Vote Chori| ವೋಟ್ ಚೋರಿಯಲ್ಲಿ ಪಕ್ಷ ನಿಂದನೆ ಕಳಂಕ; ಕೆ.ಎನ್.ರಾಜಣ್ಣ ಪತ್ರದ ಹಿಂದಿದೆ ಡಿಕೆಶಿ ಹೆಣೆಯುವ ತಂತ್ರ!
ರಾಹುಲ್ ಗಾಂಧಿಗೆ ನೇರವಾಗಿ ಪತ್ರ ಬರೆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ದೆಹಲಿ ನಾಯಕರು ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಲ್ಲದೇ ರಾಜ್ಯ ಕಾಂಗ್ರೆಸ್ ನ ಆಂತರಿಕ ಕಚ್ಚಾಟವನ್ನು ವರಿಷ್ಠರ ಗಮನಕ್ಕೆ ತರಬಹುದು ಎಂಬುದು ರಾಜಣ್ಣ ಅವರ ಲೆಕ್ಕಾಚಾರವಾಗಿದೆ.
ಕರ್ನಾಟಕ ಕಾಂಗ್ರೆಸ್‌ನಲ್ಲಿ ನಾಯಕತ್ವದ ಬಿಕ್ಕಟ್ಟು ಹೊಸ ತಿರುವು ಪಡೆದಿದೆ. ವೋಟ್ ಚೋರಿ ಕುರಿತಂತೆ ಪಕ್ಷದ ವಿರುದ್ಧವೇ ಹೇಳಿಕೆ ನೀಡುವ ಮೂಲಕ ಸಂಪುಟದಿಂದ ವಜಾಗೊಂಡಿದ್ದ ಕೆ.ಎನ್.ರಾಜಣ್ಣ ಅವರು ಇದೀಗ ಷಡ್ಯಂತ್ರದ ಆರೋಪ ಮಾಡಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ.
ರಾಜಣ್ಣರಿಂದ ಮನವರಿಕೆ ಯತ್ನ
ರಾಜಣ್ಣ ಅವರು ತಮಗಾದ ಅನ್ಯಾಯವನ್ನು ಹೈಕಮಾಂಡ್ ಮುಂದೆ ಪ್ರಸ್ತಾಪಿಸಿದ್ದು, ಇನ್ನಷ್ಟು ವಿಷಯಗಳನ್ನು ಚರ್ಚಿಸಲು ಭೇಟಿಗೆ ಅವಕಾಶ ನೀಡುವಂತೆ ಕೋರಿದ್ದಾರೆ. ರಾಹುಲ್ ಗಾಂಧಿಗೆ ಪತ್ರ ಬರೆದಿರುವ ವಿಷಯ ತಿಳಿಯುತ್ತಿದ್ದಂತೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ರಾಜಣ್ಣ ಅವರನ್ನು ಭೇಟಿ ನೀಡಿ ಚರ್ಚಿಸಿದರೂ ಅಸಮಾಧಾನ ದೂರ ಮಾಡಲಾಗಿಲ್ಲ. ಮಾತುಕತೆ ಫಲ ನೀಡದ ಕಾರಣ ಪತ್ರ ಬಹಿರಂಗಗೊಳಿಸಿ, ರಾಜಕೀಯ ಒತ್ತಡ ಸೃಷ್ಟಿಸಿದ್ದಾರೆ ಎನ್ನಲಾಗಿದೆ.
ತಮ್ಮ ಹೇಳಿಕೆ ತಿರುಚಿ ಹೈಕಮಾಂಡ್ ಗೆ ದೂರು ನೀಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಮಾತ್ರ ಕೇಳಿಬರುತ್ತಿತ್ತು. ಅದನ್ನು ಸಾರ್ವಜನಿಕಗೊಳಿಸಿ, ಸಚಿವ ಸ್ಥಾನ ಕಳೆದುಕೊಂಡ ಹಿನ್ನೆಲೆ ಕುರಿತು ತಿಳಿಸಲು ಪತ್ರದ ವಿಷಯವನ್ನು ಬಹಿರಂಗಪಡಿಸಲಾಗಿದೆ ಎಂದು ಕೇಳಿಬಂದಿದೆ. ತಮ್ಮ ವಿರುದ್ಧ ತೆಗೆದುಕೊಂಡ ಕ್ರಮ ನ್ಯಾಯಸಮ್ಮತವಲ್ಲ ಎಂಬ ಸಂದೇಶವನ್ನು ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶವೂ ಇದರಲ್ಲಿ ಅಡಗಿದೆ ಎನ್ನಲಾಗಿದೆ.
ಹೈಕಮಾಂಡ್ ಮೇಲೆ ನೇರ ಒತ್ತಡ
ರಾಹುಲ್ ಗಾಂಧಿಗೆ ನೇರವಾಗಿ ಪತ್ರ ಬರೆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ದೆಹಲಿ ನಾಯಕರು ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅಲ್ಲದೇ ರಾಜ್ಯ ಕಾಂಗ್ರೆಸ್ ನ ಆಂತರಿಕ ಕಚ್ಚಾಟವನ್ನು ವರಿಷ್ಠರ ಗಮನಕ್ಕೆ ತರಬಹುದು. ಪ್ರಸ್ತುತ, ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿರುವಾಗಲೇ ಪತ್ರ ಬಹಿರಂಗಪಡಿಸುವುದರಿಂದ ಹೈಕಮಾಂಡ್ ಮೇಲೆ ಒತ್ತಡ ಹೇರಬಹುದು ಎಂಬ ಇಂಗಿತ ರಾಜಣ್ಣ ಅವರದ್ದಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.
ಸಿಎಂ ಪರ ವಕಾಲತು
ಸಿಎಂ ಸ್ಥಾನ ಬದಲಾವಣೆ ಕುರಿತ ಊಹಾಪೋಹಗಳು ಜೋರಾಗಿರುವ ಸಮಯದಲ್ಲೇ ಪತ್ರ ಬಹಿರಂಗವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಪಕ್ಷದೊಳಗಿನ ಅಸಮಾಧಾನ ಮತ್ತು ಒಳಜಗಳಗಳನ್ನು ಮುನ್ನೆಲೆಗೆ ತರುವ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ಹೊಸ ಆಯಾಮ ನೀಡುವ ಉದ್ದೇಶ ಒಳಗೊಂಡಿದೆ ಎನ್ನಲಾಗಿದೆ.ಕೆ.ಎನ್.ರಾಜಣ್ಣ ಅವರು ರಾಹುಲ್ ಗಾಂಧಿಗೆ ಬರೆದಿರುವ ಎಂಟು ಪುಟಗಳ ಪತ್ರದಲ್ಲಿ ಸಿಎಂ ಪರ ವಕಾತು ವಹಿಸಿರುವುದು ನಾಯಕತ್ವ ಬದಲಾವಣೆ ಬಿಕ್ಕಟ್ಟಿಗೆ ಪುಷ್ಠಿ ನೀಡುವಂತಿದೆ.
2013 ಹಾಗೂ 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅಹಿಂದ ವರ್ಗಗಳೇ ಕಾರಣ. ಸಿದ್ದರಾಮಯ್ಯ ಅವರಿಂದಲೇ ಅಧಿಕಾರ ಹಿಡಿಯಲು ಸಾಧ್ಯವಾಯಿತು. ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಾನಿಯಾಗಲಿದೆ ಎಂದು ಉಲ್ಲೇಖಿಸುವ ಮೂಲಕ ಸಿಎಂ ಪರ ಬ್ಯಾಟಿಂಗ್ ಮಾಡಿರುವುದು ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆ ಎನ್ನಲಾಗಿದೆ.