ಪ್ರಜ್ವಲ್ ರೇವಣ್ಣ ಪ್ರಕರಣ| ಜೀವಾವಧಿ ಶಿಕ್ಷೆ ಪ್ರಶ್ನಿಸಿದ ಮಧ್ಯಂತರ ಅರ್ಜಿ ವಜಾ
ಕೆ.ಆರ್. ನಗರ ಮೂಲದ ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಆರೋಪದ ಮೇಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪ್ರಜ್ವಲ್ ರೇವಣ್ಣ, ಈ ಆದೇಶವನ್ನು ಪ್ರಶ್ನಿಸಿ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಪ್ರಜ್ವಲ್ ರೇವಣ್ಣ
ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಹಿನ್ನಡೆಯಾಗಿದೆ. ಜೀವಾವಧಿ ಶಿಕ್ಷೆ ಅಮಾನತು ಮಾಡುವಂತೆ ಹಾಗೂ ಜಾಮೀನು ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಕೆ.ಆರ್. ನಗರ ಮೂಲದ ಮನೆ ಕೆಲಸದ ಮಹಿಳೆ ಮೇಲಿನ ಅತ್ಯಾಚಾರ ಆರೋಪದ ಮೇಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈಚೆಗೆ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮತ್ತು ಟಿ. ವೆಂಕಟೇಶ್ ನಾಯ್ಕ್ ನೇತೃತ್ವದ ಪೀಠವು ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿ, ಜಾಮೀನು ನೀಡಲು ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ
ಹೊಳೆನರಸೀಪುರದ ಗನ್ನಿಕಾಡದ ತೋಟದ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ 48 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪ ಪ್ರಜ್ವಲ್ ರೇವಣ್ಣ ಮೇಲಿತ್ತು. 2021 ರಲ್ಲಿ ಹಾಸನದ ತೋಟದ ಮನೆ ಮತ್ತು ಬೆಂಗಳೂರಿನ ನಿವಾಸದಲ್ಲಿ ಎರಡು ಬಾರಿ ಅತ್ಯಾಚಾರ ನಡೆಸಿದ್ದು, ಈ ಕೃತ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಕಳೆದ ಆಗಸ್ಟ್ 2 ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಪ್ರಜ್ವಲ್ ರೇವಣ್ಣಗೆ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ದೋಷಿ ಎಂದು ಪ್ರಕಟಿಸಿ, ಜೀವಾವಧಿ ಶಿಕ್ಷೆ ಹಾಗೂ 11.50 ಲಕ್ಷ ರೂ. ದಂಡ ವಿಧಿಸಿತ್ತು.