ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ದೇವದಾರಿ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರ ಸ್ವಾಮ್ಯದ ಕುದುರೆಮುಖ ಕಬ್ಬಿಣದ ಅದಿರು ಕಂಪನಿಗೆ (ಕೆಐಒಸಿಎಲ್) ಡಿಸೆಂಬರ್ ತಿಂಗಳು ಅಂತಿಮ ಗಡುವಾಗಿದೆ.
ಗಣಿ ಗುತ್ತಿಗೆ ಅವಧಿಯು ಡಿಸೆಂಬರ್‌ಗೆ ಮುಗಿಯಲಿದ್ದು, ಅಷ್ಟರ ವೇಳೆಗೆ ಗಣಿಗಾರಿಕೆ ಆರಂಭಿಸಿ ಅದಿರು ಸಾಗಿಸುವ ಅನಿವಾರ್ಯತೆ ಕಂಪನಿಗೆ ಎದುರಾಗಿದೆ. ಆದರೆ, ಆ ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು, ರಾಜಕೀಯ ಗುದ್ದಾಟಗಳಿಂದ ಗಣಿಗಾರಿಕೆ ಆರಂಭಿಸಲು ತೊಡಕಾಗಿದ್ದು ಕಂಪನಿಗೆ ಬಿಸಿತುಪ್ಪವಾಗಿದೆ.
ಒಂದು ಬಾರಿ ಗುತ್ತಿಗೆ ರದ್ದಾದರೆ ಕಂಪನಿ ಎಲ್ಲ ಅನುಮತಿಗಳನ್ನು ಹೊಸದಾಗಿ ಪಡೆಯಬೇಕಾದ ಸಂದಿಗ್ಧತೆ ಎದುರಿಸಬೇಕಾಗುತ್ತದೆ. ದೇವದಾರಿ ಬೆಟ್ಟದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆಗೆ ಕೇಂದ ಸಚಿವ ಎಚ್.ಡಿ.ಕುಮಾರಸ್ವಾಮಿ ಅನುಮತಿ ನೀಡಿ ಆದೇಶ ಹೊರಡಿಸಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸರ್ಕಾರ ತಡೆ ನೀಡಿತು. ಬಳಿಕ ಇದು ರಾಜಕೀಯ ಗುದ್ದಾಟಕ್ಕೆ ದಾರಿ ಮಾಡಿಕೊಟ್ಟಿತು. ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಸಹಿ ರಾಜ್ಯದ ಪರವಾಗಿ ಸಹಿ ಹಾಕಿರುವುದು ಎಂದು ಎಚ್.ಡಿ.ಕುಮಾರಸ್ವಾಮಿ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡರು. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ತಿಕ್ಕಾಟ ಹೆಚ್ಚಾಗಲು ಕಾರಣವಾಯಿತು.
ಇದರ ಜತೆಗೆ ಸ್ಥಳೀಯವಾಗಿ ಹೋರಾಟಗಳಿಗೆ ಮತ್ತಷ್ಟು ಕಿಚ್ಚು ಹಚ್ಚಿದಂತಾಯಿತು. ದಟ್ಟವಾದ ಅರಣ್ಯ ಸಂಪತ್ತು, ಶ್ರೀಮಂತ ಜೀವವೈವಿಧ್ಯ ಮತ್ತು ಐತಿಹಾಸಿಕ ದೇವಾಲಯಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಗಣಿಗಾರಿಕೆ ಪ್ರಸ್ತಾಪವು ಪರಿಸರವಾದಿಗಳು, ಸ್ಥಳೀಯರ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಇದು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಂಘರ್ಷಕ್ಕೆ ಮತ್ತೊಂದು ಉದಾಹರಣೆಯಾಗಿದೆ. ರಾಜಕೀಯ ಗುದ್ದಾಟದಿಂದ ಪರಿಸರ ಸಂರಕ್ಷಣೆ ಹೋರಾಟದ ಇನ್ನೊಂದು ಮಜಲಿಗೆ ಹೋರಾಟ ಹೊರಳಿದೆ.ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆಯ ನಿಯಮಗಳ ಪ್ರಕಾರ, ಗುತ್ತಿಗೆ ಪಡೆದ ಎರಡು ವರ್ಷದೊಳಗೆ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಪ್ರಾರಂಭಿಸುವುದು ಕಡ್ಡಾಯವಾಗಿದೆ.
ಗಣಿಗಾರಿಕೆ ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲು ಕೆಐಒಸಿಎಲ್ ವಿಫಲವಾದರೆ, ಅದರ ಗಣಿ ಗುತ್ತಿಗೆ ರದ್ದಾಗುವ ಸಾಧ್ಯತೆ ಇದೆ. 2024ರ ಡಿ.30ರಂದು ಗುತ್ತಿಗೆಯನ್ನು ನವೀಕರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ, ನಿಯಮಾನುಸಾರ ಕಂಪನಿಯು ನಿಗದಿತ ಸಮಯದೊಳಗೆ ಗಣಿಗಾರಿಕೆ ಆರಂಭಿಸಬೇಕಾದ ಕಾನೂನಾತ್ಮಕ ಅನಿವಾರ್ಯತೆ ಇದೆ. ಒಂದು ವೇಳೆ ಈ ಗಡುವನ್ನು ಪಾಲಿಸದಿದ್ದರೆ, ಗುತ್ತಿಗೆ ಒಪ್ಪಂದವು ರದ್ದಾಗುವ ಅಪಾಯವನ್ನು ಕಂಪನಿ ಎದುರಿಸಲಿದೆ. ಇದೇ ಕಾರಣಕ್ಕಾಗಿ ಕೆಐಒಸಿಎಲ್ ಗಣಿಗಾರಿಕೆ ಆರಂಭಿಸಲು ಇನ್ನಿಲ್ಲದ ಕರಸತ್ತು ನಡೆಸುತ್ತಿದೆ. ಆದರೆ, ಇತರೆ ಗಣಿ ಕಂಪನಿಗಳ ರಾಜಕೀಯ, ಜಿಲ್ಲೆಯ ರಾಜಕೀಯ, ಸ್ಥಳೀಯರ ಹೋರಾಟಗಳಿಂದ ಯೋಜನೆ ನನೆಗುದಿಗೆ ಬೀಳುವ ಎಲ್ಲಾ ಸಾಧ್ಯತೆಗಳಿವೆ ಎಂದು ಸಂಸ್ಥೆಯ ಮೂಲಗಳು ಹೇಳಿವೆ.
ಸಂಡೂರಿನ ಸ್ವಾಮಿಮಲೈ ಬಳಿಯ ದೇವದಾರಿ
ಸಂಡೂರಿನ ಸ್ವಾಮಿಮಲೈ ಬ್ಲಾಕ್‌ನ ದೇವದಾರಿ ಹಿಲ್ 401.57 ಹೆಕ್ಟರ್ ಅರಣ್ಯ ಭೂಮಿಯಲ್ಲಿ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದರೂ, ರಾಜ್ಯ ಸರ್ಕಾರವು ಹಲವು ಪ್ರಮುಖ ಆಕ್ಷೇಪಗಳನ್ನು ಎತ್ತಿದೆ. ಇದರಿಂದಾಗಿ ಗಣಿಗಾರಿಕೆ ಆರಂಭಕ್ಕೆ ದೊಡ್ಡ ಅಡಚಣೆ ಉಂಟಾಗಿದೆ. ರಾಜ್ಯದ ಅರಣ್ಯ ಸಚಿವ ಈಶ್ವರ ಖಂಡ್ರೆ, ದೇವದಾರಿ ಅರಣ್ಯ ಭೂಮಿಯನ್ನು ಕೆಐಒಸಿಎಲ್‌ಗೆ ಹಸ್ತಾಂತರಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸುವಾಗ ಕೆಐಒಸಿಎಲ್‌ನಿಂದ ಆಗಿರುವ ಪರಿಸರ ಹಾನಿ ಮತ್ತು ಷರತ್ತುಗಳ ಉಲ್ಲಂಘನೆಯನ್ನು ರಾಜ್ಯ ಸರ್ಕಾರ ಪ್ರಮುಖವಾಗಿ ಪ್ರಸ್ತಾಪಿಸಿದೆ.
ರಾಜ್ಯ ಸರ್ಕಾರದ ಷರತ್ತುಗಳು
ಕುದುರೆಮುಖದಲ್ಲಿ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ಅರಣ್ಯಕ್ಕೆ ಹಾನಿ ಮಾಡಿದ್ದಕ್ಕಾಗಿ ವಿಧಿಸಲಾಗಿರುವ 1,349.52 ಕೋಟಿ ರೂ. ದಂಡವನ್ನು ಕಂಪನಿ ಪಾವತಿಸಬೇಕು. ಈ ಹಿಂದೆ ಕುದುರೆಮುಖದಲ್ಲಿ ಅಕ್ರಮವಾಗಿ ಬಳಸಿಕೊಂಡಿದ್ದ ಅರಣ್ಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು. ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟ ಕೇಂದ್ರ ಉನ್ನತಾಧಿಕಾರ ಸಮಿತಿಯ (ಸಿಇಸಿ) ಎಲ್ಲಾ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.ಈ ಎಲ್ಲಾ ಷರತ್ತುಗಳನ್ನು ಪೂರೈಸುವವರೆಗೂ ದೇವದಾರಿ ಅರಣ್ಯ ಭೂಮಿಯನ್ನು ಹಸ್ತಾಂತರಿಸುವುದಿಲ್ಲ ಎಂಬುದು ರಾಜ್ಯ ಸರ್ಕಾರದ ಸ್ಪಷ್ಟ ನಿಲುವಾಗಿದೆ.
ಇದಕ್ಕೆ ಪ್ರತಿಯಾಗಿ, ಕೆಐಒಸಿಎಲ್ ರಾಜ್ಯ ಸರ್ಕಾರದ ಷರತ್ತುಗಳು ಮತ್ತು ಸಿಇಸಿ ಶಿಫಾರಸುಗಳನ್ನು ಪಾಲಿಸಲು ಸಮ್ಮತಿ ಸೂಚಿಸಿದೆ ಎಂದು ವರದಿಯಾಗಿದೆ. ಕಾನೂನಾತ್ಮಕವಾಗಿ ಡಿಸೆಂಬರ್ ಗಡುವು ಕೆಐಒಸಿಎಲ್‌ಗೆ ನಿರ್ಣಾಯಕವಾಗಿದ್ದರೂ, ರಾಜ್ಯ ಸರ್ಕಾರದ ಷರತ್ತುಗಳನ್ನು ಪೂರೈಸಿ, ಅರಣ್ಯ ಭೂಮಿಯನ್ನು ತನ್ನ ಸುಪರ್ದಿಗೆ ಪಡೆಯುವುದೇ ಕಂಪನಿಯ ಮುಂದಿರುವ ಸವಾಲಾಗಿದೆ.
ಯೋಜನೆಯನ್ನು ವಿರೋಧಿಸುವವರ ವಾದಗಳು
ಪರಿಸರವಾದಿಗಳು, ಸಾಮಾಜಿಕ ಹೋರಾಟಗಾರರು ಮತ್ತು ಸ್ಥಳೀಯ ನಿವಾಸಿಗಳು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಪ್ರತಿನಿತ್ಯ ಹೋರಾಟಗಳು ನಡೆಯುತ್ತಿವೆ. ಇದು ಕಂಪನಿಗೆ ನುಂಗಲಾರದ ತುತ್ತಾಗಿದೆ. ಸಂಡೂರಿನ ಅರಣ್ಯ ಪ್ರದೇಶವು "ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್" ಇದ್ದಂತೆ. ಇಲ್ಲಿನ ಗಣಿಗಾರಿಕೆಯಿಂದ ಪರಿಸರ ಸಮತೋಲನ ಸಂಪೂರ್ಣವಾಗಿ ಹದಗೆಡುತ್ತದೆ ಎಂಬುದು ಪರಿಸರವಾದಿಗಳ ಆರೋಪವಾಗಿದೆ. ಕೆಐಒಸಿಎಲ್, ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಿದಾಗ ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಆರೋಪಗಳಿವೆ. ಅದೇ ಕಂಪನಿಗೆ ಮತ್ತೊಂದು ಸೂಕ್ಷ್ಮ ಅರಣ್ಯ ಪ್ರದೇಶವನ್ನು ನೀಡುವುದು ಸರಿಯಲ್ಲ. ರಾಜ್ಯ ಅರಣ್ಯ ಇಲಾಖೆಯ ಕೆಳಹಂತದ ಅಧಿಕಾರಿಗಳಿಂದ ಹಿಡಿದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳವರೆಗೆ ಎಲ್ಲರೂ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಈ ವರದಿಗಳನ್ನು ಕಡೆಗಣಿಸಿ ಅನುಮತಿ ನೀಡಲಾಗಿದೆ.ಅರಣ್ಯ ಹಕ್ಕು ಕಾಯ್ದೆಯಡಿ ಸ್ಥಳೀಯ ಸಮಿತಿಗಳ ಅನುಮತಿ ಪಡೆಯಲಾಗಿಲ್ಲ ಎಂಬ ಆರೋಪವೂ ಇದೆ ಎಂದು ಹೋರಾಟಗಾರರ ಅಭಿಪ್ರಾಯವಾಗಿದೆ.
ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಸಂಸ್ಥೆಯ ಅಧಿಕಾರಿಯೊಬ್ಬರು, ಬಳ್ಳಾರಿ ಜಿಲ್ಲೆಯಲ್ಲಿ ಹಲವು ಖಾಸಗಿ ಗಣಿಗಾರಿಕೆ ಕಂಪನಿಗಳಿವೆ. ಅದರಲ್ಲೂ ಪ್ರಮುಖವಾದ ಖಾಸಗಿ ಕಂಪನಿಯೊಂದು ತೆರೆಮರೆಯಲ್ಲಿ ವಿರೋಧ ವ್ಯಕ್ತಪಡಿಸುತ್ತಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಯು ದೇವದಾರಿ ಪ್ರದೇಶದಲ್ಲಿ ಗಣಿಗಾರಿಕೆ ಪ್ರಾರಂಭಿಸಿದರೆ ತನ್ನ ವಹಿವಾಟಿಗೆ ಪೆಟ್ಟು ಬೀಳಲಿದೆ ಎಂಬುದು ಅದರ ಆತಂಕವಾಗಿದೆ. ಕೆಐಒಸಿಎಲ್ ಸಂಸ್ಥೆಯು ಗಣಿಗಾರಿಕೆ ಪ್ರಾರಂಭಿಸಿದರೆ ಒಡೆತ ಬೀಳಲಿದೆ ಎಂಬ ಕಾರಣಕ್ಕಾಗಿ ಸ್ಥಳೀಯರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದೆ. ಇದರ ಜತೆಗೆ ಸ್ಥಳೀಯ ರಾಜಕೀಯವು ಸಹ ಕೆಲಸ ಮಾಡುತ್ತಿದೆ. ಈ ಕಾರಣಕ್ಕಾಗಿ ಗಣಿಗಾರಿಕೆ ಆರಂಭಿಸಲು ಸಾಧ್ಯವಾಗದಂತೆ ರಾಜಕೀಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯೋಜನೆಯನ್ನು ಬೆಂಬಲಿಸುವವರ ವಾದವೇನು?
ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು, ಈ ಯೋಜನೆಯು ರಾಜ್ಯದಲ್ಲಿ ಉಕ್ಕು ಉತ್ಪಾದನೆಯನ್ನು ಹೆಚ್ಚಿಸಲಿದೆ ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿಸಲಿದೆ ಎಂದಿದ್ದಾರೆ. ಅರಣ್ಯ ನಾಶದ ಆತಂಕವನ್ನು ತಳ್ಳಿಹಾಕಿರುವ ಅವರು, ಕೆಐಒಸಿಎಲ್ ಗಣಿಗಾರಿಕೆ ಆರಂಭಿಸುವ ಮುನ್ನವೇ 808 ಹೆಕ್ಟೇರ್ ಪ್ರದೇಶದಲ್ಲಿ ಪರ್ಯಾಯ ಅರಣ್ಯವನ್ನು ಬೆಳೆಸಲು 194 ಕೋಟಿ ರೂ. ಪಾವತಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಕೆಐಒಸಿಎಲ್ ಸಹ ಯೋಜನೆಯಿಂದ ಸ್ಥಳೀಯವಾಗಿ ಉದ್ಯೋಗ ಹೆಚ್ಚಾಗಲಿದೆ. ಹೋರಾಟಗಾರರು ಹೇಳುವಂತೆ ಯಾವುದೇ ರೀತಿಯಾದ ಅರಣ್ಯಕ್ಕೆ ಸಮಸ್ಯೆಯಾಗುವುದಿಲ್ಲ. ಕಾನೂನುಬದ್ಧವಾಗಿಯೇ ಗಣಿಗಾರಿಕೆ ನಡೆಸಲಾಗುತ್ತದೆ. ಕೇಂದ್ರ ಸರ್ಕಾರ ಸ್ವಾಮ್ಯದ ಕಂಪನಿಯಾಗಿರುವುದರಿಂದ ಕಾನೂನು ಉಲ್ಲಂಘನೆ ಮಾಡಿ ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ದೇವದಾರಿಯಲ್ಲಿ ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಜನಸಂಗ್ರಾಮ ಸಂಘಟನೆಯ ಮುಖ್ಯಸ್ಥ ಶ್ರೀಶೈಲ ಅವರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ಸಾಕಾಷ್ಟು ಗಣಿಗಾರಿಕೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆರಂಭದಲ್ಲಿ ಸ್ಥಳೀಯರಿಗೆ ಉದ್ಯೋಗ, ಅರಣ್ಯ ಸಂರಕ್ಷಣೆ ಮಾಡುವ ಅಶ್ವಾಸನೆಗಳನ್ನು ನೀಡಲಾಗುತ್ತದೆ. ಆದರೆ, ಗಣಿಗಾರಿಕೆ ಆರಂಭಗೊಂಡ ಬಳಿಕ ಸ್ಥಳೀಯರಿಗೆ ಅವಕಾಶ ನೀಡುವ ಬದಲು ಉತ್ತರ ಭಾರತದವರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಿ ಕಂಪನಿಗಳಲ್ಲಿ ಉತ್ತರ ಭಾರತದವರೇ ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ, ಅರಣ್ಯ ಸಂರಕ್ಷಣೆ ಮಾಡುವ ಯಾವುದೇ ಉದ್ದೇಶವು ಕಂಪನಿಗಳಿಗೆ ಇಲ್ಲ. ಈಗಾಗಲೇ ಸಾಕಾಷ್ಟು ಅರಣ್ಯ ಪ್ರದೇಶ ಹಾಳಾಗಿದೆ. ಇನ್ನೂ ಹಾಳಾಗಲು ಬಿಡುವುದಿಲ್ಲ. ಇದೇ ಕಾರಣಕ್ಕಾಗಿ ಹೋರಾಟ ತೀವ್ರಗೊಳಿಸಲಾಗಿದೆ. ಕೆಐಒಸಿಎಲ್ ಮಾತ್ರವಲ್ಲ, ಯಾವುದೇ ಗಣಿ ಸಂಸ್ಥೆಗಳು ಹೊಸದಾಗಿ ಗಣಿಗಾರಿಕೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಅರಣ್ಯ ಪ್ರದೇಶಗಳಲ್ಲಿ ಮತ್ತೆ ಟ್ರಕ್‌ಗಳು ಓಡಾಡುತ್ತಿವೆ. ಧೂಳು ಮತ್ತು ಶಬ್ದದಿಂದ ಜೀವನ ಕಷ್ಟವಾಗಿದೆ. ನದಿ ನೀರು ಮಾಲಿನ್ಯಗೊಂಡಿದೆ. ಪಶುಗಳಿಗೆ ಕುಡಿಯುವ ನೀರಿಲ್ಲ. ದೇವದಾರಿ ಪ್ರದೇಶ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯ ಒಂದು ಪ್ರಮುಖ ಭಾಗವಾಗಿದ್ದು, ಗಣಿಗಾರಿಕೆ ಕ್ರಿಯೆಯಿಂದ ಅರಣ್ಯ ನಾಶ, ಭೂಸವೆತ ಮತ್ತು ನೀರಿನ ಮಾಲಿನ್ಯ ಉಂಟಾಗಿದೆ. “ಅಕ್ರಮ ಗಣಿಗಾರಿಕೆಗೆ ವಿರುದ್ಧವಾಗಿ ಸುಪ್ರೀಂ ಕೋರ್ಟ್ ನೀಡಿದ್ದ ಮಾರ್ಗಸೂಚಿಗಳನ್ನು ಸರ್ಕಾರ ಉಲ್ಲಂಘಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗಣಿಗಾರಿಕೆಗೆ ಖಾಸಗಿ ಕಂಪನಿಗಳ ಪ್ರವೇಶ
1990ರ ದಶಕದ ಅಂತ್ಯ ಮತ್ತು 2000ರ ದಶಕದ ಆರಂಭದಲ್ಲಿ ಬಳ್ಳಾರಿಯ ಗಣಿಗಾರಿಕೆಯ ಚಿತ್ರಣವೇ ಬದಲಾಯಿತು. 1994ರಲ್ಲಿ ಗಣಿ ಮತ್ತು ಖನಿಜ ಕಾಯ್ದೆಗೆ ತಂದ ತಿದ್ದುಪಡಿಗಳು ಖಾಸಗಿ ಕಂಪನಿಗಳಿಗೆ ಗಣಿಗಾರಿಕೆ ಕ್ಷೇತ್ರದಲ್ಲಿ ಪ್ರವೇಶಿಸಲು ಅವಕಾಶ ಮಾಡಿಕೊಡಲಾಯಿತು. 2008ರ ಬೀಜಿಂಗ್ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿದ್ದ ಚೀನಾ, ಬೃಹತ್ ಪ್ರಮಾಣದಲ್ಲಿ ಉಕ್ಕು ಉತ್ಪಾದನೆಗೆ ಮುಂದಾಯಿತು. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಬ್ಬಿಣದ ಅದಿರಿಗೆ, ವಿಶೇಷವಾಗಿ ಬಳ್ಳಾರಿಯ ಉತ್ತಮ ಗುಣಮಟ್ಟದ ಅದಿರಿಗೆ, ಹಿಂದೆಂದೂ ಕಂಡರಿಯದ ಬೇಡಿಕೆ ಸೃಷ್ಟಿಯಾಯಿತು. ಈ ಅವಧಿಯಲ್ಲಿ ಕಬ್ಬಿಣದ ಅದಿರಿನ ಬೆಲೆ ಗಗನಕ್ಕೇರಿತು. 2000ರಲ್ಲಿ ಪ್ರತಿ ಟನ್‌ಗೆ ಸುಮಾರು 1,200 ರೂ.ಗೆ ಇದ್ದ ಅದಿರಿನ ಬೆಲೆ, ಕೆಲವೇ ವರ್ಷಗಳಲ್ಲಿ 7ಸಾವಿರ ರೂ. ತಲುಪಿತು. ಈ ಆರ್ಥಿಕ ಅವಕಾಶವು ಅನೇಕ ಖಾಸಗಿ ಕಂಪನಿಗಳನ್ನು, ಉದ್ಯಮಿಗಳನ್ನು ಮತ್ತು ರಾಜಕಾರಣಿಗಳನ್ನು ಬಳ್ಳಾರಿಯತ್ತ ಆಕರ್ಷಿಸಿತು.
ಈ ಹಂತವನ್ನು ಬಳ್ಳಾರಿ ಗಣಿಗಾರಿಕೆಯ "ಕರಾಳ ಅಧ್ಯಾಯ" ಎಂದೇ ಕರೆಯಲಾಗುತ್ತದೆ. ಅಗಾಧ ಲಾಭದ ಆಸೆಯಿಂದ ಕಾನೂನುಬಾಹಿರ ಚಟುವಟಿಕೆಗಳು ವ್ಯಾಪಕವಾದವು. ಗಣಿ ಗಡಿಗಳನ್ನು ಮೀರಿ ಅಗೆಯುವುದು, ಅರಣ್ಯ ಪ್ರದೇಶವನ್ನು ಅತಿಕ್ರಮಿಸುವುದು, ಅನುಮತಿ ಇಲ್ಲದೆ ಗಣಿಗಾರಿಕೆ ನಡೆಸುವುದು, ಅದಿರಿನ ಪ್ರಮಾಣವನ್ನು ಕಡಿಮೆ ತೋರಿಸಿ ಸರ್ಕಾರಕ್ಕೆ ರಾಜಧನ ವಂಚಿಸುವುದು, ನಕಲಿ ಸಾಗಾಣಿಕೆ ಪರವಾನಗಿಗಳನ್ನು ಬಳಸುವುದು ಮುಂತಾದ ಅಕ್ರಮಗಳು ಮಿತಿಮೀರಿದವು. ಈ ಅಕ್ರಮಗಳು ರಾಜಕಾರಣಿಗಳು, ಗಣಿ ಉದ್ಯಮಿಗಳು ಮತ್ತು ಅಧಿಕಾರಿಗಳ ಅಪವಿತ್ರ ಮೈತ್ರಿಯಿಂದ ನಡೆಯುತ್ತಿದ್ದವು. ಗಣಿಗಾರಿಕೆ ಲಾಬಿಯು ಎಷ್ಟು ಪ್ರಬಲವಾಯಿತೆಂದರೆ, ಬಳ್ಳಾರಿಯನ್ನು "ರಿಪಬ್ಲಿಕ್ ಆಫ್ ಬಳ್ಳಾರಿ" ಎಂದು ವಿಶ್ಲೇಷಿಸಲಾಯಿತು. ಶಾಸಕ ಜನಾರ್ದನ ರೆಡ್ಡಿ ಸಹೋದರರ ಒಡೆತನದ ಓಬುಳಾಪುರಂ ಮೈನಿಂಗ್ ಕಂಪನಿ ಮತ್ತು ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಈ ಅವಧಿಯಲ್ಲಿ ಪ್ರಮುಖವಾಗಿ ಸದ್ದು ಮಾಡಿದವು.
ಪರಿಸರದ ಮೇಲಿನ ಪರಿಣಾಮ
ಅವೈಜ್ಞಾನಿಕ ಮತ್ತು ಅಕ್ರಮ ಗಣಿಗಾರಿಕೆಯಿಂದ ಬಳ್ಳಾರಿಯ ಪರಿಸರದ ಮೇಲೆ ಗಂಭೀರ ದುಷ್ಪರಿಣಾಮಗಳಾದವು. ಸಾವಿರಾರು ಹೆಕ್ಟೇರ್ ಅರಣ್ಯ ನಾಶವಾಯಿತು. ಗಣಿಗಾರಿಕೆಯ ಧೂಳಿನಿಂದ ಕೃಷಿ ಭೂಮಿ ಬರಡಾಯಿತು, ಬೆಳೆಗಳು ನಾಶವಾದವು. ವನ್ಯಜೀವಿಗಳ ಆವಾಸಸ್ಥಾನಗಳು ನಾಶವಾಗಿ, ಕರಡಿಯಂತಹ ಪ್ರಾಣಿಗಳು ಕಣ್ಮರೆಯಾದವು. ಗಾಳಿ ಮತ್ತು ನೀರಿನ ಮಾಲಿನ್ಯದಿಂದ ಸ್ಥಳೀಯ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತು ಎಂದು ಹೇಳಲಾಗಿದೆ.
ಒಟ್ಟಾರೆ ದೇವದಾರಿ ಗಣಿಗಾರಿಕೆ ಯೋಜನೆಯು ಕೇವಲ ಒಂದು ಗಣಿಗಾರಿಕೆ ಪ್ರಕ್ರಿಯೆಯಾಗಿ ಉಳಿದಿಲ್ಲ. ಇದು ಬಳ್ಳಾರಿಯಂತಹ ಗಣಿಗಾರಿಕೆಯಿಂದ ಈಗಾಗಲೇ ಸಾಕಷ್ಟು ನಲುಗಿರುವ ಜಿಲ್ಲೆಯ ಪರಿಸರ, ಜೀವವೈವಿಧ್ಯ ಮತ್ತು ಜನರ ಭವಿಷ್ಯದ ಪ್ರಶ್ನೆಯಾಗಿದೆ. ಆರ್ಥಿಕ ಅಭಿವೃದ್ಧಿ ಅಗತ್ಯವಾದರೂ, ಅದನ್ನು ಪರಿಸರವನ್ನು ಬಲಿಕೊಟ್ಟು ಸಾಧಿಸಬೇಕೇ ಎಂಬ ಗಂಭೀರ ಚರ್ಚೆಯನ್ನು ಈ ವಿವಾದ ಹುಟ್ಟುಹಾಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಂಘರ್ಷ, ಪರಿಸರವಾದಿಗಳ ಹೋರಾಟ ಮತ್ತು ಕಾನೂನಾತ್ಮಕ ಸವಾಲುಗಳ ಮಧ್ಯೆ ದೇವದಾರಿಯ ಭವಿಷ್ಯ ಅನಿಶ್ಚಿತತೆಯಲ್ಲಿದೆ.