ವಿಬಿ–ಜಿ ರಾಮ್ ಜಿ ಮಸೂದೆ ಬಡವರ ವಿರೋಧಿ: ಕಾನೂನು ಸಮರಕ್ಕೆ ತಜ್ಞರ ಸಿದ್ಧತೆ
ಕೇವಲ ಹೆಸರನ್ನು ಬದಲಿಸುವುದಲ್ಲದೆ, ಉದ್ಯೋಗ ಖಾತರಿಯ ಮೂಲ ಆಶಯವನ್ನೇ ನಾಶಪಡಿಸಲಾಗುತ್ತಿದೆ. ಇದು ಪಂಚಾಯತ್ ಅಧಿಕಾರವನ್ನು ಕಿತ್ತುಕೊಳ್ಳುತ್ತದೆ ಎಂದು ಸಮಾಲೋಚನಾ ಸಭೆ ಅಧ್ಯಕ್ಷತೆ ವಹಿಸಿದ್ದ ಖರ್ಗೆ ತಿಳಿಸಿದರು.
ವಿಬಿ-ಗ್ರಾಮ್ ಜಿ ವಿರುದ್ಧ ಪ್ರಿಯಾಂಕ್ ಖರ್ಗೆ ನೇತೃತ್ವದ ರಾಷ್ಟ್ರೀಯ ಸಭೆ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (MGNREGA) ರದ್ದುಗೊಳಿಸಿ, ಅದರ ಸ್ಥಾನದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 'ವಿಬಿ–ಜಿ ರಾಮ್ ಜಿ' ಮಸೂದೆಯ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮರ ಸಾರಿದ್ದಾರೆ.
ದೆಹಲಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ರಾಷ್ಟ್ರೀಯ ಮಟ್ಟದ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹೊಸ ಕಾನೂನು ಬಡವರ ವಿರೋಧಿ ಮತ್ತು ಸಂವಿಧಾನಬಾಹಿರ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಈ ಮಹತ್ವದ ಸಭೆಯಲ್ಲಿ ದೇಶದ ವಿವಿಧ ಭಾಗಗಳ 80ಕ್ಕೂ ಹೆಚ್ಚು ನಾಗರಿಕ ಹಕ್ಕುಗಳ ಹೋರಾಟಗಾರರು, ಪ್ರಖ್ಯಾತ ಅರ್ಥಶಾಸ್ತ್ರಜ್ಞರು, ಹಿರಿಯ ವಕೀಲರು, ಶಿಕ್ಷಣ ತಜ್ಞರು ಮತ್ತು ಎನ್‌ಆರ್‌ಇಜಿಎ ಕಾರ್ಮಿಕರು ಭಾಗವಹಿಸಿ ಮಸೂದೆಯ ಸಾಧಕ-ಬಾಧಕಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದರು. ಕೇಂದ್ರ ಸರ್ಕಾರವು ಶ್ರಮಿಕ ವರ್ಗದ ಹಕ್ಕುಗಳನ್ನು ವ್ಯವಸ್ಥಿತವಾಗಿ ಕಿತ್ತುಕೊಳ್ಳುತ್ತಿದೆ ಎಂದು ತಜ್ಞರು ಈ ವೇಳೆ ಆತಂಕ ವ್ಯಕ್ತಪಡಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, "ಬಿಜೆಪಿ ಸರ್ಕಾರವು ಕಳೆದ ಒಂದು ದಶಕದಿಂದ ಉದ್ಯೋಗ ಖಾತರಿ ಯೋಜನೆಯನ್ನು ನಿಧಾನವಾಗಿ ಕೊಲ್ಲುವ ಪ್ರಯತ್ನ ಮಾಡುತ್ತಿದೆ. ಮೊದಲು ನಿಧಿ ಕಡಿತಗೊಳಿಸಿತು, ನಂತರ ಪಾವತಿ ವಿಳಂಬ ಮಾಡಿತು, ಈಗ ಕಾನೂನನ್ನೇ ಬದಲಿಸಲು ಮುಂದಾಗಿದೆ. 'ವಿಕಸಿತ್ ಭಾರತ'ದ ಹೆಸರಿನಲ್ಲಿ ಕಾರ್ಮಿಕರು ಮತ್ತು ಪಂಚಾಯತ್‌ಗಳ ಅಧಿಕಾರವನ್ನು ಕಿತ್ತುಕೊಂಡು ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತಿದೆ. ಇದನ್ನು ರಾಜಕೀಯವಾಗಿ ಮತ್ತು ನೈತಿಕವಾಗಿ ಸಹಿಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು.
ಪ್ರಸ್ತಾವಿತ ವಿಬಿ-ಗ್ರಾಮ್ ಜಿ ಮಸೂದೆಯು ಪಂಚಾಯತ್ ಮಟ್ಟದಲ್ಲಿ ರೂಪಿಸಲಾದ ಯೋಜನೆಗಳನ್ನು ತಿರಸ್ಕರಿಸಲು ಕೇಂದ್ರಕ್ಕೆ ಅನಿಯಮಿತ ಅಧಿಕಾರ ನೀಡುತ್ತದೆ. ಇದರಿಂದಾಗಿ ಗ್ರಾಮೀಣ ಭಾಗದ ಸ್ವಾಯತ್ತತೆ ಹರಣವಾಗಲಿದ್ದು, ಉದ್ಯೋಗ ಹಂಚಿಕೆಯಲ್ಲಿ ಪಾರದರ್ಶಕತೆ ಮರೆಯಾಗಲಿದೆ ಎಂಬ ಅಂಶ ಸಭೆಯಲ್ಲಿ ಚರ್ಚೆಯಾಯಿತು. ಮನರೇಗಾ ಕೇವಲ ಕಲ್ಯಾಣ ಕಾರ್ಯಕ್ರಮವಲ್ಲ, ಅದು ಹಳ್ಳಿಗಳ ಜನರಿಗೆ ನೆಮ್ಮದಿಯಿಂದ ಬದುಕಲು ಇರುವ ಭದ್ರತೆಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಹೊಸ ಶಾಸನದ ವಿರುದ್ಧ ಹಳ್ಳಿಗಳಿಂದ ಹಿಡಿದು ನ್ಯಾಯಾಲಯದವರೆಗೆ ಹೋರಾಟ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ತಪ್ಪು ಮಾಹಿತಿಯ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸುವುದು ಮತ್ತು ಕಾನೂನು ಹೋರಾಟದ ಮೂಲಕ ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸುವುದು ಈ ಒಕ್ಕೂಟದ ಮುಖ್ಯ ಉದ್ದೇಶವಾಗಿದೆ. ಯಾವುದೇ ಕಾರಣಕ್ಕೂ ಈ ಮಸೂದೆಯನ್ನು ಒಪ್ಪುವ ಪ್ರಶ್ನೆಯೇ ಇಲ್ಲ, ಎಂಜಿಎನ್‌ಆರ್‌ಇಜಿಎ ಯೋಜನೆಯನ್ನು ಯಥಾವತ್ತಾಗಿ ಮುಂದುವರಿಸುವುದೇ ನಮ್ಮ ಅಂತಿಮ ಗುರಿ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.