'ಟಾಕ್ಸಿಕ್' ಚಿತ್ರದಿಂದ ಹೊರ ಬಂದ್ರು ಕರೀನಾ ಕಪೂರ್!
'ಟಾಕ್ಸಿಕ್' ಚಿತ್ರದಿಂದ ಬಾಲಿವುಡ್ ನಟಿ ಕರೀನಾ ಕಪೂರ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಿಂದ ಬಂದಿದೆ.;
ರಾಕಿಂಗ್ ಸ್ಟಾರ್ ನಟನೆಯ 'ಟಾಕ್ಸಿಕ್' ಸಿನಿಮಾದ ಶೂಟಿಂಗ್ ಸದ್ಯ ಬೆಂಗಳೂರಿನಲ್ಲಿ ಆರಂಭವಾಗಿದೆ. ಇದೆಲ್ಲದರ ನಡುವೆ 'ಟಾಕ್ಸಿಕ್' ಚಿತ್ರದಿಂದ ಬಾಲಿವುಡ್ ನಟಿ ಕರೀನಾ ಕಪೂರ್ ಹೊರ ಬಂದಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಿಂದ ಬಂದಿದೆ.
ಬಾಲಿವುಡ್ ಮಾಧ್ಯಮಗಳ ವರದಿ ಪ್ರಕಾರ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರಕ್ಕೆ ಕರೀನಾ ಕಪೂರ್ ಆಯ್ಕೆ ಆಗಿದ್ದಾರೆ ಎನ್ನಲಾಗಿತ್ತು. ಬಹಳ ಪವರ್‌ಫುಲ್ ಪಾತ್ರ ಅದು ಎನ್ನುವ ಚರ್ಚೆ ನಡೆದಿತ್ತು.
ಕರೀನಾ ಕಪೂರ್ 'ಟಾಕ್ಸಿಕ್' ಚಿತ್ರದಲ್ಲಿ ನಟಿಸುವ ಬಗ್ಗೆ ಅಧಿಕೃತ ಪ್ರಕಟಣೆ ಇರಲಿಲ್ಲ. ಆದರೆ ಆಕೆ ಒಂದು ʼಪ್ಯಾನ್ ಇಂಡಿಯಾ ಚಿತ್ರʼದಲ್ಲಿ ನಟಿಸುತ್ತಿರುವುದಾಗಿ ವರದಿ ಆಗಿತ್ತು. ಆದರೆ ಅದು 'ಟಾಕ್ಸಿಕ್' ಸಿನಿಮಾ ಎಂದು ಖಚಿತವಾಗಿರಲಿಲ್ಲ. ಸದ್ಯ ಡೇಟ್ಸ್ ಸಮಸ್ಯೆಯಿಂದ ಕರೀನಾ ಕಪೂರ್ ಚಿತ್ರದಿಂದ ಹೊರ ಬರುತ್ತಿದ್ದಾರೆ ಎಂದು ವರದಿಯಾಗಿದೆ.
"ಚಿತ್ರದಲ್ಲಿ ಕರೀನಾ ಕಪೂರ್ ಅವರದ್ದು ಅತಿಥಿ ಪಾತ್ರವಲ್ಲ. ಬಹಳ ದೊಡ್ಡ ಪಾತ್ರ. ಹಾಗಾಗಿ ಸಾಕಷ್ಟು ದಿನಗಳ ಕಾಲ್‌ಶೀಟ್ ಬೇಕಿತ್ತು. ಆದರೆ ಕರೀನಾ ಕಪೂರ್ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಯಶ್ ಡೇಟ್ಸ್ ಜೊತೆಗೆ ಆಕೆಯ ಡೇಟ್ಸ್ ಹೊಂದಾಣಿಕೆ ಆಗುತ್ತಿಲ್ಲ. ಬಹಳ ಪ್ರಯತ್ನಪಟ್ಟರೂ ಸಾಧ್ಯವಾಗದೇ ಇದ್ದಾಗ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ" ಎಂದು ಹೇಳಲಾಗಿದೆ.
'ಕೆಜಿಎಫ್-2' ಬಳಿಕ ಯಶ್ ನಟಿಸುತ್ತಿರುವ ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೆ ಏರಿದೆ. ಜೊತೆ ರಾಕಿಂಗ್ ಸ್ಟಾರ್ ಮೇಲೆ ಒತ್ತಡ ಕೂಡ ಇದೆ. ಬಾಲಿವುಡ್‌ನಲ್ಲಿ ಯಶ್ 'ರಾಮಾಯಣ' ಚಿತ್ರವನ್ನು ನಿರ್ಮಿಸಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಇದೆ. ಈ ಎರಡೂ ಸಿನಿಮಾಗಳು ಭಾರೀ ಕುತೂಹಲ ಮೂಡಿಸಿವೆ. ಶೀಘ್ರದಲ್ಲೇ 'ಟಾಕ್ಸಿಕ್' ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗಲಿದೆ.