ಇನ್ನೂ 6 ಸಾವಿರ ಸರ್ಕಾರಿ ಏಕೋಪಾದ್ಯಾಯ ಶಾಲೆಗಳು! ಶಿಕ್ಷಕರಿಲ್ಲದೇ ದಾಖಲಾತಿಯೂ ಕುಸಿತ

ಶಾಲೆಗಳಲ್ಲಿ ಶಿಕ್ಷಕರ ಬಿಕ್ಕಟ್ಟು ಸೃಷ್ಟಿಯಾಗಲು ಕಾಯಂ ಶಿಕ್ಷಕರ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬವೇ ಪ್ರಮುಖ ಕಾರಣವಾಗಿದೆ. ಒಳ ಮೀಸಲಾತಿಗೆ ಸಂಬಂಧಿಸಿದ ಕಾನೂನು ಮತ್ತು ಆಡಳಿತಾತ್ಮಕ ಗೊಂದಲಗಳಿಂದಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ.

Update: 2025-12-25 01:30 GMT

ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕಾದ ಸರ್ಕಾರಿ ಶಾಲೆಗಳು ಇಂದು ಗಂಭೀರವಾದ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಸವಾಲು ಎದುರಿಸುತ್ತಿವೆ. ಕರ್ನಾಟಕದಲ್ಲಿ ಏಕ ಶಿಕ್ಷಕ ಶಾಲೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಶಿಕ್ಷಣ ಇಲಾಖೆ, ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ಬಿಂಬಿಸುವಂತಿದೆ. ಏಕೋಪಾದ್ಯಾಯ ಶಾಲೆಗಳಿಂದಾಗಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗಿದೆ.

2024-25ನೇ ಶೈಕ್ಷಣಿಕ ವರ್ಷದಲ್ಲಿ ಒಬ್ಬರೇ ಶಿಕ್ಷಕರಿರುವ ಶಾಲೆಗಳ ಸಂಖ್ಯೆ 6,675ಕ್ಕೆ ತಲುಪಿವೆ. ಕಳೆದ ವರ್ಷ ಈ ಶಾಲೆಗಳ ಸಂಖ್ಯೆ 5,412 ಇತ್ತು. ಒಂದು ವರ್ಷದ ಅವಧಿಯಲ್ಲಿ ಏಕೋಪಾದ್ಯಾಯ ಶಾಲೆಗಳ ಸಂಖ್ಯೆ 1,263ಕ್ಕೆ ಏರಿಕೆಯಾಗಿವೆ. ಇದರ ಜೊತೆಗೆ ರಾಜ್ಯದಲ್ಲಿರುವ ಒಟ್ಟು 49 ಸಾವಿರ ಸರ್ಕಾರಿ ಶಾಲೆಗಳಲ್ಲಿ ಬಹುತೇಕ ಶಾಲೆಗಳು ಶಿಕ್ಷಕರ ಕೊರತೆಯಿಂದ ನಲುಗುತ್ತಿವೆ. ಇಂತಹ ಆಘಾತಕಾರಿ ಸಂಗತಿಯನ್ನು ಸ್ವತಃ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರೇ ವಿಧಾನ ಪರಿಷತ್ನಲ್ಲಿ ಬಹಿರಂಗಪಡಿಸಿದ್ದಾರೆ.

ಏಕ ಶಿಕ್ಷಕ ಶಾಲೆಗಳು ಎಲ್ಲೆಲ್ಲಿ, ಎಷ್ಟು?

ಏಕಶಿಕ್ಷಕ ಶಾಲೆಗಳಲ್ಲಿ ಧಾರವಾಡದಲ್ಲಿ 26, ಬೆಂಗಳೂರು ಉತ್ತರದಲ್ಲಿ 39, ವಿಜಯನಗರದಲ್ಲಿ 45, ಗದಗ ಜಿಲ್ಲೆಯಲ್ಲಿ 46 ಇವೆ. ಇನ್ನು ಬಹುತೇಕ ಕಡಿಮೆ ಶಿಕ್ಷಕರಿರುವ ಶಾಲೆಗಳಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಜಿಲ್ಲೆಯ 586 ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ತುಮಕೂರು ಜಿಲ್ಲೆಯಲ್ಲಿ 426, ಕೋಲಾರ -347 ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 334 ಶಾಲೆಗಳಲ್ಲಿ ಶಿಕ್ಷಕರು ಹಾಗೂ ಮೂಲಸೌಕರ್ಯ ಕೊರತೆಯಿದೆ.

ನೇಮಕಾತಿ ವಿಳಂಬವೇ ಕಾರಣ

ಶಾಲೆಗಳಲ್ಲಿ ಶಿಕ್ಷಕರ ಬಿಕ್ಕಟ್ಟು ಸೃಷ್ಟಿಯಾಗಲು ಕಾಯಂ ಶಿಕ್ಷಕರ ನೇಮಕಾತಿಯಲ್ಲಿ ಆಗುತ್ತಿರುವ ವಿಳಂಬವೇ ಪ್ರಮುಖ ಕಾರಣವಾಗಿದೆ. ಒಳ ಮೀಸಲಾತಿಗೆ ಸಂಬಂಧಿಸಿದ ಕಾನೂನು ಮತ್ತು ಆಡಳಿತಾತ್ಮಕ ಗೊಂದಲಗಳಿಂದಾಗಿ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಶಿಕ್ಷಕರ ಕೊರತೆ ನೀಗಿಸಲು ರಾಜ್ಯ ಸರ್ಕಾರ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡರೂ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಅತಿಥಿ ಶಿಕ್ಷಕರಿಗೆ ಕಡಿಮೆ ವೇತನ ಇರುವುದರಿಂದ ಅನಿಶ್ಚಿತತೆ ಕಾಡುತ್ತಿದೆ. ಇದರಿಂದ ಬೋಧನಾ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತಿದೆ.

ಏಕ ಶಿಕ್ಷಕ ಶಾಲೆಗಳ ಸವಾಲುಗಳೇನು?

ಏಕ ಶಿಕ್ಷಕ ಶಾಲೆಗಳಲ್ಲಿ ಬಹು ವಿಷಯಗಳ ಬೋಧನೆ ನಿರೀಕ್ಷಿಸಲಾಗುವುದಿಲ್ಲ. ಒಬ್ಬರೇ ಶಿಕ್ಷಕರು ಒಂದರಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗೆ  ವೈಯಕ್ತಿಕ ಗಮನ ಕೊಡಲಾಗುವುದಿಲ್ಲ.

ಬೋಧನೆಯ ಜೊತೆಗೆ ಬಿಸಿಯೂಟದ ಮೇಲ್ವಿಚಾರಣೆ, ದಾಖಲಾತಿ ನಿರ್ವಹಣೆ ಮತ್ತು ಸರ್ಕಾರದ ವಿವಿಧ ವರದಿಗಳನ್ನು ಸಿದ್ಧಪಡಿಸುವ ಹೊಣೆಗಾರಿಕೆಯಲ್ಲೇ ಸಮಯ ಕಳೆದು ಹೋಗಲಿದ್ದು, ಬೋಧನೆ ಕಷ್ಟಸಾಧ್ಯವಾಗಿದೆ. ಇದರಿಂದ ಮಕ್ಕಳ ಕಲಿಕೆಗೆ ತೀವ್ರ ಹಿನ್ನಡೆಯಾಗಿದೆ. ಒಮ್ಮೊಮ್ಮೆ ಶಿಕ್ಷಕ ಯಾವುದಾದರೂ ಸಭೆಗಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾದಾಗ ಶಾಲೆ ರಜೆ ನೀಡುವ ಅನಿವಾರ್ಯತೆ ಬಂದೊದಗಿದೆ.

ಸಮತೋಲನ ಕಾಯ್ದುಕೊಳ್ಳುವುದೊಂದೇ ದಾರಿ

ಗ್ರಾಮೀಣ ಭಾಗದ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸುವಾಗ ವಿಶೇಷ ಪ್ರೋತ್ಸಾಹಧನ ಅಥವಾ ಸೌಲಭ್ಯ ನೀಡುವ ಮೂಲಕ ನಗರ ಪ್ರದೇಶದ ಶಾಲೆಗಳಲ್ಲಿ ಹೆಚ್ಚುವರಿಯಾಗಿರುವ ಸಿಬ್ಬಂದಿಯನ್ನು ಗ್ರಾಮೀಣ ಪ್ರದೇಶಗಳಿಗೆ ಕಳುಹಿಸಬೇಕು.

ಹಾಜರಾತಿ ಹೆಚ್ಚಿರುವ ಶಾಲೆಗಳನ್ನೂ ವಿಲೀನಗೊಳಿಸುವ ಪ್ರಕ್ರಿಯೆಗೆ ಸರ್ಕಾರ ಕೈ ಹಾಕಿದೆ. ಈ ರೀತಿ ಮಾಡುವುದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಿದಂತಾಗುತ್ತದೆ. ಅದರ ಬದಲಿಗೆ ಹೆಚ್ಚಿನ ಸಿಬ್ಬಂದಿ ಇರುವ ಶಾಲೆಗಳಿಂದ ಏಕ ಶಿಕ್ಷಕ ಶಾಲೆಗಳಿಗೆ ಕನಿಷ್ಠ ಇಬ್ಬರು ಶಿಕ್ಷಕರನ್ನು ಒದಗಿಸಿದರೆ ಶಾಲೆಗಳನ್ನೂ ಉಳಿಸಬಹುದಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಜ್ಞರು, ಶಿಕ್ಷಕ ಸಂಘಗಳ ಕಳವಳ

ʼಏಕ ಶಿಕ್ಷಕರಿರುವ ಶಾಲೆಗಳಲ್ಲಿ ಎಲ್ಲಾ ತರಗತಿಗಳನ್ನು ಒಬ್ಬರೇ ನಿಭಾಯಿಸುವುದು ಅಸಾಧ್ಯದ ಮಾತು. ಇದು ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ. ಪ್ರತಿ ಶಾಲೆಯಲ್ಲಿ ಕನಿಷ್ಠ ಇಬ್ಬರು ಶಿಕ್ಷಕರು ಇರುವಂತೆ ನೋಡಿಕೊಳ್ಳಬೇಕು. ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಗಳು ಹೆಚ್ಚುವರಿ ಶಿಕ್ಷಕರ ನಿಯೋಜನೆಗೆ ರಾಜ್ಯ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ನುಗ್ಲಿ ಒತ್ತಾಯಿಸಿದ್ದಾರೆ.

ಮೀಸಲಾತಿ ಗೊಂದಲವನ್ನು ನ್ಯಾಯಾಲಯದ ಹೊರಗೆ ಅಥವಾ ಶೀಘ್ರ ಕಾನೂನು ಪ್ರಕ್ರಿಯೆಯ ಮೂಲಕ ಬಗೆಹರಿಸಿ ನೇಮಕಾತಿ ಪತ್ರ ನೀಡಬೇಕು. ಯಾವುದೇ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎಷ್ಟೇ ಇರಲಿ, ಕನಿಷ್ಠ ಇಬ್ಬರು ಶಿಕ್ಷಕರನ್ನು ಕಡ್ಡಾಯವಾಗಿ ನಿಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.

188 ಶಾಲೆಗಳಲ್ಲಿ ಶೂನ್ಯ ದಾಖಲಾತಿ

ರಾಜ್ಯದಲ್ಲಿ ಶೂನ್ಯ ದಾಖಲಾತಿ ಕಂಡಿರುವ 188 ಶಾಲೆಗಳಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳ ಸಂಖ್ಯೆ 160 ಇವೆ. ಇದು ಶೂನ್ಯ ದಾಖಲಾತಿಗೆ ಪ್ರಮುಖ ಕಾರಣವಾಗಿದೆ. ಇನ್ನು 25 ಹಿರಿಯ ಪ್ರಾಥಮಿಕ ಶಾಲೆಗಳು, ಮೂರು ಪ್ರೌಢಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ.

ಪ್ರಾಥಮಿಕ ಹಂತದಲ್ಲಿಯೇ ದಾಖಲಾತಿ ಶೂನ್ಯವಾಗುವುದು ಸರ್ಕಾರಿ ಶಾಲೆಗಳಿಗೆ ಮಾರಕವಾಗಿದೆ. ಇಲ್ಲಿ ಶೂನ್ಯ ದಾಖಲಾತಿ ಸಾಧನೆಯಾದರೆ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸಹಜವಾಗಿಯೇ ಮುಚ್ಚಲಿವೆ.

ತುಮಕೂರು ಹಾಗೂ ಕೋಲಾರ ಜಿಲ್ಲೆಗಳು ಬೆಂಗಳೂರಿಗೆ ಸಮೀಪದಲ್ಲೇ ಇದ್ದರೂ ದಾಖಲಾತಿ ಕುಸಿಯುತ್ತಿರುವುದು ಅಚ್ಚರಿ ತಂದಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೈಕ್ಷಣಿಕ ಹಿಂದುಳಿಯುವಿಕೆ ಮತ್ತು ವಲಸೆ ಕೂಡ ಶೂನ್ಯ ದಾಖಲಾತಿಗೆ ಕಾರಣವಾಗಿದೆ.

ಇಂಗ್ಲಿಷ್ ಮಾಧ್ಯಮದ ಆಕರ್ಷಣೆ ಮತ್ತು ಖಾಸಗಿ ಶಾಲೆಗಳ ಪ್ರಚಾರದ ಭರಾಟೆಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ. ಸರ್ಕಾರಗಳಲ್ಲಿ ಮೂಲ ಸೌಕರ್ಯ ಕೊರತೆ, ಶಿಕ್ಷಕರ ಸಮಸ್ಯೆ, ಪೂರ್ವ ಪ್ರಾಥಮಿಕ ಶಿಕ್ಷಣದ ಕೊರತೆಯಿಂದ (ಎಲ್‌ಕೆಜಿ ಹಾಗೂ ಯುಕೆಜಿ) ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ.

Tags:    

Similar News