Namma Metro| ಕೇಂದ್ರದಿಂದ ವಿಳಂಬ: ಮೆಟ್ರೋ 2ನೇ ಹಂತದ ಖರ್ಚು 40,425 ಕೋಟಿಗೆ ಏರಿಕೆ
ಯೋಜನೆಗಾಗಿ ಅಂತರಾಷ್ಟ್ರೀಯ ಬ್ಯಾಂಕುಗಳಾದ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ ಹಾಗೂ ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್‌ನಿಂದ ಪಡೆದ ಸಾಲದ ಮೇಲಿನ ಬಡ್ಡಿಯೂ ಯೋಜನೆಯ ಒಟ್ಟು ವೆಚ್ಚದ ಅಂದಾಜನ್ನು ಹೆಚ್ಚಿಸಿದೆ.
ಎಐ ಆಧಾರಿತ ಚಿತ್ರ
ಬೆಂಗಳೂರಿನ ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿರುವ ನಮ್ಮ ಮೆಟ್ರೋವನ್ನು ಮತ್ತಷ್ಟು ವಿಸ್ತರಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರ 2ನೇ ಹಂತದ ಪರಿಷ್ಕೃತ ಯೋಜನೆಗೆ ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಮೆಟ್ರೋ 2ನೇ ಹಂತದ ಯೋಜನೆಯನ್ನು ಸಿದ್ದಪಡಿಸಿ ಜೂನ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಇದುವರೆಗೂ ಕೇಂದ್ರ ಸರ್ಕಾರ ಅನುಮತಿ ನೀಡದಿದ್ದರ ಪರಿಣಾಮ ಪರಿಷ್ಕೃತ ಮೊತ್ತ 26,405 ಕೋಟಿ ರೂ. ನಿಂದ 40,425 ಕೋಟಿ ರೂ.ಗೆ ಏರಿಕೆಯಾಗಿದ್ದು, ಪರಿಷ್ಕೃತ ಯೋಜನೆಗೆ ಒಪ್ಪಿಗೆ ನೀಡಬೇಕೆಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ದಿ ಉಸ್ತುವಾರಿ ಡಿ.ಕೆ. ಶಿವಕುಮಾರ್ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದಾರೆ.
ಏನಿದು ಮೆಟ್ರೋ 2ನೇ ಹಂತ
ಬೆಂಗಳೂರಿನ ಮೆಟ್ರೋ ಸಾರಿಗೆಯನ್ನು ಪ್ರತಿ ದಿನ ಲಕ್ಷಾಂತರ ಪ್ರಯಾಣಿಕರು ಬಳಸುತ್ತಿದ್ದು, ತ್ವರಿತವಾಗಿ ನಗರದ ವಿವಿಧ ಭಾಗಗಳಿಗೆ ತಲುಪಲು ಹಾಗೂ ಟ್ರಾಫಿಕ್ ನಿಯಂತ್ರಿಸಲು ಸಹಕಾರಿಯಾಗಿದೆ. ಮೊದಲ ಹಂತದ ನಂತರ ಸರ್ಕಾರ ಮೆಟ್ರೋ 2ನೇ ಹಂತವನ್ನು ಪ್ರಾರಂಭಿಸುವ ಮೂಲಕ ಮತ್ತಷ್ಟು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಹಾಗೂ ಟ್ರಾಫಿಕ್ ಮತ್ತು ಮಾಲಿನ್ಯ ನಿಯಂತ್ರಿಸುವುದು ಸರ್ಕಾರದ ಉದ್ದೇಶವಾಗಿದೆ. ಆದ್ದರಿಂದಲೇ ಸರ್ಕಾರ ಮೆಟ್ರೋ 2ನೇ ಹಂತದ ಯೋಜನೆಯನ್ನು ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆ ಜೂನ್‌ನಲ್ಲೇ ಪ್ರಸ್ತಾವನೆ ಕಳಿಸಿದೆ. ಆದರೆ ಇದೀಗ ಪ್ರಸ್ತಾವನೆಯಲ್ಲಿನ ಮೊತ್ತ ಹೆಚ್ಚಾಗಿದ್ದು, ಪರಿಷ್ಕೃತ ಪ್ರಸ್ತಾವನೆಗೆ ಅನುಮತಿ ನೀಡಲು ಮನವಿ ಮಾಡಿದೆ.
ಕೆ. ಆರ್. ಪುರಂ ನಿಂದ ಸಿಲ್ಕ್‌ಬೋರ್ಡ್‌ವರೆಗಿನ ನಿಲ್ದಾಣಗಳು (ಎಐ ಆಧಾರಿತ ಚಿತ್ರ)
2026 ಅಂತ್ಯಕ್ಕೆ ಗಡುವು
ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರದವರೆಗಿನ ಈ ಮಾರ್ಗವನ್ನು ಪೂರ್ಣಗೊಳಿಸಲು ಬಿಎಂಆರ್‌ಸಿಎಲ್ 2026ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ಮಾರ್ಗದ ಕಾಮಗಾರಿಗಳಿಗೆ 2021-22ರಲ್ಲಿ ಅಧಿಕೃತವಾಗಿ ಚಾಲನೆ ಪಡೆದದ್ದು, ಬೃಹತ್ ಮೂಲಸೌಕರ್ಯ ಯೋಜನೆ ಇದಾಗಿರುವುದರಿಂದ ಇದಕ್ಕೆ ಸುಮಾರು 5 ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಇದುವರೆಗೂ ಸುಮಾರು 18.2 ಕಿ.ಮೀ ಉದ್ದದ ಕಾಮಗಾರಿಯಲ್ಲಿ ಸುಮಾರು ಶೇ. 65 ರಿಂದ 70 ರಷ್ಟು ಪೂರ್ಣಗೊಂಡಿದ್ದು, ಇನ್ನೂ ಶೇ. 30ರಷ್ಟು ಕಾಮಗಾರಿ ಪೂರ್ಣಗೊಳ್ಳಬೇಕಿದೆ.ಆದ್ದರಿಂದ ವೆಚ್ಚವೂ ಹೆಚ್ಚಾಗಲಿದೆ.
ಶೇ.60 ಕಾಮಗಾರಿ ಪೂರ್ಣ
ಕೆ.ಆರ್. ಪುರದಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ 36.4 ಕಿ.ಮೀ ಉದ್ದದ ಮಾರ್ಗವಾಗಿದ್ದು, ಶೇ. 45 ರಿಂದ 55 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.ಕೆ.ಆರ್. ಪುರದಿಂದ ಹೆಬ್ಬಾಳದವರೆಗಿನ ಭಾಗದಲ್ಲಿ ಪಿಲ್ಲರ್ ನಿರ್ಮಾಣದ ಕೆಲಸ ಸುಮಾರು ಶೇ. 60 ರಷ್ಟು ಮುಗಿದಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗಿನ ಭಾಗದಲ್ಲಿ ಯಲಹಂಕದ ನಂತರ ಭೂಸ್ವಾಧೀನ ಪ್ರಕ್ರಿಯೆ ಮುಗಿದು ಕಾಮಗಾರಿ ವೇಗ ಪಡೆದುಕೊಂಡಿದೆ.ವಿಮಾನ ನಿಲ್ದಾಣದ ಆವರಣದೊಳಗೆ ಎರಡು ನಿಲ್ದಾಣಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಮತ್ತು ಬಿಐಎಎಲ್ (BIAL) ಸಮನ್ವಯದೊಂದಿಗೆ ಕೆಲಸ ಸಾಗತ್ತಿದೆ. ಇಡೀ ನೀಲಿ ಮಾರ್ಗವನ್ನು (54.6 ಕಿ.ಮೀ) ಪರಿಗಣಿಸಿದರೆ ಒಟ್ಟಾರೆಯಾಗಿ ಶೇ. 55-60 ರಷ್ಟು ಸಿವಿಲ್ ಕೆಲಸಗಳು ಪೂರ್ಣಗೊಂಡಿವೆ. ಬಿಎಂಆರ್‌ಸಿಎಲ್ ಈ ಸಂಪೂರ್ಣ ಮಾರ್ಗವನ್ನು 2026ರ ಡಿಸೆಂಬರ್ ವೇಳೆಗೆ ಮುಗಿಸುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಸಿಗ್ನಲಿಂಗ್ ಮತ್ತು ಹಳಿ ಅಳವಡಿಕೆಯ ಕೆಲಸಗಳು ಸಿವಿಲ್ ಕೆಲಸ ಮುಗಿದ ನಂತರ ಆರಂಭವಾಗಬೇಕಿರುವುದರಿಂದ, ಸಂಪೂರ್ಣ ಕಾರ್ಯಾಚರಣೆಗೆ 2027ರ ಆರಂಭವಾಗಬಹುದು ಎಂದು ಅಂದಾಜಿಸಲಾಗಿದೆ.
ಕೆ.ಆರ್. ಪುರಂನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವ ನೀಲಿ ಮಾರ್ಗದ ಮೆಟ್ರೋ (ಎಐ ಆಧಾರಿತ ಚಿತ್ರ)
ಪರಿಷ್ಕೃತ ವೆಚ್ಚ ಹೆಚ್ಚಳಕ್ಕೆ ಕಾರಣವೇನು ?
ಬೆಂಗಳೂರು ಮೆಟ್ರೋ ಎರಡನೇ ಹಂತದ ಯೋಜನೆಯ ವೆಚ್ಚವು ಆರಂಭಿಕ ಅಂದಾಜಿಗಿಂತ ಗಣನೀಯವಾಗಿ ಹೆಚ್ಚಾಗಲು ಹಲವಾರು ತಾಂತ್ರಿಕ ಮತ್ತು ಆರ್ಥಿಕ ಕಾರಣಗಳಿವೆ. ಯೋಜನೆಗೆ ಅಗತ್ಯವಿರುವ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ನೀಡಬೇಕಾದ ಪರಿಹಾರದ ಮೊತ್ತವು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಆಸ್ತಿ ಮೌಲ್ಯ ಗಗನಕ್ಕೇರಿರುವುದು ಯೋಜನೆಯ ಒಟ್ಟು ವೆಚ್ಚದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಯೋಜನೆ ಆರಂಭವಾದ ಸಮಯದಿಂದ ಇಲ್ಲಿಯವರೆಗೆ ಸಿಮೆಂಟ್, ಉಕ್ಕು , ಕಬ್ಬಿಣ ಮತ್ತು ಇತರ ನಿರ್ಮಾಣ ಸಾಮಗ್ರಿಗಳ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗಿವೆ.
ವಿನ್ಯಾಸ ಬದಲಾವಣೆಯಿಂದಲೂ ವಿಳಂಬ
ಕೋವಿಡ್-19 ಲಾಕ್‌ಡೌನ್, ಕಾರ್ಮಿಕರ ಕೊರತೆ ಮತ್ತು ತಾಂತ್ರಿಕ ಸವಾಲುಗಳಿಂದಾಗಿ ಕಾಮಗಾರಿ ನಿಗದಿತ ಸಮಯಕ್ಕಿಂತ ವಿಳಂಬವಾಗಿದೆ. ಯಾವುದೇ ದೊಡ್ಡ ಯೋಜನೆಯು ವಿಳಂಬವಾದಷ್ಟೂ ಅದರ 'ಹಣದುಬ್ಬರ' ವೆಚ್ಚ ಹೆಚ್ಚಾಗುತ್ತಲೇ ಇರುತ್ತದೆ. ಕೆಲವು ಕಡೆಗಳಲ್ಲಿ ಮೆಟ್ರೋ ಮಾರ್ಗದ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಗಿದೆ. ಉದಾಹರಣೆಗೆ, ಸುರಂಗ ಮಾರ್ಗಗಳ ಉದ್ದ ಹೆಚ್ಚಳ, ನಿಲ್ದಾಣಗಳ ಸ್ಥಳಾಂತರ ಅಥವಾ ಹೊಸ ತಾಂತ್ರಿಕ ಸೌಲಭ್ಯಗಳನ್ನು ಅಳವಡಿಸುವುದು ವೆಚ್ಚ ಹೆಚ್ಚಾಗಲು ಕಾರಣವಾಗಿದೆ.
ಜಿಎಸ್‌ಟಿ ದರಗಳಲ್ಲಿನ ಬದಲಾವಣೆಗಳು ಮತ್ತು ಆಮದು ಮಾಡಿಕೊಳ್ಳುವ ಬಿಡಿಭಾಗಗಳ (ಕೋಚ್‌ಗಳು, ಸಿಗ್ನಲಿಂಗ್ ಉಪಕರಣಗಳು) ಮೇಲಿನ ಸುಂಕಗಳು ಸಹ ಒಟ್ಟು ಮೊತ್ತವನ್ನು ಹೆಚ್ಚಿಸಿವೆ. ಯೋಜನೆಗಾಗಿ ಅಂತರಾಷ್ಟ್ರೀಯ ಬ್ಯಾಂಕುಗಳಾದ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ ಹಾಗೂ ಯುರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್‌ನಿಂದ ಪಡೆದ ಸಾಲದ ಮೇಲಿನ ಬಡ್ಡಿಯೂ ಯೋಜನೆಯ ಒಟ್ಟು ವೆಚ್ಚದ ಅಂದಾಜನ್ನು ಹೆಚ್ಚಿಸಿದೆ.
ಕೇಂದ್ರದ ಒಪ್ಪಿಗೆ ಅಗತ್ಯವೇಕೆ ?
ಯೋಜನೆಯು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿರುವುದರಿಂದ, ಪರಿಷ್ಕೃತ ಮೊತ್ತಕ್ಕೆ ಕೇಂದ್ರ ಸಂಪುಟದ ಒಪ್ಪಿಗೆ ಅತ್ಯಗತ್ಯವಾಗಿದೆ. ಕೇಂದ್ರ ಸರ್ಕಾರವು ಒಟ್ಟು ಯೋಜನಾ ವೆಚ್ಚದ ಸುಮಾರು ಶೇ. 20 ರಷ್ಟು ಹಣವನ್ನು ಇಕ್ವಿಟಿ ರೂಪದಲ್ಲಿ ನೀಡುತ್ತದೆ. ಅಷ್ಟೇ ಪ್ರಮಾಣದ (ಶೇ. 20) ಹಣವನ್ನು ರಾಜ್ಯ ಸರ್ಕಾರವೂ ಭರಿಸುತ್ತದೆ.ಇಕ್ವಿಟಿ ಮತ್ತು ಇತರ ತೆರಿಗೆ ವಿನಾಯಿತಿಗಳನ್ನು ಒಳಗೊಂಡಂತೆ ಕೇಂದ್ರ ಸರ್ಕಾರದ ಒಟ್ಟು ಕೊಡುಗೆಯು ಯೋಜನೆಯ ಅಂದಾಜು ಮೊತ್ತದ ಶೇ. 20 ರಿಂದ 25 ರಷ್ಟು ಇರುತ್ತದೆ. ಯೋಜನೆಯ ಸುಮಾರು ಶೇ. 60 ರಷ್ಟು ಹಣವನ್ನು ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲದ ರೂಪದಲ್ಲಿ ಪಡೆಯಲಾಗುತ್ತದೆ. ಈ ಸಾಲಕ್ಕೆ ಕೇಂದ್ರ ಸರ್ಕಾರವು ಗ್ಯಾರಂಟಿ ನೀಡುತ್ತದೆ. ಇತ್ತೀಚೆಗೆ ಎರಡನೇ ಹಂತದ ಯೋಜನಾ ವೆಚ್ಚವು ಸುಮಾರು 39,417 ಕೋಟಿ ರೂ. ಗಳಿಗೆ ಏರಿಕೆಯಾಗಿರುವುದರಿಂದ, ಈ ಹೆಚ್ಚುವರಿ ಮೊತ್ತದಲ್ಲಿ ಕೇಂದ್ರವು ತನ್ನ ಪಾಲನ್ನು ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಮಾಡಿದೆ. ಕೇಂದ್ರದ ಅನುಮೋದನೆ ದೊರೆತರೆ, ಪರಿಷ್ಕೃತ ವೆಚ್ಚದ ಶೇ. 20 ರಷ್ಟನ್ನು ಕೇಂದ್ರವು ಹೆಚ್ಚುವರಿಯಾಗಿ ಭರಿಸಬೇಕಾಗುತ್ತದೆ.
ಸಾಲ ಮರುಪಾವತಿ ಯಾರ ಜವಾಬ್ದಾರಿ ?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ. 20 ರಷ್ಟು ಹಣ ಹೂಡಿಕೆ ಮಾಡಿದರೆ, ಉಳಿದ ಶೇ. 60 ರಷ್ಟು ಹಣವನ್ನು ಸಾಲದ ಮೂಲಕ ಕ್ರೋಢೀಕರಿಸಲಾಗುತ್ತದೆ. ಈ ಸಾಲದ ಮರುಪಾವತಿಯ ಜವಾಬ್ದಾರಿಯು ಪ್ರಮುಖವಾಗಿ ಮೆಟ್ರೋ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ಮೇಲಿರುತ್ತದೆ.
ಯೋಜನೆಯಲ್ಲಿ ಎರಡು ಹಂತ
ಮೆಟ್ರೋ ಮಾರ್ಗದ ಎರಡನೇ ಹಂತ ಸುಮಾರು 72 ಕಿ.ಮೀ ಉದ್ದದ ಮಾರ್ಗವನ್ನು ಹೊಂದಿದ್ದು, ಪ್ರಮುಖ ನಗರ ಭಾಗಗಳನ್ನು ಸಂಪರ್ಕಿಸುತ್ತದೆ. ಇದರಲ್ಲಿ ಹಂತ 2ಎ ಹೊರವರ್ತುಲ ರಸ್ತೆ (ORR) ಮತ್ತು 2ಬಿ ಏರ್‌ಪೋರ್ಟ್ ಮಾರ್ಗವನ್ನು ಒಳಗೊಂಡಿದೆ.
ಹಂತ 2ಎ: ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರದವರೆಗೆ ಸಂಪರ್ಕ ಕಲ್ಪಿಸಲು ಮೆಟ್ರೋ ಎರಡನೇ ಹಂತದ ಹಳದಿ ಮಾರ್ಗವನ್ನು ಪ್ರಸ್ತಾಪಿಸಲಾಗಿದ್ದು, ಈ ಮಾರ್ಗದಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್, ಇದು ಹಳದಿ ಮಾರ್ಗ ಮತ್ತು ಓಆರ್‌ಆರ್ ಮಾರ್ಗ ಸಂಧಿಸುವ ಇಂಟರ್ಚೇಂಜ್ ನಿಲ್ದಾಣವಾಗಿದೆ.ನಂತರದಲ್ಲಿ ಎಚ್‌ಎಸ್‌ಆರ್ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬೀಸನಹಳ್ಳಿ, ಮಾರತಹಳ್ಳಿ, ಇಸ್ರೋ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಸರಸ್ವತಿ ನಗರದಿಂದ ಕೆ.ಆರ್. ಪುರಂ ತಲುಪಲಿದೆ. ಒಟ್ಟು 13 ನಿಲ್ದಾಣಗಳನ್ನು ಒಳಗೊಂಡಿದೆ. ಇದು ಬೆಂಗಳೂರಿನ ಪ್ರಮುಖ ಐಟಿ ಹಬ್‌ಗಳನ್ನು ಸಂಪರ್ಕಿಸುವ ಅತ್ಯಂತ ಮಹತ್ವದ ಮಾರ್ಗವಾಗಿದೆ.ಕೆ.ಆರ್. ಪುರಂ (ವೈಟ್‌ಫೀಲ್ಡ್ ಮಾರ್ಗ) ಮತ್ತು ವಿಮಾನ ನಿಲ್ದಾಣ ಮಾರ್ಗವನ್ನು (ಹಂತ 2ಬಿ) ಸಂಪರ್ಕಿಸುವ ಪ್ರಮುಖ ಜಂಕ್ಷನ್ ಆಗಿದೆ.
ಹಂತ 2ಬಿ: ಕೆ.ಆರ್. ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿ ಈ ನೀಲಿ ಮಾರ್ಗದಲ್ಲಿ ಒಟ್ಟು 17 ನಿಲ್ದಾಣಗಳನ್ನು ಒಳಗೊಂಡಿದೆ. ಇದು ಸುಮಾರು 36.4 ಕಿ.ಮೀ ಉದ್ದದ ಮಾರ್ಗವಾಗಿದ್ದು, ಈ ಮಾರ್ಗದಲ್ಲಿ ಕೆ.ಆರ್. ಪುರಂ, ಇದು ಹಂತ 2ಎ ಮಾರ್ಗದೊಂದಿಗೆ ಸಂಪರ್ಕ ಹೊಂದುವ ಇಂಟರ್ಚೇಂಜ್ ನಿಲ್ದಾಣವಾಗಿದೆ ನಂತರ, ಕಸ್ತೂರಿ ನಗರ, ಹೊರಮಾವು, ಎಚ್‌ಆರ್‌ಬಿಆರ್, ಕಲ್ಯಾಣ ನಗರ, ಎಚ್‌ಬಿಆರ್ ಲೇಔಟ್, ನಾಗವಾರ, ಇದು ಪಿಂಕ್ ಮಾರ್ಗದೊಂದಿಗೆ ಸಂಪರ್ಕ ಹೊಂದುವ ಇಂಟರ್ಚೇಂಜ್ ನಿಲ್ದಾಣ, ವೀರಣ್ಣಪಾಳ್ಯ ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟಹಲಸೂರು, ವಿಮಾನ ನಿಲ್ದಾಣ ನಗರ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕೊನೆಯ ನಿಲ್ದಾಣವಾಗಿದೆ.