬದ ರಾಘವೇಂದ್ರ ರಾಜಕುಮಾರ್ ಪುತ್ರ ಯುವ ರಾಜ್ ಕುಮಾರ್ ಅವರ ಚೊಚ್ಚಲ ಸಿನಿಮಾ. ನಾಯಕಿಯಾಗಿ ಸಪ್ತಮಿ ಗೌಡ ಅಭಿನಯಿಸಿದ್ದಾರೆ. ಉಳಿದಂತೆ, ಸುಧಾರಾಣಿ, ಅಶ್ವತ್, ಹಿತ ಚಂದ್ರಶೇಖರ್ ನಟಿಸಿದ್ದಾರೆ. ಯುವ ಸಿನಿಮಾ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಯುವಕನ ಬದುಕನ್ನು ಅನಾವರಣಗೊಳಿಸುತ್ತದೆ.