Namma Metro| ನಾಗವಾರ- ಬಾಗಲೂರು ಕ್ರಾಸ್‌ ಕಾಮಗಾರಿ: ಎರಡು ತಿಂಗಳ ಕೆಲಸ ಎರಡು ವರ್ಷವಾದರೂ ಮುಗಿದಿಲ್ಲ!

ಕಾಮಗಾರಿ ವಿಳಂಬವಾಗುತ್ತಿವುದರಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಎದುರಾಗಿದ್ದು, ರಸ್ತೆಯ ಗುಣಮಟ್ಟ ಕ್ಷೀಣಿಸಿದೆ. ಈ ಮಾರ್ಗದಲ್ಲಿ ನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಜನ ಬೇಸತ್ತಿದ್ದಾರೆ.

Update: 2025-12-03 06:32 GMT
Click the Play button to listen to article

ನಾಗವಾರದಿಂದ ಬಾಗಲೂರು ಕ್ರಾಸ್ ವರೆಗಿನ ಮೆಟ್ರೋ ಕಾಮಗಾರಿಯ  ಇಂದು ವಿಳಂಬದಿಂದ ಇಲ್ಲಿನ ಪ್ರಮುಖ ರಸ್ತೆಗಳ ಸ್ಥಿತಿ ಶೋಚನೀಯವಾಗಿದ್ದು, ಸಾರ್ವಜನಿಕರು ತ್ರಾಸಪಡುತ್ತಿದ್ದಾರೆ. ಸಾರ್ವಜನಿಕರ ಆಕ್ರೋಶದಿಂದ ಎಚ್ಚೆತ್ತ ಯಶವಂತಪುರ  ಶಾಸಕ ಹಾಗೂ ಸಚಿವ ಕೃಷ್ಣ ಬೈರೇಗೌಡರು ವೀಕ್ಷಿಸಿದ್ದು, ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮೆಟ್ರೋ ಕಾಮಗಾರಿ ವಿಳಂಬ ಹಾಗೂ ಅವ್ಯವಸ್ಥೆ  ಬಗ್ಗೆ ಗಮನಹರಿಸಿದ ಅವರು, ಮೆಟ್ರೋ ಅಧಿಕಾರಿಗಳನ್ನು  ತೀವ್ರ ತರಾಟೆಗೆ ತೆಗೆದುಕೊಂಡರು.

ಮೆಟ್ರೋ ಪಿಲ್ಲರ್ ಒಂದನ್ನು ಹಾಕಲು ಎರಡು ವರ್ಷ ತೆಗೆದುಕೊಂಡಿರುವ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಕೇವಲ ಎರಡು ತಿಂಗಳಲ್ಲಿ ಆಗಬೇಕಾದ ಕೆಲಸಕ್ಕೆ ಎರಡು ವರ್ಷ ಏಕೆ ಬೇಕಾಯಿತು? ಮೆಟ್ರೋ ಕಾಮಗಾರಿ ಶೀಘ್ರವಾಗಿ ಮುಗಿಸಲು ಎದುರಾಗುತ್ತಿರುವ ಸಮಸ್ಯೆಗಳೇನು? ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದರು. 

ಕಾಮಗಾರಿ ವಿಳಂಬವಾಗುತ್ತಿರುವ ಕಾರಣದಿಂದಾಗಿ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಎದುರಾಗಿದ್ದು, ಮೆಟ್ರೋ ಕೆಲಸದಿಂದ ರಸ್ತೆಯ ಗುಣಮಟ್ಟ ಕ್ಷೀಣಿಸಿದೆ. ಪರಿಣಾಮವಾಗಿ ಈ ಮಾರ್ಗದಲ್ಲಿ ನಿತ್ಯ ಟ್ರಾಫಿಕ್ ಕಿರಿಕಿರಿಯಿಂದ ಜನ ಬೇಸತ್ತಿದ್ದಾರೆ. ಮೆಟ್ರೋ ಕಾಮಗಾರಿಗೆ ಬಳಸಿದ ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡದೆ ಅಲ್ಲಲ್ಲೇ ಎಸೆದಿರುವುದು ಹಾಗೂ ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಮಾಡದಿರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದು ಸ್ಥಳೀಯರಿಗೆ ನಿತ್ಯದ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ತಿಳಿಸಿದರು.

ಸ್ಥಳದಲ್ಲಿಯೇ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡರು, ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಮುಗಿಸುವಂತೆ ಸೂಚನೆ ನೀಡಿದರು. ಅಲ್ಲಿಯವರೆಗೂ ರಸ್ತೆ ಸುಗಮ ಸಂಚಾರಕ್ಕೆ ಕನಿಷ್ಠ ವ್ಯವಸ್ಥೆಯನ್ನಾದರೂ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಕೇಂದ್ರ ರೇಷ್ಮೆ ಮಂಡಳಿಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ನೀಲಿ ಮಾರ್ಗದ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರೇಷ್ಮೆ ಮಂಡಳಿಯಿಂದ ಕೆ.ಆರ್‌. ಪುರವರೆಗೆ 2026ರ ಸೆಪ್ಟೆಂಬರ್‌ ಒಳಗೆ ಸಂಚಾರ ಆರಂಭಿಸುವ ಗುರಿಯನ್ನು ಬಿಎಂಆರ್‌ಸಿಎಲ್‌ ಇಟ್ಟುಕೊಂಡಿದೆ.

ನಾಗವಾರ ಮತ್ತು ಬಾಗಲೂರು ಕ್ರಾಸ್ ನಡುವೆ ಮೆಟ್ರೋ ಮಾರ್ಗ ನಿರ್ಮಾಣ ಹಂತದಲ್ಲಿದೆ. ಇದು ನಮ್ಮ ಮೆಟ್ರೋ ಹಂತ 2B ಯ ಭಾಗವಾಗಿದೆ ಮತ್ತು ಉತ್ತರ ಬೆಂಗಳೂರಿನ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (NCC Ltd.) ಗುತ್ತಿಗೆಯನ್ನು ಪಡೆದುಕೊಂಡಿದೆ ಮತ್ತು ಮೆಟ್ರೋ ನಿಲ್ದಾಣದ ನಿರ್ಮಾಣ ಕಾರ್ಯ ಆರಂಭವಾಗಿದೆ̤

ಕೇಂದ್ರ ರೇಷ್ಮೆ ಸಂಸ್ಥೆಯಿಂದ (ಸೆಂಟ್ರಲ್‌ ಸಿಲ್ಕ್‌ ಬೋರ್ಡ್) ಕೆ.ಆರ್‌.ಪುರದವರೆಗೆ (ಹಂತ 2ಎ) ಮತ್ತು ಕೆ.ಆರ್‌. ಪುರದಿಂದ ವಿಮಾನ ನಿಲ್ದಾಣದವರೆಗೆ (ಹಂತ 2ಬಿ) ಎಂದು ನೀಲಿ ಮಾರ್ಗವನ್ನು ಎರಡು ಹಂತವಾಗಿ ವಿಂಗಡಿಸಲಾಗಿತ್ತು. 2021ರ ಆಗಸ್ಟ್‌ನಲ್ಲಿ ಹಂತ 2ಎ ಕಾಮಗಾರಿ ಆರಂಭವಾಗಿತ್ತು. 2022ರ ಫೆಬ್ರುವರಿಯಲ್ಲಿ ಹಂತ 2ಬಿ ಕಾಮಗಾರಿ ಆರಂಭವಾಗಿತ್ತು.

ಹಂತ 2ಎ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಆದರೆ, ಹಂತ 2ಬಿಯ ಕಾಮಗಾರಿ ಕೆ.ಆರ್‌. ಪುರದಿಂದ ಹೆಬ್ಬಾಳವರೆಗೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಹೆಬ್ಬಾಳದಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ  ಮೆಟ್ರೋ ಕಾಮಗಾರಿ ವೇಗವಾಗಿ ನಡೆಯುತ್ತಿದೆ.

Tags:    

Similar News