ಗದ್ದುಗೆ ಗುದ್ದಾಟ|ಕೆ.ಸಿ. ವೇಣುಗೋಪಾಲ್ ಎದುರೇ ಸಿದ್ದರಾಮಯ್ಯ-ಡಿಕೆಶಿ ಬಣಗಳ ಬಲ ಪ್ರದರ್ಶನ!
ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಹುದ್ದೆಯತ್ತ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ʼಗದ್ದುಗೆ ಗುದ್ದಾಟʼಕ್ಕೆ ʼಬ್ರೇಕ್‌ಫಾಸ್ಟ್́ʼ ರಾಜಕಾರಣದ ಬಳಿಕ ಅಲ್ಪವಿರಾಮ ಬಿದ್ದಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿಎಂ ಹುದ್ದೆಯತ್ತ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ʼಗದ್ದುಗೆ ಗುದ್ದಾಟʼಕ್ಕೆ ʼಬ್ರೇಕ್‌ಫಾಸ್ಟ್́ʼ ರಾಜಕಾರಣದ ಬಳಿಕ ಅಲ್ಪವಿರಾಮ ಬಿದ್ದಿತ್ತು. ಆದರೆ, ಎರಡೂ ಬಣಗಳಿಂದ ಶಕ್ತಿ ಪ್ರದರ್ಶನ ಆಗುತ್ತಿರುವುದು ಮುಂದುವರಿದಿದೆ!
ಮಂಗಳೂರಿನಲ್ಲಿ ಬುಧವಾರ ನಡೆದ ನಾರಾಯಣ ಗುರು -ಮಹಾತ್ಮಾಗಾಂಧಿ ಮಾತುಕತೆಯ ಶತಮಾನೋತ್ಸವ ಕಾರ್ಯಕ್ರಮ ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ "ಅಹಿಂದʼ(ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಶಕ್ತಿಪ್ರದರ್ಶನವಾಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಬಹುತೇಕ ಎಲ್ಲ ವರ್ಗದ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗಿಯಾದರೂ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ಇರಲಿಲ್ಲ ಎನ್ನಲಾಗಿದೆ.
ಅದಕ್ಕೂ ಮುನ್ನ ವಿಮಾನನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯ ಎದುರೆ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರಿಂದ ʼಡಿ.ಕೆ., ಡಿ.ಕೆ." ಎಂಬ ಘೋಷಣೆ ಎದುರಾಯಿತು. ಕೂಗಳತೆ ದೂರದಲ್ಲಿ ತಮ್ಮ ವಾಹನದತ್ತ ತೆರಳಿದ ಸಿದ್ದರಾಮಯ್ಯ ಅವರಿಗೆ ಅವರದೇ ಬೆಂಬಲಿಗರ ಪಡೆಯಿಂದ ʼಸಿದ್ದು, ಸಿದ್ದು.. ಪೂರ್ಣಾವಧಿ ಸಿಎಂ ಸಿದ್ದು" ಎಂಬ ಘೋಷಣೆಗಳೂ ಕೇಳಿಬಂದವು. ವಿಶೇಷ ಎಂದರೆ, ಎಐಸಿಸಿ ಮುಖ್ಯಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಮುಂದೆಯೇ ಈ ಘಟನೆಗಳು ನಡೆದವು.
ಆ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದ ರಾಜಕಾರಣದ ಬಿಸಿ ಹೈಕಮಾಂಡ್‌ಗೆ ಮತ್ತೊಮ್ಮೆ ತಟ್ಟಿದಂತಾಗಿದೆ.
ಘಟನೆ ನಡೆದದ್ದು ಹೀಗೆ..
ನಾರಾಯಣ ಗುರು-ಗಾಂಧಿ ಸಂವಾದ ಶತಮಾನೋತ್ಸವದಲ್ಲಿ ಭಾಗಿಯಾಗಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಡಿ.ಕೆ.ಶಿವಕುಮಾರ್ ಆಪ್ತ ಹಾಗೂ ಮಂಗಳೂರು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮಿಥುನ್ ರೈ ಹಾಗೂ ಅವರ ಬೆಂಬಲಿಗರ ನೇತೃತ್ವದಲ್ಲಿ ಡಿ.ಕೆ.. ಡಿ.ಕೆ ಎಂದು ಘೋಷಣೆ ಕೂಗಿದ ಕಾರ್ಯಕರ್ತರು, ವೇಣುಗೋಪಾಲ್ ಅವರಿಗೆ ಪರೋಕ್ಷ ಸಂದೇಶ ನೀಡಲು ಪ್ರಯತ್ನಿಸಿದರು. ಡಿಕೆಶಿ ಅನುಪಸ್ಥಿತಿಯಲ್ಲಿ ಅವರ ಬೆಂಬಲಿಗರು ಈ ಘೋಷಣೆಗಳನ್ನು ಕೂಗಿದರು. ದೊಡ್ಡ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರ ನೂಕಾಟ-ತಳ್ಳಾಟದಿಂದ ವಿಮಾನ ನಿಲ್ದಾಣದಲ್ಲಿ ಕೆಲವು ಕ್ಷಣಗಳು ಗದ್ದಲದ ವಾತಾವರಣ ನಿರ್ಮಾಣವಾಯಿತು. ವೇಣುಗೋಪಾಲ್ ತಮ್ಮ ವಾಹನಕ್ಕೆ ತಲುಪಲು ಹರಸಾಹಸ ಪಡಬೇಕಾದಂತಾಯಿತು.
ಬಳಿಕ ಸಿದ್ದರಾಮಯ್ಯ ವಿಮಾನ ನಿಲ್ದಾಣದ ಹೊರಬಂದು ತಮ್ಮ ಅಧಿಕೃತ ವಾಹನದತ್ತ ತೆರಳುತ್ತಿದ್ದಂತೆಯೇ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ ದೊಡ್ಡ ಸಂಖ್ಯೆಯ ಕಾರ್ಯಕರ್ತರು "ಸಿದ್ದು… ಸಿದ್ದು… ಪೂರ್ಣಾವಧಿ ಸಿಎಂ ಸಿದ್ದುʼ ಎಂದು ಘೋಷಣೆ ಕೂಗಿದರು. ಇದು ಸಿದ್ದರಾಮಯ್ಯ ಪರವಾಗಿ ಅವರೇ ಪೂರ್ಣಾವಧಿ ಮುಖ್ಯಮಂತ್ರಿ ಅಗಬೇಕು ಎಂಬ ಒತ್ತಡ ಹೇರುವ ಯತ್ನವಾಗಿತ್ತು.
ಡಿ.ಕೆ. ಶಿವಕುಮಾರ್ ಹೇಳಿಕೆ
ಮಂಗಳೂರು ಕಾರ್ಯಕ್ರಮಕ್ಕೆ ಆಹ್ವಾನವಿರದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರಿನಿಂದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ತೆರಳುವ ಸಂದರ್ಭದಲ್ಲಿ ಮಂಗಳೂರು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಅಭಿಮಾನಿಗಳು ಘೋಷಣೆ ಕೂಗಿರಬಹುದು. ಡಿಕೆ.. ಡಿಕೆ.. ಘೋಷಣೆಯನ್ನ ಕಳೆದ 1೦ವರ್ಷದಿಂದ ಕೂಗುತ್ತಿದ್ದಾರೆ. ಕೆಲವರು ಮೋದಿ ಅಂತಾರೆ,ಕೆಲವರು ಡಿಕೆ ಎನ್ನುತ್ತಾರೆ,ಕೆಲವರು ರಾಹುಲ್ ಅಂತಾರೆ ,ಕೆಲವರು ಸಿದ್ದು ಎನ್ನುತ್ತಾರೆ," ಎಂದು ಹೇಳಿದರು.
ಜತೆಗೆ ಸಿಎಂ ಹಾಗೂ ಕೆ.ಸಿ. ವೇಣುಗೋಪಾಲ್ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಅದರಲ್ಲಿ ತಪ್ಪೇನು ಇಲ್ಲ ಎಂದು ಹೇಳಿದ್ದಾರೆ. "ವೇಣುಗೋಪಾಲ್ ಭೇಟಿ ಮಾಡಿದ್ರೆ ತಪ್ಪೇನು? ಸಿಎಂ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿ,ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿ ," ಅದರಲ್ಲೇನು ತಪ್ಪಿಲ್ಲ," ಎಂದು ಪ್ರತಿಕ್ರಿಯಿಸಿದರು.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ?
ಮಂಗಳೂರಿನಲ್ಲಿ ನಿಮ್ಮ ಅಭಿಮಾನಿಗಳು ಡಿ.ಕೆ, ಡಿ.ಕೆ.. ಎಂದು ಕೂಗಿದ್ದು, ಸಿದ್ದರಾಮಯ್ಯ ಅಭಿಮಾನಿಗಳು ಪೂರ್ಣಾವಧಿ ಸಿಎಂ ಎಂದು ಕೂಗಿದ್ದಾರೆ ಎಂದು ಕೇಳಿದ ಪತ್ರಕರ್ತರ ಪ್ರಶ್ನೆಗೆ, “ಅಭಿಮಾನಿಗಳು ಈ ರೀತಿ ಕೂಗುವುದು ಸಹಜ. ಜನ ಕಳೆದ ಹತ್ತು ವರ್ಷಗಳಿಂದ ಡಿಕೆ, ಡಿಕೆ.. ಎಂದು ಕೂಗುತ್ತಿದ್ದಾರೆ. ಇದರಲ್ಲಿ ಹೊಸತೇನೂ ಇಲ್ಲ. ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ.. ಎಂದು ಕೂಗುವುದಿಲ್ಲವೇ? ಕಾಂಗ್ರೆಸ್ ಕಾರ್ಯಕರ್ತರು ರಾಹುಲ್.., ರಾಹುಲ್... ಎಂದು ಕೂಗುತ್ತಾರೆ. ಸಿದ್ದರಾಮಯ್ಯ ಅಭಿಮಾನಿಗಳು ಸಿದ್ದು, ಸಿದ್ದು... ಎಂದು ಕೂಗುತ್ತಾರೆ. ಇದರಲ್ಲಿ ತಪ್ಪೇನಿಲ್ಲ, ಇದಕ್ಕೆಲ್ಲ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಇದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ರಾಜಕಾರಣದಲ್ಲಿ ಜೈಕಾರ, ಧಿಕ್ಕಾರ, ಅಭಿಮಾನದ ಮಾತುಗಳು ಸಹಜ” ಎಂದು ತಿಳಿಸಿದರು.
ಚರ್ಚೆ ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್
ಸಿದ್ದರಾಮಯ್ಯ-ಕೆಸಿವಿ ಚರ್ಚೆ
ಮುಖ್ಯಮಂತ್ರಿ ಸ್ಥಾನದ ಸಂಬಂಧ ಗದ್ದುಗೆ ಗುದ್ದಾಟ ಸಂದರ್ಭದಲ್ಲೇ ಮಂಗಳೂರಿನಲ್ಲಿ ಸಿದ್ದರಾಮಯ್ಯ ಮತ್ತು ಕೆ.ಸಿ. ವೇಣುಗೋಪಾಲ್ ಭೇಟಿಯಾಗಿ ಚರ್ಚೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದೆ. ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದ ಉಭಯ ನಾಯಕರು ಇತ್ತೀಚಿಗೆ ನಡೆದ ರಾಜಕೀಯ ಬೆಳವಣಿಗೆಗಳ ಬಳಿಕ ಭೇಟಿಯಾಗುತ್ತಿರುವುದು ಇದು ಮೊದಲ ಬಾರಿಯಾಗಿದೆ.
ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಗೊಂದಲಗಳು ಶುರುವಾಗುವುದಕ್ಕೆ ಕಾರಣಗಳನ್ನು ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಡಿಕೆಶಿ ಬೆಂಬಲಿಗ ಶಾಸಕರು ದೆಹಲಿಗೆ ಹೋಗಿ ನೀಡಿದ ಬಹಿರಂಗ ಹೇಳಿಕೆಗಳು ಈ ರಾಜಕೀಯ ಗೊಂದಲಗಳಿಗೆ ಪ್ರಮುಖ ಕಾರಣ ಎಂದು ವಿವರಿಸಿದ್ದಾರೆ ಎಂದು ಹೇಳಲಾಗಿದೆ. "ಹೈಕಮಾಂಡ್ ಸೂಚನೆ ಮೇರೆಗೆ ನಾನು, ಡಿ.ಕೆ. ಶಿವಕುಮಾರ್ ಬ್ರೇಕ್ ಫಾಸ್ಟ್ ಮಾಡಿ ಒಗ್ಗಟ್ಟಿನ ಸಂದೇಶ ನೀಡಿದ್ದೇವೆ. ರಾಹುಲ್ ಗಾಂಧಿ ಸಮ್ಮುಖದಲ್ಲಿ ಈ ಎಲ್ಲಾ ಗೊಂದಲಗಳಿಗೆ ಅಂತಿಮ ತೆರೆ ಎಳೆಯಬೇಕು," ಎಂದು ಸಿದ್ದರಾಮಯ್ಯ ಅವರು ವೇಣುಗೋಪಾಲ್ ಅವರಿಗೆ ವಿನಂತಿಸಿದ್ದಾರೆ ಎಂದೂ ಹೇಳಲಾಗಿದೆ.
ಅಧಿವೇಶನ ಮುಗಿದ ಬಳಿಕ ಚರ್ಚಿಸಲು ಹೈಕಮಾಂಡ್ ಸಭೆ ಕರೆಯುವ ಸಾಧ್ಯತೆ ಬಗ್ಗೆ ವೇಣುಗೋಪಾಲ್ ಅವರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಹಿಂದ ನಾಯಕರು
ಅಹಿಂದ ಶಕ್ತಿ ಪ್ರದರ್ಶನ?
ಶೋಷಿತರ, ಹಿಂದುಳಿದ ವರ್ಗಗಳ ಪರ ದನಿಯಾಗಿದ್ದ ಸಮಾಜ ಸುಧಾರಕ ನಾರಾಯಣ ಗುರು ಅವರು ಹಾಗೂ ಮಹಾತ್ಮಾ ಗಾಂಧಿ ಅವರು ಭೇಟಿಯಾಗಿ ಚರ್ಚಿಸಿ ನೂರು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ನಡೆದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅಹಿಂದ ವರ್ಗದ ಬಹುತೇಕ ನಾಯಕರು ಹಾಗೂ ಸಿದ್ದರಾಮಯ್ ಬಣದ ಪ್ರಮುಖರು ಹಾಜರಿದ್ದರು. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಸಚಿವರಾದ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಂಸದ ಬಿ. ಜನಾರ್ದನ ಪೂಜಾರಿ ಮತ್ತಿತರ ಮುಖಂಡರು ಭಾಗವಹಿಸಿದ್ದರು. ಜತೆಗೆ ಅನೇಕ ಹಿಂದುಳಿದ ವರ್ಗಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸುವ ಮೂಲಕ ಅಹಿಂದ ವರ್ಗದ ಬಲಪ್ರದರ್ಶನದಂತೆ ಭಾಸವಾಯಿತು.