ಗೋವಾದಲ್ಲಿ ಆಪರೇಷನ್ ಕಮಲ; ಶಾಸಕರ ವಿರುದ್ಧದ ಕ್ರಮಕ್ಕೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತ
ನವೆಂಬರ್ 1ರಂದು ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತವಾಡ್ಕರ್ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರಲಿಲ್ಲ. ಬಿಜೆಪಿಗೆ ಪಕ್ಷಾಂತರ ಮಾಡಿದ ತನ್ನ ಎಂಟು ಶಾಸಕರನ್ನು ಅನರ್ಹ ಮಾಡಬೇಕು ಎಂದು ಕಾಂಗ್ರೆಸ್ ಬೇಡಿಕೆಯಿಟ್ಟಿದೆ.;
ಆಡಳಿತಾರೂಢ ಬಿಜೆಪಿಗೆ ಪಕ್ಷಾಂತರ ಮಾಡಿದ ತನ್ನ ಎಂಟು ಶಾಸಕರ ಅನರ್ಹತೆ ಅರ್ಜಿಯನ್ನು ತಿರಸ್ಕರಿಸಿದ ಗೋವಾ ವಿಧಾನಸಭಾ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಅರ್ಜಿ ಸ್ವೀಕರಿಸಲು ನಿರಾಕರಿಸಿತು. ಅಲ್ಲದೆ, ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್ನ ಗೋವಾ ಪೀಠದಲ್ಲಿ ಅರ್ಜಿ ಸಲ್ಲಿಸುವಂತೆ ಕಾಂಗ್ರೆಸ್ ಮುಖಂಡ ಗಿರೀಶ್ ಚೋಡಂಕರ್ ಅವರಿಗೆ ಸೂಚಿಸಿತು.
ನವೆಂಬರ್ 1ರಂದು ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತವಾಡ್ಕರ್ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿರಲಿಲ್ಲ. ಬಿಜೆಪಿಗೆ ಪಕ್ಷಾಂತರ ಮಾಡಿದ ತನ್ನ ಎಂಟು ಶಾಸಕರನ್ನು ಅನರ್ಹ ಮಾಡಬೇಕು ಎಂದು ಕಾಂಗ್ರೆಸ್ ಬೇಡಿಕೆಯಿಟ್ಟಿದೆ.
ಶಾಸಕರಾದ ದಿಗಂಬರ ಕಾಮತ್, ಅಲೆಕ್ಸೊ ಸಿಕ್ವೇರಾ, ಸಂಕಲ್ಪ್ ಅಮೋಂಕರ್, ಮೈಕೆಲ್ ಲೋಬೊ, ಡೆಲಿಲಾ ಲೋಬೊ, ಕೇದಾರ್ ನಾಯಕ್, ರುಡಾಲ್ಫ್ ಫರ್ನಾಂಡಿಸ್ ಮತ್ತು ರಾಜೇಶ್ ಫಾಲ್ದೇಸಾಯಿ ವಿರುದ್ಧ ಗೋವಾ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಚೋಡಂಕರ್ ಅನರ್ಹತೆ ಅರ್ಜಿ ಸಲ್ಲಿಸಿದ್ದರು.
ಚೋಡಂಕರ್ ಅವರ ಅರ್ಜಿಯನ್ನು ವಜಾಗೊಳಿಸಿದ ಸ್ಪೀಕರ್ ತವಾಡ್ಕರ್, "ಚುನಾಯಿತ ಸದಸ್ಯರ ಮೂಲ ರಾಜಕೀಯ ಪಕ್ಷವನ್ನು ಮತ್ತೊಂದು ರಾಜಕೀಯ ಪಕ್ಷದೊಂದಿಗೆ ವಿಲೀನಗೊಳಿಸಿದ ನಂತರ, ಚುನಾಯಿತ ಸದಸ್ಯರು ಅನರ್ಹತೆ ಎದುರಿಸುವುದಿಲ್ಲ ಎಂದು ತೀರ್ಪು ನೀಡಿದ್ದರು.
ವಿಲೀನದ ಸಂದರ್ಭದಲ್ಲಿ ಪಕ್ಷಾಂತರದ ಆಧಾರದ ಮೇಲೆ ಅನರ್ಹತೆ ಅನ್ವಯಿಸುವುದಿಲ್ಲ ಎಂದು ತವಾಡ್ಕರ್ ತೀರ್ಪು ನೀಡಿದ್ದರು.