ʼನವೆಂಬರ್‌ ಕ್ರಾಂತಿʼ ಠುಸ್! ಸಿದ್ದರಾಮಯ್ಯ ಸದ್ಯ ಆರಾಮ; ಆದರೂ ಡಿಕೆಶಿ ಯತ್ನಕ್ಕಿಲ್ಲ ವಿರಾಮ!
x

ʼನವೆಂಬರ್‌ ಕ್ರಾಂತಿʼ ಠುಸ್! ಸಿದ್ದರಾಮಯ್ಯ ಸದ್ಯ ಆರಾಮ; ಆದರೂ ಡಿಕೆಶಿ ಯತ್ನಕ್ಕಿಲ್ಲ ವಿರಾಮ!

ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಆಗಲಿದೆ ಎಂಬ ಕೆ.ಎನ್‌ ರಾಜಣ್ಣ ಹೇಳಿಕೆಯಿಂದ ವದಂತಿಗಳಿಗೆ ನೀರೆರೆಯಿತು. ಆ ಬಳಿಕ ಡಿಕೆಶಿ ಬೆಂಬಲಿಗರು ನವೆಂಬರ್‌ ಕ್ರಾಂತಿಯ ಮಾತುಗಳನ್ನಾಡಿದರು.


ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ʼನಾಯಕತ್ವ ಬದಲಾವಣೆʼಗೆ ಸಂಬಂಧಿಸಿದ ಅಕ್ಟೋಬರ್‌, ನವೆಂಬರ್ ಕ್ರಾಂತಿಯ ಮಾತುಗಳು ಕೊನೆಗೂ ಸತ್ವ ಕಳೆದುಕೊಂಡಿವೆ. ನಾಯಕತ್ವ ಬದಲಾವಣೆ ವದಂತಿಗಳಿಗೆ ಹೈಕಮಾಂಡ್‌ ತೆರೆ ಎಳೆಯುವುದರೊಂದಿಗೆ ಕಲಹ ತಾತ್ಕಾಲಿಕವಾಗಿ ಶಮನವಾಗಿದೆ. ಆದರೆ, ನಾಯಕರ ಮುಂದೆ ಹೆಜ್ಜೆ ನಿಗೂಢವಾಗಿದ್ದು, ಹೊಸ ಹೊಸ ಚರ್ಚೆಗಳಿಗೆ ಕಾರಣವಾಗಿದೆ.

ಕಾಂಗ್ರೆಸ್‌ ಸರ್ಕಾರ ಒಂದೂವರೆ ವರ್ಷ ಪೂರ್ಣಗೊಳಿಸಿದ ಕ್ಷಣದಿಂದ ನಾಯಕತ್ವ ಬದಲಾವಣೆ ಪ್ರಸ್ತಾಪ, ಚರ್ಚೆಯು ʼಕ್ರಾಂತಿʼಯವರೆಗೂ ವದಂತಿ ಹಬ್ಬಿಸಿತು. ಇದಕ್ಕೆ ಪೂರಕವಾಗಿ ನಾಯಕರ ತರಹೇವಾರಿ ಹೇಳಿಕೆಗಳು ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಸೃಷ್ಟಿಸಿದ್ದವು. ಸ್ವ-ಪಕ್ಷೀಯ ನಾಯಕರಾದಿಯಾಗಿ ಪ್ರತಿಪಕ್ಷಗಳ ನಾಯಕರು ಕೂಡ ನಾಯಕತ್ವ ಬದಲಾವಣೆ ಕುರಿತು ನೀಡಿದ ಹೇಳಿಕೆಗಳು ಸಾಕಷ್ಟು ಗೊಂದಲ ಸೃಷ್ಟಿಸಿದ್ದವು.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ನಡುವಿನ ಸಿಎಂ ಸ್ಥಾನದ ಸಮರವು ಅವರವರ ಬಣಗಳಿಗೂ ಹಬ್ಬಿತು. ಆಂತರಿಕ ಬಿಕ್ಕಟ್ಟು ತಲೆದೋರಿದ ಪ್ರತಿಬಾರಿಯೂ ಹೈಕಮಾಂಡ್‌ ನಾಯರು ರಾಜ್ಯಕ್ಕೆ ಆಗಮಿಸಿ ಶಮನಗೊಳಿಸುವ ಪ್ರಯತ್ನ ನಡೆಸಿದರು. ನಾಯಕತ್ವದ ಬದಲಾವಣೆಯ ಪ್ರಸ್ತಾಪ ಮಾಡದಂತೆ ಖಡಕ್‌ ಎಚ್ಚರಿಕೆ ನೀಡಿದ್ದರೂ ಸ್ಥಳೀಯ ನಾಯಕರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ.

ಅಧಿಕಾರ ಹಂಚಿಕೆ ಪ್ರಸ್ತಾಪದಿಂದ ಶುರುವಾಯ್ತು ಕಚ್ಚಾಟ

2024 ಡಿ.4 ರಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರ ಹಂಚಿಕೆ ಒಪ್ಪಂದದ ಕುರಿತು ಪ್ರಸ್ತಾಪಿಸಿದ ನಂತರ ನಾಯಕತ್ವ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬಂದವು.

ಡಿಸಿಎಂ ಹೇಳಿಕೆಗೆ ತಿರುಗೇಟು ನೀಡಲು ಸಿಎಂ ಸಿದ್ದರಾಮಯ್ಯ ಆಪ್ತ ಬಳಗದ ನಾಯಕರು ಅಖಾಡಕ್ಕೆ ಇಳಿದರು. ಸಿದ್ದರಾಮಯ್ಯ ಅವರನ್ನು ಎಲ್ಲಾ ಶಾಸಕರು ಒಮ್ಮತದಿಂದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಅಧಿಕಾರ ಹಂಚಿಕೆ ಒಪ್ಪಂದ- ಸಂಧಾನ ಮಾತುಕತೆ ಇದ್ಯಾವುದೂ ನಮಗೆ ಗೊತ್ತಿಲ್ಲ. ಎಲ್ಲ ಶಾಸಕರ ಬೆಂಬಲ ಸಿಎಂ ಸಿದ್ದರಾಮಯ್ಯ ಅವರಿಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳುವ ಮೂಲಕ ಡಿಕೆಶಿ ವಿರುದ್ಧ ನೇರ ಹಣಾಹಣೆಗೆ ಇಳಿದರು.

ಇದಾದ ಬಳಿಕ ಪರಮೇಶ್ವರ್‌ ಆಯೋಜಿಸಿದ್ದ ಔತಣಕೂಟಕ್ಕೆ ಡಿಕೆಶಿ ಅಡ್ಡಗಾಲು ಹಾಕಿದರು. ಆಗ ಪರಮೇಶ್ವರ್, ಕೆ.ಎನ್‌. ರಾಜಣ್ಣ ಹಾಗೂ ಸತೀಶ್‌ ಜಾರಕಿಹೊಳಿ ನೇರವಾಗಿ ಡಿ.ಕೆ. ಶಿವಕುಮಾರ್‌ ಅವರಿಗೆ ಟಾಂಗ್‌ ನೀಡಲು ಮುಂದಾದರು. ಸಿದ್ದರಾಮಯ್ಯ ಅಭಿಮಾನಿಗಳ ಹೆಸರಿನಲ್ಲಿ ಅಹಿಂದ ಸಮಾವೇಶಕ್ಕೆ ನಿರ್ಧರಿಸಿದಾಗ ಡಿಕೆಶಿ ಅವಕಾಶ ನೀಡಲಿಲ್ಲ. ಬದಲಿಗೆ ಹೈಕಮಾಂಡ್ ಮೂಲಕವೇ ಕಾಂಗ್ರೆಸ್‌ ಪಕ್ಷದ ಹೆಸರಿನಲ್ಲಿ ಸಮಾವೇಶ ನಡೆಯುವಂತೆ ನೋಡಿಕೊಂಡರು. ಅಲ್ಲಿಯವರೆಗೆ ಒಂದು ಹಂತದಲ್ಲಿದ್ದ ನಾಯಕರ ತಿಕ್ಕಾಟ ಮತ್ತಷ್ಟು ತೀವ್ರಗೊಂಡಿತು.

ಆಂತರಿಕ ಸಂಘರ್ಷ ಸೃಷ್ಟಿಸಿದ್ದ ʼಕ್ರಾಂತಿʼ

ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್‌ ನೇತೃತ್ವದ ಬಣದವರ ಮಾತುಗಳಿಗೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಅವರು ಮುಡಾ ಪ್ರಕರಣದಲ್ಲಿ ಸಿಲುಕಿದರು. ಜಾರಿ ನಿರ್ದೇಶನಾಲಯವು ಇಸಿಐಆರ್‌ ದಾಖಲಿಸಿದ ಬಳಿಕವಂತೂ ನಾಯಕತ್ವ ಬದಲಾವಣೆ ಖಚಿತ ಎಂಬಂತೆ ಬಿಂಬಿಸಲಾಯಿತು.

ಸಿಎಂ ಬಣದ ಆಪ್ತ ಸಚಿವರು ಡಿಕೆಶಿಗೆ ತಿರುಗೇಟು ನೀಡಲು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಹಾಕಿದರು. ಕೆಪಿಸಿಸಿ ಅಧ್ಯಕ್ಷ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಬದಲಾವಣೆಗೂ ಹೈಕಮಾಂಡ್‌ ಮುಂದೆ ಬೇಡಿಕೆ ಇಟ್ಟರು.

ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ ಆಗಲಿದೆ ಎಂಬ ಕೆ.ಎನ್‌ ರಾಜಣ್ಣ ಹೇಳಿಕೆಯಿಂದ ವದಂತಿಗಳಿಗೆ ನೀರೆರೆಯಿತು. ಆ ಬಳಿಕ ಡಿ.ಕೆ.ಶಿವಕುಮಾರ್ ಬೆಂಬಲಿಗರು ನಾಯಕತ್ವ ಬದಲಾವಣೆಯ ನವೆಂಬರ್‌ ಕ್ರಾಂತಿಯ ಮಾತುಗಳನ್ನಾಡಿದರು. ಏಕೆಂದರೆ, ನವೆಂಬರ್‌ 20ಕ್ಕೆ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದೆ. ಅಧಿಕಾರ ಹಂಚಿಕೆ ಒಪ್ಪಂದದಂತೆ ಸಿಎಂ ಸಿದ್ದರಾಮಯ್ಯ ಅವರು ಸ್ಥಾನ ಬಿಟ್ಟುಕೊಡಬೇಕು. ಡಿಕೆಶಿ ಸಿಎಂ ಆಗಲಿದ್ದಾರೆ ಎಂದು ಬಹಿರಂಗವಾಗಿ ವಾದಿಸಲು ಆರಂಭಿಸಿದರು.

ಈ ಎಲ್ಲ ಪ್ರಹಸನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಪ್ರತಿಪಕ್ಷ ಬಿಜೆಪಿ ಕೂಡ ಕಾಂಗ್ರೆಸ್‌ ನಾಯಕರ ಅಕ್ಟೋಬರ್‌, ನವೆಂಬರ್‌ ಹೇಳಿಕೆ ಉಲ್ಲೇಖಿಸಿ ನಾಯಕತ್ವ ಬದಲಾವಣೆಯ ಮಾತುಗಳನ್ನು ಹೆಚ್ಚು ಪ್ರಚಾರಪಡಿಸಿತು. ಆದರೆ, ಅಂತಿಮವಾಗಿ ಕಾಂಗ್ರೆಸ್‌ ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಇತಿಶ್ರೀ ಹಾಡುವ ಮೂಲಕ ವದಂತಿಗಳಿಗೆ ತೆರೆ ಎಳೆದಿದೆ. ಇದರಿಂದ ಸಹಜವಾಗಿ ಹತಾಶರಾಗಿರುವ ಸಿಎಂ ಸ್ಥಾನದ ಆಕಾಂಕ್ಷಿ ಡಿ.ಕೆ. ಶಿವಕುಮಾರ್‌ ನೇತೃತ್ವದ ಬಣವು ʼನುಡಿದಂತೆ ನಡೆಯಿರಿʼ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಲಾರಂಭಿಸಿದೆ.

ಅಂತ್ಯವೋ, ತಾತ್ಕಾಲಿಕ ಶಮನವೋ?

ಕಾಂಗ್ರೆಸ್‌ ನಾಯಕರ ಆಂತರಿಕ ಸಂಘರ್ಷ, ಪ್ರತಿಪಕ್ಷಗಳ ಭವಿಷ್ಯವಾಣಿ, ನಾಯಕತ್ವ ಬದಲಾವಣೆ ವಿಚಾರಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ ಗೊಂದಲ ಏರ್ಪಟ್ಟಿತ್ತು.

ಈಗ ರಾಜ್ಯ ಅಕ್ಟೋಬರ್‌ ದಾಟಿ, ನವೆಂಬರ್‌ ಕ್ರಾಂತಿಯನ್ನೂ ಸುಳ್ಳಾಗಿಸಿದೆ. ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಲಿದ್ದು, ನಾಯಕತ್ವ ಬದಲಾವಣೆ ಮಾತುಗಳು ದೂರವಾಗಿವೆ.

ಹೈಕಮಾಂಡ್ ಮನವೊಲಿಕೆಯಲ್ಲಿ ಯಶಸ್ವಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರು ಮೇಲುಗೈ ಸಾಧಿಸಿದರೂ ಇದು “ಪೂರ್ಣ ಅಂತ್ಯವೋ ಅಥವಾ ತಾತ್ಕಾಲಿಕ ಶಮನವೋ” ಎಂಬುದು ನಿಚ್ಚಳವಾಗಿಲ್ಲ. ಏಕೆಂದರೆ ಡಿಕೆಶಿ ಬಣದ ನಾಯಕರ ಮುಂದಿನ ನಡೆಗಳು ಮತ್ತೆ ನಾಯಕತ್ವ ಬದಲಾವಣೆ ವಿಚಾರವನ್ನು ಜೀವಂತವಿರಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ಬಲಿಷ್ಠ ನಾಯಕತ್ವದ ಬೇಡಿಕೆ

ಕಾಂಗ್ರೆಸ್‌ ಪಕ್ಷದ ಒಳಗಿನ ನಾಯಕರೇ ʼಕ್ರಾಂತಿʼಯ ಮಾತು ಪ್ರಾರಂಭಿಸಿದಾಗ ಪಕ್ಷದಲ್ಲಿ ತೀವ್ರ ಗೊಂದಲ ಉಂಟಾಗಿತ್ತು. ಆದರೆ, ಅಹಿಂದ ವರ್ಗಗಳು, ಶಾಸಕರ ಬೆಂಬಲ ಗಳಿಸಿರುವುದರಿಂದ ಸಿದ್ದರಾಮಯ್ಯ ಅವರನ್ನು ಬದಲಿಸುವುದು ಅಷ್ಟು ಸುಲಭವಲ್ಲ ಎಂಬುದನ್ನು ಹೈಕಮಾಂಡ್‌ಗೆ ಅರಿತಿದೆ. ಹಾಗಾಗಿ ಸಿದ್ದರಾಮಯ್ಯ ಅವರನ್ನೇ ಸಿಎಂ ಸ್ಥಾನದಲ್ಲಿ ಮುಂದುವರಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

ಪ್ರತಿ ಬಾರಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಮ್ಮ ನಡುವೆ ಸಮನ್ವಯತೆ ಇರುವುದಾಗಿ ತೋರ್ಪಡಿಸಲು ಮುಂದಾದರೂ ಇಬ್ಬರೂ ನಾಯಕರು ತಮ್ಮ ಬೆಂಬಲಿಗರ ಮೂಲಕ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದ್ದರು. ಆದರೆ, ಅಂತಿಮವಾಗಿ ಎರಡೂವರೆ ವರ್ಷದ ನಾಯಕತ್ವದ ಅವಧಿಯನ್ನು ಪಕ್ಷದ ಹೈಕಮಾಂಡ್ ವಿಸ್ತರಿಸಿರುವುದರಿಂದ ಗೊಂದಲಗಳು ತಾತ್ಕಾಲಿಕವಾಗಿ ಶಮನಗೊಂಡಿವೆ.

ʼನುಡಿದಂತೆ ನಡೆಯಿರಿʼ

ನಾಯಕತ್ವ ಬದಲಾವಣೆ ವಿಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ಹಿನ್ನಡೆಯಾಗುತ್ತಿದ್ದಂತೆ ಅವರು ಮತ್ತು ಬೆಂಬಲಿಗರ ಮಾತುಗಳಲ್ಲಿ ಹತಾಶೆ ಎದ್ದು ಕಾಣುತ್ತಿದೆ. ಯಾರೋ ಕೆಲಸ ಮಾಡುವುದು, ಇನ್ನಾರದ್ದೋ ಹೆಸರು ಎಂದು ಡಿ.ಕೆ. ಶಿವಕುಮಾರ್ ಅವರು ನೇರವಾಗಿ ಹತಾಶೆ ವ್ಯಕ್ತಪಡಿಸಿದರೆ, ಅವರ ಬೆಂಬಲಿಗರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಟ್ಟ ಮಾತು ತಪ್ಪುವುದಿಲ್ಲ. ಅವರು ಈವರೆಗೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಎಂದು ಹೇಳುವ ಮೂಲಕ ಅಧಿಕಾರ ಹಂಚಿಕೆ ಒಪ್ಪಂದ ನೆನಪಿಸುವ ಪ್ರಯತ್ನ ಮಾಡಿದ್ದಾರೆ.

ಮುಂದಿನ 2 ವರ್ಷ ನಿರ್ಣಾಯಕ

ಲೋಕಸಭೆ ಚುನಾವಣೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಒತ್ತಡ ಹಾಗೂ ನಾಯಕರ ಆಂತರಿಕ ಕಚ್ಚಾಟದಲ್ಲಿ ಇನ್ನೂ ಎರಡೂವರೆ ವರ್ಷ ಮುನ್ನಡೆಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಪ್ರಸ್ತುತ, ನಾಯಕತ್ವ ಬದಲಾವಣೆ ವಿಚಾರ ಈಗ ದೂರವಾಗಿದೆ. ಆದರೆ, ಪಕ್ಷದೊಳಗಿನ ಅಸಮಾಧಾನ ಸಂಪೂರ್ಣ ನಿವಾರಣೆ ಆಗಿಲ್ಲ ಎಂಬುದು ಗೋಚರಿಸುತ್ತಿದೆ.

ಡಿಕೆಶಿ ಮುಂದಿನ ನಡೆ ಏನು?

ನಾಯಕತ್ವದ ಬದಲಾವಣೆ ಪ್ರಸ್ತಾವಗಳನ್ನು ಹೈಕಮಾಂಡ್‌ ತಳ್ಳಿಹಾಕಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಅಧಿಕಾರ ತ್ಯಾಗದ ಮಾತುಗಳನ್ನಾಡಿರುವುದು ಕುತೂಹಲ ಮೂಡಿಸಿದೆ. ಈಗಾಗಲೇ ಡಿಕೆ ಶಿವಕುಮಾರ್ ಬೆಂಬಲಿಗರು ಹೈಕಮಾಂಡ್‌ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ. ಅಲ್ಲೂ ಯಾವುದೇ ಪ್ರಯೋಜನವಾಗದಿದ್ದರೆ ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಬಹುದು ಎಂದು ಮಾತುಗಳು ಕೇಳಿ ಬಂದಿವೆ.

2028ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈಗಿನಿಂದಲೇ ಜನಸಂಪರ್ಕ ಹೆಚ್ಚಿಸುವುದು ಶಿವಕುಮಾರ್ ಮುಂದಿನ ಗುರಿಯಾಗಿರಲಿದೆ. ಕೆಪಿಸಿಸಿ ಸ್ಥಾನದಿಂದ ಕೆಳಗಿಳಿದರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸುವುದರಿಂದ ಹೈಕಮಾಂಡ್‌ ಮನಗೆಲ್ಲುವುದು ಅವರ ಉದ್ದೇಶವಾಗಿದೆ ಎನ್ನಲಾಗಿದೆ.

Read More
Next Story