ಬೆಂಗಳೂರಿನ ಸಮೃದ್ಧಿ ತ್ರಿಪಾಠಿ ಮುಡಿಗೆ 'ಲಿಟಲ್ ಮಿಸ್ ಇಂಡಿಯಾ' ಕಿರೀಟ
ನಾನ್ಹಿಪಾರಿ ಲಿಟಲ್ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಬೆಂಗಳೂರಿನ ಸಮೃದ್ಧಿ ತ್ರಿಪಾಠಿ ಗೆಲುವು ಸಾಧಿಸಿ ಲಿಟಲ್ ಮಿಸ್ ಇಂಡಿಯಾ ಕಿರೀಟ ಧರಿಸಿಕೊಂಡಿದ್ದಾರೆ. ಈ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ವತಿಯಿಂದ ಆಯೋಜಿಸಲಾಗುವ 'ನಾನ್ಹಿಪಾರಿ ಲಿಟಲ್ ಮಿಸ್ ಇಂಡಿಯಾ' ಸ್ಪರ್ಧೆಯು ಕೇವಲ ಒಂದು ಸೌಂದರ್ಯ ಪ್ರದರ್ಶನವಲ್ಲ. ಅದು ದೇಶದ ಎಳೆ ವಯಸ್ಸಿನ ಪ್ರತಿಭೆಗಳನ್ನು ಗುರುತಿಸುವ ಬೃಹತ್ ವೇದಿಕೆಯಾಗಿದೆ. ಈ ವರ್ಷದ ಸ್ಪರ್ಧೆಯು ತನ್ನ 25ನೇ ಬೆಳ್ಳಿಹಬ್ಬದ ಆವೃತ್ತಿಯನ್ನು ಪೂರೈಸಿದ್ದು, ಈ ಐತಿಹಾಸಿಕ ಘಟ್ಟದಲ್ಲಿ ಬೆಂಗಳೂರಿನ ಸಮೃದ್ಧಿ ತ್ರಿಪಾಠಿ ಗೆಲುವು ಸಾಧಿಸಿ ಲಿಟಲ್ ಮಿಸ್ ಇಂಡಿಯಾ ಕಿರೀಟ ಧರಿಸಿಕೊಂಡಿದ್ದಾರೆ.
ಈ ಸ್ಪರ್ಧೆಯು ಅತ್ಯಂತ ವ್ಯವಸ್ಥಿತ ಮತ್ತು ಹಂತಗಳನ್ನು ಒಳಗೊಂಡಿತ್ತು. ಆಯೋಜಕರು ಪೂನಾ, ಬೆಂಗಳೂರು, ಮುಂಬೈ, ದೆಹಲಿ, ಅಗರ್ತಲಾ ಸೇರಿದಂತೆ ದೇಶದ 25 ಪ್ರಮುಖ ನಗರಗಳಲ್ಲಿ ಮೂರು ತಿಂಗಳ ಕಾಲ ಆಡಿಷನ್‌ಗಳನ್ನು ನಡೆಸಿದ್ದರು. ಈ ವರ್ಷ ದಾಖಲೆ ಮಟ್ಟದಲ್ಲಿ ಅಂದರೆ ಸುಮಾರು 5 ಸಾವಿರಕ್ಕೂ ಹೆಚ್ಚು ಬಾಲಕಿಯರು ನೋಂದಣಿ ಮಾಡಿಕೊಂಡಿದ್ದರು. ಕೇವಲ ದೈಹಿಕ ಸೌಂದರ್ಯಕ್ಕಿಂತ ಹೆಚ್ಚಾಗಿ ಬಾಲಕಿಯರ ಬಹುಮುಖಿ ಪ್ರತಿಭೆಯನ್ನು ಇಲ್ಲಿ ಒರೆಗೆ ಹಚ್ಚಲಾಗಿತ್ತು. ಕ್ಯಾಮೆರಾ ಎದುರು ಆತ್ಮವಿಶ್ವಾಸದಿಂದ ನಿಲ್ಲುವ ಕಲೆ, ಶಿಸ್ತು ಮತ್ತು ನಡಿಗೆಯಲ್ಲಿನ ಆಕರ್ಷಣೆ, ಮಾತುಗಾರಿಕೆ, ಬುದ್ಧಿವಂತಿಕೆ ಮತ್ತು ಸಂವಹನ ಕೌಶಲ್ಯದ ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಮೃದ್ಧಿ ತ್ರಿಪಾಠಿ ಅವರು ಮುಖ್ಯ ಕಿರೀಟದ ಜೊತೆಗೆ 'ಮಿಸ್ ಊರ್ವಶಿ' ಎಂಬ ವಿಶೇಷ ವಿಭಾಗದ ಬಹುಮಾನವನ್ನೂ ಗೆದ್ದುಕೊಂಡಿದ್ದಾರೆ.
ಈ ಸ್ಪರ್ಧೆಯ ವಿಶೇಷತೆಯೆಂದರೆ ಅದು ನೀಡುವ ಬಹುಮಾನದ ಸ್ವರೂಪ. ಗೆಲುವು ಸಾಧಿಸಿದ ಸಮೃದ್ಧಿ ಅವರಿಗೆ ಒಟ್ಟು 28 ಲಕ್ಷ ರೂ. ಮೌಲ್ಯದ ಬಹುಮಾನ ಲಭಿಸಿದೆ. ಇದರಲ್ಲಿ 10 ಲಕ್ಷ ನಗದು ಬಹುಮಾನವಾದರೆ, ಉಳಿದ ಮೊತ್ತವು ಕೆಐಐಟಿ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯದಲ್ಲಿ ವ್ಯಾಸಂಗ ಮಾಡಲು ಶೇ. 100ರಷ್ಟು ಶೈಕ್ಷಣಿಕ ಶುಲ್ಕ ವಿನಾಯಿತಿಯನ್ನು ಒಳಗೊಂಡಿದೆ. ಇದು ಕೇವಲ ಗ್ಲಾಮರ್ ಲೋಕಕ್ಕೆ ಸೀಮಿತವಾಗದೆ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಭವಿಷ್ಯದ ಸಬಲೀಕರಣಕ್ಕೂ ಒತ್ತು ನೀಡುವ ಆಯೋಜಕರ ದೂರದೃಷ್ಟಿಯನ್ನು ತೋರಿಸುತ್ತದೆ. ರನ್ನರ್ ಅಪ್‌ಗಳಾದ ಪ್ರಾಂಜಲ್ ಶರ್ಮಾ ಮತ್ತು ಪಿ. ಪ್ರಾರ್ಥಿನಿ ಅವರಿಗೂ ಲಕ್ಷಾಂತರ ರೂಪಾಯಿಗಳ ಬಹುಮಾನ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ನೀಡಲಾಗಿದೆ.
25 ವರ್ಷಗಳ ವೈಭವೋಪೇತ ಹಾದಿ
2001ರಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ 'ನಾನ್ಹಿಪಾರಿ' ಇಂದು ರಾಷ್ಟ್ರಮಟ್ಟದ ದೈತ್ಯ ವೇದಿಕೆಯಾಗಿ ಬೆಳೆದಿದೆ. ಕಳೆದ 25 ವರ್ಷಗಳಲ್ಲಿ ಸುಮಾರು 15 ಸಾವಿರ ಬಾಲಕಿಯರು ಈ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಫೆಮಿನಾ ಮಿಸ್ ಇಂಡಿಯಾ 2024ರ ವಿಜೇತೆ ನಿಕಿತಾ ಪೋರ್ವಾಲ್ ಮತ್ತು 2023ರ ವಿಜೇತೆ ನಂದಿನಿ ಗುಪ್ತಾ ಅವರ ಉಪಸ್ಥಿತಿಯು ಈ ವೇದಿಕೆಯು ಭವಿಷ್ಯದ ಮಿಸ್ ಇಂಡಿಯಾಗಳನ್ನು ತಯಾರು ಮಾಡುವ ನರ್ಸರಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಈ ಹಿಂದೆ ನಡೆದ ಸ್ಪರ್ಧೆಗಳಲ್ಲೂ ಕರ್ನಾಟಕದ ಬಾಲಕಿಯರು ವಿಜೇತರಾಗುತ್ತಿರುವುದು ರಾಜ್ಯದ ಕಲಾತ್ಮಕ ಸಬಲೀಕರಣವನ್ನು ತೋರಿಸುತ್ತದೆ. ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ದೊರೆಯುವ ತರಬೇತಿ ಮತ್ತು ಪೋಷಕರ ಬೆಂಬಲವು ರಾಷ್ಟ್ರಮಟ್ಟದಲ್ಲಿ ಮಿಂಚಲು ಸಹಕಾರಿಯಾಗಿದೆ. ಕೆಐಐಟಿ ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ ಅವರ ಸಾಮಾಜಿಕ ಕಳಕಳಿ ಮತ್ತು ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸುವ ಹಂಬಲ ಈ ಕಾರ್ಯಕ್ರಮದ ಯಶಸ್ಸಿನ ಮೂಲ ಮಂತ್ರವಾಗಿದೆ.
ಸಮೃದ್ಧಿ ತ್ರಿಪಾಠಿ ಅವರ ಈ ಸಾಧನೆಯು ಕನಸು ಕಾಣುವ ಸಾವಿರಾರು ಬಾಲಕಿಯರಿಗೆ ಸ್ಫೂರ್ತಿಯಾಗಿದೆ. 'ಲಿಟಲ್ ಮಿಸ್ ಇಂಡಿಯಾ' ಕೇವಲ ಕಿರೀಟ ಧಾರಣೆಯಲ್ಲ, ಬದಲಾಗಿ ಅದೊಂದು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮೈಲಿಗಲ್ಲಾಗಿದೆ. ಪ್ರತಿಭೆ, ಶಿಸ್ತು ಮತ್ತು ಶಿಕ್ಷಣದ ಸಮನ್ವಯವು ಹೇಗೆ ಯಶಸ್ಸನ್ನು ತಂದುಕೊಡುತ್ತದೆ ಎಂಬುದಕ್ಕೆ ಈ ಸ್ಪರ್ಧೆಯು ಮಾದರಿಯಾಗಿದೆ