Year Ender 2025| ರಾಜ್ಯದ ಪಾಲಿಗೆ 'ಹೋರಾಟದ ವರ್ಷ': ಬೀದಿಗಿಗಳಿದ ಅನ್ನದಾತ, ಸಿಟ್ಟಾದ ಯುವಶಕ್ತಿ!

2025ನೇ ಸಾಲಿನಲ್ಲಿ ಆರ್ಥಿಕ ಅಸ್ಥಿರತೆಯಿಂದ ಕಂಗೆಟ್ಟಿದ್ದ ರೈತ ಸಮುದಾಯ, ದಶಕಗಳಿಂದ ಹಕ್ಕುಗಳಿಗಾಗಿ ಹೋರಾಡುತ್ತಿರುವ ತಳಮಟ್ಟದ ಸೇವಾ ಕಾರ್ಯಕರ್ತೆಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.

Update: 2025-12-25 02:30 GMT
Click the Play button to listen to article

2025ನೇ ವರ್ಷವು ರಾಜ್ಯದ ಪಾಲಿಗೆ ಹೋರಾಟದ ವರ್ಷವಾಗಿ ಪರಿಣಮಿಸಿದೆ. ಒಂದೆಡೆ  ಆರ್ಥಿಕ ಅಸ್ಥಿರತೆಯಿಂದ ಕಂಗೆಟ್ಟಿದ್ದ ರೈತ ಸಮುದಾಯ, ಮತ್ತೊಂದೆಡೆ ದಶಕಗಳಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ತಳಮಟ್ಟದ ಸೇವಾ ಕಾರ್ಯಕರ್ತೆಯರು (ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರು) ಬೀದಿಗೆ ಇಳಿದಿದ್ದರು.  ವಿರೋಧ ಪಕ್ಷಗಳು ಈ ಜನಾಕ್ರೋಶಕ್ಕೆ ಧ್ವನಿಯಾಗಿ ರಾಜ್ಯಾದ್ಯಂತ ಹಮ್ಮಿಕೊಂಡ ಬೃಹತ್ ಆಂದೋಲನವು ಆಡಳಿತಾರೂಢ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆ ಎಂಬ ನಿರೀಕ್ಷೆ ಹುಸಿಯಾಯಿತು. 

ರಾಜ್ಯದ ಬೆನ್ನೆಲುಬಾದ ರೈತ 2025ರ ಕೊನೆಯ ಭಾಗದಲ್ಲಿ ಅಕ್ಷರಶಃ ಅನಾಥಪ್ರಜ್ಞೆಗೆ ಒಳಗಾಗಿದ್ದಾನೆ. ವಿರೋಧ ಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ  'ರಾಜ್ಯಾದ್ಯಂತ ಆಂದೋಲನ' ಕೇವಲ ರಾಜಕೀಯ ಪ್ರೇರಿತವಾಗಿರದೆ, ರೈತರ ನೋವಿನ ಪ್ರತಿಫಲವಾಗಿತ್ತು.

ತುಂಗಭದ್ರಾ ಯೋಜನೆ: ಹೂಳು ಮತ್ತು ಗೇಟಿನ ಆತಂಕ

ತುಂಗಭದ್ರಾ ಜಲಾಶಯದ ಸಮಸ್ಯೆಯು 2025ರಲ್ಲಿ ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕಳೆದ ವರ್ಷದ ಗೇಟ್ ವೈಫಲ್ಯದ ನೆನಪು ಮಾಸುವ ಮುನ್ನವೇ, ಈ ವರ್ಷವೂ ಜಲಾಶಯದ ನಿರ್ವಹಣೆ ಮತ್ತು ಹೂಳಿನ ಸಮಸ್ಯೆಯಿಂದ ರೈತರಿಗೆ ನೀರು ಸರಿಯಾಗಿ ತಲುಪುತ್ತಿಲ್ಲ. ಜಲಾಶಯದಲ್ಲಿ ಸಂಗ್ರಹವಾಗಿರುವ ಬೃಹತ್ ಪ್ರಮಾಣದ ಹೂಳಿನಿಂದಾಗಿ ಶೇಖರಣಾ ಸಾಮರ್ಥ್ಯ ಕುಸಿದಿದೆ. ಇದರಿಂದಾಗಿ ಕೊನೆಯ ಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಸಮಾನಾಂತರ ಜಲಾಶಯ ನಿರ್ಮಾಣ ಅಥವಾ ಹೂಳು ತೆಗೆಯುವ ಪ್ರಕ್ರಿಯೆಯಲ್ಲಿ ಸರ್ಕಾರದ ಮಂದಗತಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.  ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ರೈತರು ತುಂಗಭದ್ರಾ ನದಿಯ ನೀರನ್ನು ಅವಲಂಬಿಸಿದ್ದಾರೆ. ಇಲ್ಲಿನ ನೀರಾವರಿ ಹಂಚಿಕೆಯಲ್ಲಿನ ತಾರತಮ್ಯ ರೈತರನ್ನು ಬೀದಿ ಹೋರಾಟಕ್ಕೆ ಪ್ರೇರೇಪಿಸಿತು. 

ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ನೀಡುತ್ತಿಲ್ಲ ಎಂದು ಆರೋಪಿಸಿ ರೈತರು ಕೆಪಿಟಿಸಿಎಲ್ ಕಚೇರಿಗಳಿಗೆ ಮುತ್ತಿಗೆ ಹಾಕಿದರು. ಸರ್ಕಾರ ಘೋಷಿಸಿದಂತೆ ದಿನಕ್ಕೆ 7 ಗಂಟೆಗಳ ಕಾಲ ಸತತವಾಗಿ ವಿದ್ಯುತ್ ಸಿಗುತ್ತಿಲ್ಲ. ಬದಲಾಗಿ ಕೇವಲ 2-3 ಗಂಟೆ ಮಾತ್ರ ನೀಡಲಾಗುತ್ತಿದೆ ಅಥವಾ ಪದೇ ಪದೇ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಮಳೆ ಕೊರತೆ ಅಥವಾ ಅಕಾಲಿಕ ಹವಾಮಾನ ಬದಲಾವಣೆಯಿಂದಾಗಿ ತೋಟಗಾರಿಕೆ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳು ಒಣಗುತ್ತಿವೆ. ಈ ಹಂತದಲ್ಲಿ ನೀರುಣಿಸಲು ವಿದ್ಯುತ್ ಅತ್ಯಗತ್ಯವಾಗಿದೆ.  ಕೆಲವು ಕಡೆ ರಾತ್ರಿ ವೇಳೆ ವಿದ್ಯುತ್ ನೀಡುತ್ತಿರುವುದರಿಂದ, ಹಾವು ಕಡಿತದ ಭಯ ಮತ್ತು ಇತರೆ ಅಪಾಯಗಳ ನಡುವೆ ರೈತರು ತೋಟಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಬೆಳಗಾವಿ, ಬಾಗಲಕೋಟೆ, ರಾಯಚೂರು ಮತ್ತು ವಿಜಯಪುರ ಸೇರಿದಂತೆ ಹಲವು ಭಾಗಗಳಲ್ಲಿ ರೈತರು ಕೆಪಿಟಿಸಿಎಲ್ ಹಾಗೂ ಹೆಸ್ಕಾಂ/ಜೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಕೆಲವು ಕಡೆ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗಿದೆ.

ಬರಗಾಲ ಘೋಷಣೆಯಲ್ಲಿ ವಿಳಂಬ ಮತ್ತು ಆಕ್ರೋಶ

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಸರ್ಕಾರ ಬರಗಾಲ ಘೋಷಣೆ ಮಾಡಲು ತಾಂತ್ರಿಕ ಕಾರಣಗಳನ್ನು ನೀಡುತ್ತಿದೆ ಎಂಬುದು ರೈತರ ಆರೋಪವಾಗಿದೆ. ಕಂದಾಯ ಮತ್ತು ಕೃಷಿ ಇಲಾಖೆಗಳ ಜಂಟಿ ಸಮೀಕ್ಷೆ ಸರಿಯಾಗಿ ನಡೆಯುತ್ತಿಲ್ಲ, ಇದರಿಂದಾಗಿ ನೈಜ ಬೆಳೆ ಹಾನಿ ವರದಿಯಾಗುತ್ತಿಲ್ಲ ಎಂದು ರೈತರು ದೂರಿದ್ದಾರೆ. ಬರಗಾಲ ಘೋಷಣೆಯಾದರೆ ಮಾತ್ರ ಎನ್‌ಡಿಆರ್‌ಎಫ್‌/ಎಸ್‌ಡಿಆರ್‌ಎಫ್‌ ಅಡಿಯಲ್ಲಿ ಸಬ್ಸಿಡಿ ದೊರೆಯಲಿದೆ. ವಿಳಂಬದಿಂದಾಗಿ ರೈತರು ಮುಂದಿನ ಹಂಗಾಮಿಗೆ ಬಂ   ಡವಾಳವಿಲ್ಲದೆ ಪರದಾಡುವಂತಾಯಿತು. 

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ವಿಮೆ ಕಂತು ಪಾವತಿಸಿದರೂ ಪರಿಹಾರ ಸಿಗುತ್ತಿಲ್ಲ ಎಂಬುದು ಪ್ರತಿಭಟನೆಯ ಕೇಂದ್ರಬಿಂದುವಾಗಿದೆ. ಕಲಬುರ್ಗಿ ಜಿಲ್ಲೆಯೊಂದರಲ್ಲೇ ಸುಮಾರು 326 ಕೋಟಿ ರೂ. ಬೆಳೆ ವಿಮೆ ಹಣ ಬಾಕಿ ಇದೆ ಎಂದು ರೈತ ಸಂಘಟನೆಗಳು ಆರೋಪಿಸಿವೆ. ವಿಮಾ ಕಂಪನಿಗಳು ಮತ್ತು ಸರ್ಕಾರದ ನಡುವಿನ ಸಮೀಕ್ಷಾ ವರದಿಗಳ ವ್ಯತ್ಯಾಸದಿಂದಾಗಿ ಹಣ ಬಿಡುಗಡೆ ತಡವಾಗುತ್ತಿದೆ. ವಿಮೆ ಪಾವತಿ ತಡವಾದರೆ ಕಂಪನಿಗಳು ಶೇ.12 ರಷ್ಟು ಬಡ್ಡಿ ನೀಡಬೇಕೆಂಬ ನಿಯಮವಿದ್ದರೂ ಅದು ಜಾರಿಯಾಗುತ್ತಿಲ್ಲ ಎಂಬುದು ರೈತರ ದೂರು.

ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ರೈತ ಸಂಘಟನೆಗಳು ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಸಿವೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ ಮತ್ತು ರಾಯಚೂರು ಜಿಲ್ಲೆಯಲ್ಲಿ ಪ್ರತಿಭಟನೆಗಳನ್ನು ನಡೆಸಲಾಯಿತು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗಿತ್ತು. ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಜಿಲ್ಲೆಗಳ ರೈತರಿಂದ ಬೃಹತ್ ಧರಣಿ ನಡೆಯಿತು. 

ಕಬ್ಬು ಬೆಳೆಗಾರರ ವೇದನೆ

ಕಬ್ಬು ಬೆಳೆಗಾರರು ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಖಾನೆ ಮಾಲೀಕರ ಮತ್ತು ಸರ್ಕಾರದ ನಡುವೆ ಸಿಲುಕಿದ್ದಾರೆ. ಕೇಂದ್ರ ಸರ್ಕಾರ ಘೋಷಿಸುವ ಎಫ್ಆರ್‌ಪಿಗಿಂತಲೂ ಹೆಚ್ಚಿನ ರಾಜ್ಯ ಸಲಹಾ ಬೆಲೆ ನೀಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಾದ ಬಾಕಿ ಹಣವನ್ನು ವರ್ಷಗಳ ಕಾಲ ಉಳಿಸಿಕೊಳ್ಳುತ್ತಿರುವುದು ರೈತರ ಆರ್ಥಿಕ ಸ್ಥಿತಿಯನ್ನು ಹದಗೆಡಿಸಿದೆ.  ಕಾರ್ಖಾನೆಗಳು ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಮಾಡದ ಕಾರಣ, ಬೆಳೆ ಒಣಗುತ್ತಿದ್ದು ರೈತರಿಗೆ ತೂಕದಲ್ಲಿ ನಷ್ಟ ಉಂಟಾಗುತ್ತಿದೆ. 

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ನೂರಾರು ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ನೀತಿಗಳ ವಿರುದ್ಧ ಗುಡುಗಿದರು. ಕೇಂದ್ರ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ  ಉತ್ಪಾದನಾ ವೆಚ್ಚಕ್ಕೆ ಹೋಲಿಸಿದರೆ ಅತ್ಯಂತ ಕಡಿಮೆಯಿದೆ ಎಂದು ರೈತರು ದೂರಿದರು. ರಸಗೊಬ್ಬರ, ಕೂಲಿ ಆಳುಗಳು ಮತ್ತು ಸಾರಿಗೆ ವೆಚ್ಚ ದುಪ್ಪಟ್ಟಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರದ ದರ ರೈತರನ್ನು ಸಾಲಗಾರರನ್ನಾಗಿ ಮಾಡುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ತನ್ನ ಪಾಲಿನಿಂದ ಪ್ರತಿ ಟನ್ ಕಬ್ಬಿಗೆ 500 ರೂ.ಗಳ ಹೆಚ್ಚುವರಿ ಪ್ರೋತ್ಸಾಹ ಧನ ಘೋಷಿಸಬೇಕು ಎಂದು ರೈತರು ಆಗ್ರಹಿಸಿದರು. 

ನವೆಂಬರ್ ತಿಂಗಳು ಸಕ್ಕರೆ ಕಾರ್ಖಾನೆಗಳ ಹಂಗಾಮು ಆರಂಭವಾಗುವ ಸಮಯ. ಆದರೆ, ಕಬ್ಬು ನುರಿಸುವ ಕಾರ್ಯ ಆರಂಭವಾದರೂ ದರ ನಿಗದಿ ಮಾಡದಿದ್ದಕ್ಕೆ ಆಕ್ರೋಶ ವ್ಯಕ್ತವಾಯಿತು. ಈ ವರ್ಷ ದರ ನಿಗದಿ ಮಾಡದೆಯೇ ಕಾರ್ಖಾನೆಗಳು ಕಬ್ಬು ನುರಿಸಲು ಮುಂದಾದದ್ದನ್ನು ವಿರೋಧಿಸಿ ನ.12ರಂದು ಉತ್ತರ ಕರ್ನಾಟಕದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ರೈತರು ಉಗ್ರ ಪ್ರತಿಭಟನೆ ನಡೆಸಿದರು. ರೈತರು ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ 4ನ್ನು ತಡೆದು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ದರ ತಿಳಿಯದೆಯೇ ನಾವು ಕಬ್ಬನ್ನು ಕಾರ್ಖಾನೆಗೆ ಕಳುಹಿಸುವುದಿಲ್ಲ. ಕಾರ್ಖಾನೆ ಮಾಲೀಕರು ಮತ್ತು ಸರ್ಕಾರ ಸೇರಿ ರೈತರನ್ನು ವಂಚಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.  ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಕಾರಣ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿತು. 

ಬಾಗಲಕೋಟೆಯಲ್ಲಿ ಟ್ರಾಕ್ಟರ್‌ಗಳಿಗೆ ಬೆಂಕಿ 

ಬಾಗಲಕೋಟೆ ಜಿಲ್ಲೆಯ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ, ಟನ್ ಕಬ್ಬಿಗೆ 3500 ರೂ. ಬೆಲೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಕಬ್ಬು ತುಂಬಿದ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರ್ಯಾಲಿಗೆ ಬೆಂಕಿ ಹಚ್ಚಿದ್ದರು.  ಹೋರಾಟ ತೀವ್ರ ಸ್ವರೂಪ ಪಡೆದಿದ್ದರಿಂದ, ಪೊಲೀಸರು ಹಲವು ರೈತರನ್ನು ವಶಕ್ಕೆ ಪಡೆದಿದ್ದರು. ಪ್ರತಿಭಟನೆಯನ್ನು ಹತ್ತಿಕ್ಕಲು ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು, ಹಾಗೂ ಕಲ್ಲು ತೂರಾಟದಲ್ಲಿ ಎಎಸ್ಪಿ ಗಾಯಗೊಂಡಿದ್ದರು.

ಬಾಕಿ ಹಣಕ್ಕಾಗಿ ರೈತರ ಆಕ್ರೋಶ

ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಪಡೆದು ತಿಂಗಳುಗಳೇ ಕಳೆದರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಮಾ. 10ರಂದು ಸಾವಿರಾರು ರೈತರು ಬೀದಿಗಿಳಿದರು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆಯ ಎದುರು ಜಮಾಯಿಸಿದ ರೈತರು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತರ ಪ್ರಮುಖ ಆರೋಪವೆಂದರೆ, ಕಬ್ಬು ಪೂರೈಕೆ ಮಾಡಿದ 14 ದಿನಗಳ ಒಳಗೆ ಹಣ ಪಾವತಿಸಬೇಕು ಎಂಬ ನಿಯಮವಿದ್ದರೂ, ಕಾರ್ಖಾನೆಗಳು ಆರು ತಿಂಗಳಿನಿಂದ ಬಾಕಿ ಉಳಿಸಿಕೊಂಡಿವೆ. "ನಮಗೆ ಬರಬೇಕಾದ ಹಣವನ್ನು ಬಡ್ಡಿ ಸಮೇತ ನೀಡಬೇಕು. ನಮ್ಮ ಶ್ರಮದ ಹಣಕ್ಕಾಗಿ ನಾವು ಯಾಚಿಸುವಂತಾಗಿದೆ" ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿದ ರೈತರು, ಕೂಡಲೇ ಕಾರ್ಖಾನೆಗಳ ಆಸ್ತಿ ಮುಟ್ಟುಗೋಲು ಹಾಕಿಕೊಂಡಾದರೂ ನಮಗೆ ಹಣ ಕೊಡಿಸಬೇಕೆಂದು ಆಗ್ರಹಿಸಿದರು. ಇದರಿಂದಾಗಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯಸ್ತವಾಗಿತ್ತು.

 ಸುವರ್ಣಸೌಧ ಮುತ್ತಿಗೆ 

ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ, ಡಿ.10ರಂದು ಕಬ್ಬು ಬೆಳೆಗಾರರು ಐತಿಹಾಸಿಕ ಪ್ರತಿಭಟನೆ ನಡೆಸಿದರು. ಕೈಯಲ್ಲಿ ಕಬ್ಬಿನ ಜಲ್ಲೆಗಳನ್ನು ಹಿಡಿದು ಮೆರವಣಿಗೆ ಹೊರಟ ಸಾವಿರಾರು ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ರೈತರನ್ನು ತಡೆದಾಗ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಈ ಬಾರಿ ರೈತರ ಬೇಡಿಕೆ ಸ್ಪಷ್ಟವಾಗಿತ್ತು. ಪ್ರತಿ ಕ್ವಿಂಟಾಲ್ ಕಬ್ಬಿಗೆ 4,500 ರೂ. ಬೆಲೆ ನಿಗದಿಪಡಿಸಬೇಕು. ಸಕ್ಕರೆ ಇಳುವರಿ ಆಧಾರದ ಮೇಲೆ ನೀಡಲಾಗುತ್ತಿರುವ ಪ್ರಸ್ತುತ ದರವು ರೈತರಿಗೆ ಲಾಭದಾಯಕವಾಗಿಲ್ಲ. ಸಭೆಯಲ್ಲಿ ಮುಖ್ಯಮಂತ್ರಿಗಳು ರೈತ ಸಂಘಟನೆಗಳ ನಾಯಕರೊಂದಿಗೆ ಚರ್ಚಿಸಬೇಕು ಎಂದು ಪಟ್ಟು ಹಿಡಿದ ರೈತರು, ಸದನದ ಒಳಗೆ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿಲ್ಲ ಎಂದು ಆಪಾದಿಸಿದರು. ಕಬ್ಬು ಬೆಳೆಗಾರರ ಈ ಬೃಹತ್ ಶಕ್ತಿ ಪ್ರದರ್ಶನವು ಅಧಿವೇಶನದ ಗತಿಯನ್ನೇ ಬದಲಿಸಿತು ಮತ್ತು ಸರ್ಕಾರವು ರೈತರ ಬೇಡಿಕೆಗಳ ಕುರಿತು ಸದನದಲ್ಲಿ ಉತ್ತರ ನೀಡುವಂತೆ ಮಾಡಿತು.

ಮೆಕ್ಕೆಜೋಳ ಬೆಳೆಗಾರರ ಆಕ್ರೋಶ

ಉತ್ತರ ಕರ್ನಾಟಕ ಮತ್ತು ಮಲೆನಾಡು ಭಾಗದ ಮೆಕ್ಕೆಜೋಳ ಬೆಳೆಗಾರರು ಮಾರುಕಟ್ಟೆಯಲ್ಲಿನ ಬೆಲೆ ಕುಸಿತದಿಂದ ಕಂಗಾಲಾಗಿದ್ದರು. ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಮೆಕ್ಕೆಜೋಳದ ಬೆಲೆ ಕ್ವಿಂಟಾಲ್‌ಗೆ 1,500 ರೂ.ಗಿಂತ ಕೆಳಕ್ಕೆ ಕುಸಿದಾಗ ರೈತರು ಎಪಿಎಂಸಿ ಮಾರುಕಟ್ಟೆಗಳ ಮುಂದೆ ಪ್ರತಿಭಟನೆ ನಡೆಸಿದರು. ಮೆಕ್ಕೆಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ, ಕೂಡಲೇ ಸರ್ಕಾರಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಖರೀದಿ ಕೇಂದ್ರಗಳಲ್ಲಿ ತಾಂತ್ರಿಕ ತೊಂದರೆ ಮತ್ತು ತೇವಾಂಶದ ನೆಪದಲ್ಲಿ ಖರೀದಿ ನಿರಾಕರಿಸಿದ್ದನ್ನು ವಿರೋಧಿಸಿ ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಪ್ರತಿಭಟನೆಗಳು ತೀವ್ರಗೊಂಡವು. ರಾಜ್ಯದ ಹಲವೆಡೆ ಮೆಕ್ಕೆಜೋಳ ಬೆಳೆಗಾರರು ಪ್ರತಿಭಟನೆ ನಡೆಸಿದಾಗ ಕಾಂಗ್ರೆಸ್‌ ಸರ್ಕಾರವು ಕೇಂದ್ರಕ್ಕೆ ಪತ್ರ ಬರೆದು ರಾಜ್ಯದ ಮೆಕ್ಕೆಜೋಳ ಬೆಳೆಗಾರರ ಸಮಸ್ಯೆ ಕುರಿತು ಗಮನಕ್ಕೆ ತಂದರು. 

ಹೈನುಗಾರರ ಬದುಕಿಗೆ ಕಹಿಯಾದ 'ಪ್ರೋತ್ಸಾಹಧನ' ಬಾಕಿ

ರಾಜ್ಯದ ಗ್ರಾಮೀಣ ಅರ್ಥವ್ಯವಸ್ಥೆಯ ಜೀವನಾಡಿಯಾಗಿರುವ ಹೈನುಗಾರಿಕೆ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ರಾಜ್ಯ ಸರ್ಕಾರವು ಹಾಲು ಉತ್ಪಾದಕರಿಗೆ ನೀಡುವ ಪ್ರತಿ ಲೀಟರ್‌ಗೆ 5 ರೂಪಾಯಿ ಪ್ರೋತ್ಸಾಹಧನ ಕಳೆದ 4 ರಿಂದ 5 ತಿಂಗಳುಗಳಿಂದ ವಿಳಂಬವಾಗಿದ್ದು, ಲಕ್ಷಾಂತರ ಹೈನುಗಾರರ ಬದುಕು ದುಸ್ತರವಾಗಿತ್ತು. ರಾಜ್ಯದ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವ 'ಕ್ಷೀರ ಕ್ರಾಂತಿ'ಗೆ ಈ ಹಣಕಾಸಿನ ಅಡಚಣೆ ದೊಡ್ಡ ಹಿನ್ನಡೆಯನ್ನುಂಟು ಮಾಡಿತ್ತು. ಒಂದೆಡೆ ಪಶು ಆಹಾರದ ಬೆಲೆಗಳು ಗಗನಕ್ಕೇರುತ್ತಿದ್ದರೆ, ಇನ್ನೊಂದೆಡೆ  ಮೇವಿನ ಕೊರತೆ ರೈತರನ್ನು ಹೈರಾಣಾಗಿಸಿತ್ತು. ಹತ್ತಿ ಹಿಂಡಿ, ಮೆಕ್ಕೆಜೋಳದ ಹಿಟ್ಟು ಹಾಗೂ ಸಿದ್ಧಪಡಿಸಿದ ಪಶು ಆಹಾರದ ಬೆಲೆಗಳು ಕಳೆದ ಆರು ತಿಂಗಳಲ್ಲಿ ಶೇ. 20 ರಿಂದ 30 ರಷ್ಟು ಹೆಚ್ಚಾಗಿವೆ. ಲೀಟರ್ ಹಾಲಿಗೆ ಸಿಗುವ ಮೂಲ ಬೆಲೆಯಲ್ಲಿ ಪಶುಗಳ ನಿರ್ವಹಣೆಯೇ ಕಷ್ಟವಾಗಿರುವಾಗ, ಸರ್ಕಾರದ 5 ರೂಪಾಯಿ ಪ್ರೋತ್ಸಾಹಧನವು ರೈತರಿಗೆ ಸ್ವಲ್ಪಮಟ್ಟಿನ ಆಸರೆಯಾಗಿತ್ತು. ಆದರೆ, ಕಳೆದ ಐದು ತಿಂಗಳಿಂದ ಈ ಹಣ ಬ್ಯಾಂಕ್ ಖಾತೆಗಳಿಗೆ ಜಮೆಯಾಗದ ಕಾರಣ, ರೈತರು ಬಡ್ಡಿ ವ್ಯವಹಾರಕ್ಕೆ ಕೈಹಾಕುವಂತಾಗಿದೆ.

ಸರ್ಕಾರವು ಗ್ಯಾರಂಟಿ ಯೋಜನೆಗಳಿಗೆ ಹಣ ನೀಡುತ್ತಿದೆ. ಆದರೆ ಅನ್ನದಾತನಿಗೆ ಸೇರಬೇಕಾದ ಪ್ರೋತ್ಸಾಹಧನ ನೀಡಲು ಹಣವಿಲ್ಲವೇ? ಎಂದು ರೈತ ಸಂಘಟನೆಗಳು ಪ್ರಶ್ನಿಸಿವೆ. ದಕ್ಷಿಣ ಕರ್ನಾಟಕದ ಮಂಡ್ಯ, ಮೈಸೂರು, ಕೋಲಾರದಿಂದ ಹಿಡಿದು ಉತ್ತರ ಕರ್ನಾಟಕದ ಬೆಳಗಾವಿಯವರೆಗೆ ಹಾಲು ಉತ್ಪಾದಕರು ಪ್ರತಿಭಟನೆ ನಡೆಸಿದರು. 

ಅಂಗನವಾಡಿ ಕಾರ್ಯಕರ್ತೆಯರ 'ಜೈಲ್ ಭರೋ' ಚಳವಳಿ

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಾವೇಶಗೊಂಡು 'ಜೈಲ್ ಭರೋ' ಚಳವಳಿ ನಡೆಸಿದರು. ಕಳೆದ ಹಲವು ದಿನಗಳಿಂದ ಶಾಂತಿಯುತ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಈ ತೀವ್ರ ಸ್ವರೂಪದ ಹೋರಾಟಕ್ಕೆ ಕರೆ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 'ಗ್ರಾಚ್ಯುಟಿ' ಸೌಲಭ್ಯ ನೀಡಬೇಕು ಮತ್ತು ಗೌರವ ಧನವನ್ನು ಕನಿಷ್ಠ 15,000 ರೂ.ಗೆ ಏರಿಸಬೇಕು ಎಂದು ಆಗ್ರಹಿಸಲಾಗಿತ್ತು.

ಫ್ರೀಡಂ ಪಾರ್ಕ್‌ನಿಂದ ರಾಜಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸಾವಿರಾರು ಮಹಿಳೆಯರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತೆಯರ ನಡುವೆ ನೂಕಾಟ-ತಳ್ಳಾಟ ನಡೆಯಿತು. "ನಮ್ಮ ಬೇಡಿಕೆ ಈಡೇರಿಸದಿದ್ದರೆ ನಮ್ಮನ್ನು ಜೈಲಿಗೆ ಹಾಕಿ" ಎಂದು ಘೋಷಣೆ ಕೂಗುತ್ತಾ ಸಾವಿರಾರು ಮಹಿಳೆಯರು ಸ್ವಯಂಪ್ರೇರಿತರಾಗಿ ಬಂಧನಕ್ಕೊಳಗಾದರು. ಸರ್ಕಾರದ ಪರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೂ ಪ್ರತಿಭಟನೆ ಶಮನವಾಗಲಿಲ್ಲ.

ಆಶಾ ಕಾರ್ಯಕರ್ತೆಯರಿಂದ ಆರೋಗ್ಯ ಸೌಧ ಮುತ್ತಿಗೆ

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ 'ಆರೋಗ್ಯ ಸೌಧ'ದ ಮುಂದೆ ಸಾವಿರಾರು ಆಶಾ ಕಾರ್ಯಕರ್ತೆಯರು ಅಹೋರಾತ್ರಿ ಧರಣಿ ಆರಂಭಿಸಿದರು. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ನೀಡುವ ತಮಗೆ ಸರ್ಕಾರ ಕೇವಲ ಪ್ರೋತ್ಸಾಹ ಧನದ ಹೆಸರಲ್ಲಿ ವಂಚಿಸುತ್ತಿದೆ ಎಂದು ಅವರು ದೂರಿದರು. ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಪ್ರೋತ್ಸಾಹ ಧನವನ್ನು ರದ್ದುಪಡಿಸಿ, ತಿಂಗಳಿಗೆ ಕನಿಷ್ಠ 12,ಸಾವಿರ ರೂ. ಸ್ಥಿರ ವೇತನ ನಿಗದಿಪಡಿಸಬೇಕು. ಆರ್.ಸಿ.ಎಚ್ ಪೋರ್ಟಲ್‌ನಲ್ಲಿ ದತ್ತಾಂಶ ನಮೂದಿಸುವ ತಾಂತ್ರಿಕ ಕಿರುಕುಳ ತಪ್ಪಿಸಬೇಕು. ಆರೋಗ್ಯ ಸೌಧದ ಗೇಟ್ ಮುರಿದು ಒಳಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತೆಯರನ್ನು ಪೊಲೀಸರು ಬಲವಂತವಾಗಿ ತೆರವುಗೊಳಿಸಿದರು. ಆದರೂ, "ನಮಗೆ ಭರವಸೆ ಬೇಡ, ಅಧಿಕೃತ ಆದೇಶ ಬೇಕು" ಎಂದು ಪಟ್ಟು ಹಿಡಿದು ಕಾರ್ಯಕರ್ತೆಯರು ರಸ್ತೆಯಲ್ಲೇ ಅಡುಗೆ ಮಾಡಿ ಊಟ ಮಾಡುವ ಮೂಲಕ ಪ್ರತಿಭಟನೆ ಮುಂದುವರಿಸಿದರು. ಈ ಪ್ರತಿಭಟನೆಯಿಂದಾಗಿ ರಾಜ್ಯಾದ್ಯಂತ ಗ್ರಾಮೀಣ ಆರೋಗ್ಯ ಸಮೀಕ್ಷೆ ಕಾರ್ಯಕ್ರಮಗಳಲ್ಲಿ ವ್ಯತ್ಯಯ ಉಂಟಾಯಿತು. ಅಂತಿಮವಾಗಿ ಆರೋಗ್ಯ ಸಚಿವರು ಸಂಘಟನೆಯ ಪದಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಲು ಒಪ್ಪಿಕೊಂಡರು.

ಪ್ರತಿಭಟನೆಕಾರರನ್ನು ದೆಹಲಿಗೆ ಕರೆಸಿಕೊಂಡ ಎಚ್‌.ಡಿ.ಕುಮಾರಸ್ವಾಮಿ 

ಎಫ್ ಆರ್ ಎಸ್ ನೀತಿಯಲ್ಲಿ ಸುಧಾರಣೆ, ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಂದ ಮುಕ್ತಿಗೊಳಿಸುವುದು, ವಿಮಾ ಸೌಲಭ್ಯ, ಎಲ್ಲಾ ನೌಕರರ ವೇತನ ಹೆಚ್ಚಳ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ಈ ವೇಳೆ ಹೋರಾಟಗಾರರನ್ನು ದೆಹಲಿಗೆ ಕರೆಸಿಕೊಂಡ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ  ಮಾತುಕತೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆ ಕೆಲಸಗಳಿಗೆ ನಿಯೋಜಿಸದಿರುವ ಬಗ್ಗೆ ಚುನಾವಣೆ ಆಯೋಗದ ಜತೆ ಚರ್ಚೆ ನಡೆಸಲಾಗುವುದು ಹಾಗೂ ಎಲ್ಲಾ ನೌಕರರಿಗೂ ಕೆಲಸದ ಒತ್ತಡ ಕಡಿಮೆ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಬರುವ ಎಲ್ಲಾ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು ಎಂದು ಸಚಿವೆ ಅನ್ನಪೂರ್ಣದೇವಿ ಭರವಸೆ ನೀಡಿದರು.

ಉದ್ಯೋಗಾಕಾಂಕ್ಷಿಗಳು ಬೃಹತ್‌ ಪ್ರತಿಭಟನೆ

ರಾಜ್ಯದ ಶೈಕ್ಷಣಿಕ ಕಾಶಿ ಎಂದೇ ಕರೆಯಲ್ಪಡುವ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅಕ್ಷರಶಃ 'ವಿದ್ಯಾರ್ಥಿ ಶಕ್ತಿ'ಯ ಪ್ರದರ್ಶನವಾಯಿತು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿ ಸಾವಿರಾರು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಧಾರವಾಡ, ವಿಜಯಪುರ, ಕೊಪ್ಪಳ ಮತ್ತು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡ ಸಾವಿರಾರು ವಿದ್ಯಾರ್ಥಿಗಳು ಸುಮಾರು 3 ಕಿಲೋಮೀಟರ್ ಉದ್ದದ ಬೃಹತ್ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಪ್ರತಿಭಟನಾಕಾರರು, "ನಮಗೆ ಕೆಲಸ ಕೊಡಿ ಅಥವಾ ವಿಷ ಕೊಡಿ" ಎಂಬ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ವಿದ್ಯಾರ್ಥಿಗಳು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಗ್ರಾಮೀಣ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. "ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಮತ್ತು ಶಿಕ್ಷಣ ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇವೆ. ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಲ್ಲಿ ಮಗ್ನವಾಗಿದ್ದು, ನಮ್ಮ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಹಾದರು.

ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿಯಲ್ಲಿ 371(ಜೆ) ವಿಶೇಷ ಮೀಸಲಾತಿಯಡಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬಲು ಒತ್ತಾಯಿಸಿ ಬೃಹತ್ ಧರಣಿ ನಡೆಸಲಾಯಿತು. ಕೊಪ್ಪಳದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಇದರಿಂದಾಗಿ ವಾಹನ ಸಂಚಾರ ವ್ಯಸ್ತವಾಯಿತು. "ಹುದ್ದೆಗಳ ಭರ್ತಿಯಾಗದಿದ್ದರೆ ನಾವು ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸುತ್ತೇವೆ" ಎಂದು ಯುವಶಕ್ತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿತು.

ಉತ್ತರ ಕರ್ನಾಟಕದಲ್ಲಿ ಏಕಕಾಲಕ್ಕೆ ನಡೆದ ಈ ಪ್ರತಿಭಟನೆಗಳು ಸರ್ಕಾರಕ್ಕೆ ಬಿಸಿ ಮುಟ್ಟಿಸಿದವು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ವಿದ್ಯಾರ್ಥಿಗಳ ಮನವಿಯನ್ನು ಸರ್ಕಾರಕ್ಕೆ ತಲುಪಿಸಲಾಗುವುದು ಮತ್ತು ನೇಮಕಾತಿ ಪ್ರಕ್ರಿಯೆ ಚುರುಕುಗೊಳಿಸಲು ಶಿಫಾರಸು ಮಾಡಲಾಗುವುದು ಎಂದು ಭರವಸೆ ನೀಡಿದರು.

Tags:    

Similar News