Bangalore Stampede| ಎಡವಿದ ಕೆಎಸ್‌ಸಿಎ: ಚಿನ್ನಸ್ವಾಮಿ ಸ್ಟೇಡಿಯಂ ಪಂದ್ಯಕ್ಕೆ ಅವಕಾಶ ಸಿಗದಿರಲು ಕಾರಣವೇನು?
ಚಿನ್ನಸ್ವಾಮಿ ಕ್ರೀಡಾಂಗಣದ ಬದಲಿಗೆ ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪದ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ.
ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ನ್ಯಾ.ಕುನ್ಹಾ ಆಯೋಗದ ಶಿಫಾರಸು ಜಾರಿ ಮಾಡದಿರುವುದೇ ಕ್ರಿಕೆಟ್ ಪಂದ್ಯ ಆಯೋಜನೆ ಅವಕಾಶ ಕೈ ತಪ್ಪಲು ಕಾರಣವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕುನ್ಹಾ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದ ಬಳಿಕವಷ್ಟೇ ಪಂದ್ಯ ಆಯೋಜನೆಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಮುಖ್ಯಮಂತ್ರಿ ಹಾಗೂ ತಮ್ಮೊಂದಿಗೆ ಭೇಟಿಯಾಗಿ ಚರ್ಚಿಸಿದ್ದಾರೆ. ಆದರೆ, ಕಾಲ್ತುಳಿತದ ದುರ್ಘಟನೆ ಬಳಿಕ ನಿವೃತ್ತ ನ್ಯಾ.ಕುನ್ಹಾ ನೇತೃತ್ವದ ತನಿಖಾ ಆಯೋಗ ನೀಡಿದ್ದ ಶಿಫಾರಸುಗಳನ್ನು ಜಾರಿಗೆ ತರುವಲ್ಲಿ ಕೆಎಸ್ಸಿಎ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಹಾಗಾಗಿ ಕ್ರಿಕೆಟ್ ಪಂದ್ಯಗಳನ್ನು ದೇವನಹಳ್ಳಿಗೆ ಸ್ಥಳಾಂತರಿಸಲಾಗಿದೆ ಎಂದರು.
ವೆಂಕಟೇಶ್ ಪ್ರಸಾದ್ ಅವರ ಭೇಟಿಯ ಬಳಿಕ ಕ್ರಿಕೆಟ್ ಆಯೋಜನೆ ಕುರಿತು ಪರಿಶೀಲಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಪರಿಶೀಲನೆ ವೇಳೆ, ಕುನ್ಹಾ ಆಯೋಗ ನೀಡಿದ್ದ ಶಿಫಾರಸುಗಳಲ್ಲಿ ಒಂದನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತಂದಿಲ್ಲ ಎಂಬುದು ಸ್ಪಷ್ಟವಾಗಿದೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಪಂದ್ಯಗಳಿಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಉನ್ನತ ಮಟ್ಟದ ಸಮಿತಿ ತೀರ್ಮಾನಿಸಿದೆ. ಕಾನೂನು ಪ್ರಕಾರವೇ ಎಲ್ಲ ಕ್ರಮಗಳು ನಡೆಯಬೇಕು ಎಂದು ಸರ್ಕಾರವೂ ಸ್ಪಷ್ಟವಾಗಿ ಹೇಳಿದೆ. ಒಂದೊಮ್ಮೆ ಹಾಗೆ ಮಾಡದಿದ್ದರೆ ಕುನ್ಹಾ ವರದಿಯ ಶಿಫಾರಸುಗಳಿಗೆ ಮೌಲ್ಯವೇ ಇಲ್ಲದಂತಾಗುತ್ತದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಕುನ್ಹಾ ಆಯೋಗವು ಒಟ್ಟು 17 ಪ್ರಮುಖ ಶಿಫಾರಸುಗಳನ್ನು ನೀಡಿದ್ದು, ಅವುಗಳನ್ನು ಸಂಪೂರ್ಣವಾಗಿ ಕೆಎಸ್‌ಸಿಎಗೆ ನೀಡಲಾಗಿದೆ. ಆ ಶಿಫಾರಸುಗಳ ಅನುಸಾರ ಅಗತ್ಯ ಕ್ರಮಗಳನ್ನು ಕೈಗೊಂಡು, ಸುರಕ್ಷತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ಜಾರಿಗೆ ತಂದ ನಂತರ ಮಾತ್ರ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕುನ್ಹಾ ಆಯೋಗದ ಶಿಫಾರಸುಗಳು ಏನು?
ಕಾಲ್ತುಳಿತ ಘಟನೆ ಹಿನ್ನೆಲೆ ನ್ಯಾ.ಕುನ್ಹಾ ಆಯೋಗವು ತನಿಖೆ ನಡೆಸಿದ ವರದಿ ನೀಡಿತ್ತು. ವರದಿಯಲ್ಲಿ ಸುರಕ್ಷತೆಗೆ ಸಂಬಂಧಿಸಿದಂತೆ 17 ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆ ಶಿಫಾರಸುಗಳನ್ನು ಸರ್ಕಾರ ಕೆಎಸ್‌ಸಿಎಗೆ ರವಾನಿಸಿತ್ತು.
ಪಂದ್ಯ ನಡೆಯುವ ವೇಳೆ ಪ್ರೇಕ್ಷಕರ ಸುರಕ್ಷತೆ ಖಾತ್ರಿಪಡಿಸುವ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.
ಕ್ರೀಡಾಂಗಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಅಗಲ ಹೆಚ್ಚಿಸುವುದು, ಗದ್ದಲ–ಗುಂಪು ನಿಯಂತ್ರಣಕ್ಕೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು.
ಕ್ರೀಡಾಂಗಣದ ಸಾಮರ್ಥ್ಯ ಮೀರುವಷ್ಟು ಜನರಿಗೆ ಟಿಕೆಟ್ ಮಾರಾಟಕ್ಕೆ ಸಂಪೂರ್ಣ ನಿಷೇಧ ಹೇರಬೇಕು.
ಟಿಕೆಟ್ ವ್ಯವಸ್ಥೆಯಲ್ಲಿ ಪಾರದರ್ಶಕತೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ನಕಲಿ ಟಿಕೆಟ್, ಹೆಚ್ಚುವರಿ ಟಿಕೆಟ್ ಮಾರಾಟ ತಪ್ಪಿಸಲು ಡಿಜಿಟಲ್ ಮತ್ತು ನಿಯಂತ್ರಿತ ವ್ಯವಸ್ಥೆ ಜಾರಿಗೊಳಿಸಬೇಕು.
ಪಂದ್ಯ ನಡೆಯುವ ದಿನ ಹೆಚ್ಚುವರಿ ಪೊಲೀಸ್ ಪಡೆ, ಖಾಸಗಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡುವುದು ಕಡ್ಡಾಯ. ಕಾಲ್ತುಳಿತ, ಬೆಂಕಿ, ವೈದ್ಯಕೀಯ ತುರ್ತು ಪರಿಸ್ಥಿತಿಗೆ ಸ್ಪಷ್ಟ ಮಾರ್ಗಸೂಚಿ ಹೊರಡಿಸಬೇಕು. ಇದಕ್ಕಾಗಿ ತುರ್ತು ಪರಿಸ್ಥಿತಿ ನಿರ್ವಹಣಾ ಯೋಜನೆ (Emergency Action Plan) ತರಬೇಕು.
ಕ್ರೀಡಾಂಗಣದ ಒಳಗೆ ಮತ್ತು ಹೊರಗೆ ತಕ್ಷಣ ಸ್ಪಂದಿಸುವ ವೈದ್ಯಕೀಯ ವ್ಯವಸ್ಥೆ ಒದಗಿಸಬೇಕು. ಕ್ರೀಡಾಂಗಣದ ಸುತ್ತ ಸಮರ್ಪಕ ಸಂಖ್ಯೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಗ್ನಿ ಅವಘಡಗಳಿಗೆ ತಕ್ಕಷ್ಟು ಉಪಕರಣ ಮತ್ತು ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು.
ಎಲ್ಲಾ ಸುರಕ್ಷತಾ ಮಾನದಂಡ ಪೂರೈಸಿದ ಬಳಿಕವೇ ಪಂದ್ಯಕ್ಕೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಅನುಮತಿ ನೀಡಬೇಕು. ಯಾವುದೇ ಅವಘಡಕ್ಕೆ ಕೆಎಸ್‌ಸಿಎ ಆಡಳಿತದ ಮೇಲೆ ಹೊಣೆಗಾರಿಕೆ ನಿಶ್ಚಿತಗೊಳಿಸುವ ನಿಯಮ ಮಾಡಬೇಕು.
ಪ್ರತಿ ದೊಡ್ಡ ಪಂದ್ಯಕ್ಕೂ ಮೊದಲು ತಜ್ಞರಿಂದ ಸ್ವತಂತ್ರ ಸುರಕ್ಷತಾ ಪರಿಶೀಲನೆ ನಡೆಸಬೇಕು. ಜನಸಂದಣಿ ನಿಯಂತ್ರಣಕ್ಕೆ ತರಬೇತಿ ಪಡೆದ ಸ್ವಯಂಸೇವಕರನ್ನು ನಿಯೋಜಿಸಬೇಕು. ಕ್ರೀಡಾಂಗಣದ ಒಳಗೆ ಹಾಗೂ ಸುತ್ತ ಮದ್ಯ ಸೇವನೆಗೆ ಕಠಿಣ ನಿಯಮ ಜಾರಿಗೊಳಿಸಬೇಕು.
ಪ್ರೇಕ್ಷಕರಿಗೆ ಸ್ಪಷ್ಟ ಸೂಚನೆ ನೀಡಲು ಅಗತ್ಯ ಮಾಹಿತಿ ಪ್ರಕಟಣೆ ಮತ್ತು ಸೂಚನಾ ಫಲಕಗಳನ್ನು ಹಾಕಬೇಕು. ರಾತ್ರಿ ಪಂದ್ಯಗಳಿಗೆ ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಬೆಳಕು, ಸಂಚಾರ ಮತ್ತು ಭದ್ರತೆ ಹೆಚ್ಚಿಸಬೇಕು. ಶಿಫಾರಸುಗಳನ್ನು ಜಾರಿಗೆ ತಂದಿರುವ ಬಗ್ಗೆ ಸರ್ಕಾರಕ್ಕೆ ಲಿಖಿತ ವರದಿಯನ್ನು ಕೆಎಸ್‌ಸಿಎ ನೀಬೇಕು ಎಂದು ಕುನ್ಹಾ ಆಯೋಗ ಹೇಳಿತ್ತು.
ದೇವನಹಳ್ಳಿಗೆ ಪಂದ್ಯಗಳು ಶಿಫ್ಟ್
ಚಿನ್ನಸ್ವಾಮಿ ಕ್ರೀಡಾಂಗಣದ ಬದಲಿಗೆ ಕೆಂಪೇಗೌಡ ವಿಮಾನ ನಿಲ್ದಾಣ ಸಮೀಪದ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಆದರೆ, ಈ ಪಂದ್ಯಗಳ ವೀಕ್ಷಣೆಗೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ ಎನ್ನಲಾಗಿದೆ.
40 ಎಕರೆ ವಿಸ್ತೀರ್ಣದ ಕ್ಯಾಂಪಸ್‌ನಲ್ಲಿರುವ ಸೆಂಟರ್ ಆಫ್ ಎಕ್ಸಲೆನ್ಸ್ ನಲ್ಲಿ ಮೂರು ಮೈದಾನಗಳನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಸಾರ್ವಜನಿಕರ ಪ್ರವೇಶವಿಲ್ಲದೆ ವಿಜಯ್ ಹಜಾರೆ ಟ್ರೋಫಿ ಸರಣಿಯನ್ನು ನಡೆಸಲಾಗುವುದು.
ಭಾರತದ ಮಾಜಿ ವೇಗಿ ಹಾಗೂ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಆಯೋಜಿಸಲು ಮನವಿ ಮಾಡಿದ್ದರು. ಆದರೆ, ಸರ್ಕಾರದಿಂದ ಮನವಿಯನ್ನು ಪುರಸ್ಕರಿಸಿರಲಿಲ್ಲ.
ಡಿಸೆಂಬರ್ 24 ರಂದು ದೆಹಲಿ ಹಾಗೂ ಆಂಧ್ರ ಪ್ರದೇಶ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆಸಬೇಕೆಂಬ ಕೆಎಸ್‌ಸಿಎ ಮನವಿಯನ್ನು ಸರ್ಕಾರ ತಿರಸ್ಕರಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳಿಗೆ ಅನುಮತಿ ನೀಡಿಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.