ಸೇವೆ ಕಾಯಮಾತಿ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿ ಮಾಡಿದ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಮಿಕರು
ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರನ್ನು 'ಯೋಜನಾ ನೌಕರರು' ಎಂದು ಪರಿಗಣಿಸದೇ ʼಸಿʼ ದರ್ಜೆ ಹಾಗೂ ಬಿಸಿಯೂಟ ಕಾರ್ಯಕರ್ತೆಯರನ್ನು ʼಡಿʼ ದರ್ಜೆ ಸರ್ಕಾರಿ ನೌಕರರೆಂದು ಮಾನ್ಯ ಮಾಡಬೇಕು ಎಂದು ಮನವಿ ಸಲ್ಲಿಸಲಾಗಿದೆ.
ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.
ಸೇವೆ ಕಾಯಮಾತಿ, ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.1 ರಿಂದ ರಾಜ್ಯದಲ್ಲಿರುವ ಕೇಂದ್ರ ಸಚಿವರ ನಿವಾಸಗಳ ಎದುರು ಪ್ರತಿಭಟನೆ ನಡೆಸಿದ್ದ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಮಿಕರು ಬುಧವಾರ ದೆಹಲಿಯಲ್ಲಿ ವಿವಿಧ ಇಲಾಖೆಗಳ ಕೇಂದ್ರ ಸಚಿವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಆಹ್ವಾನದ ಮೇರೆಗೆ ದೆಹಲಿಗೆ ಭೇಟಿ ನೀಡಿದ ಕಾರ್ಯಕರ್ತೆಯರು ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಿ, ಈಡೇರಿಕೆಗೆ ಒತ್ತಾಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಮನವಿಗೆ ಸ್ಪಂದಿಸಿದ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನೂ ಭೇಟಿ ಮಾಡಿಸಿದರು. ಈ ವೇಳೆ ಕೇಂದ್ರ ಸಚಿವರು ಬೇಡಿಕೆಗಳನ್ನು ಪರಿಶೀಲಿಸಿ ಪರಿಹರಿಸುವ ಭರವಸೆ ನೀಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ನಿಯೋಗದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ ಸೇರಿದಂತೆ ವಿವಿಧ ಜಿಲ್ಲೆಗಳ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ದೆಹಲಿಗೆ ಆಹ್ವಾನಿಸಿದ್ದ ಎಚ್‌ಡಿಕೆ
ಮಂಡ್ಯದಲ್ಲಿ ಡಿ.1 ರಿಂದ ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರು ಧರಣಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಮುಖೇನ ರಾಜ್ಯ ಅಂಗನವಾಡಿ ನೌಕರರ ಸಂಘದ ಪದಾಧಿಕಾರಿ ಶ್ರೀಕುಮಾರಿ ಅವರೊಂದಿಗೆ ಕುಮಾರಸ್ವಾಮಿ ಅವರು ದೂರವಾಣಿಯಲ್ಲಿ ಮಾತನಾಡಿದ್ದರು. ತಮ್ಮ ಸಮಸ್ಯೆಗಳ ಕುರಿತು ಚರ್ಚಿಸಲು ದೆಹಲಿಗೆ ಬನ್ನಿ, ಚಳಿಯಲ್ಲಿ ಧರಣಿ ಕೂರುವುದು ಬೇಡ. ಹತ್ತು ಜನರಿಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು, ಅಧಿಕಾರಿಗಳು ಹಾಗೂ ಸಚಿವರೊಂದಿಗೆ ಸಭೆಗೆ ಏರ್ಪಾಡು ಮಾಡಲಾಗುವುದು ಎಂದು ಭರವಸೆ ನೀಡಿದ್ದರು.
ಉಚಿತ ವಿಮಾನಯಾನ
ಅಂಗನವಾಡಿ ಕಾರ್ಯಕರ್ತೆಯರು ದೆಹಲಿಗೆ ಬಂದು ಹೋಗುವ ವಿಮಾನಯಾನದ ವೆಚ್ಚ ಹಾಗೂ ದೆಹಲಿಯಲ್ಲಿ ವಸತಿ ವ್ಯವಸ್ಥೆಯನ್ನು ನಾನೇ ಕಲ್ಪಿಸುವೆ. ದಯಮಾಡಿ ಚರ್ಚೆಗೆ ಬನ್ನಿ ಎಂದು ಎಚ್‌ಡಿಕೆ ವಿನಂತಿಸಿದ್ದರು.
ಬೇಡಿಕೆಗಳೇನು ?
- ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 25,000 ರೂ. ಮತ್ತು ಸಹಾಯಕಿ ಹಾಗೂ ಬಿಸಿಯೂಟ ಸಿಬ್ಬಂದಿಗೆ 15,000 ರೂ. ಕನಿಷ್ಠ ವೇತನವನ್ನು ಗಣನೀಯವಾಗಿ ಹೆಚ್ಚಿಸಬೇಕು.
- ಹಲವು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತೆಯರನ್ನು 'ಯೋಜನಾ ನೌಕರರು' ಎಂದು ಪರಿಗಣಿಸದೆ, ಅಂಗನವಾಡಿ ಕಾರ್ಯಕರ್ತೆಯರನ್ನು ʼಸಿʼ ಹಾಗೂ ಬಿಸಿಯೂಟ ಕಾರ್ಯಕರ್ತೆಯರನ್ನು ʼಡಿʼ ದರ್ಜೆ ಸರ್ಕಾರಿ ನೌಕರರೆಂದು ಮಾನ್ಯ ಮಾಡಬೇಕು.
- ಭವಿಷ್ಯ ನಿಧಿ, ಇಎಸ್ಐ, ಆರೋಗ್ಯ ವಿಮೆ, ನಿವೃತ್ತಿ ವೇತನದಂತಹ ಸೌಲಭ್ಯಗಳನ್ನು ಒದಗಿಸಬೇಕು.
- ನಿವೃತ್ತಿ ಹೊಂದಿದವರಿಗೆ ನೀಡುವ ಇಡುಗಂಟು ಮೊತ್ತವನ್ನು ಹೆಚ್ಚಿಸಬೇಕು.
- ಕಲ್ಯಾಣ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡುವ ಬಜೆಟ್ ಹೆಚ್ಚಿಸಬೇಕು ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಪಾಲನ್ನು ನ್ಯಾಯಯುತವಾಗಿ ನಿಗದಿಪಡಿಸಬೇಕು.