ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನೂತನ ಶಾಖೆ ಆರಂಭ: ಇಲ್ಲಿ ಏನೇನಿವೆ ಸೌಲಭ್ಯಗಳು?

ಮೈಸೂರು ಬಿಟ್ಟರೆ ಸ್ವಂತ ಕಟ್ಟಡ ಹೊಂದಿರುವ ಸುಸಜ್ಜಿತ ಆಸ್ಪತ್ರೆ ಕಲಬುರಗಿಯಲ್ಲಿ ಡಿಸೆಂಬರ್ 22ರಂದು (ಭಾನುವಾರ) ಆರಂಭವಾಗುತ್ತಿದೆ.

Update: 2024-12-21 13:29 GMT
ಕಲಬುರಗಿ ಜಯದೇವ ಆಸ್ಪತ್ರೆಯ ನೂತನ ಕಟ್ಟಡ

ಬಡವರಿಗೆ ಹೃದ್ರೋಗ ಬಂದರೆ ಜೀವನ ಮುಗಿಯಿತು ಎಂಬಂತಹ ಕಾಲವೊಂದಿತ್ತು. ಇಂಥ ಸಮಯದಲ್ಲಿ ಲಕ್ಷಾಂತರ ಜನರಿಗೆ ಉತ್ಕೃಷ್ಟ ಸೇವೆ  ಒದಗಿಸಿತ್ತು ಜಯದೇವ ಹೃದ್ರೋಗ ಸಂಶೋಧನಾ ಸಂಸ್ಥೆ. ಆಗಿನಿಂದ ಈವರೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆ ಲಕ್ಷಾಂತರ ಬಡ ಜನರಿಗೆ ಚಿಕಿತ್ಸೆ ಕೊಟ್ಟಿದೆ, ಕೊಡುತ್ತಿದೆ. ಒಂದು ಆಸ್ಪತ್ರೆ ಹೇಗಿರಬೇಕು ಎಂಬುದಕ್ಕೆ ಸರ್ಕಾರಿ ಸ್ವಾಮ್ಯದ ಜಯದೇವ ಆಸ್ಪತ್ರೆ ಹೊಸ ಭಾಷ್ಯ ಬರೆದಿದೆ. ಹೃದಯ ಸಂಬಂಧಿ ಚಿಕಿತ್ಸೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಜಯದೇವ ಆಸ್ಪತ್ರೆ ಹೆಸರುವಾಸಿಯಾಗಿದೆ.

ಈಗ ಕೋವಿಡ್ ಬಳಿಕ ದೇಶದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಚರ್ಚೆ ವೈದ್ಯಲೋಕದಲ್ಲಿ ಆಗಾಗ ನಡೆಯುತ್ತಿದೆ. ಇದೇ ವೇಳೆ ಬೆಂಗಳೂರು, ಮೈಸೂರು ಬಿಟ್ಟರೆ ಸ್ವಂತ ಕಟ್ಟಡ ಹೊಂದಿರುವ ಸುಸಜ್ಜಿತ ಆಸ್ಪತ್ರೆ ಕಲಬುರಗಿಯಲ್ಲಿ ಡಿಸೆಂಬರ್ 22ರಂದು (ಭಾನುವಾರ) ಆರಂಭವಾಗುತ್ತಿದೆ. ಕಲಬುರಗಿಯಲ್ಲಿ ಆರಂಭವಾಗುತ್ತಿರುವ ಆಸ್ಪತ್ರೆಯ ವೈಶಿಷ್ಟ್ಯಗಳೇನು? ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಸಿಗುವ ಸೌಲಭ್ಯಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ. 

 

 

ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆಯ ಮೂರನೇ ಶಾಖೆ

ಬೆಂಗಳೂರು, ಮೈಸೂರು ಬಿಟ್ಟರೆ ರಾಜ್ಯದಲ್ಲಿ ಮೂರನೇ ಸ್ವಂತ ಕಟ್ಟಡವನ್ನು ಕಲಬುರಗಿಯಲ್ಲಿ ಆಸ್ಪತ್ರೆ ಹೊಂದಿದೆ. ಬೆಂಗಳೂರು ಬಿಟ್ಟರೆ ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ ವಾಸ್ಕ್ಯುಲರ್‌ ಸರ್ಜರಿ ಸೇವೆ ಕೂಡ ಲಭ್ಯವಿದೆ.

ಕಲ್ಯಾಣ ಕರ್ನಾಟಕದ ಕೇಂದ್ರ ಕಲಬುರಗಿಯಲ್ಲಿ ಕೆ.ಕೆ.ಆರ್.ಡಿ.ಬಿ.ಯ 302 ಕೋಟಿ ರೂ. ಸೇರಿ ಒಟ್ಟಾರೆ 327.17 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಗೊಂಡಿದೆ. ಒಟ್ಟು 371 ಹಾಸಿಗೆ ಸಾಮರ್ಥ್ಯವನ್ನು ಕಲಬುರಗಿಯ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಆಸ್ಪತ್ರೆ ಹೊಂದಿದೆ. ಜೊತೆಗೆ ಯಾವುದೇ ಖಾಸಗಿ ಕಾರ್ಪೊರೇಟ್ ಆಸ್ಪತ್ರೆ ಮೀರಿಸುವ ಗುಣಮಟ್ಟದ ಸೇವೆ ಇಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ.

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ಚಿಕಿತ್ಸೆ

ಕಲಬುರಗಿಯ ಜಯದೇವ ಆಸ್ಪತ್ರೆಯಲ್ಲಿ 3 ಕ್ಯಾಥ್‌ಲ್ಯಾಬ್, ಮೂರು ಅಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಓಟಿ. ಸೌಲಭ್ಯ ಹೊಂದಿದೆ. ಎಕ್ಸ್‌ರ,  ಇ.ಎಂ.ಆರ್.ಐ., ಬ್ಲಡ್ ಬ್ಯಾಂಕ್ ಲಭ್ಯವಿವೆ. 105 ಐಐಸಿಯು ಬೆಡ್‌ಗಳು 120 ಜನರಲ್ ಬೆಡ್‌ಗಳು ಸೇರಿದಂತೆ ಒಟ್ಟು 371 ಹಾಸಿಗೆಗಳ ಸಾಮರ್ಥ್ಯವನ್ನು ಹೊಸ ಆಸ್ಪತ್ರೆ ಹೊಂದಿದೆ.

ಬೆಂಗಳೂರಿನ ಜಯದೇವ ಆಸ್ಪತ್ರೆಯ ಮಾದರಿಲ್ಲಿಯೇ ಕಲಬುರಗಿಯಲ್ಲಿಯೂ ಬಿಪಿಎಲ್ ಕಾರ್ಡ್‌ ಹೊಂದಿರುವ ರೋಗಿಗಳಿಗೆ ಯಾವುದೇ ಚಿಕಿತ್ಸಾ ವೆಚ್ಚವಿಲ್ಲ. ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇಕಡಾ 30ರ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸಿಗುತ್ತದೆ.

ಆಸ್ಪತ್ರೆಯ ಸಾಮರ್ಥ್ಯಕ್ಕೆ ತಕ್ಕಂತೆ ಈಗಿರುವ 10 ಹೃದ್ರೋಗ ವೈದ್ಯರ ಜೊತೆಗೆ ಹೆಚ್ಚುವರಿಯಾಗಿ 21 ವೈದ್ಯರು, 120 ಸ್ಟಾಫ್ ನರ್ಸ್ ಸೇರಿದಂತೆ ಇತರೆ ಸಿಬ್ಬಂದಿ ನೇಮಕ ಶೀಘ್ರವೇ ಆಗಲಿದೆ. ಆಸ್ಪತ್ರೆಯಲ್ಲಿ ನೀರಿನ ಕೊರತೆ ಎದುರಾಗದಂತೆ 7 ಲಕ್ಷ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಾಣವಾಗಿದೆ. 11ಕೆ.ವಿ. ವಿದ್ಯುತ್ ಕೇಂದ್ರವನ್ನು 33 ಕೆ.ವಿ.ಗೆ ಮೇಲ್ದರ್ಜೇಗೇರಿಸಲಾಗಿದೆ.

 

ನೂತನ ಜಯದೇವ ಆಸ್ಪತ್ರೆಯ ವಿಶೇಷತೆಗಳು

• 371 ಹಾಸಿಗೆ ಸಾಮರ್ಥ್ಯದ ಕಟ್ಟಡ

• 3 ಕ್ಯಾಥ್‌ಲ್ಯಾಬ್‌ಗಳು

• 3 ಆಪರೇಷನ್ ಥಿಯೇಟರ್‌ಗಳು

• 1 ಹೈಬ್ರಿಡ್ OT

• 105 ICCU ಹಾಸಿಗೆಗಳು

• 120 ಜನರಲ್ ವಾರ್ಡ್ ಬೆಡ್‌

ಅರೆ-ವಿಶೇಷ, ವಿಶೇಷ ಮತ್ತು ಡೀಲಕ್ಸ್ ವಾರ್ಡ್ ಹಾಸಿಗೆಗಳು, 12 ರಿಕವರಿ ಮತ್ತು 12 ಪೋಸ್ಟ್ ಆಪರೇಟಿವ್ ಹಾಸಿಗೆಗಳು

ಕಾರ್ಡಿಯಾಲಜಿ, ಕಾರ್ಡಿಯೋಥೊರಾಸಿಕ್ ಸರ್ಜರಿ, ವ್ಯಾಸ್ಕುಲರ್‌ ಶಸ್ತ್ರಚಿಕಿತ್ಸೆ, ಪೀಡಿಯಾಟ್ರಿಕ್ ಕಾರ್ಡಿಯಾಲಜಿ, ರೇಡಿಯಾಲಜಿ, 128 ಸ್ಲೈಸ್ CT ಸ್ಕ್ಯಾನ್, 1.5T MRI, ಅಲ್ಟ್ರಾಸೋನೋಗ್ರಫಿ, ಹೈಟೆಕ್ಪ್ಯಾಥಾಲಜಿ ಮತ್ತು ರಕ್ತ ಬ್ಯಾಂಕ್ ಸೇವೆ ಒದಗಲಿದೆ.

ಜಯದೇವ ಆಸ್ಪತ್ರೆಯಿಂದ 5.75 ಲಕ್ಷ ಒಪಿಡಿ ಸೇವೆ

ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಜಯದೇವ ಆಸ್ಪತ್ರೆಯ ಶಾಖೆಯನ್ನು 2016ರಲ್ಲಿ ತಾತ್ಕಾಲಿಕವಾಗಿ ಶುರುಮಾಡಲಾಗಿತ್ತು. ಕಳೆದ 8 ವರ್ಷಗಳ ಅವಧಿಯಲ್ಲಿ ಈ ಆಸ್ಪತ್ರೆಯಲ್ಲಿ 5.75 ಲಕ್ಷ ಜನ ಮತ್ತು 18,550 ಮಕ್ಕಳು ಒಪಿಡಿ. ಸೇವೆ ಪಡೆದಿದ್ದಾರೆ. 47,500 ಜನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದು, 39,462 ಜನ ಕ್ಯಾಥ್‌ಲ್ಯಾಬ್ ಚಿಕಿತ್ಸೆಯನ್ನು ಪಡೆದಿದ್ದಾರೆ.

ಈ ವರೆಗೆ ಒಟ್ಟು 25,000 ಮಂದಿ ಆಂಜಿಯೋಗ್ರಾಮ್ ಮಾಡಿಸಿದ್ದು, 13,000 ಆಂಜಿಯೋಪ್ಲಾಸ್ಟಿ, 300 ಜನ ಪೇಸ್ ಮೇಕರ್ ಹಾಕಿಕೊಂಡಿದ್ದಾರೆ. 1,300 ಜನ ಓಪನ್ ಹಾರ್ಟ್ ಸರ್ಜರಿಗೆ ಒಳಗಾಗಿದ್ದಾರೆ. 3.92 ಲಕ್ಷ ಜನ ಇ.ಸಿ.ಜಿ, 2.14 ಲಕ್ಷ ಜನ ಎಕೊ ಟೆಸ್ಟ್ ಮಾಡಿಸಿದ್ದು, 53,399 ಜನ ಎಕ್ಸ್‌ರೇ ಮಾಡಿಸಿಕೊಂಡಿದ್ದಾರೆ. ಆಸ್ಪತ್ರೆ ಸ್ಥಾಪನೆಯಿಂದಾಗಿ ಸ್ಥಳೀಯರು ದೂರದ ಬೆಂಗಳೂರು, ಸೋಲಾಪುರಕ್ಕೆ ಚಿಕಿತ್ಸೆಗಾಗಿ ಹೋಗುವುದು ತಪ್ಪಿದೆ.

ಈಗ ನೂತನ ಆಸ್ಪತ್ರೆ ಕಟ್ಟಡದೊಂದಿಗೆ ಆ ಭಾಗದ ಜನರಿಗೆ ಮತ್ತಷ್ಟು ಹೆಚ್ಚಿನ ಸೌಲಭ್ಯ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ.

Tags:    

Similar News