ಆರು ಮರಿಗಳಿಗೆ ಜನ್ಮ ನೀಡಿದ '777 ಚಾರ್ಲಿʼ: ಈಗ ಸಿನಿಮಾ ಕಥೆ ಪೂರ್ಣವಾಯ್ತು ಎಂದ ರಕ್ಷಿತ್ ಶೆಟ್ಟಿ
‘777 ಚಾರ್ಲಿ’ ಸಿನಿಮಾದಲ್ಲಿ ʼಚಾರ್ಲಿʼಯಾಗಿ ನಟಿಸಿದ್ದ ಶ್ವಾನ ಈಗ ತಾಯಿ ಆಗಿದೆ. 6 ಮರಿಗಳಿಗೆ ಜನ್ಮ ನೀಡಿದೆ. ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಲು ರಕ್ಷಿತ್ ಶೆಟ್ಟಿ ಮೈಸೂರಿಗೆ ತೆರಳಿದ್ದಾರೆ.;
ನಟ ರಕ್ಷಿತ್ ಶೆಟ್ಟಿ ಅಭಿಮಾನಿಗಳಿಗೆ ಯಾವುದೇ ಮುನ್ಸೂಚನೆ ನೀಡದೆ ಸಡನ್ ಆಗಿ ಇನ್ಸ್ಟಾಗ್ರಾಮ್ನಲ್ಲಿ ಲೈವ್‌ಗೆ ಬಂದಿದ್ದು, ಅಭಿಮಾನಿಗಳೊಂದಿಗೆ ಒಂದು ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
ಆ ಗುಡ್‌ನ್ಯೂಸ್ ಅವರ ಮುಂದಿನ ಸಿನಿಮಾದ ಬಗ್ಗೆ ಅಲ್ಲ. ಬದಲಾಗಿ ‘777 ಚಾರ್ಲಿ’ ಸಿನಿಮಾದಲ್ಲಿ ನಟಿಸಿದ ಚಾರ್ಲಿಯಾಗಿ ನಟಿಸಿದ್ದ ಶ್ವಾನ ಈಗ ತಾಯಿ ಆಗಿದೆ. 6 ಮರಿಗಳಿಗೆ ಜನ್ಮ ನೀಡಿದೆ. ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಲು ರಕ್ಷಿತ್ ಶೆಟ್ಟಿ ಮೈಸೂರಿಗೆ ತೆರಳಿದ್ದಾರೆ. ಅಲ್ಲಿಂದ ಅವರು ಬಹಳ ಖುಷಿಯಲ್ಲಿ ಲೈವ್ ಬಂದಿದ್ದಾರೆ.
‘ಲೈವ್ ಬರಲು ಒಂದು ಕಾರಣ ಇದೆ. 777 ಚಾರ್ಲಿ ಸಿನಿಮಾ ಬಿಡುಗಡೆ ಆಗಿ ಬಹುತೇಕ 2 ವರ್ಷ ಆಗುತ್ತಾ ಬಂತು. ಸಿನಿಮಾ ಬಿಡುಗಡೆ ಆಗಿ ಇಷ್ಟು ಸಮಯ ಆದರೂ ನಮ್ಮ ಮನದಲ್ಲಿ ಒಂದು ವಿಚಾರ ಇತ್ತು. ಒಂದು ವೇಳೆ ಚಾರ್ಲಿ ತಾಯಿಯಾದರೆ ಸಿನಿಮಾದ ಜರ್ನಿಗೆ ಒಂದು ಸರ್ಕಲ್ ಪೂರ್ಣ ಆಗತ್ತೆ. ಅದನ್ನು ಕಿರಣ್ ರಾಜ್ ಅವರು ಮೊದಲೇ ಹೇಳಿದ್ದರು. ಅದನ್ನು ಕೇಳಿದ ಬಳಿಕ ಚಾರ್ಲಿ ತಾಯಿ ಆಗಬೇಕು ಅಂತ ನಾನು ಕೂಡ ಕಾದಿದ್ದೆ. ಅದರ ಬಗ್ಗೆ ನಾನು ವಿಚಾರಿಸುತ್ತಲೇ ಇದ್ದೆ’ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
‘ಪ್ರಮೋದ್ ಜೊತೆ ಚಾರ್ಲಿ ಇರುತ್ತದೆ. ಅವರಿಗೆ ಕಾಲ್ ಮಾಡಿದಾಗಲೆಲ್ಲ ಚಾರ್ಲಿ ತಾಯಿ ಆಗುವ ಸಾಧ್ಯತೆ ಬಗ್ಗೆ ಕೇಳುತ್ತಿದ್ದೆ. ಅದಕ್ಕೆ ವಯಸ್ಸು ಆಗಿದ್ದರಿಂದ ಏನಾಗತ್ತೋ ಗೊತ್ತಿಲ್ಲ ಅಂತ ಅವರು ಹೇಳುತ್ತಿದ್ದರು. ಅಚ್ಚರಿ ಏನೆಂದರೆ ಮೇ 9ರಂದು ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಹಾಗಾಗಿ ಚಾರ್ಲಿ ಮತ್ತು ಅದರ ಮರಿಗಳನ್ನು ನೋಡಲು ನಾನು ಮೈಸೂರಿಗೆ ಬಂದೆ’ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಇನ್ಸ್ಟಾಗ್ರಾಮ್ ಲೈವ್ನಲ್ಲಿ ರಕ್ಷಿತ್ ಶೆಟ್ಟಿ ಅವರು ಚಾರ್ಲಿ ಮತ್ತು ಅದರ ಮರಿಗಳನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.
ಕಿರಣರಾಜ್ ಕೆ ನಿರ್ದೇಶಿಸಿದ ಮತ್ತು ಪರಂವಾ ಸ್ಟುಡಿಯೋಸ್ ನಿರ್ಮಿಸಿದ 2022ರ ರಾಷ್ಟ್ರ ಪ್ರಶಸ್ತಿ ವಿಜೇತ ʼ777 ಚಾರ್ಲಿ' ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯೊಂದಿಗೆ ಚಾರ್ಲಿ ನಟಿಸಿದೆ. ಶ್ವಾನ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಸಿನಿಮಾಗೆ ಭಾರತದಾದ್ಯಂತ ಜನರು ಮೆಚ್ಚುಗೆ ಸೂಚಿಸಿದ್ದರು. ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದೀಗ ಸಿನಿಮಾ ಜಪಾನ್ ಭಾಷೆಗೆ ಕೂಡ ʼ777 ಚಾರ್ಲಿʼ ಸಿನಿಮಾ ಡಬ್ ಆಗಿ ಅಲ್ಲಿ ಬಿಡುಗಡೆಯಾಗುತ್ತಿದೆ.
ಈ ನಡುವೆ ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದ್ದಾಳೆ. ಅದರಲ್ಲಿ 5 ಹೆಣ್ಣು, ಒಂದು ಗಂಡು ಮರಿ. ಸದ್ಯ ರಕ್ಷಿತ್ ಶೆಟ್ಟಿ 'ರಿಚರ್ಡ್ ಆಂಟೋನಿ' ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ.