ಇಂಡಿಗೋ ವಿಮಾನ ಸೇವೆ ವ್ಯತ್ಯಯ| ಒಂದೇ ದಿನ 42 ವಿಮಾನಗಳು ರದ್ದು
ಕಾರ್ಯಾಚರಣೆಯ ಕಾರಣಗಳು ಮತ್ತು ಸರಣಿ ವಿಳಂಬದಿಂದಾಗಿ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ ಎಂದು ಇಂಡಿಗೋ ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಮುಂದುವರಿದಿದೆ. ಬುಧವಾರ ಮಧ್ಯಾಹ್ನದವರೆಗೆ ಒಟ್ಟು 42 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. ಇದರಲ್ಲಿ 22 ಆಗಮನ ಮತ್ತು 20 ನಿರ್ಗಮನ ವಿಮಾನಗಳು ಸೇರಿವೆ.
ಕಾರ್ಯಾಚರಣೆ ಕಾರಣಗಳು ಮತ್ತು ಸರಣಿ ವಿಳಂಬದಿಂದಾಗಿ ವಿಮಾನಗಳ ಹಾರಾಟ ರದ್ದುಪಡಿಸಲಾಗಿದೆ ಎಂದು ಇಂಡಿಗೋ ಸಂಸ್ಥೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ. ಆದಷ್ಟು ಬೇಗನೇ ಸಮಸ್ಯೆ ಬಗೆಹರಿಸಲು ತಂಡವು ಸಕ್ರಿಯವಾಗಿದೆ ಎಂಬ ಮಾಹಿತಿಯಿದೆ.
ದೆಹಲಿ, ಹೈದರಾಬಾದ್, ಮುಂಬೈ, ಚೆನ್ನೈ, ಗೋವಾ, ಕೋಲ್ಕತ್ತಾ ಮತ್ತು ಲಕ್ನೋ ಮುಂತಾದ ನಗರಗಳಿಂದ ಬರಬೇಕಿದ್ದ ವಿಮಾನಗಳು ರದ್ದಾಗಿವೆ. ಮುಂಬೈ, ದೆಹಲಿ, ಗೋವಾ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ ಮತ್ತು ಅಹಮದಾಬಾದ್‌ಗೆ ಹೋಗಬೇಕಿದ್ದ ವಿಮಾನಗಳ ಹಾರಾಟ ಕೂಡ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಕೂಡ ವಿಮಾನ ವಿಮಾನ ನಿಲ್ದಾಣದಲ್ಲಿ 20 ಇಂಡಿಗೋ ವಿಮಾನಗಳ ಸಂಚಾರ ರದ್ದಾಗಿತ್ತು. ಕಳೆದ ಒಂದು ವಾರದಿಂದ ಇಂಡಿಗೋ ವಿಮಾನಗಳಲ್ಲಿ ಒಂದು ಗಂಟೆಯಿಂದ ಮೂರು ಗಂಟೆಗಳವರೆಗೆ ವಿಳಂಬವಾಗುತ್ತಿರುವ ಕಾರಣ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅನೇಕ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.