Part-2| ಬಳ್ಳಾರಿ ಗಣಿ ಧಣಿಗಳಿಗೆ 'ಸಂಜೀವಿನಿ' : ಕಡಿಮೆ ದರ್ಜೆಯ ಅದಿರು ಚೀನಾಕ್ಕೆ ಸಿಂಹಪಾಲು!
ಬಳ್ಳಾರಿಯ ಗಣಿ ಮಾಲೀಕರು ಅದಿರು ರಫ್ತಿಗೆ ಚೆನ್ನೈ ಅಥವಾ ಕೃಷ್ಣಪಟ್ಟಣಂ ಬಂದರುಗಳನ್ನು ಅವಲಂಬಿಸಬೇಕಿತ್ತು. ಕಿರು ಬಂದರುಗಳು ತೆರೆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನೇರ ಪ್ರವೇಶ ದೊರೆತಂತಾಗಿದೆ.
ರಾಜ್ಯದ ಗಣಿಗಾರಿಕೆ ಇತಿಹಾಸದಲ್ಲಿ ಬಳ್ಳಾರಿ ಜಿಲ್ಲೆಯ ಹೆಸರು ಅಚ್ಚಳಿಯದ್ದು! ಕಳೆದ ದಶಕದಲ್ಲಿ ಅಕ್ರಮ ಗಣಿಗಾರಿಕೆಯ ಕಾರ್ಮೋಡ ಮತ್ತು ನಂತರದ ಸುಪ್ರೀಂ ಕೋರ್ಟ್ ನಿಷೇಧಗಳು ಈ ವಲಯವನ್ನು ಆರ್ಥಿಕವಾಗಿ ಕಂಗೆಡಿಸಿದ್ದವು. ಇದೀಗ ರಾಜ್ಯ ಸರ್ಕಾರವು ಕಿರು ಬಂದರುಗಳ ಮೂಲಕ ಕಬ್ಬಿಣದ ಅದಿರು ರಫ್ತಿಗೆ ಅನುಮತಿ ನೀಡಿರುವುದು ಸ್ತಬ್ಧವಾಗಿದ್ದ ಗಣಿ ಉದ್ಯಮಕ್ಕೆ ಹೊಸ ಜೀವ ತುಂಬಿದೆ.
ಈ ನಿರ್ಧಾರವು ಕೇವಲ ರಫ್ತು ಪ್ರಕ್ರಿಯೆಯಲ್ಲ, ಬದಲಾಗಿ ಬಳ್ಳಾರಿಯ ಗಣಿಗಳಲ್ಲಿ ಗುಡ್ಡೆ ಬಿದ್ದಿರುವ, ದೇಶೀಯವಾಗಿ ಬೇಡಿಕೆಯಿಲ್ಲದ 'ಕಡಿಮೆ ದರ್ಜೆಯ ಅದಿರು' ವಿಲೇವಾರಿಗೆ ಸಿಕ್ಕಿರುವ ಸುವರ್ಣಾವಕಾಶವಾಗಿದೆ. ಕಿರು ಬಂದರುಗಳ ಮೂಲಕ ಅದಿರು ರಫ್ತಿಗೆ ಅನುಮತಿ ನೀಡಿರುವ ಸರ್ಕಾರದ ನಿರ್ಧಾರದಿಂದ ಬಳ್ಳಾರಿಯ ಗಣಿಗಾರಿಕೆ ವಲಯಕ್ಕೆ ಹಲವಾರು ನೇರ ಪ್ರಯೋಜನಗಳಿವೆ.
ಗಣಿಗಾರಿಕೆ ನಡೆಸುವಾಗ ಉತ್ತಮ ಅದಿರಿನ ಜತೆಗೆ ಅಪಾರ ಪ್ರಮಾಣದ ಕಡಿಮೆ ದರ್ಜೆಯ ಅದಿರು (ಶೇ. 58ಕ್ಕಿಂತ ಕಡಿಮೆ ಅಂಶ) ಉತ್ಪತ್ತಿಯಾಗುತ್ತದೆ. ಇದನ್ನು ತಾಂತ್ರಿಕವಾಗಿ 'ಫೈನ್ಸ್' ಅಥವಾ ಅದಿರು ಪುಡಿ ಎಂದು ಕರೆಯಲಾಗುತ್ತದೆ. ಸ್ಥಳೀಯ ಉಕ್ಕು ಕಾರ್ಖಾನೆಗಳಿಗೆ ಇದು ತ್ಯಾಜ್ಯವಿದ್ದಂತೆ. ಕಳೆದ 14 ವರ್ಷಗಳಿಂದ ರಫ್ತು ನಿಷೇಧವಿದ್ದ ಕಾರಣ, ಮಾರಾಟವಾಗದ ಕೋಟ್ಯಂತರ ಟನ್ ಈ ಬಗೆಯ ಅದಿರು ಗಣಿ ಪ್ರದೇಶಗಳಲ್ಲಿ ಬೆಟ್ಟದಂತೆ ಶೇಖರಣೆಯಾಗಿದೆ. ಇದು ಗಣಿ ಮಾಲೀಕರಿಗೂ ತಲೆನೋವು ಆಗಿತ್ತು. ಸರ್ಕಾರ ಇದೀಗ ಅದಿರು ರಫ್ತು ಮಾಡಲು ಒಪ್ಪಿಗೆ ನೀಡಿರುವುದರಿಂದ ಗಣಿ ಮಾಲೀಕರು ನಿಟ್ಟಿಸಿರುವ ಬಿಡುವಂತಾಗಿದೆ. ಅಲ್ಲದೇ, ಈವರೆಗೂ ಬಳ್ಳಾರಿಯ ಗಣಿ ಮಾಲೀಕರು ತಮ್ಮ ಅದಿರನ್ನು ಕೇವಲ ಸ್ಥಳೀಯ ಉಕ್ಕು ಕಾರ್ಖಾನೆಗಳಿಗೆ ಮಾರಾಟ ಮಾಡಬೇಕಿತ್ತು. ಚೆನ್ನೈ ಅಥವಾ ಕೃಷ್ಣಪಟ್ಟಣಂ ಅಂತಹ ದೂರದ ಬಂದರುಗಳನ್ನು ಅವಲಂಬಿಸಬೇಕಿತ್ತು. ಈಗ ಕಾರವಾರ, ಬೆಲೆಕೇರಿ, ತದಡಿ ಅಂತಹ ಹತ್ತಿರದ ಕಿರು ಬಂದರುಗಳು ತೆರೆದರೆ, ಚೀನಾ ಸೇರಿದಂತೆ ಹೊರದೇಶಗಳಿಗೆ ನೇರವಾಗಿ ಮತ್ತು ಸುಲಭವಾಗಿ ಅದಿರನ್ನು ರಫ್ತು ಮಾಡಲು ಬಾಗಿಲು ತೆರೆದಂತಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗೆ ನೇರ ಪ್ರವೇಶ ದೊರೆತಂತಾಗಿದೆ.
ಬಳ್ಳಾರಿ ಜಿಲ್ಲೆಗೆ ಕಿರು ಬಂದರುಗಳು ಏಕೆ 'ಸಂಜೀವಿನಿ'?
ಕಿರು ಬಂದರುಗಳ ಆರಂಭವು ಬಳ್ಳಾರಿಗಣಿ ಉದ್ಯಮಿಗಳಿಗೆ 'ಸಂಜೀವಿನಿ'ಯಂತಾಗಲಿದೆ. ದೇಶದ ಭಾರತದ ಉಕ್ಕು ಕಾರ್ಖಾನೆಗಳು ಸಾಮಾನ್ಯವಾಗಿ ಶೇ.60 ಗಿಂತ ಹೆಚ್ಚಿನ ಗುಣಮಟ್ಟದ ಅದಿರನ್ನು ಬಯಸುತ್ತವೆ. ಬಳ್ಳಾರಿಯಲ್ಲಿ ಶೇ.58 ಗಿಂತ ಕಡಿಮೆ ಇರುವ ಕೋಟ್ಯಂತರ ಟನ್ ಅದಿರು ಗುಡ್ಡೆ ಬಿದ್ದಿದೆ. ಇದಕ್ಕೆ ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಭಾರಿ ಬೇಡಿಕೆಯಿದೆ. ರಫ್ತು ಆರಂಭವಾದರೆ ಈ 'ತ್ಯಾಜ್ಯ'ವೆಂದು ಪರಿಗಣಿಸಲಾದ ಅದಿರನ್ನು ಮಾರಿ ಹಣ ಮಾಡಬಹುದು. ಸ್ಥಳೀಯವಾಗಿ ಎಷ್ಟೇ ಕಡಿಮೆ ಬೆಲೆಗೆ ನೀಡಿದರೂ ಮಾರಾಟವಾಗದ ಈ ಕಡಿಮೆ ದರ್ಜೆಯ ಅದಿರಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಚೀನಾದಲ್ಲಿ ಬೇಡಿಕೆಯಿದೆ. ರಫ್ತು ಅನುಮತಿಯಿಂದಾಗಿ, ಗಣಿ ಮಾಲೀಕರು ತಮ್ಮ ಗಣಿಗಳಲ್ಲಿ ಜಾಗ ಆಕ್ರಮಿಸಿಕೊಂಡಿರುವ, ಇದುವರೆಗೂ ʼಜಡ ಆಸ್ತಿ' ಯಾಗಿದ್ದ ಅದಿರನ್ನು ಮಾರಿ ನಗದು ಮಾಡಿಕೊಳ್ಳಬಹುದು. ಇದು ಉದ್ಯಮಕ್ಕೆ ತಕ್ಷಣದ ಬಂಡವಾಳ ಒದಗಿಸುತ್ತದೆ.
ಕಿರು ಬಂದರುಗಳ ಆರಂಭವು ಬಳ್ಳಾರಿ ಮತ್ತು ಚಿತ್ರದುರ್ಗದ ಗಣಿ ಉದ್ಯಮಿಗಳಿಗೆ 'ಸಂಜೀವಿನಿ'ಯಂತಾಗಲಿದೆ. ದೇಶದ ಭಾರತದ ಉಕ್ಕು ಕಾರ್ಖಾನೆಗಳು ಸಾಮಾನ್ಯವಾಗಿ ಶೇ.60 ಗಿಂತ ಹೆಚ್ಚಿನ ಗುಣಮಟ್ಟದ ಅದಿರನ್ನು ಬಯಸುತ್ತವೆ. ಬಳ್ಳಾರಿಯಲ್ಲಿ ಶೇ.58 ಗಿಂತ ಕಡಿಮೆ ಇರುವ ಕೋಟ್ಯಂತರ ಟನ್ ಅದಿರು ಗುಡ್ಡೆ ಬಿದ್ದಿದೆ. ಇದಕ್ಕೆ ಚೀನಾ ಮತ್ತು ಆಗ್ನೇಯ ಏಷ್ಯಾದಲ್ಲಿ ಭಾರಿ ಬೇಡಿಕೆಯಿದೆ. ರಫ್ತು ಆರಂಭವಾದರೆ ಈ 'ತ್ಯಾಜ್ಯ'ವೆಂದು ಪರಿಗಣಿಸಲಾದ ಅದಿರನ್ನು ಮಾರಿ ಹಣ ಮಾಡಬಹುದು. ಸ್ಥಳೀಯವಾಗಿ ಎಷ್ಟೇ ಕಡಿಮೆ ಬೆಲೆಗೆ ನೀಡಿದರೂ ಮಾರಾಟವಾಗದ ಈ ಕಡಿಮೆ ದರ್ಜೆಯ ಅದಿರಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ವಿಶೇಷವಾಗಿ ಚೀನಾದಲ್ಲಿ ಬೇಡಿಕೆಯಿದೆ. ರಫ್ತು ಅನುಮತಿಯಿಂದಾಗಿ, ಗಣಿ ಮಾಲೀಕರು ತಮ್ಮ ಗಣಿಗಳಲ್ಲಿ ಜಾಗ ಆಕ್ರಮಿಸಿಕೊಂಡಿರುವ, ಇದುವರೆಗೂ ʼಜಡ ಆಸ್ತಿ' ಯಾಗಿದ್ದ ಅದಿರನ್ನು ಮಾರಿ ನಗದು ಮಾಡಿಕೊಳ್ಳಬಹುದು. ಇದು ಉದ್ಯಮಕ್ಕೆ ತಕ್ಷಣದ ಬಂಡವಾಳ ಒದಗಿಸುತ್ತದೆ. ಅಲ್ಲದೇ, ಗಣಿಗಳಲ್ಲಿ 'ತ್ಯಾಜ್ಯ'ದಂತೆ ಬಿದ್ದಿದ್ದ ಕಡಿಮೆ ದರ್ಜೆಯ ಅದಿರನ್ನು ವಿದೇಶಕ್ಕೆ ಮಾರಾಟ ಮಾಡಿ ಹಣಗಳಿಸಲು ಗಣಿ ಮಾಲೀಕರಿಗೆ ಸುವರ್ಣಾವಕಾಶ ಸಿಗಲಿದೆ.
ಕಡಿಮೆ ದರ್ಜೆಯ ಅದಿರಿನ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಿರುತ್ತದೆ. ಇದನ್ನು ಲಾಭದಾಯಕವಾಗಿ ಮಾರಾಟ ಮಾಡಬೇಕೆಂದರೆ ಸಾಗಾಣಿಕೆ ವೆಚ್ಚ ಕಡಿಮೆ ಇರಲೇಬೇಕು. ಬಳ್ಳಾರಿಯಿಂದ ಚೆನ್ನೈ ಅಥವಾ ಕೃಷ್ಣಪಟ್ಟಣಂ ಬಂದರಿಗೆ ರೈಲ್ವೆ ಮೂಲಕ ಕಳುಹಿಸಿದರೆ ಸಾಗಾಣಿಕೆ ವೆಚ್ಚ ವಿಪರೀತವಾಗುತ್ತದೆ. ಆಗ ಲಾಭಾಂಶ ಇರುವುದಿಲ್ಲ. ಆದರೆ, ಕಾರವಾರ ಅಥವಾ ಉತ್ತರ ಕನ್ನಡದ ಇತರೆ ಕಿರು ಬಂದರುಗಳಿಗೆ ಸಾಗಾಣಿಕೆ ಮಾಡುವುದು ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಲಾಭದಾಯಕವಾಗಬಹುದು. ಅಲ್ಲದೇ, ಕಾರವಾರ ಅಥವಾ ಇತರೆ ಕಿರು ಬಂದರುಗಳು ಬಳ್ಳಾರಿಗೆ ಭೌಗೋಳಿಕವಾಗಿ ಹತ್ತಿರವಿರುವುದರಿಂದ, ರಸ್ತೆ ಅಥವಾ ರೈಲು ಮಾರ್ಗದ ಮೂಲಕ ಕಡಿಮೆ ವೆಚ್ಚದಲ್ಲಿ ಸಾಗಿಸಬಹುದು. ಸಾರಿಗೆ ವೆಚ್ಚದಲ್ಲಿ ಪ್ರತಿ ಟನ್‌ಗೆ 200-500 ರೂ. ಉಳಿತಾಯವಾಗಬಹುದು. ಈ 'ಲಾಜಿಸ್ಟಿಕ್ಸ್ ಅನುಕೂಲ'ವೇ ಈಗ ಬಳ್ಳಾರಿಯ ಅದಿರನ್ನು ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿಸುತ್ತಿದೆ.
ಅಂತಾರಾಷ್ಟ್ರೀಯ ನೇರ ಮಾರುಕಟ್ಟೆಗೆ ಪ್ರವೇಶ
ರಾಜ್ಯ ಸರ್ಕಾರವು ಕಿರು ಬಂದರುಗಳ ಮೂಲಕ ಅದಿರು ರಫ್ತಿಗೆ ಮರುಚಾಲನೆ ನೀಡಲು ಮುಂದಾಗಿರುವುದು ಪ್ರಮುಖವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡಿದೆ. ಬಳ್ಳಾರಿ ವಲಯದಲ್ಲಿ ಲಭ್ಯವಿರುವ ಅದಿರಿನ ಗುಣಮಟ್ಟ ಮತ್ತು ಜಾಗತಿಕ ಬೇಡಿಕೆಯನ್ನು ಗಮನಿಸಿದರೆ, ಈ ವಹಿವಾಟಿನಲ್ಲಿ ಚೀನಾ ದೇಶವು ಅತಿ ದೊಡ್ಡ ಗ್ರಾಹಕನಾಗಿ ಹೊರಹೊಮ್ಮಲಿದೆ. ಅಲ್ಲದೇ, ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ಇಂಡೋನೇಷಿಯಾದಂತಹ ರಾಷ್ಟ್ರಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.
ಚೀನಾ ದೇಶವು ಕಡಿಮೆ ದರ್ಜೆಯ ಅದಿರನ್ನು ಸಂಸ್ಕರಿಸಿ, ಅದನ್ನು ಉನ್ನತೀಕರಿಸಿ ಅಥವಾ ಇತರೆ ಉನ್ನತ ದರ್ಜೆಯ ಅದಿರಿನೊಂದಿಗೆ ಮಿಶ್ರಣ ಮಾಡಿ ಉಕ್ಕು ತಯಾರಿಸುವಲ್ಲಿ ಪ್ರಭುತ್ವ ಸಾಧಿಸಿದೆ. ಜಾಗತಿಕವಾಗಿ ಉಕ್ಕಿನ ಬೆಲೆ ಏರಿಳಿತವಾಗುತ್ತಿರುವಾಗ, ಚೀನಾದ ಉಕ್ಕು ತಯಾರಕರು ಉತ್ಪಾದನಾ ವೆಚ್ಚ ತಗ್ಗಿಸಲು ಭಾರತದಂತಹ ದೇಶಗಳಿಂದ ಸಿಗುವ ಅಗ್ಗದ ಅದಿರನ್ನು ಆಮದು ಮಾಡಿಕೊಳ್ಳಲು ಮುಗಿಬೀಳುತ್ತಾರೆ. ಬಳ್ಳಾರಿಯ ಶೇ.56-57 ರಷ್ಟು ಅದಿರು ಅವರಿಗೆ ಅತ್ಯಂತ ಅಗ್ಗವಾಗಿ ಸಿಗುವ ಕಚ್ಚಾ ವಸ್ತುವಾಗಿದೆ. ಕೆಲವು ಆಗ್ನೇಯ ಏಷ್ಯಾದ ದೇಶಗಳಲ್ಲಿ ಪರಿಸರ ನಿಯಮಗಳು ಭಾರತದಷ್ಟು ಕಠಿಣವಾಗಿಲ್ಲದ ಕಾರಣ, ಅವರು ಈ ಧೂಳು ಮಿಶ್ರಿತ ಅದಿರನ್ನು ಸುಲಭವಾಗಿ ಬಳಸಿಕೊಳ್ಳುತ್ತಾರೆ.
ಚೀನಾ ಪ್ರಮುಖ ಮಾರುಕಟ್ಟೆ
ಬಳ್ಳಾರಿ ವಲಯದಲ್ಲಿ ಶೇಖರಣೆಯಾಗಿರುವ ಕೋಟ್ಯಂತರ ಟನ್ ಅದಿರು 'ಐರನ್ ಓರ್ ಫೈನ್ಸ್' (ಪುಡಿ ರೂಪದ ಅದಿರು) ಮತ್ತು ಶೇ.58 ರಷ್ಟಕ್ಕಿಂತ ಕಡಿಮೆ ಗುಣಮಟ್ಟದ್ದಾಗಿದೆ. ದೇಶದ ಉಕ್ಕು ಕಾರ್ಖಾನೆಗಳು ಇದನ್ನು ಬಳಸಲು ಹಿಂದೇಟು ಹಾಕುತ್ತವೆ. ಆದರೆ, ಚೀನಾ ದೇಶವು ಕಡಿಮೆ ದರ್ಜೆಯ ಅದಿರನ್ನು ಸಂಸ್ಕರಿಸಿ ಉಕ್ಕು ತಯಾರಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಆಸ್ಟ್ರೇಲಿಯಾ ಮತ್ತು ಬ್ರೆಜಿಲ್‌ನಿಂದ ಉತ್ತಮ ಗುಣಮಟ್ಟದ ಅದಿರನ್ನು ಆಮದು ಮಾಡಿಕೊಳ್ಳುವುದು ಚೀನಾಕ್ಕೆ ದುಬಾರಿಯಾಗುತ್ತದೆ. ಭಾರತದ ಕಿರು ಬಂದರುಗಳಿಂದ ಸಿಗುವ ಅಗ್ಗದ ಅದಿರನ್ನು ಖರೀದಿಸಿ, ತಮ್ಮ ಉಕ್ಕು ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಚೀನಾ ಬಯಸುತ್ತದೆ. ನಿಷೇಧಕ್ಕೂ ಮುನ್ನ ಬೆಲೆಕೇರಿ ಮತ್ತು ಕಾರವಾರ ಬಂದರುಗಳಿಂದ ರಫ್ತಾದ ಬಹುತೇಕ ಅದಿರು ಚೀನಾದ ಶಾಂಘೈ, ಟಿಯಾಂಜಿನ್ ಬಂದರುಗಳಿಗೆ ತಲುಪಿತ್ತು. ಈಗಲೂ ಅದೇ ಮಾರುಕಟ್ಟೆ ಪ್ರಮುಖವಾಗಿದೆ.
ಜಪಾನ್ ಮತ್ತು ದಕ್ಷಿಣ ಕೊರಿಯಾ ಸಾಂಪ್ರದಾಯಿಕ ಗ್ರಾಹಕರು
ಈ ದೇಶಗಳು ಭಾರತದ ದೀರ್ಘಕಾಲೀನ ಅದಿರು ಖರೀದಿದಾರರಾಗಿದ್ದಾರೆ. ಆದರೆ, ಇವರು ಸಾಮಾನ್ಯವಾಗಿ ಉತ್ತಮ ಗುಣಮಟ್ಟದ ಅದಿರು ಮತ್ತು 'ಪೆಲೆಟ್ಸ್' ಗಳನ್ನು ಬಯಸುತ್ತಾರೆ. ಎಂಎಂಟಿಸಿ ಒಪ್ಪಂದಗಳ ಮೂಲಕ ನಡೆಯುವ ಅಧಿಕೃತ ವಹಿವಾಟುಗಳು ಹೆಚ್ಚಾಗಿ ಪ್ರಮುಖ ಬಂದರುಗಳ ಮೂಲಕ ನಡೆಯುತ್ತವೆ. ಕಿರು ಬಂದರುಗಳಿಂದ ಇವರ ಖರೀದಿ ಪ್ರಮಾಣ ಚೀನಾಕ್ಕೆ ಹೋಲಿಸಿದರೆ ತೀರಾ ಕಡಿಮೆ ಎಂದು ಹೇಳಲಾಗಿದೆ.
ಇತರೆ ಆಗ್ನೇಯ ಏಷ್ಯಾದ ದೇಶಗಳು
ವಿಯೆಟ್ನಾಂ ಮತ್ತು ಇಂಡೋನೇಷ್ಯಾದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಉಕ್ಕು ಉತ್ಪಾದನೆ ಹೆಚ್ಚಾಗುತ್ತಿದ್ದು, ಇವು ಕೂಡ ಕರ್ನಾಟಕದ ಅದಿರಿಗೆ ಹೊಸ ಮಾರುಕಟ್ಟೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ಸನ್ನಿವೇಶದಲ್ಲಿ ಚೀನಾದ ಆರ್ಥಿಕತೆ ಪ್ರಸ್ತುತ ಸ್ವಲ್ಪ ಮಂದಗತಿಯಲ್ಲಿದೆ. ಆದರೂ, ಅಲ್ಲಿನ ಮೂಲಸೌಕರ್ಯ ಯೋಜನೆಗಳಿಗೆ ಉಕ್ಕಿನ ಬೇಡಿಕೆ ಇದ್ದೇ ಇದೆ. ಬಳ್ಳಾರಿಯ ಕಡಿಮೆ ದರ್ಜೆಯ ಅದಿರನ್ನು ಕರಗಿಸಲು ಚೀನಾ ಬಿಟ್ಟರೆ ಜಗತ್ತಿನಲ್ಲಿ ಸದ್ಯಕ್ಕೆ ಬೇರೆ ದೊಡ್ಡ ಪರ್ಯಾಯ ಮಾರುಕಟ್ಟೆಯಿಲ್ಲ ಎಂದು ಹೇಳಲಾಗಿದೆ.
ದಾಸ್ತಾನು ವಿಲೇವಾರು, ಉದ್ಯೋಗ ಸೃಷ್ಟಿ
ಗಣಿ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ ಸುಮಾರು 25 ರಿಂದ 30 ದಶಲಕ್ಷ ಟನ್‌ಗೂ ಅಧಿಕ ಹಳೆಯ ಅದಿರಿನ ದಾಸ್ತಾನು ಇದೆ. ಇದನ್ನು ರಫ್ತು ಮಾಡುವುದರಿಂದ ಗಣಿ ಪ್ರದೇಶದಲ್ಲಿ ಹೊಸ ಗಣಿಗಾರಿಕೆಗೆ ಜಾಗ ಸಿಗುತ್ತದೆ. ರಫ್ತಾಗುವ ಪ್ರತಿ ಟನ್ ಅದಿರಿಗೂ ಸರ್ಕಾರಕ್ಕೆ ರಾಯಲ್ಟಿ, ಜಿಲ್ಲಾ ಖನಿಜ ಪ್ರತಿಷ್ಠಾನ ಮತ್ತು ಎನ್‌ಎಂಇಟಿ ಶುಲ್ಕಗಳು ಸಂದಾಯವಾಗುತ್ತವೆ. ನಿರುಪಯುಕ್ತವಾಗಿ ಬಿದ್ದಿದ್ದ ಅದಿರು ಈಗ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ಆದಾಯ ತರಲಿದೆ. ಬಳ್ಳಾರಿಯಿಂದ ಕರಾವಳಿಗೆ ಅದಿರು ಸಾಗಿಸಲು ಸಾವಿರಾರು ಟ್ರಕ್‌ಗಳ ಅಗತ್ಯವಿರುತ್ತದೆ. ಇದರಿಂದ ಸಾರಿಗೆ ಉದ್ಯಮ, ಡಾಬಾಗಳು, ಪೆಟ್ರೋಲ್ ಬಂಕ್‌ಗಳು ಮತ್ತು ಬಂದರು ಕಾರ್ಮಿಕರಿಗೆ ಪರೋಕ್ಷ ಉದ್ಯೋಗ ದೊರೆಯುತ್ತದೆ ಎನ್ನಲಾಗಿದೆ.
ದೇಶೀಯ ಲಾಭ ಬಳ್ಳಾರಿ ಗಣಿ ಉದ್ಯಮಕ್ಕೆ ಹೆಚ್ಚಿನ ಲಾಭ ಇಲ್ಲ
ಕೇವಲ ದೇಶೀಯ ಮಾರುಕಟ್ಟೆಯನ್ನು ನೆಚ್ಚಿಕೊಂಡು ಕುಳಿತರೆ ಬಳ್ಳಾರಿಯ ಗಣಿ ಉದ್ಯಮ ಚೇತರಿಸಿಕೊಳ್ಳುವುದು ಕಷ್ಟ. ಹೆಚ್ಚಿನ ಲಾಭವೂ ಸಹ ಇಲ್ಲ. ವಿಶ್ವ ಮಾರುಕಟ್ಟೆಯಲ್ಲಿ ಪ್ರಸ್ತುತ ಅದಿರಿನ ಬೆಲೆ ಸಾಧಾರಣ ಮಟ್ಟದಲ್ಲಿದೆ. ಈ ಸಮಯದಲ್ಲೇ ದಾಸ್ತಾನು ಖಾಲಿ ಮಾಡುವುದು ಬುದ್ಧಿವಂತಿಕೆ. ಕಿರು ಬಂದರುಗಳಲ್ಲಿ 'ಮಿಡ್-ಸೀ ಲೋಡಿಂಗ್' (ನಡು ಸಮುದ್ರದಲ್ಲಿ ಹಡಗಿಗೆ ತುಂಬುವುದು) ವ್ಯವಸ್ಥೆಯನ್ನು ಬಲಪಡಿಸಿದರೆ, ದೊಡ್ಡ ಹಡಗುಗಳಿಗೂ ಅದಿರು ತುಂಬಿಸಿ ಸಾಗಾಟ ವೆಚ್ಚವನ್ನು ಮತ್ತಷ್ಟು ಕಡಿಮೆ ಮಾಡಬಹುದು.
ಕಿರು ಬಂದರುಗಳ ಮೂಲಕ ರಫ್ತು ಮರುಚಾಲನೆಯು ಬಳ್ಳಾರಿ ಗಣಿ ಉದ್ಯಮಕ್ಕೆ ಕತ್ತಲೆಯಲ್ಲಿ ಕಂಡ ಬೆಳಕಿನಂತಿದೆ. ಸ್ಥಳೀಯವಾಗಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದ ಕಡಿಮೆ ದರ್ಜೆಯ ಅದಿರಿನ ರಾಶಿಯನ್ನು ವಿದೇಶಕ್ಕೆ ರಫ್ತು ಮಾಡಿ, ಅದನ್ನು ಆರ್ಥಿಕ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಈ ಪ್ರಕ್ರಿಯೆಯು ನಿಜಕ್ಕೂ ವಲಯದ ಪಾಲಿಗೆ 'ಸಂಜೀವಿನಿ'ಯೇ ಸರಿ. ಆದರೆ, ಇದು ಸುಸ್ಥಿರವಾಗಿ ಮುಂದುವರಿಯಬೇಕಾದರೆ ಪಾರದರ್ಶಕತೆ ಮತ್ತು ಪರಿಸರ ಕಾಳಜಿ ಅತ್ಯಗತ್ಯವಾಗಿದೆ.
ಈ ಸರಣಿಯ ಮೊದಲ ಭಾಗ 3/12/2025 ರಂದು ಪ್ರಕಟವಾಗಿದೆ. ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ..
Part-1: ಕಿರುಬಂದರುಗಳ ಮೂಲಕ ಮತ್ತೆ ಅದಿರು ರಫ್ತು| 500 ಕೋಟಿ ವಾರ್ಷಿಕ ಆದಾಯ, 10,000 ಉದ್ಯೋಗ ಸೃಷ್ಟಿ?