Weather Update | ಬೆಂಗಳೂರು ಸೇರಿ ಹಲವೆಡೆ ಮಳೆ; ಬಿಸಿಲ ಧಗೆ ತಣಿಸಿದ ವರುಣ

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕಿನಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿಸಿದೆ.;

Update: 2025-03-22 13:10 GMT
ಯಲಹಂಕದಲ್ಲಿ ಮಳೆ ನೀರಿನ ಜೊತೆ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದು

ಬಿಸಿಲಿನಿಂದ ಬಸವಳಿದಿದ್ದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಶನಿವಾರ ವರುಣ ತಂಪರೆದಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ತಾಲೂಕಿನಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಮಳೆಯಾಗಿದ್ದು, ಆಗಿಂದಾಗ್ಗೆ ಮಳೆಯಾಗುತ್ತಿದೆ. ಇದರಿಂದ ವಾತಾವರಣ ತಂಪಾಗಿದೆ. 


ಬೆಂಗಳೂರಿನ ಹಲವೆಡೆ ಸಂಜೆ ಒಂದು ತಾಸಿಗೂ ಹೆಚ್ಚು ಕಾಲ ಮಳೆಯಾಗಿದೆ. ಮೋಡ ಕವಿದ ವಾತಾವರಣದಿಂದ ಬಿಸಿಲಿನ ಧಗೆ ಕೊಂಚ ಕಡಿಮೆಯಾಗಿದೆ. ಇನ್ನು ಮಳೆಯಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ವಾಹನ ಸವಾರರು ಪರದಾಡಿದರು.

ಬೆಂಗಳೂರಿನ ಸಂಜಯನಗರ, ಭೂಪಸಂದ್ರ, ಹೆಬ್ಬಾಳ ಮತ್ತು ಮೇಖ್ರಿ ಸರ್ಕಲ್ ಸುತ್ತಮುತ್ತ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಆಗಿದೆ.

ಹೊರಮಾವು, ರಾಮಮೂರ್ತಿ ನಗರ, ಬಾಣಸವಾಡಿ, ಕೋಗಿಲು ಕ್ರಾಸ್‌ ಸಿಗ್ನಲ್, ಕಲ್ಯಾಣ ನಗರ ಕೆಳಸೇತುವೆ, ಬಾಬುಸಾಪಾಳ್ಯ ಇತರೆ ಸ್ಥಳಗಳಲ್ಲಿ ರಸ್ತೆಯಲ್ಲಿ ಮಳೆ ನೀರು ನಿಂತಿತ್ತು. ರಾಮಮೂರ್ತಿನಗರದ ಸೇತುವೆ ಮೇಲೆ ಮಳೆ ನೀರು ತುಂಬಿದ್ದರಿಂದ ರಾಮಮೂರ್ತಿನಗರದಿಂದ ಬಾಣಸವಾಡಿ ಮುಖ್ಯರಸ್ತೆ ಕಡೆ ಹೋಗುವ ವಾಹನ ಸವಾರರಿಗೆ ತೀವ್ರ ಸಮಸ್ಯೆ ಎದುರಾಯಿತು. ಸಂಚಾರ ದಟ್ಟಣೆ ತೆರವುಗೊಳಿಸಲು ಪೊಲೀಸರು ಮಳೆಯಲ್ಲೇ ಹರಸಾಹಪಟ್ಟರು. 

ಎಂಎಂಟಿ ಬಸ್ ನಿಲ್ದಾಣದ  ಸಮೀಪ ಮಳೆ ನೀರು ನಿಂತಿದ್ದರಿಂದ ವೈಟ್‌ಫೀಲ್ಡ್‌, ಮಹದೇವಪುರ ಹಾಗೂ ಕೆ.ಆರ್.ಪುರ ಕಡೆಗೆ ಸಾಗುವ ಮಾರ್ಗದಲ್ಲೂ ಸಂಚಾರ ದಟ್ಟಣೆ ಉಂಟಾಯಿತು.  

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಮಳೆಯಾಗಿತ್ತು. ಶನಿವಾರದಿಂದ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮಾರ್ಚ್ 27 ರವರೆಗೆ ಮೋಡ ಕವಿದ ವಾತಾವರಣ ಮತ್ತು ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Tags:    

Similar News