Part-1: ಕಿರುಬಂದರುಗಳ ಮೂಲಕ  ಮತ್ತೆ ಅದಿರು ರಫ್ತು| 500 ಕೋಟಿ ವಾರ್ಷಿಕ ಆದಾಯ, 10,000 ಉದ್ಯೋಗ ಸೃಷ್ಟಿ?
x

Part-1: ಕಿರುಬಂದರುಗಳ ಮೂಲಕ ಮತ್ತೆ ಅದಿರು ರಫ್ತು| 500 ಕೋಟಿ ವಾರ್ಷಿಕ ಆದಾಯ, 10,000 ಉದ್ಯೋಗ ಸೃಷ್ಟಿ?

ಕಿರುಬಂದಿರು ಮೂಲಕ ಅದಿರು ರಫ್ತು ನಿಷೇಧದಿಂದಾಗಿ ಕಳೆದ 14 ವರ್ಷದಲ್ಲಿ ಸರ್ಕಾರ ಬರೋಬ್ಬರಿ 2 ಸಾವಿರ ಕೋಟಿ ರೂ. ನಿಂದ 3 ಸಾವಿರ ಕೋಟಿ ರೂ.ಗಿಂತ ಅಧಿಕ ಮೊತ್ತದ ನೇರ ಆದಾಯವನ್ನು ಕಳೆದುಕೊಂಡಿದೆ.


Click the Play button to hear this message in audio format

ಅಕ್ರಮ ಗಣಿಗಾರಿಕೆಯ ಹಗರಣಗಳಿಂದಾಗಿ ಕಳೆದ ಒಂದೂವರೆ ದಶಕಗಳಿಂದ ರಾಜ್ಯ ಕಿರು ಬಂದರುಗಳ ಮೂಲಕ ನಡೆಯುತ್ತಿದ್ದ ಕಬ್ಬಿಣದ ಅದಿರು ರಫ್ತು ಮತ್ತು ಆಮದು ವಹಿವಾಟನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಇದೀಗ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಈ ನಿಷೇಧವನ್ನು ತೆರವುಗೊಳಿಸಿ ಪುನಃ ವಹಿವಾಟು ಆರಂಭಿಸಲು ಸಕಲ ಸಿದ್ದತೆ ಕೈಗೊಂಡಿದೆ.

ರಾಜ್ಯದ ಕರಾವಳಿ ತೀರವು ಆರ್ಥಿಕ ಚಟುವಟಿಕೆಗಳ ಜೀವನಾಡಿಯಾಗಿದೆ. ಅಕ್ರಮ ಗಣಿಗಾರಿಕೆ ಬಳಿಕ 2010-11ರಿಂದ ರಾಜ್ಯದ ಕಿರು ಬಂದರುಗಳಾದ ಕಾರವಾರ, ಬೆಲೆಕೇರಿ, ತದಡಿ ಸೇರಿದಂತೆ ಕಾರವಾರ, ಬೇಲೆಕೇರಿ, ತದಡಿ, ಹೊನ್ನಾವರ, ಭಟ್ಕಳ, ಕುಂದಾಪುರ, ಮಲ್ಪೆ, ಹಂಗಾರಕಟ್ಟಾ, ಹಳೆ ಮಂಗಳೂರು, ಪಡುಬಿದ್ರಿ ಬಂದರುಗಳಿಂದ ಅದಿರು ರಫ್ತು, ಆಮದು ನಿಷೇಧಿಸಲಾಗಿತ್ತು. ರಾಯಲ್ಟಿ, ಸೆಸ್ ಮತ್ತು ಬಂದರು ಶುಲ್ಕದ ರೂಪದಲ್ಲಿ ಸರ್ಕಾರಕ್ಕೆ ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ.ಇದೀಗ ರಾಜ್ಯ ಸರ್ಕಾರವು ಆರ್ಥಿಕತೆಗೆ ಬಲ ತುಂಬುವ ಉದ್ದೇಶದಿಂದ ಈ ನಿಷೇಧವನ್ನು ತೆರವುಗೊಳಿಸಿ, ಕಿರು ಬಂದರುಗಳ ಮೂಲಕ ಅದಿರು ರಫ್ತು ಮತ್ತು ಆಮದು ವಹಿವಾಟಿಗೆ ಹಸಿರು ನಿಶಾನೆ ತೋರಲಾಗಿದೆ.

ಕಳೆದ 14 ವರ್ಷಗಳಿಂದ ಕಬ್ಬಿಣದ ಅದಿರು ರಫ್ತು ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಅಕ್ರಮ ಗಣಿಗಾರಿಕೆಯ ಕರಾಳ ಛಾಯೆ ಮತ್ತು ಲೋಕಾಯುಕ್ತ ವರದಿಯ ಪ್ರಭಾವದಿಂದಾಗಿ ಹೇರಲಾಗಿದ್ದ ಈ ನಿಷೇಧವು ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟವುಂಟುಮಾಡಿತ್ತು. ಅಂದಾಜಿನ ಪ್ರಕಾರ, ಕಳೆದ ದಶಕದಲ್ಲಿ ಸರ್ಕಾರ ಬರೋಬ್ಬರಿ 2 ಸಾವಿರ ಕೋಟಿ ರೂ.ನಿಂದ 3 ಸಾವಿರ ಕೋಟಿ ರೂ.ಗಿಂತ ಅಧಿಕ ಮೊತ್ತದ ನೇರ ಆದಾಯವನ್ನು ಕಳೆದುಕೊಂಡಿದೆ. ಲಾರಿ ಮಾಲೀಕರು, ಬಂದರು ಕಾರ್ಮಿಕರು, ಬಾರ್ಜ್ (ದೋಣಿ) ಮಾಲೀಕರು ಮತ್ತು ಸಾರಿಗೆ ಉದ್ಯಮಕ್ಕೆ ಸಂಬಂಧಿಸಿದ ಸಾವಿರಾರು ಜನರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ, ರಾಜ್ಯ ಸರ್ಕಾರವು ಈ ನಿಷೇಧವನ್ನು ತೆರವುಗೊಳಿಸಿ, ಪುನಃ ವಹಿವಾಟು ಆರಂಭಿಸಲು ಸಕಲ ಸಿದ್ಧತೆ ನಡೆಸಿದೆ. ರಫ್ತು ಪುನರಾರಂಭಗೊಂಡರೆ, ಸರ್ಕಾರಕ್ಕೆ ವಾರ್ಷಿಕವಾಗಿ ರಾಯಲ್ಟಿ ಮತ್ತು ಇತರೆ ಶುಲ್ಕಗಳ ರೂಪದಲ್ಲಿ ಸುಮಾರು 500 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ಹರಿದುಬರುವ ನಿರೀಕ್ಷೆಯಿದೆ. ಬಂದರು ಚಟುವಟಿಕೆಗಳು ಗರಿಗೆದರುವುದರಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ (ಚಾಲಕರು, ಕ್ಲೀನರ್‌ಗಳು, ಲೋಡರ್‌ಗಳು) ಮತ್ತೆ ಉದ್ಯೋಗ ಲಭ್ಯವಾಗಲಿದೆ.

ನಿಷೇಧ ಮಾಡಲು ಅಂದು ಏನಾಗಿತ್ತು?

2008-2010ರ ಅವಧಿಯಲ್ಲಿ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ತಾರಕಕ್ಕೇರಿತ್ತು. ಬಳ್ಳಾರಿ, ಹೊಸಪೇಟೆ ಮತ್ತು ಚಿತ್ರದುರ್ಗ ಭಾಗದ ಅದಿರನ್ನು ಯಾವುದೇ ಪರವಾನಗಿ ಇಲ್ಲದೆ, ಅರಣ್ಯ ಸಂಪತ್ತನ್ನು ಲೂಟಿ ಮಾಡಿ ಕರಾವಳಿಯ ಬಂದರುಗಳಿಗೆ ಸಾಗಿಸಲಾಗುತ್ತಿತ್ತು. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ನೇತೃತ್ವದ ಲೋಕಾಯುಕ್ತ ವರದಿಯು "ಬೆಲೆಕೇರಿ ಬಂದರು ಹಗರಣ"ವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಜಪ್ತಿ ಮಾಡಲಾಗಿದ್ದ ಲಕ್ಷಾಂತರ ಟನ್ ಅದಿರು ಬಂದರಿನಿಂದಲೇ ಕಣ್ಮರೆಯಾಗಿದ್ದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪರಿಸರ ನಾಶ ಮತ್ತು ನೈಸರ್ಗಿಕ ಸಂಪನ್ಮೂಲಗಳ ಲೂಟಿಯನ್ನು ತಡೆಗಟ್ಟಲು ರಾಜ್ಯದಿಂದ ಅದಿರು ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಿತು. ಕೇವಲ ಇ-ಹರಾಜು ಮೂಲಕ ದೇಶೀಯ ಉಕ್ಕು ಕಾರ್ಖಾನೆಗಳಿಗೆ ಮಾತ್ರ ಅದಿರು ಪೂರೈಸಲು ಅನುಮತಿ ನೀಡಲಾಯಿತು. ಅಂದಿನಿಂದ ಕಿರು ಬಂದರುಗಳು ಬಿಕೋ ಎನ್ನುತ್ತಿದ್ದವು.

ಬೊಕ್ಕಸಕ್ಕೆ ಆದ ನಷ್ಟದ ಪ್ರಮಾಣವೆಷ್ಟು?

ಕಳೆದ 14 ವರ್ಷಗಳಲ್ಲಿ ರಫ್ತು ಸ್ಥಗಿತಗೊಂಡಿದ್ದರಿಂದ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆರ್ಥಿಕತೆ ಅನುಭವಿಸಿದ ನಷ್ಟದ ಪ್ರಮಾಣ ಬೃಹತ್ತಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಂದಾಜಿನ ಪ್ರಕಾರ ರಾಯಲ್ಟಿ, ಜಿಲ್ಲಾ ಖನಿಜ ನಿಧಿ ಮತ್ತು ಬಂದರು ಸುಂಕಗಳ ರೂಪದಲ್ಲಿ ಸರ್ಕಾರವು ವಾರ್ಷಿಕವಾಗಿ ಸರಾಸರಿ 400 ರಿಂದ 500 ಕೋಟಿ ರೂ.ಗಳಂತೆ, ಕಳೆದ 14 ವರ್ಷಗಳಲ್ಲಿ ಸುಮಾರು 6ಸಾವಿರದಿಂದ 7 ಸಾವಿರ ಕೋಟಿ ರೂ.ಗಿಂತ ಅಧಿಕ ನೇರ ಆದಾಯವನ್ನು ಕಳೆದುಕೊಂಡಿದೆ. ಬಂದರುಗಳಲ್ಲಿ ವಹಿವಾಟಿಲ್ಲದೆ ಜೆಟ್ಟಿಗಳು, ಕ್ರೇನ್‌ಗಳು ಮತ್ತು ಗೋದಾಮುಗಳು ತುಕ್ಕು ಹಿಡಿದಿವೆ. ಬಂದರು ಅಭಿವೃದ್ಧಿ ಮಂಡಳಿಗೆ ಬರಬೇಕಿದ್ದ ಕೋಟ್ಯಂತರ ರೂ. ಬಾಡಿಗೆ ಮತ್ತು ನಿರ್ವಹಣಾ ಶುಲ್ಕ ಖಾಲಿ ಬಿದ್ದಿದೆ.

ಕಾರವಾರ ಮತ್ತು ಅಂಕೋಲಾ ಭಾಗದಲ್ಲಿ ಅದಿರು ಸಾಗಾಟವನ್ನೇ ನಂಬಿಕೊಂಡಿದ್ದ ಸುಮಾರು 15 ಸಾವಿರಕ್ಕೂ ಹೆಚ್ಚು ಲಾರಿ ಚಾಲಕರು, ಕ್ಲೀನರ್‌ಗಳು, ಮತ್ತು ಬಂದರು ಕಾರ್ಮಿಕರು ಕೆಲಸ ಕಳೆದುಕೊಂಡರು. ಬಾರ್ಜ್ (ದೋಣಿ) ಮಾಲೀಕರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಇವೆ.

ಸರ್ಕಾರದ ನಿರ್ಧಾರದಿಂದ ಅನುಮತಿ ಬಳಿಕದ ವಹಿವಾಟಿನ ನಿರೀಕ್ಷೆ

ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ, ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳೊಂದಿಗೆ ರಫ್ತಿಗೆ ಅನುಮತಿ ನೀಡಲಾಗಿದೆ. ಕಿರು ಬಂದರುಗಳಲ್ಲಿ ಅದಿರು ರಫ್ತಿಗೆ ಮರುಚಾಲನೆ ಸಿಕ್ಕರೆ, ರಾಜ್ಯದ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ. ಕಾರವಾರ ಮತ್ತು ಹಳೆ ಮಂಗಳೂರು ಬಂದರುಗಳ ಮೂಲಕ ವಾರ್ಷಿಕವಾಗಿ ಲಕ್ಷಾಂತರ ಟನ್ ಅದಿರು ರಫ್ತು ಮಾಡುವ ಗುರಿ ಹೊಂದಲಾಗಿದೆ. ಆರಂಭಿಕ ಹಂತದಲ್ಲಿ ವಾರ್ಷಿಕವಾಗಿ 3 ರಿಂದ 4 ದಶಲಕ್ಷ ಟನ್ ಅದಿರು ರಫ್ತು ಮಾಡುವ ಗುರಿ ಹೊಂದಲಾಗಿದೆ. ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಭಾಗದ ಅದಿರನ್ನು ಈ ಬಂದರುಗಳಿಗೆ ಸಾಗಿಸಲಾಗುತ್ತದೆ. ರಫ್ತು ಪುನರಾರಂಭಗೊಂಡರೆ, ಸರ್ಕಾರಕ್ಕೆ ವಾರ್ಷಿಕವಾಗಿ ರಾಯಲ್ಟಿ ಮತ್ತು ಇತರೆ ಶುಲ್ಕಗಳ ರೂಪದಲ್ಲಿ ಸುಮಾರು 500 ಕೋಟಿ ರೂ.ಗಳಿಗೂ ಹೆಚ್ಚು ಆದಾಯ ಹರಿದುಬರುವ ನಿರೀಕ್ಷೆಯಿದೆ. ಅಲ್ಲದೇ, ಬಂದರು ಚಟುವಟಿಕೆಗಳು ಗರಿಗೆದರುವುದರಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ (ಚಾಲಕರು, ಕ್ಲೀನರ್‌ಗಳು, ಲೋಡರ್‌ಗಳು) ಮತ್ತೆ ಉದ್ಯೋಗ ಲಭ್ಯವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಮಂಗಳೂರು ಪ್ರಮುಖ ಬಂದರಾಗಿದ್ದರೂ, ಕಾರವಾರದಂತಹ ಕಿರು ಬಂದರುಗಳು ಉತ್ತರ ಕರ್ನಾಟಕದ ಗಣಿಗಳಿಗೆ ಹತ್ತಿರವಾಗಿರುವುದರಿಂದ ಸಾಗಾಟ ವೆಚ್ಚ ಕಡಿಮೆಯಾಗಲಿದೆ. ಇದು ರಫ್ತುದಾರರನ್ನು ಆಕರ್ಷಿಸಲಿದೆ.

ಸರ್ಕಾರದ ಕಣ್ಗಾವಲಿನಲ್ಲಿ ರಫ್ತು, ಆಮದು

ಕಳೆದ ಒಂದೂವರೆ ದಶಕದಿಂದ ಸ್ಥಗಿತಗೊಂಡಿದ್ದ ಕಿರು ಬಂದರುಗಳ ಮೂಲಕ ನಡೆಯುವ ಕಬ್ಬಿಣದ ಅದಿರು ರಫ್ತು ಮತ್ತು ಆಮದು ವಹಿವಾಟಿಗೆ ಮರುಚಾಲನೆ ನೀಡಲು ಸಜ್ಜಾಗಿರುವ ರಾಜ್ಯ ಸರ್ಕಾರವು "ಕರ್ನಾಟಕ ಕಿರು ಬಂದರುಗಳಲ್ಲಿ ಕಬ್ಬಿಣದ ಅದಿರು ನಿರ್ವಹಣಾ ನೀತಿ-2025" ಎಂಬ ಹೊಸ ಕರಡು ನೀತಿಗೆ ಒಪ್ಪಿಗೆ ನೀಡಿದೆ. ಈ ಮೂಲಕ ರಾಜ್ಯದ 10 ಕಿರು ಬಂದರುಗಳಿಂದ ಅದಿರು ರಫ್ತಿಗೆ ಒಪ್ಪಿಗೆ ನೀಡುವ ಮೂಲಕ ರಾಜ್ಯ ಸರ್ಕಾರವು 14 ವರ್ಷಗಳ ನಿಷೇಧಕ್ಕೆ ಮುಕ್ತಿ ನೀಡಿದಂತಾಗಿದೆ. ಸುಪ್ರೀಂ ಕೋರ್ಟ್ 2022ರ ಮೇ 20ರಂದು ಮಹತ್ವದ ತೀರ್ಪನ್ನು ನೀಡಿತು. ಕೇಂದ್ರ ಸರ್ಕಾರದ ರಫ್ತು ನೀತಿ ನಿಯಮಗಳಿಗೆ ಒಳಪಟ್ಟು, ಕರ್ನಾಟಕದ ಗಣಿಗಳಲ್ಲಿ ಉತ್ಪತ್ತಿಯಾಗುವ ಕಬ್ಬಿಣದ ಅದಿರು ಮತ್ತು ಪೆಲೆಟ್‌ಗಳನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡಲಾಗಿದೆ ಎಂದು ನ್ಯಾಯಾಲಯ ಅದೇಶ ನೀಡಿತ್ತು. ಈ ತೀರ್ಪಿನ ಅನ್ವಯ, ರಾಜ್ಯ ಜಲಸಾರಿಗೆ ಮಂಡಳಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಯು ಹೊಸ ಮತ್ತು ಕಠಿಣ ಮಾರ್ಗಸೂಚಿಗಳನ್ನು ರೂಪಿಸಿ ಮುಂದಿನ ಕ್ರಮಕ್ಕೆ ಮುಂದಾಗಿದೆ.

ಸರ್ಕಾರ ಕಣ್ಗಾವಲಿನಲ್ಲಿ ಕಬ್ಬಿಣ ಅದಿರಿನ ರಫ್ತು ಮತ್ತು ಆಮದು ನಡೆಯಲಿದೆ. ಈ ಬಗ್ಗೆ ಇತ್ತೀಚೆಗೆ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌, ಕಾರವಾರ, ಬೇಲೆಕೇರಿ, ತದಡಿ, ಹೊನ್ನಾವರ, ಭಟ್ಕಳ, ಕುಂದಾಪುರ, ಮಲ್ಪೆ, ಹಂಗಾರಕಟ್ಟಾ, ಹಳೆ ಮಂಗಳೂರು, ಪಡುಬಿದ್ರಿ ಬಂದರುಗಳಲ್ಲಿ ರಫ್ತು ಮಾಡಲು ಅವಕಾಶ ಕಲ್ಪಿಸಲು ಸರ್ಕಾರ ನಿರ್ಣಯಿಸಿದೆ.

ಹಿಂದಿನ ಕಹಿ ಘಟನೆಗಳಿಂದ ಪಾಠ ಕಲಿತಿರುವ ಸರ್ಕಾರ, ಈ ಬಾರಿ ಅಕ್ರಮಕ್ಕೆ ಕಿಂಚಿತ್ತೂ ಅವಕಾಶ ನೀಡದಂತೆ ಕಟ್ಟುನಿಟ್ಟಿನ "ಪ್ರಮಾಣಿತ ಕಾರ್ಯನಿರ್ವಹಣಾ ವಿಧಾನ" ರೂಪಿಸಿದೆ. ಪ್ರತಿ ಬಂದರಿನ ಪ್ರವೇಶ ದ್ವಾರದಲ್ಲಿ 'ಜಂಟಿ ತಪಾಸಣಾ ಕೇಂದ್ರ'ವನ್ನು ಸ್ಥಾಪಿಸಲಾಗುವುದು. ಇಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪೊಲೀಸ್, ಅರಣ್ಯ, ಸಾರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿದ್ದು, ಪ್ರತಿ ಲಾರಿಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ ಎಂದು ಹೇಳಿದ್ದರು.

ಅದಿರು ಸಾಗಿಸುವ ವಾಹನಗಳಿಗೆ ಜಿಪಿಎಸ್ ಮತ್ತು ಆರ್‌ಎಫ್‌ಐಡಿ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಗಣಿ ಇಲಾಖೆಯ 'ಸಮಗ್ರ ಗುತ್ತಿಗೆ ನಿರ್ವಹಣಾ ವ್ಯವಸ್ಥೆ' ತಂತ್ರಾಂಶದ ಮೂಲಕವಷ್ಟೇ ರಫ್ತು ಪರವಾನಗಿ ನೀಡಲಾಗುತ್ತದೆ. ಅದಿರು ಶೇಖರಣೆ ಮತ್ತು ಸಾಗಾಟದಿಂದ ಕರಾವಳಿ ಪರಿಸರಕ್ಕೆ ಹಾನಿಯಾಗದಂತೆ ತಡೆಯಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಕಡ್ಡಾಯವಾಗಿರುತ್ತದೆ. ಬಂದರುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಮತ್ತು ರಾತ್ರಿ ವೇಳೆ ಡ್ರೋನ್ ಮೂಲಕ ನಿಗಾ ಇರಿಸಲಾಗುವುದು. ಪ್ರತಿ ಟನ್ ಅದಿರಿಗೆ 13 ರೂ.ಗಳ ಪರಿಸರ ನಿರ್ವಹಣಾ, ಸುರಕ್ಷತೆ ಮತ್ತು ಮೇಲ್ವಿಚಾರಣಾ ಶುಲ್ಕವನ್ನು ವಿಧಿಸಲು ನಿರ್ಣಯಿಸಲಾಗಿದೆ. ಕಿರುಬಂದರುಗಳಿಂದ ಚೀನಾ, ಜಪಾನ್‌, ವಿಯೆಟ್ನಾಂ, ದಕ್ಷಿಣಾ ಆಫ್ರಿಕಾ ಸೇರಿದಂತೆ ಇತರೆ ದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ಮತ್ತೊಮ್ಮೆ ಅಕ್ರಮಕ್ಕೆ ಅನುವು ಮಾಡದಂತೆ ಎಚ್ಚರಿಕೆ ವಹಿಸಬೇಕಾಗಿದೆ

ರಾಜ್ಯ ಸರ್ಕಾರವು 10 ಕಿರು ಬಂದರುಗಳ ಮೂಲಕ ಕಬ್ಬಿಣದ ಅದಿರು ರಫ್ತು ಮತ್ತು ಆಮದಿಗೆ ಒಪ್ಪಿಗೆ ನೀಡಿರುವ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಜನಸಂಗ್ರಾಮ ಪರಿಷತ್‌ ಮುಖಂಡ ಶ್ರೀಶೈಲ, ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ 10 ಕಿರು ಬಂದರುಗಳ ಮೂಲಕ ಕಬ್ಬಿಣದ ಅದಿರು ರಫ್ತು ಮತ್ತು ಆಮದಿಗೆ ಒಪ್ಪಿಗೆ ನೀಡಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಣ ಹರಿದು ಬರಲಿದೆ. ಕಡಿಮೆ ಗುಣಮಟ್ಟದ ಅದಿರು ಇರುವ ಕಾರಣ ಬೇಡಿಕೆ ಇದೆ. ಹೀಗಾಗಿ ವಿದೇಶಗಳಿಗೆ ರಾಜ್ಯದ ಕಬ್ಬಿಣದ ಅದಿರಿಗೆ ಬೇಡಿಕೆ ಇದೆ. ಆದರೆ, ಪರಿಸರಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಾಗಿದೆ. ಈಗಾಗಲೇ ಅಕ್ರಮ ಗಣಿಗಾರಿಕೆಯಿಂದ ಹಾನಿಯಾಗಿರುವ ಬಗ್ಗೆ ಮಾಹಿತಿ ಸರ್ಕಾರದ ಬಳಿ ಇದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅಕ್ರಮಕ್ಕೆ ಅನುವು ಮಾಡದಂತೆ ಎಚ್ಚರಿಕೆ ವಹಿಸಬೇಕಾದ ಅನಿರ್ವಾಯತೆ ಇದೆ. ನಿಯಮಗಳನ್ನು ರೂಪಿಸುವುದು ಮಾತ್ರವಲ್ಲ, ಅವುಗಳ ಸಮರ್ಪ ಅನುಷ್ಠಾನವು ಅಗತ್ಯ ಎಂದು ಹೇಳಿದರು.

ಕಿರು ಬಂದರುಗಳ ಮೂಲಕ ಅದಿರು ರಫ್ತು ಪುನರಾರಂಭವು ರಾಜ್ಯದ ಬೊಕ್ಕಸಕ್ಕೆ "ಚಿನ್ನದ ಮೊಟ್ಟೆ"ಯಾಗುವ ಸಾಧ್ಯತೆಯಿದೆ. ಆದರೆ, ಇದು "ಅಕ್ರಮ ಗಣಿಗಾರಿಕೆ"ಯ ಹಳೆಯ ಕರಾಳ ಅಧ್ಯಾಯವನ್ನು ತೆರೆಯದಂತೆ ಮತ್ತು ಪರಿಸರಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ ವಹಿವಾಟು ನಡೆಸುವುದು ಅತ್ಯಗತ್ಯವಾಗಿದೆ.

Read More
Next Story