ʻಉತ್ತರಕಾಂಡʼ ಚಿತ್ರತಂಡ ಸೇರಿಕೊಂಡ ಶಿವರಾಜ್ ಕುಮಾರ್
ಬಹುನಿರೀಕ್ಷಿತ ಕನ್ನಡ ಚಿತ್ರ ʼಉತ್ತರಕಾಂಡʼ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು, ನಟ ಶಿವರಾಜ್ ಕುಮಾರ್ ಇದೀಗ ಚಿತ್ರತಂಡ ಸೇರಿಕೊಂಡಿದ್ದಾರೆ.;
ಆರಂಭದಿಂದಲೇ ಸಾಕಷ್ಟು ಸದ್ದುಮಾಡುತ್ತಿರುವ ʼಉತ್ತರಕಾಂಡʼ ಸಿನಿಮಾ ತಂಡಕ್ಕೆ ಒಬ್ಬೊಬ್ಬರಾಗಿ ಘಟಾನುಘಟಿ ನಾಯಕರು ಸೇರಿಕೊಳ್ಳುತ್ತಿದ್ದು, ಇದೀಗ ನಟ ಶಿವರಾಜ್ ಕುಮಾರ್ ಚಿತ್ರತಂಡ ಸೇರಿಕೊಂಡಿದ್ದಾರೆ.
ಚಿತ್ರದ 15 ದಿನಗಳ ಪ್ರಥಮ ಶೆಡ್ಯೂಲ್‌ನ ಚಿತ್ರೀಕರಣ ವಿಜಯಪುರದಲ್ಲಿ ನಡೆದಿದ್ದು, ಇದೀಗ ಪೂರ್ಣಗೊಂಡಿದೆ. ಬೆಳಗಾವಿಯಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.
ಇದೊಂದು ಆ್ಯಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಧನಂಜಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರದು 'ಗಬ್ರು ಸತ್ಯ' ಎಂಬ ಪಾತ್ರವಾಗಿದ್ದು, ಆ ಬಗ್ಗೆ ಈಗಾಗಲೇ ಚಿತ್ರ ತಂಡ ಬಿಡುಗಡೆ ಮಾಡಿರುವ ಟೀಸರ್ ನಲ್ಲಿ ಹೇಳಿಲಾಗಿದೆ. ಆದರೆ ಸಿನಿಮಾ ತಂಡವನ್ನು ಇದೀಗ ಸೇರಿಕೊಂಡಿರುವ ನಟ ಶಿವರಾಜ್‌ಕುಮಾರ್ ಅವರು ಚಿತ್ರದಲ್ಲಿ ಯಾವ ಪಾತ್ರ ನಿರ್ವಹಿಸಲಿದ್ದಾರೆ ಎಂಬ ಬಗ್ಗೆ ಚಿತ್ರತಂಡ ಈವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ನಟಿ ಐಶ್ವರ್ಯ ರಾಜೇಶ್ ಅವರು ಧನಂಜಯ ಜೋಡಿಯಾಗಿ 'ದುರ್ಗಿ' ಎಂಬ ಪಾತ್ರದಲ್ಲಿ, ಚೈತ್ರಾ ಜೆ.ಆಚಾರ್ ಅವರು 'ಲಚ್ಚಿ 'ಯಾಗಿ, ನಟ ದಿಗಂತ್ 'ಮಿರ್ಚಿ ಮಲ್ಲಿಗೆ' ಎಂಬ ಪಾತ್ರದಲ್ಲಿ, ಹಾಗೂ ರಂಗಾಯಣ ರಘು ಅವರು 'ಬಂಡೆ ಕಾಕ'ನಾಗಿ ಕಾಣಿಸಿಕೊಳ್ಳಲಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ 'ಧರ್ಮ'ನಾಗಿ, ಹಿರಿಯ ನಟಿ ಉಮಾಶ್ರೀ 'ಪಂಡ್ರಿ ಬಾಯ್'ಯಾಗಿ, ನಿರ್ದೇಶಕ ಯೋಗರಾಜ್ ಭಟ್ 'ಪಾಟೀಲ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಯುವ ನಿರ್ದೇಶಕ ರೋಹಿತ್ ಪದಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು, ಕೆ.ಆರ್.ಜಿ. ಸ್ಟೂಡಿಯೋಸ್ ಬ್ಯಾನರ್ ನಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಲಿದ್ದಾರೆ. ಖ್ಯಾತ ಬಾಲಿವುಡ್ ಗಾಯಕ ಹಾಗೂ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಸಂಗೀತ ಸಂಯೋಜಿಸಿದ್ದು, ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರು.